ಕೇಡಿನ ವಕಾಲತ್ತು

Devil’s advocate ಎನ್ನುವುದು, ಒಬ್ಬರು ತಾವು ನಿಜವಾಗಿಯೂ ನಂಬದಿರುವ ಒಂದು ಅಭಿಪ್ರಾಯವನ್ನ, ಒಂದು ಸಿದ್ಧಾಂತವನ್ನ ಉದ್ದೇಶಪೂರ್ವಕವಾಗಿ ಸಮರ್ಥಿಸುವುದು. ಬಹುತೇಕ ಜನ, ಇದನ್ನು ಚರ್ಚೆಗಳಲ್ಲಿ ಬಳಸುವ ತಂತ್ರ ಅಥವಾ ಕೆಲವರು ಮಾಡುವ ಕಿರಿಕಿರಿಯ ಕೆಲಸ ಎಂದು ನೋಡುತ್ತಾರೆ. ಆದರೆ ಇದಕ್ಕೆ ಒಂದು ಆಸಕ್ತಿದಾಯಕ ಐತಿಹಾಸಿಕ ಹಿನ್ನೆಲೆ ಇದೆ, ಮತ್ತು ತಾತ್ವಿಕವಾಗಿ ಇದು ಬಹಳ ಮಹತ್ವದ್ದಾಗಿದೆ… । ಸಂಗ್ರಹಾನುವಾದ : ಚಿದಂಬರ ನರೇಂದ್ರ

ಕ್ಯಾಥೊಲಿಕ್ ಚರ್ಚಿನಲ್ಲಿ, ಯಾರಾದರೂ ಸಂತರಾಗಿ ಘೋಷಿಸಲ್ಪಡುವುದಕ್ಕೆ ನಾಮನಿರ್ದೇಶನಗೊಂಡರೆ, ವ್ಯಾಟಿಕನ್ ‘Devil’s advocate’ ಎಂಬ ವ್ಯಕ್ತಿಯನ್ನು , ಆ ನಾಮಿನೇಟೆಡ್ ವ್ಯಕ್ತಿಯನ್ನು ಪರೀಕ್ಷೆ ಮಾಡಲು ಅಧೀಕೃತವಾಗಿ ನೇಮಿಸುತ್ತಿತ್ತು. ಆ ವ್ಯಕ್ತಿಯ ಸಂಪೂರ್ಣ ಕೆಲಸ, ನಾಮಿನೇಟೆಡ್ ಅಭ್ಯರ್ಥಿಯ ವಿರುದ್ಧ ವಾದಿಸುವುದು ಮತ್ತು ಅವನ ಸಾಚಾತನವನ್ನು ಪರಿಶೀಲಿಸುವುದು. ಆ ಅಭ್ಯರ್ಥಿ ಸಂತರಾಗಬಾರದೆಂಬ ಉದ್ದೇಶದಿಂದ, ಅವರ ಪ್ರತಿಯೊಂದು ದೋಷ, ಅವರ ಕುರಿತಾದ ಪ್ರತಿಯೊಂದು ಸಂಶಯ, ಪ್ರತಿಯೊಂದು ಕಾರಣವನ್ನು Devil’s advocate ಹುಡುಕಬೇಕಾಗಿತ್ತು. ಆದರೆ ಈ ತನಿಖೆ, ಅಭ್ಯರ್ಥಿಯ ಪ್ರಸಿದ್ಧಿಯನ್ನು ಹಾಳುಮಾಡುವುದಕ್ಕಲ್ಲ; ಬದಲಾಗಿ ಅವರ ನಾಮನಿರ್ದೇಶನವನ್ನ ಇನ್ನಷ್ಟು ಪುಷ್ಟೀಕರಿಸಲು. ಏಕೆಂದರೆ ‘Devil’s advocate’ ನ ಎದುರಿಸಿ ಜಯಶಾಲಿಯಾಗುವ ಸಂತನು ನಿಜವಾಗಿಯೂ ಮೌಲ್ಯವಂತನಾಗಿರುತ್ತಾನೆ. ಇಂಥ ಸವಾಲುಗಳನ್ನು ಎದುರಿಸಿ ಗೆಲ್ಲುವುದು ಅವನಿಗೂ ಇನ್ನಷ್ಟು ಒಳ್ಳೆಯದು.

