ಗಮನ- ದಿ ಪಾಕೆಟ್‌ ಬುಕ್ । ಟಿಕ್‌ ನಾಟ್‌ ಹಾನ್‌

ನಮ್ಮ ಮೇಲೆ ಗಾಢವಾಗಿ ಪರಿಣಾಮ ಬೀರಿದ ಮಾತುಗಳನ್ನು ಮಾತ್ರ ನೆನಪಿಟ್ಟುಕೊಂಡು ನಮ್ಮದು ಮಾಡಿ ಹೇಳುತ್ತೇವಲ್ಲ ಹಾಗೆಯೇ ಈ ಬರಹವೂ ಕೂಡ. ನನ್ನ ಮೇಲೆ ಆದ ಪರಿಣಾಮ ಬೇರೆಯವರ ಮೇಲೂ ಆಗಲಿ ಅನ್ನುವ ಆಸೆ ಈ ಕೆಲಸಕ್ಕೆ ಕಾರಣವಾಗಿದೆ. “ಗಮನದ ಎಚ್ಚರ”, “ಅರಿವಿನ ಬೆಳಕು”, “ಭಾವಗಳು-ಸಂಬಂಧಗಳು” ಮತ್ತು “ಶಾಂತಿ” ಎಂಬ ನಾಲ್ಕು ಭಾಗಗಳಲ್ಲಿ ಟಿಕ್‌ ನಾಟ್‌ ಹಾನ್‌ ಅವರ ಬರವಣಿಗೆಯ ಆಯ್ದಭಾಗಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ. ಎಲ್ಲ ಬೌದ್ಧಗುರುಗಳ ಹಾಗೆ ಟಿಕ್‌ ನಾಟ್‌ ಹಾನ್‌ ಅವರ ಸಂಕಲನವೂ ಧ್ಯಾನದ ಬೋದನೆಯೇ ಆಗಿದೆ । ಓಎಲ್‌ ನಾಗಭೂಷಣ ಸ್ವಾಮಿ

***

ಮೊದಲಿಗೆ ಹೀಗೆ

ಟಿಕ್ ನಾಟ್ ಹಾನ್ (೧೧ ಅಕ್ಟೋಬರ್‌ ೧೯೨೬-೨ಸ೨ ಜನವರಿ ೨೦೨೨) ವಿಯೆಟ್ನಾಂನ ಬೌದ್ಧ ಗುರು.

ಇವರ ಹೆಸರನ್ನು ಬಗೆಬಗೆಯಾಗಿ ಬರೆಯುವ ಅಭ್ಯಾಸವಿದೆ. ಅವರ ಹೆಸರಿನ ಮೂರು ಪದಗಳನ್ನೂ ಬಗೆಬಗೆಯಾಗಿ ಬರೆಯಲು ಸಾಧ್ಯ. ಥಿಕ್‌ ನ್ಯಾಟ್‌ ಹಾನ್‌/ ಟಿಚ್/ತಿಚ್‌ ನಾಟ್‌ ಹ್ಯಾನ್‌, ಹಾನ್‌ ಹಾನ್  (ʻಹʼಕಾರವನ್ನ ಸ್ವಲ್ಪ ತೇಲಿ ಹೇಳುವುದನ್ನು ಸೂಚಿಸಲು ಅದೊಂದು ಅಕ್ಷರದ ಗಾತ್ರ ಕಿರಿದು ಮಾಡಬೇಕೇನೋ!) ಒಟ್ಟಾರೆಯಾಗಿ ಅವರ ಮುಖದ ಚಿತ್ರ, ಅವರ ವ್ಯಕ್ತಿತ್ವ, ಅವರ ಬೋಧನೆಗಳೊಡನೆ ನಾವು ಬಳಸುವ ಕನ್ನಡದ ನುಡಿ ಹೊಂದಿಕೊಂಡರೆ ಸಾಕು. “ಅದು ಗೊತ್ತು, ಅದೇನೆಂದು ಹೇಳಲು ಆಗದು” ಅನ್ನುವುದಕ್ಕೆ ಅವರ ಹೆಸರೇ ನಿದರ್ಶನ! ಟಿಕ್‌ ಅಂದರೆ ಗುರು, ಬೋಧಕ, ಶಾಕ್ಯಕುಲಕ್ಕೆ ಸೇರಿದ ವ್ಯಕ್ತಿ ಅನ್ನುವ ಅರ್ಥ, ನ್ಯಾಟ್‌ ಅಂದರೆ ಶ್ರೇಷ್ಟ, ಪ್ರಥಮಶ್ರೇಣಿಯ ಅನ್ನುವ ಅರ್ಥ, ಹಾನ್‌ ಅಂದರೆ ಅಖಂಡ ಅಥವಾ ಒಂದೇ ಕ್ರಿಯೆ, ಅಥವಾ ಕ್ರಿಯೈಕ್ಯ ಅನ್ನುವ ಅರ್ಥ ಇದೆ ಎಂಬ ವಿವರಣೆ ಸಿಗುತ್ತದೆ. ಅವರ ಹೆಸರಿಗೆ ನಮಗೆ ಅರ್ಥವಾಗುವ ಭಾಷೆಯಲ್ಲಿ ವಿವರಣೆ ಸಿಕ್ಕಿತು ಅನ್ನುವ ಸಮಾಧಾನ ಕೂಡ ಬೇಕಲ್ಲವೇ.

