ಅನಸ್ತಿತ್ವ, ಅಸ್ತಿತ್ವಕ್ಕಿಂತ ಬಹಳ ಒಳ್ಳೆಯದು. ಈ ಫಿಲಾಸೊಫಿ ಈಗ ಕೆಲ ಜನರ ನಡುವೆಯಾದರೂ ಯಾಕೆ ಜನಪ್ರಿಯವಾಗುತ್ತಿದೆಯೆಂದರೆ, ಜಗತ್ತಿನ ಪರಿಸ್ಥಿತಿ ಈಗ ಬಹಳ ಕೆಟ್ಟದಾಗಿದೆ. ಆರ್ಥಿಕ ಅವ್ಯವಸ್ಥೆಯ ಆತಂಕ, ಕಲುಷಿತ ಹವಾಮಾನ-ವಾತಾವರಣ ಇತ್ಯಾದಿ ಸಂಗತಿಗಳು ಬದುಕನ್ನು ಅಸಹನೀಯವಾಗಿಸುತ್ತಿವೆ. ಆದ್ದರಿಂದ ಕೆಲ ಲಕ್ಷ ಜನರಾದರೂ ಈ ಅಸಹನೀಯ ಜಗತ್ತಿನಲ್ಲಿ ಬದುಕುವಂತೆ ಜನರನ್ನು ಒತ್ತಾಯಿಸಲು ಸಿದ್ಧರಿಲ್ಲ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಇತ್ತೀಚಿನ ದಿನಗಳಲ್ಲಿ Anti- Natalism ಎನ್ನುವ ಫಿಲಾಸೊಫಿ ಕೆಲ ಜನರ ನಡುವೆಯಾದರೂ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಸಮಾಜದ ಪ್ರಕಾರ ಮಕ್ಕಳನ್ನು ಸೃಷ್ಟಿಸಿಕೊಳ್ಳುವುದು ಒಂದು ಚಮತ್ಕಾರ, ದೇವರು ಕೊಟ್ಟ ಒಂದು ವರ. ಆದರೆ ಸಮಾಜದ ಈ ಅನಿಸಿಕೆಯ ಮೇಲೆಯೇ ಕೆಲ ಫಿಲಾಸೊಫರ್ ಗಳು ಒಂದು ಭಯಾನಕ ಪ್ರಶ್ನೆಯನ್ನು ಕೇಳುತ್ತಾರೆ. ಅವರ ಪ್ರಕಾರ ಮಕ್ಕಳನ್ನು ಹುಟ್ಟಿಸುವುದು ಮನುಷ್ಯನ ಅತ್ಯಂತ ಸ್ವಾರ್ಥಮಯ ಮತ್ತು ಅನೈತಿಕ ಕೆಲಸ ಯಾಕಾಗಿರಬಾರದು? ಈ ವಾದವನ್ನೇ Anti- Natalism ಎಂದು ಗುರುತಿಸಲಾಗುತ್ತದೆ.
ಮೂಲಭೂತವಾಗಿ, ಯಾವ ಜಗತ್ತಿನಲ್ಲಿ ನೋವು ಮತ್ತು ದುಃಖ ಖಚಿತವಾಗಿದೆಯೋ ಅಂಥ ಒಂದು ಜಗತ್ತಿಗೆ ಒಂದು ಅಮಾಯಕ ಜೀವವನ್ನು ಕರೆದುಕೊಂಡು ಬರುವುದು ನೈತಿಕ ಅಪರಾಧ. ತತ್ವಜ್ಞಾನಿ ಡೇವಿಡ್ ಬೆನೇಟರ್ ತಮ್ಮ 1997 ರ ಸಂಶೋಧನಾ ಪೇಪರ್ Why it is better never to come in to existence ನಲ್ಲಿ ಮೊದಲ ಬಾರಿಗೆ Anti- Natalism ಕುರಿತು ಪ್ರಸ್ತಾಪ ಮಾಡುತ್ತಾರೆ. ಈ ಐಡಿಯಾ ನ ಅವರು ಒಂದು ಸರಳ ಮ್ಯಾಥಮ್ಯಾಟಿಕಲ್ ಪರಿಕಲ್ಪನೆ Asymmetry of pain & pleasure ನ ಮೇಲೆ ಕಟ್ಟಿದ್ದರು. ನೀವು ಹುಟ್ಟಿದ ಮೇಲೆ ಕೆಲವು ಸುಖ ಅನುಭವಿಸಬಹುದು, ಇದು ಒಳ್ಳೆಯದು. ಆದರೆ ಈ ಸುಖಗಳ ಜೊತೆಯೇ ನೀವು ದುಃಖ, ನೋವು , ಕಾಯಿಲೆ ಕೊನೆಗೆ ಸಾವು ಇವುಗಳನ್ನು ಕೂಡ ಅನುಭವಿಸಬೇಕಾಗಿ ಬರುತ್ತದೆ. ಇವು ಬಹಳ ತ್ರಾಸದಾಯಕವಾದವು.
