ನಾರಾಯಣ ‘ಗುರು ಮಾರ್ಗ’ : ಅನುಭಾವದ ಅನುಭವ

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 5ನೇ ಅಧ್ಯಾಯ ಇಲ್ಲಿದೆ…

ಅಧ್ಯಾಯ 5

ಮುಂದಿನ ದೃಶ್ಯ ಅನಾವರಣಗೊಳ್ಳಲಿರುವುದು ದೊಡ್ಡ ಜನಸಂಖ್ಯೆಯಿಲ್ಲದ ದಕ್ಷಿಣ ತಿರುವಿದಾಂಕೂರು ಜಿಲ್ಲೆಯಲ್ಲಿ. ಇಲ್ಲಿನ ಗುಡ್ಡಗಳಿಂದ ಧುಮ್ಮಿಕ್ಕಿ, ಬಂಡೆಗಳು ಮತ್ತು ಉರುಟಾದ ಬೆಣಚುಕಲ್ಲುಗಳ ಮೇಲೆ ನೊರೆಯುಕ್ಕಿಸುತ್ತಾ ಹರಿಯುವ ನದಿಯೊಂದಿದೆ. ಮನುಷ್ಯರ ಕಣ್ಣಿಗೆ ಬೀಳದಂತಿರುವ ಈ ಕಣಿವೆಯಲ್ಲಿ ನದಿಯ ನಿನಾದ ತುಂಬಿದೆ. ಅಂಬರ ಚುಂಬಿಗಳಾಗಿರುವ ಮರಗಳು ಸ್ವರ್ಗದತ್ತ ಮುಖ ಮಾಡಿ ಬೇಡುವಂತೆ ನಿಂತಿವೆ. ಯಾವಾಗಲೋ ಒಮ್ಮೆ ಮೇಯಲು ಬರುವ ದನಕರುಗಳ ಜೊತೆಗೆ ಅಥವಾ ಬಂಡೆಗಳ ಮೇಲೆ ಹತ್ತಿ ಸೊಪ್ಪಿಗೆ ಬಾಯಿ ಹಾಕುವ ಆಡುಗಳನ್ನು ಮರಳಿ ಮಂದೆಗೆ ಸೇರಿಸಲು ಬರುವ ದನಗಾಹಿಗಳನ್ನು ಹೊರತು ಪಡಿಸಿದರೆ ಅಲ್ಲಿ ಮನುಷ್ಯ ವಾಸನೆಯೇ ಇಲ್ಲ. ಈ ನಿರ್ಜನ ಅಡವಿಯಲ್ಲಿ 1886ರಲ್ಲಿ ಮೂವತ್ತರ ಹರೆಯದ ಮನುಷ್ಯನೊಬ್ಬನ ಸಾರ್ವಜನಿಕರ ಗಮನ ಸೆಳೆಯುವಂತೆ ಕಾಣಿಸಿಕೊಂಡ. ಅದು ಹೇಗೆ ಎಂಬುದನ್ನು ನಾವು ಮುಂದೆ ಅರಿಯಲಿದ್ದೇವೆ.

ಆತ ಮನೆಯನ್ನು ತೊರೆದು ಒಬ್ಬ ಗುರುವಿನ ನಂತರ ಮತ್ತೊಬ್ಬ ತಪಸ್ವಿಯನ್ನು ಭೇಟಿಯಾಗುತ್ತಾ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುತ್ತಾ, ಈ ಸ್ಥಳದಲ್ಲಿ ತಂಗಲು ಬಂದ. ಇದು ಶಾಶ್ವತ ತಂಗುದಾಣವೇನೂ ಆಗಿರಲಾರದು. ಒಂದೆಡೆ ನಿಲ್ಲದೆ ಅಲೆಯುತ್ತಿದ್ದ ದಿನಗಳಲ್ಲಿ ಆತ ಭಿಕ್ಷಾನ್ನದಲ್ಲೇ ಮುನ್ನೂರು – ನಾನೂರು ಮೈಲುಗಳಷ್ಟು ದೂರವನ್ನು ನಡೆದೇ ಸಾಗಿದ್ದಿದೆ. ಒಮ್ಮೊಮ್ಮೆ ನದಿಗಳನ್ನೂ ಹಿನ್ನೀರನ್ನೂ ಆತ ಈಜಿಯೇ ದಾಟಬೇಕಾಗುತ್ತಿತ್ತು. ಆದರೆ ಈ ಅಡೆತಡೆಗಳ್ಯಾವೂ ಆತನೊಳಗೆ ಜಾಗೃತಗೊಂಡಿದ್ದ ಹುಡುಕಾಟದ ಉತ್ಸಾಹವನ್ನು ಕುಂದಿಸಿದ್ದಿಲ್ಲ.

