ಇಂದು ನಮ್ಮ ಕಾಲದ ಮಹತ್ವದ ಬೌದ್ಧ ಗುರು Thich Nhat Hanh ಜನ್ಮದಿನದ ಶುಭಸ್ಮರಣೆ. ಈ ಸಂದರ್ಭದಲ್ಲಿ ಗುರುವಿನ ಕೆಲವು ಅರಿವಿನ ಹೊಳಹು ಇಲ್ಲಿವೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ನಾವು ಅವಸರದಲ್ಲಿರುವಂತೆ
ನಡೆಯುವಾಗ
ನೆಲದ ಮೇಲೆ ಮೂಡಿಸುತ್ತೇವೆ
ದುಗುಡ ಮತ್ತು ಆತಂಕದ ಹೆಜ್ಜೆಗಳನ್ನ.
ನಾವು ನಡೆಯುವುದು ಹೇಗಿರಬೇಕೆಂದರೆ
ಮೂಡಬೇಕು ನೆಲದ ಮೇಲೆ
ಕೇವಲ ಶಾಂತಿ
ಮತ್ತು ಸಮಾಧಾನದ ಹೆಜ್ಜೆಗಳು.
ಜಾಗರೂಕರಾಗಿರಿ
ನಿಮ್ಮ ಪಾದ ಮತ್ತು ನೆಲದ ನಡುವಿನ
ಸಂಪರ್ಕದ ಬಗ್ಗೆ .
ನಿಮ್ಮ ಪಾದ
ನೆಲವನ್ನು ಹೇಗೆ ಮುಟ್ಟಬೇಕೆಂದರೆ
ಮೊದಲಬಾರಿ ನಿಮ್ಮ ತುಟಿಗಳು
ನಿಮ್ಮ ಪ್ರೇಮಿಯ ತುಟಿಗಳನ್ನು
ಸ್ಪರ್ಶಿಸಿದಂತೆ
ಹಗುರಾಗಿ, ತನ್ಮಯತೆಯಲ್ಲಿ.

ಉಸಿರು,
ಬದುಕು ಮತ್ತು ಪ್ರಜ್ಞೆಗಳ
ನಡುವಿನ ಸೇತುವೆ,
ದೇಹ ಮತ್ತು ಮನಸ್ಸುಗಳ
ನಡುವಿನ ಕೊಂಡಿ.
ಮನಸ್ಸು ಚೆಲ್ಲಾಪಿಲ್ಲಿಯಾದಾಗಲೆಲ್ಲ
ಉಸಿರಿನ ಬೆನ್ನೇರಿ
ಮನಸ್ಸನ್ನು ಇಡಿಯಾಗಿಸಿಕೊಳ್ಳಿ.
ಮನಸ್ಸು ಸುಮ್ಮನಾದ
ಖಾಲಿಯಲ್ಲಿ ಮಾತ್ರ
ತುಂಬಿಕೊಳುತ್ತದೆ ಬದುಕು.

ಸೆಕ್ಸ್
ನಿಮ್ಮ ಒಂಟಿತನಕ್ಕೆ, ದುಗುಡಕ್ಕೆ
ಪರಿಹಾರವಲ್ಲ.
ಅದು ನಿಮ್ಮ ಒಂಟಿತನವನ್ನು,
ನಿಮ್ಮ ದುಗುಡವನ್ನ
ದಾರುಣವಾಗಿಸುತ್ತದೆ ಇನ್ನೂ.
ಸೆಕ್ಸ್
ಪವಿತ್ರವಾಗುವುದು
ನಿಮ್ಮ ಸಮಾಧಾನಕ್ಕೆ ಕಾರಣವಾಗುವುದು
ನಿಮ್ಮ ಸಂಗಾತಿಯನ್ನು ನೀವು
ಅರ್ಥಮಾಡಿಕೊಂಡಾಗ,
ಪ್ರೇಮ ನಿಮ್ಮಿಬ್ಬರನ್ನೂ ಎಲ್ಲ ಬಂಧನಗಳಿಂದ
ಪಾರು ಮಾಡಿದಾಗ.