ಆದರೆ ಅದೇ ನೀವು ಹುಟ್ಟದೇ ಇದ್ದರೆ? ಈ ಜಗತ್ತಿನಲ್ಲಿ ನೀವು ಅಸ್ತಿತ್ವ ಹೊಂದದೇ ಇದ್ದರೆ? ಆಗ ನೀವು ಯಾವ ದುಃಖವನ್ನೂ ಅನುಭವಿಸಬೇಕಾಗಿಲ್ಲ. ಮತ್ತು ನಿಮಗೆ ಸುಖದ ಕೊರತೆಯ ಬಗ್ಗೆಯೂ ಗೊತ್ತಾಗುವುದಿಲ್ಲ. ಏಕೆಂದರೆ ಯಾವುದರ ಕೊರತೆಯನ್ನಾದರೂ ನಾವು ಅನುಭವಿಸಬೇಕಾದರೆ ಮೊದಲು ನಾವು ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಡೇವಿಡ್ ಬೆನೇಟರ್ ಅವರ ವಾದ ಏನೆಂದರೆ ಅನಸ್ತಿತ್ವ, ಪ್ರತೀಬಾರಿ ಅಸ್ತಿತ್ವಕ್ಕಿಂತ ಬಹಳ ಒಳ್ಳೆಯದು. ಈ ಫಿಲಾಸೊಫಿ ಈಗ ಕೆಲ ಜನರ ನಡುವೆಯಾದರೂ ಯಾಕೆ ಜನಪ್ರಿಯವಾಗುತ್ತಿದೆಯೆಂದರೆ, ಜಗತ್ತಿನ ಪರಿಸ್ಥಿತಿ ಈಗ ಬಹಳ ಕೆಟ್ಟದಾಗಿದೆ. ಆರ್ಥಿಕ ಅವ್ಯವಸ್ಥೆಯ ಆತಂಕ, ಕಲುಷಿತ ಹವಾಮಾನ-ವಾತಾವರಣ ಇತ್ಯಾದಿ ಸಂಗತಿಗಳು ಬದುಕನ್ನು ಅಸಹನೀಯವಾಗಿಸುತ್ತಿವೆ. ಆದ್ದರಿಂದ ಕೆಲ ಲಕ್ಷ ಜನರಾದರೂ ಈ ಅಸಹನೀಯ ಜಗತ್ತಿನಲ್ಲಿ ಬದುಕುವಂತೆ ಜನರನ್ನು ಒತ್ತಾಯಿಸಲು ಸಿದ್ಧರಿಲ್ಲ.