ಮುಂದೆ ಲಕ್ಷಾಂತರ ಮಂದಿಯ ಪ್ರೀತಿ ಪಡೆದ ಆತ ಅವರೆಲ್ಲರಿಗೂ ಅಪರಿಚಿತನಾಗಿ ಅವರ ನಡುವೆಯೇ ಹಳ್ಳಿಯಿಂದ ಹಳ್ಳಿಗೆ ನಡೆಯುತ್ತಿದ್ದ. ಹಾದಿ ಬದಿಯ ಧರ್ಮಶಾಲೆಗಳ ಕಲ್ಲು ಬೆಂಚಿನ ಮೇಲೆ ವಸ್ತ್ರಹಾಸಿ ರಾತ್ರಿಗಳನ್ನು ಕಳೆದಾಗ ಆತನ ಜೊತೆಗೆ ಇದ್ದದ್ದು ಊರುಗೋಲು ಮಾತ್ರ. ಕೆಲವು ರಾತ್ರಿಗಳಲ್ಲಂತೂ ಹಸಿವು ಆಯಾಸ ಮತ್ತು ಹತಾಶೆಗಳೆಲ್ಲವನ್ನೂ ಸಹನೆಯೊಂದರಿಂದಲೇ ನಿಯಂತ್ರಿಸಿ ಹಾದಿ ಬದಿಯ ಜಗಲಿಗಳಲ್ಲಿ ಅಥವಾ ಪಾಳುಬಿದ್ದ ದೇಗುಲದ ಅಂಗಳದಲ್ಲಿ ತಂಗಾಳಿಯ ಎಲೆಗಳ ಮರ್ಮರ ಮತ್ತು  ಚಂದ್ರನ ಬೆಳಕಲ್ಲಿ ವಿಶ್ರಾಂತನಾದದ್ದೂ ಇದೆ. ಆಕಾಶದಿಂದ ತನ್ನನ್ನು ನೋಡುತ್ತಿರುವ ನಿಶೀತವನ್ನು ಅರ್ಧ ನಿಮೀಲಿತನಾಗಿ ದಿಟ್ಟಿಸುತ್ತಾ ಇಲ್ಲವೇ ರೆಪ್ಪೆಗಳನ್ನು ಮುಚ್ಚಿ ಮನದ ಮೂಕ ಗುಡಿಯ ಬೆಳಕನ್ನು ಅನುಭವಿಸುವುದಂತೂ ಇದ್ದೇ ಇತ್ತು.

ಏನೂ ನಡೆಯದೇ ಇರುವುದು ಎಂಬುದು ಸಾಮಾನ್ಯ ಸಂದರ್ಭದಲ್ಲಿ ನೀರವತೆಯನ್ನು ಧ್ವನಿಸುತ್ತದೆ. ಆದರೆ ಯೋಗಿಯೊಬ್ಬನ ಮಟ್ಟಿಗೆ ಈ ನೀರವತೆಯ ಅರ್ಥವೇ ಬೇರೆ. ಹುಡುಕಾಟ ತೀವ್ರವಾವಾಗುತ್ತಾ ಹೋದಂತೆ ಯೋಗಿ ಉತ್ತರಕ್ಕಾಗಿ ತನ್ನೊಳಕ್ಕೆ ನೋಡುವುದೂ ಹೆಚ್ಚಾಗುತ್ತದೆ. ಈ ಹುಡುಕಾಟಕ್ಕೆ ಹೊರಗಿನ ನೆರವಿನ ಅಗತ್ಯ ಕಡಿಮೆಯಾಗುತ್ತಲೇ ಹೋಗುತ್ತದೆ. ಇದು ಸ್ಪಷ್ಟವಾದಂತೆ ಯೋಗಿ ತನ್ನನ್ನು ಜನಸಮೂಹದ ಹುಚ್ಚು ಹಿಡಿಸುವ ಒತ್ತಡಗಳಿಂದ ದೂರವಾಗುವುದು ಅಗತ್ಯವೂ ಆಗಿಬಿಡುತ್ತದೆ.

