ಒಂದಾಗುವುದು ಬೇರೆಯಾಗುವುದು ಪರಸ್ಪರ ವಿರುದ್ಧವಲ್ಲ ಅನ್ನುವ ಅರಿವೇ ನಾನತ್ವವನ್ನು ಕಳೆದುಕೊಳ್ಳುವ ಪ್ರಮುಖವಾದ ಹಂತವೆಂದು ತೋರುತ್ತದೆ...। ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಬೆಟ್ಟಕ್ಕೆ ಸಾರವಿಲ್ಲೆಂಬರು
ತರುಗಳು ಹುಟ್ಟುವ ಪರಿ ಇನ್ನೆಂತಯ್ಯಾ
ಇದ್ದಲಿಗೆ ರಸವಿಲ್ಲೆಂಬರು
ಕಬ್ಬುನ ಕರಗುವ ಪರಿ ಇನ್ನೆಂತಯ್ಯಾ
ಎನಗೆ ಕಾಯವಿಲ್ಲೆಂಬರು
ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ [೩೦೬]
ಬೆಟ್ಟ ನೀರಸವಾದ್ದು, ಇದ್ದಿಲು ನೀರಸವಾದ್ದು ಅನ್ನುತ್ತಾರೆ. ಬೆಟ್ಟ ನಿಸ್ಸಾರವಾಗಿದ್ದರೆ ಅದರ ಮೇಲೆ ಮರಗಿಡಗಳು ಬೆಳೆಯುತ್ತವೆ ಹೇಗೆ? ಇದ್ದಿಲು ನೀರಸವಾಗಿದ್ದರೆ ಅದರ ಶಾಖಕ್ಕೆ ಕಬ್ಬಿಣ ಕರಗುವುದು ಹೇಗೆ? ನನಗೆ ಕಾಯವಿಲ್ಲ ಅನ್ನುತ್ತಾರೆ,. ಕಾಯ ಇರದಿದ್ದರೆ ಚೆನ್ನಮಲ್ಲಿಕಾರ್ಜುನ ನನ್ನನ್ನು ಒಲಿದು ಕೂಡುವ ಪರಿ ಹೇಗೆ?
ʻನಿಜವಾಗಿ ಒಂದಾದವರು ಮಾತ್ರ ಇಡೀ ವಿಶ್ವದಲ್ಲಿ ಏಕಾಂತದಲ್ಲಿರುವಂತೆ ಇರಬಲ್ಲರು. ಬೇರೆಯವರೆಲ್ಲರೂ ಜನದ ಗುಂಪಿಗೆ ಅಂಟಿಕೊಂಡವರ ಹಾಗೆ ಕಾಣುತ್ತಾರೆ,ʼ ಎಂದು ಡಿ.ಎಚ್. ಲಾರೆನ್ಸ್ ಹೇಳಿದ್ದು ನೆನಪಾಗುತ್ತಿದೆ. ಒಂದಾಗುವುದು ಬೇರೆಯಾಗುವುದು ಪರಸ್ಪರ ವಿರುದ್ಧವಲ್ಲ ಅನ್ನುವ ಅರಿವೇ ನಾನತ್ವವನ್ನು ಕಳೆದುಕೊಳ್ಳುವ ಪ್ರಮುಖವಾದ ಹಂತವೆಂದು ತೋರುತ್ತದೆ.
