ತತ್ವಜ್ಞಾನಿ ಸೊರೇನ್ ಕಿರ್ಕೆಗಾರ್ಡ್ ಅವರ ಪ್ರಕಾರ, ನಾವು ಹೆಚ್ಚಿನ ಜನರು ಬಹುಪಾಲು ಸಮಯ, ನೃತ್ಯ ಸಂಯೋಜನೆಯೊಂದರಲ್ಲಿಯ ಪಾತ್ರಗಳಂತೆ ಮುಂದೆ ಮುಂದೆ ಸಾಗುತ್ತೇವೆ. ನಾವು ಬೊಂಬೆಯಾಟದ ಕೈಗೊಂಬೆಗಳಂತೆ ವರ್ತಿಸುತ್ತಿರುತ್ತೇವೆ — ಇನ್ನೊಬ್ಬರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ… । ಸಂಗ್ರಹಾನುವಾದ : ಚಿದಂಬರ ನರೇಂದ್ರ
“ನಿಮ್ಮ ಜೀವನದಿಂದ ನಿಮಗೆ ನಿಜವಾಗಿಯೂ ಏನು ಬೇಕು ಎನ್ನುವುದರ ಬಗ್ಗೆ ನಿಮಗೆ ಯಾವ ಕಲ್ಪನೆಯೂ ಇರಲಿಕ್ಕಿಲ್ಲ. ಮತ್ತು ಮುಂದೆ ಹೇಗೆ ಸಾಗಬೇಕು ಎನ್ನುವುದರ ಬಗ್ಗೆ ಕೂಡ ನಿಮಗೆ ದಾರಿ ಗೊತ್ತಿರಲಿಕ್ಕಿಲ್ಲ — ಇಂಥ ಸಮಯ ನಿಮ್ಮ ಜೀವನದಲ್ಲಿ ಕೊನೆಯಾಗಿ ಯಾವಾಗ ಬಂದಿತ್ತು? ಅದು ಒಂದು ಸಂಬಂಧದ ಅಂತ್ಯವಾಗಿರಬಹುದು, ಅಥವಾ ನೀವು ಕೆಲಸ ಕಳೆದುಕೊಂಡಿದ್ದಾಗಿರಬಹುದು, ಅಥವಾ ನೀವು ಮನೆ ಬಿಟ್ಟು ಹೊರಡುವ ಕ್ಷಣವಾಗಿರಬಹುದು.
ಆದರೆ ಕೊನೆಯ ಬಾರಿ ಯಾವಾಗ ನೀವು ನಿಮ್ಮನ್ನು ಕೇಳಿಕೊಂಡಿದ್ದೀರಿ — ‘ಈ ಜೀವನದಿಂದ ನನಗೆ ನಿಜವಾಗಿಯೂ ಏನು ಬೇಕು?’
ಆದರೆ ತತ್ವಜ್ಞಾನಿ ಸೊರೇನ್ ಕಿರ್ಕೆಗಾರ್ಡ್ ಅವರ ಪ್ರಕಾರ, ನಾವು ಹೆಚ್ಚಿನ ಜನರು ಬಹುಪಾಲು ಸಮಯ, ನೃತ್ಯ ಸಂಯೋಜನೆಯೊಂದರಲ್ಲಿಯ ಪಾತ್ರಗಳಂತೆ ಮುಂದೆ ಮುಂದೆ ಸಾಗುತ್ತೇವೆ. ನಾವು ಬೊಂಬೆಯಾಟದ ಕೈಗೊಂಬೆಗಳಂತೆ ವರ್ತಿಸುತ್ತಿರುತ್ತೇವೆ — ಇನ್ನೊಬ್ಬರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ.
ಮತ್ತು ಈ ತಾಳ ತೀರ ವಿಚಿತ್ರವಾಗಿ ನಮಗೆ ಪರಿಚಿತವಾಗಿದೆ: ಶಾಲೆಗೆ ಹೋಗು, ಕೆಲಸ ಪಡೆ, ಜೀವನ ಸಂಗಾತಿಯನ್ನು ಹುಡುಕು, ಮನೆ ಕಟ್ಟಿಕೊ, ನಿವೃತ್ತಿಯಾಗು, ನಂತರ ಸಾಯುವುದಕ್ಕಾಗಿ ಕಾಯುತ್ತಿರು.