ಆ ಯೋಗಿಯ ಹುಡುಕಾಟವು ಅಂತಿಮ ಹಂತಕ್ಕೆ ಬಂದಿತ್ತು. ಈ ಕಾಡಿನೊಳಗೆ ತನ್ನ ಆವಾಸದಲ್ಲಿ ಸ್ಥಿರಗೊಂಡಿದ್ದ ಆತ ತನ್ನೊಳಗೆ ನಡೆಯುತ್ತಿರುವ ಅತ್ಯಪೂರ್ವ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗುತ್ತಿದ್ದ.  ಅಗ್ನಿಪರ್ವತದ ಸ್ಫೋಟವನ್ನು ತಡೆದುಕೊಳ್ಳುವುದಕ್ಕಿಂತ ಅಥವಾ ಒಂದು ಸಾಮ್ರಾಜ್ಯವನ್ನು ತನ್ನದಾಗಿಸಿಕೊಳ್ಳುವುದಕ್ಕೆ ಬೇಕಿರುವ ಧೈರ್ಯಕಿಂತ ಹೆಚ್ಚಿನ ದೃಢತೆಯನ್ನು ಆ ಬೆಳವಣಿಗೆ ಬಯತ್ತಿತ್ತು. ಈ ಹೊತ್ತಿನಲ್ಲೇ ನೈಯ್ಯಾಂಟಿಕರದ ಗ್ರಾಮಸ್ಥರು ನದಿ ದಂಡೆಯಲ್ಲಿ ಆಸೀನನಾಗಿದ್ದ ತೇಜಸ್ವೀ ಯೋಗಿಯ ದರ್ಶನ ಪಡೆದದ್ದು. ಆ ಯೋಗಿಯೇ ನಾರಾಯಣ ಗುರು. ಆ ಗ್ರಾಮಸ್ಥರು ಬಂದು ದರ್ಶನ ಪಡೆದಾಗಲೇ ಅವರ ‘ಗುರು’ ಜೀವನವೂ ಆರಂಭವಾಯಿತು.

ನಿತ್ಯವೂ ತಮ್ಮ ಕೆಲಸಗಳಿಗಾಗಿ ಅಡವಿಯೊಳಕ್ಕೆ ಬರುತ್ತಿದ್ದ ಪ್ರತೀ ಗ್ರಾಮಸ್ಥನಿಗೂ ತನಗೆ ಕಾಣಸಿಗುತ್ತಿದ್ದ ಅಸಾಧಾರಣ ವ್ಯಕ್ತಿಯ ಬಗ್ಗೆ ಕುತೂಹಲ ಹುಟ್ಟುತ್ತಿತ್ತು. ಏನೂ ಮಾಡದಿರುವಂತೆ ಕಾಣಿಸಿದರೂ ಯಾವುದರಲ್ಲೋ  ಮಗ್ನನಾಗಿರುವ ಭಾವ ಹುಟ್ಟಿಸುತ್ತಿದ್ದ, ಯಾವುದಕ್ಕೂ ಆತಂಕಿತನಾಗದ, ಏನನ್ನೂ ಬಯಸದ, ಯಾವುದನ್ನೂ ಹಚ್ಚಿಕೊಳ್ಳದ ಈ ವ್ಯಕ್ತಿಯ ಶಾಂತ ಮುದ್ರೆಯನ್ನು ಯಾವುದೂ ವಿಚಲಿತಗೊಳಿಸುತ್ತಿರಲಿಲ್ಲ. ಆತನನ್ನು ಅಲ್ಲಿ ಕಾಣುತ್ತಿದ್ದವರೆಲ್ಲಾ ಮನೆಗೆ ತೆರಳಿ ನಿದ್ರಿಸಿ, ಎದ್ದು, ಉಂಡು, ಉಟ್ಟು ದಿನರಾತ್ರಿಗಳನ್ನು ಕಳೆದು ಮರಳಿ ಬಂದಾಗಲೂ ಆತ ಮಾತ್ರ ನಿದ್ರಾಲಸ್ಯಗಳೇ ಇಲ್ಲದೆ ಸಂಪೂರ್ಣ ಜಾಗೃತ ಸ್ಥಿತಿಯಲ್ಲಿ ಅನಂತವನ್ನು ದಿಟ್ಟಿಸುತ್ತಿದ್ದರೂ ತನ್ನೆದುರು ಏನೂ ಇಲ್ಲವೆಂಬಂತೆ ಇರುತ್ತಿದ್ದ. ಆತನ ಮನಸ್ಸು ಗಹನವಾದ ಯಾವುದೋ ಒಂದರಲ್ಲಿ ಮುಳುಗಿದ್ದಿರಬಹುದು.

