ಒಂದು ಕೆಲಸವನ್ನು ಮಾಡು ಅಥವಾ ಬಿಡು. ಒಂದು ಊರಿಗೆ ಹೋಗು ಅಥವಾ ನೀನು ಈಗ ಇರುವ ಸ್ಥಳದಲ್ಲೇ ಉಳಿದುಕೋ. ಅಸಹಜ ಮತ್ತು ಕಠಿಣ ಸಂಭಾಷಣೆಯನ್ನು ಮಾಡು, ಅಥವಾ ಬಾಯಿ ಮುಚ್ಚಿಕೊಂಡು ಇರು. ಕೀರ್ಕೆಗಾರ್ಡ್ ಪ್ರಕಾರ, ಅಂಥ ಒಂದು ಸಮಯ ಬಂದೇ ಬರುತ್ತದೆ ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ನೀವು ಮದುವೆಯಾದರೆ ಪಶ್ಚಾತ್ತಾಪ ಪಡುತ್ತೀರಿ. ಮತ್ತು ನೀವು ಮದುವೆಯಾಗದಿದ್ದರೂ ಪಶ್ಚಾತ್ತಾಪ ಪಡುತ್ತೀರಿ. ಮದುವೆಯಾಗಿ ಅಥವಾ ಆಗದಿರಿ, ಎರಡೂ ನಿರ್ಧಾರಗಳಿಂದ ನೀವು ಪಶ್ಚಾತ್ತಾಪ ಪಡುವುದಂತೂ ನಿಶ್ಚಿತ ! ತನ್ನ “Either/Or” ಎನ್ನುವ ಕೃತಿಯಲ್ಲಿ, ತತ್ವಜ್ಞಾನಿ ಕೀರ್ಕೆಗಾರ್ಡ್ ಹೀಗೆ ವಾದಿಸುತ್ತಾನೆ : ಜೀವನದಲ್ಲಿ ನಾವು ಯಾವ ಹಾದಿಯನ್ನು ಆಯ್ಕೆ ಮಾಡಿಕೊಂಡರೂ, ನಾವು ಆಯ್ಕೆ ಮಾಡದ ಹಾದಿಯ ಬಗ್ಗೆ ಯಾವಾಗಲೂ ಯೋಚಿಸುತ್ತಲೇ ಇರುತ್ತೇವೆ, ಪಶ್ಚಾತಾಪ ಪಡುತ್ತಲೇ ಇರುತ್ತೇವೆ. ಆದರೆ ಕೀರ್ಕೆಗಾರ್ಡ್ ಕೇವಲ ಮದುವೆಯ ಬಗ್ಗೆ ಮಾತನಾಡುತ್ತಿಲ್ಲ — ಅವನು ಜೀವನದ ನಮ್ಮ ಎಲ್ಲ ಆಯ್ಕೆಗಳ ಬಗ್ಗೆ ಮಾತನಾಡುತ್ತಿದ್ದಾನೆ.
ಒಂದು ಕೆಲಸವನ್ನು ಮಾಡು ಅಥವಾ ಬಿಡು. ಒಂದು ಊರಿಗೆ ಹೋಗು ಅಥವಾ ನೀನು ಈಗ ಇರುವ ಸ್ಥಳದಲ್ಲೇ ಉಳಿದುಕೋ. ಅಸಹಜ ಮತ್ತು ಕಠಿಣ ಸಂಭಾಷಣೆಯನ್ನು ಮಾಡು, ಅಥವಾ ಬಾಯಿ ಮುಚ್ಚಿಕೊಂಡು ಇರು. ಕೀರ್ಕೆಗಾರ್ಡ್ ಪ್ರಕಾರ, ಅಂಥ ಒಂದು ಸಮಯ ಬಂದೇ ಬರುತ್ತದೆ—ಬಹುಶಃ ಅದು ಚಳಿ ತುಂಬಿದ ಕತ್ತಲ ರಾತ್ರಿಯಾಗಿರಬಹುದು, ಅಥವಾ ಇಂದಿನಿಂದ ಹತ್ತು ವರ್ಷಗಳ ನಂತರ ಆಗಬಹುದು —ಆಗ ನೀನು ಹಿಂದಿರುಗಿ ನೋಡುತ್ತಾ ಯೋಚನೆ ಮಾಡುತ್ತೀಯ : “ ನಾನು ಆ ಬೇರೆ ದಾರಿಯನ್ನು ಆರಿಸಿಕೊಂಡಿದ್ದರೆ ಏನಾಗುತ್ತಿತ್ತು?”
ಬಹಳಷ್ಟು ಬಾರಿ, ಬದುಕಿನ ಕಠಿಣತಮ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ನಮಗೆ ಎದುರಾದಾಗ, ನಾವು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಲೆಕ್ಕಾಚಾರ ಹಾಕಬಹುದು ಅಥವಾ ನಮ್ಮೊಳಗಿನ gut instinct ಮೇಲೆ ಭಾರ ಹಾಕಬಹುದು. ಈ ಎರಡರಲ್ಲಿ ಒಂದು ನಿರ್ಧಾರ, ನಮಗೆ ಸರಿ ಆಯ್ಕೆಯನ್ನು ಕೊಡುತ್ತದೆ ಎಂದು ನಾವು ತಿಳಿದುಕೊಂಡಿರುತ್ತೇವೆ. ಆದರೆ ಕೀರ್ಕೆಗಾರ್ಡ್ ಪ್ರಕಾರ ನೀವು ಎಷ್ಟೇ ಲೆಕ್ಕಾಚಾರ ಹಾಕಿ ಯಾವುದೇ ನಿರ್ಧಾರ ತೆಗೆದುಕೊಂಡರು, ನೀವು ಆಯ್ಕೆ ಮಾಡಿಕೊಳ್ಳದ ದಾರಿಯ ಬಗ್ಗೆ ನಿಮಗೆ ಕೊಂಚವಾದರೂ ಪಶ್ಚಾತಾಪ ಆಗೇ ಆಗುತ್ತದೆ. ಏಕೆಂದರೆ ಪಶ್ಚಾತಾಪ ಪಡುವುದು ಜಾಣ ಮನುಷ್ಯನಾಗಿರುವುದರ ಮತ್ತು ಮುಕ್ತ ಮನುಷ್ಯನಾಗಿರುವುದರ ಒಂದು ಭಾಗ. ನಾವು ಆಯ್ಕೆ ಮಾಡಿಕೊಳ್ಳದ ಬದುಕಿನ ಬಗ್ಗೆ ಒಂದು ಬೆರಗು ನಮ್ಮೊಳಗೆ ಉಳಿದೇ ಉಳಿದಿರುತ್ತದೆ. ಕೀರ್ಕೆಗಾರ್ಡ್ ಹೇಳುವುದೇನೆಂದರೆ, ಪಶ್ಚಾತಾಪ ಪಡದೇ ಇರಲು ನಾವು ಏನು ಮಾಡಬೇಕು ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳದೇ, ಯಾವ ಪಶ್ಚಾತಾಪದೊಂದಿಗೆ ನಾವು ಬದುಕಬಹುದು ಎನ್ನುವ ಪ್ರಶ್ನೆ ಕೇಳಿಕೊಳ್ಳುವುದು ಒಳ್ಳೆಯದು.