*
ಶರಣ ಅನ್ನುವುದು ಧಾರ್ಮಿಕ ಸಾಮಾಜಿಕ ಚಹರೆಯೂ ಹೌದು, ಮನೋಧರ್ಮ, ತಾತ್ವಿಕ ನಿಲುವೂ ಹೌದು. ಅಕ್ಕ, ಅಲ್ಲಮರಂಥ ಅನುಭಾವದ ಧೋರಣೆಯ ವಚನಕಾರರ ರಚನೆಗಳಲ್ಲಿ ಶರಣ ಅನ್ನುವುದು ಮನಸ್ಥಿತಿಯನ್ನು ಸೂಚಿಸುವುದೇ ಹೆಚ್ಚು. ಒಂದಿಷ್ಟೂ ಪ್ರತಿರೋಧ ಒಡ್ಡದೆ ಬದುಕಿನ ಹರಿವಿನಲ್ಲಿ ಸಾಗುವುದು ಶರಣಸ್ಥಿತಿಯ ಲಕ್ಷಣವಿರಬಹುದು. ಹಾಗೆ ಪ್ರತಿರೋಧ ಒಡ್ಡದೆ ಇರಬೇಕಾದರೆ ನಾನತ್ವ ಅಥವಾ ಅಹಂ ಇರಬಾರದು, ಆಗುವ ಅನುಭವನ್ನು ಒಲ್ಲೆ ಅನ್ನುವ ಅಥವಾ ಇಂಥದೇ ಅನುಭವ ಆಗಬೇಕೆಂಬ ಹಂಬಲದ ಮನಸ್ಸೂ ಇರಬಾರದು. ಆಗುವುದನ್ನೆಲ್ಲ ಆಗುವಂತೆ ಅನುಭವಿಸಲು ಸನ್ನದ್ಧವಾದ ಸ್ಥಿತಿ ಅದು ಅನಿಸುತ್ತದೆ.
ಹಾಗೆ ಒಪ್ಪಿಸಿಕೊಳ್ಳುವುದಕ್ಕೆ ಒಂದು ಗುರಿ ಇರಬೇಕೋ? ಆ ಗುರಿ ದೇವರೋ, ಒಲಿದ ಜೀವವೊ? ಯಾವುದೇ ಆದರೂ ಅದು ʻನಾನುʼ ಅನ್ನುವುದಕ್ಕಿಂತ ಮಿಗಿಲಾದದ್ದು. ಅದಕ್ಕೆ ಒಳಗಾಗಲು ಅನುವು ಮಾಡಿಕೊಡಲು ಮನಸ್ಸು, ಭಾವ, ವಿಚಾರಗಳನ್ನು ಸಜ್ಜು ಮಾಡಿಕೊಳ್ಳುವುದು ಮುಖ್ಯ. ಹಾಗೆ ನಾನತ್ವವಿರದ ಅಂದರೆ ಬಯಸುವ, ತೀರ್ಮಾನಿಸುವ ಮನಸ್ಸು ಇಲ್ಲದ ಸ್ಥಿತಿಗೆ ತಲುಪುವುದು ಎಂಥ ಪ್ರಯಾಸದ ಹಾದಿ ಅನ್ನುವುದನ್ನು ಈ ಐದನೆಯ ಭಾಗದ ವಚನಗಳು ನಮಗೆ ತಿಳಿಸಿವೆ. ಇಲ್ಲಿರುವುದು ಪಾರಿಭಾಷಿಕ ಪದಗಳು, ಸೂತ್ರಗಳು ತುಂಬಿದ ಶರಣಸ್ಥಿತಿಯ ವರ್ಣನೆಯಲ್ಲ, ಶರಣಾಗುವುದು ಮನುಷ್ಯ ಮನಸಿಗೆ ಎಂಥ ಸವಾಲು ಅನ್ನುವುದನ್ನು ತೋರುವ ವಚನ ಪ್ರಮಾಣಗಳು.
