ಈ ವಚನ ಬಗೆಬಗೆಯ ಚರ್ಚೆಗಳನ್ನು ಹುಟ್ಟಿಸಬಹುದು. ʻಮೋಹʼ, ʻಒಡವೆʼ ಮತ್ತು ʻಎರಡರ ಉಭಯʼ ಎಂಬ ನುಡಿಗಳು, ನಾಸ್ತಿನಾಥ ಎಂಬ ಅಂಕಿತದ ಅಕ್ಷರಶಃ ಅರ್ಥ ಇವೆಲ್ಲವೂ ಚರ್ಚೆಯ ತಿರುಳಿನ ಸಂಗತಿಗಳು । ಓ.ಎಲ್.ನಾಗಭೂಷಣ ಸ್ವಾಮಿ
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳದು
ಸುಖಿ ತಾನಾಗಬಲ್ಲಡೆ
ನಾಸ್ತಿನಾಥ
ಪರಿಪೂರ್ಣನೆಂಬೆ (ಸಂ.೫. ವ.೭೭೬)
ಗಂಡು ಮೋಹಿಸಿ ಹೆಣ್ಣನ್ನು ಹಿಡಿದರೆ ಅದು ಅವನಿಗೆ ಸೇರಿದ ಒಡವೆ ಎಂದು ಅರ್ಥಮಾಡಿಕೊಳ್ಳಬೇಕು. ಹೆಣ್ಣು ಮೋಹಿಸಿ ಗಂಡನ್ನು ಹಿಡಿದರೆ ಉತ್ತರವೇನೆಂದು ಅರಿಯಬೇಕು. ಈ ಎರಡರ ದ್ವಂದ್ವವನ್ನು ಕಳೆದುಕೊಂಡು ಸುಖವಾಗಿರಲು ಸಾಧ್ಯವಾದವರು ಪರಿಪೂರ್ಣರು ಅನ್ನುತ್ತೇನೆ ನಾಸ್ತಿನಾಥ.
ಈ ವಚನ ಬಗೆಬಗೆಯ ಚರ್ಚೆಗಳನ್ನು ಹುಟ್ಟಿಸಬಹುದು. ʻಮೋಹʼ, ʻಒಡವೆʼ ಮತ್ತು ʻಎರಡರ ಉಭಯʼ ಎಂಬ ನುಡಿಗಳು, ನಾಸ್ತಿನಾಥ ಎಂಬ ಅಂಕಿತದ ಅಕ್ಷರಶಃ ಅರ್ಥ ಇವೆಲ್ಲವೂ ಚರ್ಚೆಯ ತಿರುಳಿನ ಸಂಗತಿಗಳು.
ಮೋಹವೆಂಬ ಮಾತಿಗೆ ಬಯಕೆ, ಬಯಸು ಎಂದಷ್ಟೇ ಅಲ್ಲದೆ ಪ್ರಜ್ಞೆ ಇಲ್ಲದಿರುವುದು, ತಬ್ಬಿಬ್ಬಾಗುವುದು, ವಿವೇಚನೆ ಇಲ್ಲದಂತೆ ವರ್ತಿಸುವುದು ಎಂಬೆಲ್ಲ ಅರ್ಥಗಳಿವೆ. ಮೋಹದ ಸ್ಥಿತಿಯಲ್ಲಿ ಈ ಎಲ್ಲ ಛಾಯೆಗಳೂ ಇರುತ್ತವೆ.
ಗಂಡು ಹೆಣ್ಣನ್ನು ಹೀಗೆ ವಿವೇಚನಾರಹಿತ ಅನ್ನುವಷ್ಟು ತೀವ್ರವಾಗಿ ಬಯಸಿದರೆ ಅವಳು ಅವನಿಗೆ ಸೇರಿದ ಒಡವೆ ʻಎಂದು ಅರಿಯಬೇಕುʼ. ಅಂದರೆ ಗಂಡು ಧರಿಸಬಹುದಾದ. ಬೇಕಾದಂತೆ ಬಳಸಬಹುದಾದ ʻಒಡೆತನʼಕ್ಕೆ ಒಳಪಟ್ಟದ್ದು ಹೆಣ್ಣು. ʻಎಂದು ಅರಿಯಬೇಕೇ?
ಮೋಹ ಗಂಡಿಗೆ ಮಾತ್ರವೇ ಅಲ್ಲ, ಹೆಣ್ಣು ಒಂದು ಗಂಡನ್ನು ಮೋಹಿಸಿ ಹಿಡಿದರೆ ಅದಕ್ಕೆ ʻಉತ್ತರವಾವುದೆಂದು ಅರಿಯಬೇಕು.ʼ ಮೋಹವಶನಾದ ಗಂಡಿನ ಒಡೆತನದ ಬಗ್ಗೆ ಏನು ಅರಿಯುತ್ತೇವೊ ಅದು ಹೆಣ್ಣು ಹೊಂದಿರುವ ಮೋಹಕ್ಕೂ ಉತ್ತರ ಅಂತಲೇ?