ಟಿಕ್‌ ನಾಟ್‌ ಹಾನ್‌ ನಮ್ಮ ಕಾಲದ ಹಿರಿಯ ಆಧ್ಯಾತ್ಮಿಕ ಚಿಂತಕರು, ಬೋಧಕರು. ವಿಸ್ತಾರವಾದ, ಆಳವಾದ ಹೊಳೆಯ ಹಾಗೆ. ಅವರ ಬೋಧನೆಗಳು ಯಾವುದೇ ಬೋಧನೆಯ ಗಹನತೆ ನಮ್ಮ ಅನುಭವಕ್ಕೆ ಬರಬೇಕೇ ಹೊರತು ಅದನ್ನು ಬೇರೆಯವರು ವಿವರಿಸಲಾರರು. ಎಷ್ಟೋ ಬಾರಿ ಬೋಧನೆಯ ಸರಳತೆಯೇ ನಮ್ಮ ದಾರಿ ತಪ್ಪಿಸಬಹುದು. ದಿನ ನಿತ್ಯದ ಅನುಭವವನ್ನು ಆಧರಿಸಿದ, ಅನ್ವಯಿಸಿಕೊಳ್ಳಲು ಸಾಧ್ಯವಿರುವ ಮಾತು ತೀರ ಮಾಮೂಲಿ ಅನಿಸಿ ಅದರ ತಾತ್ವಿಕ ಗಹನತೆ ನಮ್ಮ ಅರಿವಿಗೆ ಬಾರದೆ ಹೋಗಬಹುದು. ಬದುಕಿನ ಸುದೀರ್ಘವಾದ ಕಠಿಣ ಪ್ರಯಾಣದ ಪ್ರಯಾಸದ ನಂತರವಷ್ಟೇ ಮಾತು ಸರಳವೂ ನೇರವೂ ಆಗುತ್ತದೆ. ನಮಗೆ ಕಾಣಲು ಸಾಧ್ಯವಾದರೆ ಸರಳವಾದ ಮಾತಿನಲ್ಲಿಯೇ ಗಹನವಾದ ಸತ್ಯಗಳು ಇರುತ್ತವೆ. ಶುದ್ಧವಾದ, ಸರಳವಾದ ಮಾತು ಗಹನತೆಯ ದೊಡ್ಡ ಸಾಕ್ಷಿ. ಇಂಗ್ಲಿಶಿನಲ್ಲಿ ಓದಿದ್ದು ಅದನ್ನು ನನ್ನ ಕನ್ನಡದಲ್ಲಿ ಹೇಳುವುದು ಇವು ಅವರ ಸರಳ ಮಾತನ್ನು ಇನ್ನಷ್ಟು ಜಿಗುಟು ಮಾಡದಿರಲಿ ಎಂದು ಹಾರೈಸುತ್ತೇನೆ.