ವಚನ ೪೨ರಿಂದ ೬೪ರವರೆಗಿನ ಆಯ್ದ ಹನ್ನೆರಡು ವಚನಗಳಲ್ಲಿ ಕಾಣುವ ಭಾವದ ಹೊಯ್ದಾಟ: ನಾನು ನಿನಗೆ ಒಲಿದೆ, ನೀನು ನನಗೆ ಒಲಿದೆ, ನಮ್ಮಿಬ್ಬರಿಗೂ ಬೇರೆಯ ಠಾವು ಇರುವುದಿಲ್ಲ; ಹಾಗೆ ಒಂದು ಇನ್ನೊಂದರಲ್ಲಿ, ಒಂದು ಮತ್ತೊಂದರಲ್ಲಿ ತುಂಬಿಕೊಂಡಾಗ ತುಳುಕುವ ಪ್ರಮೇಯವಿಲ್ಲ, ಹಿಂಜರಿಯುವ, ಮರೆಯುವ ಸಂದರ್ಭವೂ ಇರುವುದಿಲ್ಲ. ಇದು ಸಾಧ್ಯತೆ. ಆದರೆ ಸತ್ಯವೇನೆಂದರೆ ನಾನು ಒಪ್ಪಿಸಿಕೊಳ್ಳಲು ಬಯಸುವ ಚೆನ್ನಮಲ್ಲಿಕಾರ್ಜುನ ಸಾವು, ಕೇಡು, ರೂಪಗಳು ಯಾವುದೂ ಇರದ ಚೆಲುವ; ನಾನು ಹೆಣ್ಣು ಅವನು ಗಂಡು ಅನ್ನುವ ಸೂತಕವಿಲ್ಲ; ಆದರೆ ಅವನಿಗಾಗಿ ಹಂಬಲಿಸುತಿದ್ದೇನೆ, ಅವನು ಬರುತ್ತಿಲ್ಲ; ಬೇಡುವ ಭಿಕ್ಷುಕನ ರೂಪದಲ್ಲಿ ಬಂದ, ಮಿತಿ ಮೀರಿ ವರ್ತಿಸಿದ, ಬೆನ್ನು ಹತ್ತಿ ಹೋದೆ, ಅವನೊಡನೆ ಕನಸಿನ ಕೂಟ ಸಾಧ್ಯವಾಗಿ ಒಳಗೆಲ್ಲ ಬೆಳಕು ತುಂಬಿದಂತೆ ಅನಿಸಿತು; ನಿಜದಲ್ಲಿ ಅವನನ್ನು ಕೂಡಲು ಸಹಾಯ ಮಾಡುವುದು ಮನಸೆಂಬ ಕುಂಟಿಣಿ, ಆದರೆ ಆ ಮನಸು ಅವನ ಬಳಿಗೆ ಹೋಗಿ ಅಲ್ಲೇ ಉಳಿದಿದೆ; ಅವನು ಬರುವುದು ಯಾವಾಗಲೋ, ಇಂದ್ರ ನೀಲಗಿರಿಯನ್ನು ಏರಿ ಅವನು ನನ್ನ ಮೊಲೆಗಳ ಮೇಲೊರಗಿ ಮನಭಂಗ, ಅಂಗ ಭಂಗವಾಗದೆ ಎಂದು ಒಪ್ಪಿಸಿಕೊಂಡೇನು; ಹಗಲಿನ ಕೂಟವನ್ನು ಬಯಸಿದೆ, ನನಗೂ ಅವಕಾಶ ನೀಡಿ ತಾನೂ ನನ್ನನ್ನು ಒಳಗೊಳ್ಳುವ ಅವನೊಡನೆ ಒಚ್ಚತವಾಗುವುದು ಎಂದು; ಮೈಯ ಮಿತಿಯನ್ನೂ ಮೀರಿ ಹಿಳುಕಿನವರೆಗೆ ಮುರಿಯಾದ ಬಾಣದ ಹಾಗೆ, ನನ್ನ ಮೈ ಎಲುಬುದು ಪುಡಿಯಾಗುವ ಹಾಗೆ ಅವನ ಅಪ್ಪುಗೆ ದೊರೆಯುವುದು ಎಂದು; ನನ್ನನ್ನು