ʻಸಾಮಾನ್ಯ ತಿಳಿವಳಿಕೆʼ[!?]ಯಾಗಿರುವ- ಹೆಣ್ಣು ಗಂಡಿನ ಒಡೆತನದ ಒಡವೆ ಅನ್ನುವ ʻಅರಿವುʼ ಗಂಡು ಕೂಡ ಮೋಹವುಳ್ಳ ಹೆಣ್ಣಿನ ಒಡೆತನಕ್ಕೆ ಸೇರಿದವನು ಅನ್ನುವ ಸಂದರ್ಭದ ಉತ್ತರವೂ ಹೌದು.
ಎರಡರ ಉಭಯ ಅಂದರೆ ಗಂಡು-ಹೆಣ್ಣು ಅನ್ನುವ ಎರಡರ ದ್ವಂದ್ವ, ಅದನ್ನು ಆಧರಿಸಿದ ನೀತಿ ಕಟ್ಟಳೆ ಅಂತ ಅರ್ಥವಾಗುತ್ತದೆ.
ಒಡೆತನದ ಪ್ರಶ್ನೆ ಮುಂದೆ ಬಂದರೆ ಅದರಲ್ಲಿ ಗಂಡು ಹೆಣ್ಣು ಭೇದವಿರಬಾರದು. ಆಗ ನಾಸ್ತಿ-ನಾಥ ಒಲಿಯುತ್ತಾನೆ. ಇದಂತೂ ವಿಚಾರದ ಶಿಖರ ಸ್ಥಿತಿ. ನಾಥ ಎಂದರೆ ಒಡೆಯ, .ನಾಸ್ತಿ ಎಂದರೆ ʻಇಲ್ಲʼ. ಸ್ವಲ್ಪ ಯೋಚನೆ ಮಾಡಿದರೆ ನಾಸ್ತಿನಾಥನ ಸ್ಥಿತಿ ಎಂದರೆ ಒಡೆತನವನ್ನು ಒಲ್ಲದ, ಒಡೆತನವನ್ನು ನೀಗಿಕೊಂಡಿರುವ ಸ್ಥಿತಿ. ದ್ವಂದ್ವವಿಲ್ಲದೆ, ಒಡೆತನ, ಅಧೀನತೆಗಳ ಪ್ರಶ್ನೆ ಇರದೆ ಸಮವಾಗಿ ಬದುಕುವ ಸ್ಥಿತಿ. ಅಂಥ ಸ್ಥಿತಿ ತಲುಪುವ ವ್ಯಕ್ತಿ ಪರಿಪೂರ್ಣ ವ್ಯಕ್ತಿ ಎಂದು ಗೊಗ್ಗವ್ವೆ ಹೇಳುತ್ತಿರುವಂತಿದೆ.
ಗೊಗ್ಗವ್ವೆ
ಶಿವಭಕ್ತರಿಗೆ ಧೂಪ ಒದಗಿಸುವ ಕೆಲಸ ಮಾಡುತ್ತಿದ್ದ ಮಹಿಳೆ. ಕೇರಳದ ಆವಲೂರು ಈಕೆಯ ಸ್ಥಳ. ತಂದೆತಾಯಿಯರು ಗೊಗ್ಗವ್ವೆಯ ಮದುವೆಗೆ ಸಿದ್ಧಮಾಡಿಕೊಳ್ಳುತ್ತಿರುವಾಗ ಹುಟ್ಟಾ ವಿರಾಗಿಣಿಯಾದ ಆಕೆ ಶಿವಾಲಯಕ್ಕೆ ಹೋಗಿ ಅಡಗಿದಳು. ತಂದೆತಾಯಿಯರು ಅವಳ ಇಚ್ಛೆಗೆ ಮಣಿದರು. ಸ್ವತಃ ಶಿವನೇ ಮದುವೆಯ ಗಂಡಾಗಿ ಬಂದರೂ ಗೊಗ್ಗವ್ವೆ ಒಪ್ಪಲಿಲ್ಲ. ಭಕ್ತಿರಿಗೆ ಧೂಪ ಒದಗಿಸುತ್ತ ಬಾಳು ಎಂದು ಹರಸಿದ. ಮುಂದೆ ಆಕೆಯ ಧೂಪದ ಹೊಗೆಯ ದಾರಿಯನ್ನೇ ಹಿಡಿದು ಕೋಡುಗಲ್ಲೂರಿನ ದೊರೆ ಚೇರಮರಾಯ ಕೈಲಾಸ ಸೇರಿದ ಎಂಬ ಕಥೆಗಳಿವೆ. ಗೊಗ್ಗವ್ವೆ ರಚಿಸಿರುವ, ನಾಸ್ತಿನಾಥ ಎಂಬ ಅಂಕಿತದ 6 ವಚನಗಳು ಪ್ರಕಟವಾಗಿವೆ.


ಈ ಎಲ್ಲ ಪಾಸಿಬಲಿಟಿ ಇವೆ ಅನಿಸುತ್ತೆ.
OLN ಸರ್ ನೀಡಿದ ಹೆಚ್ಚುವರಿ ಟಿಪ್ಪಣಿ ಇದು.
LikeLike