ತಮ್ಮ Liberty ಕುರಿತಾದ ಕೃತಿಯಲ್ಲಿ ದಾರ್ಶನಿಕ ಜಾನ್ ಸ್ಟುವರ್ಟ್ ಮಿಲ್ ನಮ್ಮೆಲ್ಲಾ ಆಲೋಚನೆಗಳ ಬಗ್ಗೆ ಇದೇ ರೀತಿಯ ಒಂದು ಮಾತನ್ನು ಹೇಳುತ್ತಾರೆ. ಅದೇನೆಂದರೆ, ನೀವು ಯಾವ ಸಂಗತಿಯನ್ನಾದರೂ ಗಾಢವಾಗಿ ನಂಬುತ್ತೀರಾದರೆ, ಮತ್ತು ಆ ನಂಬಿಕೆಯು ಅತ್ಯುತ್ತಮ ವಿಮರ್ಶೆಯ ಯಾವ ಸವಾಲನ್ನೂ ಎದುರಿಸಿಲ್ಲ ಎಂದಾದರೆ, ಆ ನಂಬಿಕೆಯನ್ನು ನೀವು ನಿಜವಾಗಿಯೂ ಎಷ್ಟು ಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಅಥವಾ ತಿಳಿದುಕೊಂಡಿದ್ದೀರಿ? ಆದ್ದರಿಂದ, ನಿಮ್ಮ ನಂಬಿಕೆಯ ವಿರುದ್ಧ ವಾದಿಸಲು ಯಾರೂ ಇಲ್ಲದಿದ್ದರೆ, ನೀವೇ Devil’s advocate ನ ಪಾತ್ರ ವಹಿಸಬೇಕು, ನೀವೇ ನಿಮ್ಮ ನಂಬಿಕೆಗೆ ಆಕ್ಷೇಪಣೆಯನ್ನು ರೂಪಿಸಿಕೊಳ್ಳಬೇಕು. ಏಕೆಂದರೆ, ಪರೀಕ್ಷೆಗೆ ಒಳಪಡದ ನಂಬಿಕೆಯನ್ನು ಮಿಲ್ ‘ಜೀವಂತ ಸತ್ಯ’ (living truth) ಎನ್ನುವ ಬದಲು ‘ನಿರ್ಜೀವ ಸಿದ್ಧಾಂತ’ (dead dogma) ಎಂದು ಕರೆಯುತ್ತಾರೆ.”

Devil’s advocate ನ ಕೆಲಸ ನಿಮ್ಮ ನಂಬಿಕೆಯನ್ನು ನಾಶ ಮಾಡುವುದಲ್ಲ, ಬದಲಾಗಿ ಅದನ್ನು ಕಠಿಣವಾಗಿ ಪ್ರಶ್ನಿಸುವುದು. ಏಕೆಂದರೆ ಯಾವತ್ತೂ ಪ್ರಶ್ನಿಸಲ್ಪಡದ ನಂಬಿಕೆ ಗಟ್ಟಿಯಾಗಿರುವುದಿಲ್ಲ. ಒಂದು ನಂಬಿಕೆ ಎಲ್ಲ ಪ್ರಶ್ನೆಗಳನ್ನು ಎದುರಿಸಿಯೂ ಇನ್ನೂ ಸ್ಥಿರವಾಗಿ ನಿಂತಿದೆಯಾದರೆ, ನಂಬಲು ಅದು ಬಹಳ ಒಳ್ಳೆಯ ನಂಬಿಕೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.