ನೀರಿನ ಮೇಲೆ ಅಥವಾ
ತೆಳು ಗಾಳಿಯ ಮೇಲೆ ನಡೆಯುವುದು
ಪವಾಡ ಎನ್ನುತ್ತಾರೆ ಜನ.
ಆದರೆ ನನ್ನ ಪ್ರಕಾರ ನಿಜದ ಪವಾಡ,
ನೀರಿನ ಮೇಲೆ
ಗಾಳಿಯ ಮೇಲೆ ನಡೆಯುವುದಲ್ಲ,
ಬದಲಾಗಿ ನೆಲದ ಮೇಲೆ ಕಾಲೂರಿ
ಹೆಜ್ಜೆ ಹಾಕುವುದು.
ಪ್ರತೀದಿನ ನಮಗೆ ಎದುರಾಗುವ
ಪವಾಡಗಳನ್ನು ಗುರುತಿಸುವುದು
ಸಾಧ್ಯವಾದರೆ,
ನೀಲಿ ಆಕಾಶ, ಬೆಳ್ಳಿ ಮೋಡಗಳು
ಹಸಿರು ಕಾಡುಗಳು ಮತ್ತು
ಪುಟ್ಟ ಮಗುವಿನ
ಕುತೂಹಲಭರಿತ ಕಪ್ಪು ಕಣ್ಣುಗಳಿಂತ
ಹೆಚ್ಚಿನ ಬೆರಗು ಸಾಧ್ಯಮಾಡುವ
ಪವಾಡವಿದೆಯೆ ಇನ್ನೊಂದು?

ಇನ್ನೊಬ್ಬರಿಂದ
ನಿಮಗೆ ನೋವಾಗುತ್ತಿದೆಯೆಂದರೆ
ಆ ಇನ್ನೊಬ್ಬರು ತಮ್ಮೊಳಗೆ
ಅನುಭವಿಸುತ್ತಿದ್ದಾರೆ ಆಳವಾದ ಸಂಕಟ,
ಮತ್ತು ಉಕ್ಕಿ ಹರಿಯುತ್ತಿದೆ.
ಅವರ ನೋವು ಈ ರೀತಿಯಲ್ಲಿ.
ಅವರಿಗೆ
ನಿಮ್ಮ ಶಿಕ್ಷೆಯ ಅಗತ್ಯವಿಲ್ಲ
ನಿಮ್ಮ ಸಹಾಯ ಬೇಕಾಗಿದೆ,
ಈ ಸಂದೇಶವನ್ನೇ ಅಲ್ಲವೆ ಅವರು
ನಿಮಗೆ ತಲುಪಿಸಲು
ಪ್ರಯತ್ನಿಸುತ್ತಿರುವುದು.

ಧ್ಯಾನ
ಯಾರನ್ನೋ, ಯಾವುದನ್ನೋ
ಒಲಿಸಿಕೊಳ್ಳುವ ಪ್ರಯತ್ನವಲ್ಲ.
ಧ್ಯಾನ
ನಿಮ್ಮ ನಿಜದ ಹಾಜರಾತಿಯನ್ನು
ನಿಮಗೆ ಅರ್ಪಿಸಿಕೊಳ್ಳುವ ವಿಧಾನ
ಪ್ರತೀ ಕ್ಷಣ.

ನೀನು ನಾನು, ಬೇರೆ ಬೇರೆ ಅಲ್ಲ
ನೀನೇ ನಾನು, ನಾನೇ ನೀನು.
ನೀನು ನಿನ್ನೊಳಗೆ
ಹೂವೊಂದನ್ನ ಅತ್ಯಂತ ಜೋಪಾನದಿಂದ
ಪೋಷಿಸುತ್ತಿದ್ದೀ,
ನಾನು ಸುಂದರವಾಗಿ ಕಾಣಲೆಂದು.
ನಾನು ನನ್ನೊಳಗಿನ ಕಸ
ಗುಡಿಸಿ ಸ್ವಚ್ಛ ಮಾಡುತ್ತಿದ್ದೆನೆ,
ನಿನಗೆ ಉಸಿರುಗಟ್ಟದಿರಲೆಂದು.
ನಾನು ನಿನ್ನ ಸಮಾಧಾನ
ನೀನು ನನ್ನ ಖುಶಿ.