ಆದರೆ ತತ್ವಜ್ಞಾನಿ ಫ್ರೆಡ್ರಿಕ್ ನೀಷೆ ಗೆ ಈ Anti- Natalism ಬಗ್ಗೆ ಏನಾದರೂ ಗೊತ್ತಾಗಿದ್ದರೆ ಅವನು ಇದನ್ನು ಅಧ್ಯಾತ್ಮಿಕ ಕಾಯಿಲೆ ಎಂದು ಬಣ್ಣಿಸುತ್ತಿದ್ದ. ಅವನು ಈ ಥರದ ತಿಳುವಳಿಕೆಯನ್ನು ಅವನತಿ (decadence) ಎಂದು ಗುರುತಿಸಿದ. ಹಾಗೆಂದರೆ ಇದೊಂದು ಮಾನಸಿಕ ರೋಗ. ಈ ರೋಗಿ ಮನುಷ್ಯ, ದುಃಖ ಕಾರಣಕ್ಕಾಗಿ ಎಷ್ಟು ಹೆದರಿಕೊಳ್ಳುತ್ತಾನೆಂದರೆ, ಕೊನೆಗೆ ಅವನು ಬದುಕಿಗೇ ವಿರುದ್ಧವಾಗಿಬಿಡುತ್ತಾನೆ. ಬದುಕನ್ನು ಕೇವಲ ನೋವಿನಿಂದ ತಪ್ಪಿಸಿಕೊಳ್ಳುವಿಕೆಯ ಆಧಾರದ ಮೇಲೆ ಅಳೆಯಬಹುದಾದರೆ Anti- Natalism ಗೆಲುವು ಸಾಧಿಸಬಹುದು. ಆದರೆ ನೀಷೆಯ ಪ್ರಕಾರ ದುಃಖ ಮತ್ತು ಕಾಯಿಲೆ ಬದುಕನ್ನು ವ್ಯರ್ಥ ಮಾಡುವುದಿಲ್ಲ. ಬದಲಾಗಿ ಈ ಸವಾಲುಗಳ ಕಾರಣವಾಗಿಯೇ ಮನುಷ್ಯ ತನ್ನ ಮಹಾನತೆ ಮತ್ತು ಸಾಮರ್ಥ್ಯವನ್ನು ಸಾಬೀತು ಮಾಡುತ್ತಾನೆ. ಆದ್ದರಿಂದ ಬದಕು ಯಾವತ್ತೂ ಬಾಳಲು ಯೋಗ್ಯವಾದದ್ದು. “ನಾನು ಹುಟ್ಟದೇ ಹೋಗಿದ್ದರೆ” ಎನ್ನುವ ವಿಚಾರ ನೀಷೆಯ ಪ್ರಕಾರ ಮನುಷ್ಯ ತನ್ನ ಸ್ವಸಾಮರ್ಥ್ಯದ ವಿರುದ್ಧ ತಾನು ಮಾಡುವ ಅತ್ಯಂತ ದೊಡ್ಡ ಅಪರಾಧವಾಗಿದೆ.
ಹಾಗಾದರೆ ಈ Anti- Natalism ಒಂದು ಸರಿಯಾದ ಆಯ್ಕೆಯೇ? ಇದು, ನೀವು ಯಾವುದರ ಮೌಲ್ಯ ಹೆಚ್ಚು ಎಂದು ತಿಳಿದುಕೊಳ್ಳುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ. ನಿಮ್ಮ ಆಯ್ಕೆ ಪರಿಪೂರ್ಣ ಸುರಕ್ಷತೆಯೋ ಅಥವಾ ಪರಿಪೂರ್ಣ ಮಹಾನತೆಯೋ ? ( absolute safety or absolute greatness). ನಿಮ್ಮ ಉದ್ದೇಶ ಕೇವಲ ದುಃಖದಿಂದ ಹೊರತಾಗುವುದು ಮತ್ತು ನೋವಿನಿಂದ ತಪ್ಪಿಸಿಕೊಳ್ಳುವುದಾಗಿದ್ದರೆ, ಮಕ್ಕಳನ್ನು ಹುಟ್ಟಿಸದಿರುವುದು ಅತ್ಯಂತ ತಾರ್ಕಿಕ ಮತ್ತು ನೈತಿಕ ಆಯ್ಕೆ. ಆದರೆ ನೀವು ನೀಷೆಯನ್ನು ಒಪ್ಪುವಿರಾದರೆ, ದುಃಖ ಮತ್ತು ಕಠಿಣ ಪರಿಸ್ಥಿತಿಗಳನ್ನು ಹೊಂದಿಯೂ ಬದುಕು ಬಾಳಲು ಅರ್ಹವಾಗಿದೆ ಎಂದು ನಿಮಗೆ ಅನಿಸುವುದಾದರೆ ಮಕ್ಕಳನ್ನು ಹುಟ್ಟಿಸುವುದು ಯಾವ ಅಪರಾಧವೂ ಅಲ್ಲ.