ಸುಮಾರು ಅರುವತ್ತು ವರ್ಷಗಳ ಅವಧಿಯಲ್ಲಿ ಅವರ ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು, ಹಲವಾರು ನೂರು ಗಂಟೆಗಳಷ್ಟು ಬೋಧನೆಯ ಧ್ವನಿಮುದ್ರಣಗಳು ಪ್ರಕಟವಾಗಿವೆ. ಬೌದ್ಧ ತತ್ವ, ಚಿಂತನೆ, ಮನಶ್ಶಾಸ್ತ್ರ, ರಾಜಕೀಯ, ಕಾವ್ಯ, ಚರಿತ್ರೆ, ಮಕ್ಕಳ ಪುಸ್ತಕ, ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ.  ಮನುಷ್ಯರ ವೈಯಕ್ತಿಕ, ದೈನಿಕ ಬದುಕಿನಿಂದ ಹಿಡಿದು ಅಂತಾರಾಷ್ಟ್ರೀಯ ಸಂಗತಿಗಳನ್ನೂ ಒಳಗೊಂಡು ವಿಶ್ವಾತ್ಮಕ ಸಂಗತಿಗಳ ಬಗ್ಗೆ ಅವರು ಮತ್ತೆ ಮತ್ತೆ ಹೇಳುವ ಮುಖ್ಯ ಸಂಗತಿ, ಬೋಧನೆಗಳನ್ನು ಒಳಗೊಂಡ ಪುಟ್ಟ ಪುಟ್ಟ ಆಯ್ಧ ಭಾಗಗಳನ್ನು Melvin McLeod ಅವರು ಸಂಕಲಿಸಿ THE POCKET THICH NHAT HANH ಎಂಬ ಹೆಸರಿನ ಪುಸ್ತಕವಾಗಿ ಪ್ರಕಟಿಸಿದ್ದಾರೆ. ಕನ್ನಡದ ಈ ಬರಹಕ್ಕೆ ಆ ಪುಸ್ತಕವೇ ಆಧಾರ.

ಯಾವುದೇ ಬೋಧನೆಯಿಂದ ನಮಗೆ ದೊರೆಯುವ ಅನುಭವ ವೈಯಕ್ತಿಕವಾದದ್ದು, ಬೋಧನೆಯನ್ನು ಓದುವಾಗಿನ, ಕೇಳುವಾಗಿನ ನಮ್ಮ ಮನಸ್ಥಿತಿ, ನಾವಿರುವ ಪರಿಸರ, ಎದುರಿಸುತಿರುವ ಸಮಸ್ಯೆ ಇವೆಲ್ಲವೂ ಸೇರಿಯೇ ಬೋಧನೆ ನಮಗೆ ʻಅರ್ಥʼವಾಗುತ್ತದೆ. ಅಥವಾ ಇನ್ನೆಂದೋ ತಟ್ಟನೆ ನೆನಪಾಗಿ ಅರ್ಥ ಹೊಸತಾಗುತ್ತದೆ. ಅರ್ಥವು ನಮ್ಮ ವ್ಯಕ್ತಿತ್ವಗಳಿಗೆ ನಿಷ್ಠವಾದದ್ದೇ ಆಗಿರುತ್ತದೆ. 

ನಮ್ಮ ಮೇಲೆ ಗಾಢವಾಗಿ ಪರಿಣಾಮ ಬೀರಿದ ಮಾತುಗಳನ್ನು ಮಾತ್ರ ನೆನಪಿಟ್ಟುಕೊಂಡು ನಮ್ಮದು ಮಾಡಿ ಹೇಳುತ್ತೇವಲ್ಲ ಹಾಗೆಯೇ ಈ ಬರಹವೂ ಕೂಡ. ನನ್ನ ಮೇಲೆ ಆದ ಪರಿಣಾಮ ಬೇರೆಯವರ ಮೇಲೂ ಆಗಲಿ ಅನ್ನುವ ಆಸೆ ಈ ಕೆಲಸಕ್ಕೆ ಕಾರಣವಾಗಿದೆ. “ಗಮನದ ಎಚ್ಚರ”, “ಅರಿವಿನ ಬೆಳಕು”, “ಭಾವಗಳು-ಸಂಬಂಧಗಳು” ಮತ್ತು “ಶಾಂತಿ” ಎಂಬ ನಾಲ್ಕು ಭಾಗಗಳಲ್ಲಿ ಟಿಕ್‌ ನಾಟ್‌ ಹಾನ್‌ ಅವರ ಬರವಣಿಗೆಯ ಆಯ್ದಭಾಗಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ.