ಕೊಂಡವನು, ನನಗೂ ಇಂಬುಕೊಡುವವನು ನನ್ನ ಸೂರೆಮಾಡುವುದು ಎಂದೋ; ಹಸಿವು, ನಿದ್ರೆ, ಬಾಯಾರಿಕೆಗಳು ಇಲ್ಲದ ಹಾಗೆ ಅವನ ಹಂಬಲ ತುಂಬಿದೆ; ಮನಸಿನ ಹೊಲದ ತುಂಬ ಅವನದೇ ಬೆಳೆ; ಹೀಗೆ ತವಕ ಪಡುವುದು ಇನ್ನೊಂದು ಮಜಲು. ನನ್ನೊಳಗೆ ಇನ್ನೂ ಅಹಂಕಾರ ಇದೆಯೊ, ಹಾಗಾಗಿ ಎಲ್ಲೆಲ್ಲೂ ಇರುವ ಅವನು ನನಗೆ ಮಾತ್ರ ಕಾಣುತ್ತಿಲ್ಲ, ಗಿಳಿ, ನವಿಲು, ಹಂಸಗಳು ಕಂಡಿರಬಹುದು ನಾನು ಕಂಡಿಲ್ಲ; ನನ್ನದು ಬರಿಯ ಕಲ್ಪನೆಯೋ, ಭಾವನೆಯೋ, ಭ್ರಮೆಯೋ; ನನಗೆ ಬೇಕಾದದ್ದು ಚೆನ್ನಮಲ್ಲಿಕಾರ್ಜುನನೇ ಹೊರತು ಎದೆಯಲ್ಲಿ ಕಬ್ಬಿಣದ ಮುಳ್ಳಿರುವ ಗಂಡನಲ್ಲ; ಚೆನ್ನಮಲ್ಲ ರೂಪವಿಲ್ಲದವನಿರಬಹುದು, ಆದರೆ ನನಗೆ ರೂಪ, ಕಾಯ ಇರದಿದ್ದರೆ ಅವನೊಡನೆ ಒಂದಾಗುವ ಅನುಭವ ಪಡೆಯುವುದು ಹೇಗೆ? ಹಾಗೆ ನಾನಿದ್ದೂ ಇಲ್ಲವಾಗುವುದಲ್ಲ, ನಾನೇ ಇಲ್ಲವಾಗಿ ಅವನಿಗೆ ಶರಣಾಗಿ, ಮೈತೆರೆದು, ಮನತೆರೆದು ಒಪ್ಪಿಸಿಕಕೊಂಡು ನಿಜವಾಗಿ ಶರಣಾಗಲು ಸಾಧ್ಯವಾದೀತೇ ಅನ್ನುವುದು ಈ ಭಾಗದ ವಚನಗಳ ಧೋರಣೆ.
ಗಮನಿಸಬೇಕಾದ ಮಾತೆಂದರೆ ಈ ವಚನಗಳನ್ನು ನುಡಿಯುತ್ತಿರುವ ಮನಸಿಗೆ ತನ್ನ ಭಾವನೆ, ಕಲ್ಪನೆ, ಮರುಳುಗಳ ಎಚ್ಚರವಿದೆ, ನಿಜವಾದ ಅನುಭವ ಅಂದುಕೊಂಡ ಹಾಗೆ ಇರದು ಅನ್ನುವ ತಿಳಿವಳಿಕೆ ಇದೆ, ಮನಸು ಮೈಗಳನ್ನು ಇಡಿಯಾಗಿ ಶರಣುಗೊಳಿಸಲು ಬಯಕೆ ತವಕ ಸುಖದ ಕಲ್ಪನೆಗಳನ್ನೂ ತೊರೆಯಬೇಕು ಅನ್ನುವ ಅರಿವೂ ಇದೆ. ಇವೆಲ್ಲ ಬೇರೆ ಬೇರೆ ಪ್ರಮಾಣದಲ್ಲಿ ಎಲ್ಲ ಮನುಷ್ಯರ ಅನುಭವವೂ ಆಗಬಹುದು, ಅದಕ್ಕೆ ನುಡಿಯ, ದೇಶದ, ಕಾಲದ, ಲಿಂಗದ ಹಂಗು ಇಲ್ಲ.