ದಿನಗಳು ಹೀಗೆಯೇ ಕಳೆದು ಹೋದವು. ಈ ವ್ಯಕ್ತಿಯ ಬಗ್ಗೆ ಹಳ್ಳಿಯ ಜನರ ಕುತೂಹಲವೂ ಹೆಚ್ಚುತ್ತಲೇ ಹೋಯಿತು. ಈತ ಯಾರೆಂದು ತಿಳಿಯಲು ಹೊರಟವರಿಗೆ ಅವರ ನೆರೆಯವರು ಆ ಯೋಗಿಗೆ ಹಣ್ಣು ಹಾಲುಗಳನ್ನು ತಂದಿಡುವುದಂತೂ ಕಾಣಿಸಿತು. ಆದರೆ ಹೀಗೆ ಇಟ್ಟಿದ್ದರಲ್ಲಿ ಹೆಚ್ಚಿನ ಪಾಲನ್ನು ಕಾಡಿನಲ್ಲಿರುವ ಹಕ್ಕಿಗಳು ಮತ್ತು ಅಳಿಲುಗಳೇ ತಿನ್ನುತ್ತಿದ್ದದ್ದೂ ಅರಿವಾಯಿತು. ಆತನ ತಪಸ್ಸಿನ ದಿನಗಳ ಆಹಾರ ಒಂದು ಬಾಳೆ ಹಣ್ಣು ಮತ್ತೊಂದಿಷ್ಟು ಶುದ್ಧ ನೀರಿಗೆ ಸೀಮಿತವಾಗಿತ್ತು. ಆತನ ಸಮೀಪವೂ ಬಾರದೇ ಇದ್ದ ಬಹಳಷ್ಟು ಜನರಿಗೆ ಈತನೊಬ್ಬ ಹುಚ್ಚ. ಇನ್ನು ಕೆಲವರಿಗೆ ಜನರ ಧಾರ್ಮಿಕ ನಂಬಿಕೆಯೊಂದಿಗೆ ಆಟವಾಡುತ್ತಿರುವ ಕಪಟಿ. ಮತ್ತೊಂದಷ್ಟು ಮಂದಿಗೆ ತನ್ನ ಸೋಮಾರಿತನವನ್ನೋ  ದುಷ್ಟತನವ್ನೋ ಮುಚ್ಚಿಡುವ ತಂತ್ರವಾಗಿ ಸನ್ಯಾಸವನ್ನು ಬಳಸುತ್ತಿರುವವನು!

ಈ ಯುವ ಸಾಧಕ ಸುತ್ತಲಿನ ಜನರಿಂದ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಆತನಿಗೂ ಈ ಜನರಿಗೂ ಯಾವ ಸಂಬಂಧವೂ ಇರಲಿಲ್ಲ. ಆದರೂ ಕೆಲವರು ಆತನನ್ನು ಕಾರಣವಿಲ್ಲದೆ ದೂರಿದರು, ದ್ವೇಷಿಸಿದರು. ಕೆಲವರಂತೂ ಹತ್ತಿರ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ದ್ವೇಷವನ್ನು ಕಾರಿಕೊಂಡರು. ಹೊಗಳಿಕೆ ಮತ್ತು ತೆಗಳಿಕೆಗಳೆರಡನ್ನೂ ಒಂದೇ ಬಗೆಯಲ್ಲಿ ಸ್ವೀಕರಿಸಿ ವಿಚಲಿತನಾಗದೆ ಕುಳಿತ ಯುವ ಸಾಧಕ ಯಾವುದನ್ನೂ ಯಾರನ್ನೂ ದ್ವೇಷಿಸಲಿಲ್ಲ ಹಾಗೆಯೇ ಯಾವುದರ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಲೂ ಇಲ್ಲ. ತನ್ನೊಳಗೆ ಕಾಡುತ್ತಿರುವ ಯಾತನೆಗೆ ಮುಕ್ತಿ ನೀಡಿ ಎಲ್ಲಾ ಮಾನಾಪಮಾನಗಳ ಸೀಮೆಯಿಂದಾಚೆಗೆ ತನ್ನನ್ನು ಕೊಂಡೊಯ್ಯಬೇಕೆಂದು ಆತ ದೇವರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದ. ಅವನೊಳಗೆ ವಿಶ್ವಾತ್ಮಕವಾದ ಭಾವವೊಂದು ಏರಿಳಿಯುತ್ತಿತ್ತು. ಒಳಗಿನ ಬದುಕೊಂದು ಹುಟ್ಟುವಾಗಿನ ಸಂಕಟವನ್ನು ಆತ ಅನುಭವಿಸುತ್ತಿದ್ದ. ಹೌದು, ಇಂದ್ರಿಯ ಗಮ್ಯವಾದ ಹೊರಬದುಕು ಸದಾ ಹಿಮ್ಮೆಟ್ಟಿಸಲು ಪ್ರಯತ್ನಿಸುವ ಆ ಒಳಬದುಕು ಅವನೊಳಗೆ ಜನ್ಮತಳೆಯುತ್ತಿತ್ತು.

(ಮುಂದುವರಿಯುವುದು…)

ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/08/08/guru-50/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