ಬದುಕಲು ಈ ಒಂದೇ ಒಂದು ಮಾರ್ಗವಿದೆ ಎನ್ನುವಂತೆ ಇದು ನಮಗೆ ಗೊತ್ತು ಮಾಡುತ್ತದೆ.
ಸೊರೇನ್ ಕಿರ್ಕೆಗಾರ್ಡ್ ಗೆ ಗೊತ್ತಿತ್ತು — ನಾವು ಹೀಗೆ ಮಾಡುವುದು, ಇದು ಬಹಳ ಸುಲಭವಾದ್ದರಿಂದ. ಇತರರಂತೆ ಇರುವುದು, ಅನುಕರಣೆ ಮಾಡುವುದು, ಒಂದು ಸಂಖ್ಯೆಯ ಹಾಗೆ, ಮಂದೆಯಲ್ಲಿ ಒಂದಾಗಿರುವುದು ನಮಗೆ ಬಹಳ ಸುಲಭ.
ತಮ್ಮದೇ ಆದ ಯೋಜನೆಗಳನ್ನು ರೂಪಿಸುವುದಕ್ಕಿಂತ, ಇನ್ನೊಬ್ಬರ ಯೋಜನೆಗೆ ಹೊಂದಿಕೊಂಡು ಹೋಗುವುದು ನಮಗೆ ಬಹಳ ಸುಲಭ. ನೀವು ನಿಮ್ಮ ತಂದೆ-ತಾಯಿಯ ಕೈ ಬಿಟ್ಟರೆ, ಬೇರೆ ಯಾರು ನಿಮ್ಮ ಕೈ ಹಿಡಿಯುತ್ತಾರೆ? ಏನು ಮಾಡಬೇಕು ಎಂದು ನಿಮಗೆ ಯಾರಾದರೂ ಹೇಳದಿದ್ದರೆ, ಮೊದಲು ನೀವು ಏನು ಮಾಡುತ್ತೀರಿ? ಆಯ್ಕೆಮಾಡುವ ನಮ್ಮದೇ ಶಕ್ತಿಯ ಅಪಾರ ವ್ಯಾಪ್ತಿ ನಮಗೆ ಎದುರಾದಾಗ, ನಾವು ಅನೇಕ ಬಾರಿ ಆತಂಕದಿಂದ ಕುಗ್ಗುತ್ತೇವೆ. ಮುಂದೆ ಹೇಗೆ ಸಾಗಬೇಕು ಎನ್ನುವುದೇ ನಮಗೆ ತಿಳಿಯುವುದಿಲ್ಲ.
ಕಿರ್ಕೆಗಾರ್ಡ್ ನಮಗೆ ಸುಲಭ ಉತ್ತರಗಳನ್ನು ಕೊಡುವುದಿಲ್ಲ. ಅವರು ಹೇಳುವುದೇನೆಂದರೆ — ನಾವು ಇನ್ನೊಬ್ಬರ ಸಂಯೋಜಿತ ತಾಳಕ್ಕೆ ಕುಣಿಯುವ ಕೈಗೊಂಬೆಯಾಗಿರಬಹುದು, ಅಥವಾ ಈ ಕುರಿತಾದ ಆತಂಕದಿಂದ ಕುಂಠಿತರಾಗಿರಬಹುದು. ಆದರೆ ಅವರು ನಮ್ಮ ಮುಂದೊಂದು ಪ್ರಶ್ನೆಯನ್ನು ಇಡುತ್ತಾರೆ:
ನೀವು ನಿಮ್ಮ ಜೀವನವನ್ನು ಸುರಕ್ಷಿತವಾಗಿ ತೀರಕ್ಕೆ ಕಟ್ಟಿ ಹಾಕಿದಂತೆ, ಇತರರು ಮಾಡುತ್ತಿರುವುದನ್ನೇ ಮಾಡುತ್ತಾ ಬದುಕಲು ಇಷ್ಟಪಡುವಿರಾ? ಅಥವಾ, ನಿಮ್ಮದೇ ಗಾಳಿಯ ಶಕ್ತಿಯಿಂದ ಚಲಿಸುತ್ತ, ಆ ಮಹಾ ಅಜ್ಞಾತದೊಳಗೆ ಹಡಗು ಮುನ್ನಡೆಸಲು ಇಷ್ಟಪಡುತ್ತೀರಾ?