ಎಲ್ಲ ಬೌದ್ಧಗುರುಗಳ ಹಾಗೆ ಟಿಕ್‌ ನಾಟ್‌ ಹಾನ್‌ ಅವರ ಸಂಕಲನವೂ ಧ್ಯಾನದ ಬೋದನೆಯೇ ಆಗಿದೆ.  ನಮ್ಮ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಗಮನದ ದಾರಿಯಲ್ಲಿ ಸಾಗುತ್ತ “ಇಲ್ಲಿ” ಮತ್ತು “ಈಗ” ಇರುವುದನ್ನು ಅನುಭವಿಸುವ ಸಾಧ್ಯತೆಯನ್ನು ಮೊದಲ ಭಾಗ ತೋರುತ್ತದೆ.

ಇಲ್ಲಿ-ಈಗ ಇರುವುದೇ ನಮ್ಮ ನಿಜದ ನೆಲೆ. ಇಲ್ಲಿಂದ ಗಮನದ ದಾರಿಯಲ್ಲಿ ಸಾಗುತ್ತ ಬದಲಾವಣೆಯ ದೊಡ್ಡ ಸತ್ಯವನ್ನು ಕಾಣುವ ಒಂದು ದಾರಿಯನ್ನು ಎರಡನೆಯ ಭಾಗದಲ್ಲಿ ಸೂಚಿಸಿದ್ದಾರೆ. ಅರಿವುಗೇಡಿತನ, ಸಂಘರ್ಷ, ಹುಟ್ಟು ಸಾವುಗಳಿಂದ ಹಿಡಿದು ಎಲ್ಲ ದ್ವಂದ್ವಗಳನ್ನು ನೀಗಿಕೊಂಡು ಅರಿವಿನ ಬೆಳಕು ಪಡೆಯುವುದು ಎಲ್ಲರಿಗೂ ಸಾಧ್ಯವೆಂಬ ಬೋಧನೆ ಈ ಭಾಗದಲ್ಲಿದೆ. ಅನುಭವದಲ್ಲಿ ಬೇರೂರಿ ಅರಳಿದ ಮಾತು ಇಲ್ಲಿವೆ ಅನಿಸುತ್ತದೆ.

ಮೂರನೆಯ ಭಾಗದಲ್ಲಿ ಆಧುನಿಕ ದೈನಿಕ ಬದುಕಿನ ಏರು-ಇಳಿತ, ಸಂತೋಷ-ಬೇಸರ, ನಮಗೆ ಬೇರೆಯವರು ಉಂಟು ಮಾಡುವ ನಾವು ಇತರರಿಗೆ ಉಂಟುಮಾಡುವ ವೇದನೆಗಳ ಪರಿಶೀಲನೆ ಇದೆ. ಸಂಬಂಧಗಳ ಸ್ವರೂಪವೇ ನಮ್ಮ ಬಹಳಷ್ಟು ತೊಡಕುಗಳಿಗೆ ಏಕೆ, ಹೇಗೆ ಕಾರಣ, ಅನ್ನುವುದರ ಒಳನೋಟ ಇಲ್ಲಿ ಕಾಣುತ್ತದೆ. ಪ್ರೀತಿಯ ತಳಹದಿಯ ಮೇಲೆ ಕಟ್ಟಿದ ಸಂಬಂಧಗಳು ಇಡೀ ಜಗತ್ತಿನ ಸ್ವಸ್ಥ ಶಾಂತಿಗೆ ಕಾರಣವಾಗುತ್ತವೆನ್ನುವ ಆಸೆ, ನಂಬಿಕೆ ಇಲ್ಲಿದೆ.

ಜಗತ್ತಿನಲ್ಲಿ ನಾವು ಒಬ್ಬರು ಮಾತ್ರ ಸ್ವತಂತ್ರರಾಗಿ, ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ರಾಜಕೀಯ, ಸಮಾಜ, ಪರಿಸರ ಮತ್ತು ನಮ್ಮೊಬ್ಬರಿಗೂ ಇರುವ ಸಂಬಂಧ ಕುರಿತ ಗಮನ ನಾಲ್ಕನೆಯ ಭಾಗದಲ್ಲಿದೆ.

ಟಿಕ್‌ ನಾಟ್‌ ಹಾನ್‌ ಅವರು ತಮ್ಮ ಬದುಕಿನ ವಿವಿಧ ಹಂತಗಳಲ್ಲಿ ಏಳು ಹೆಸರುಗಳನ್ನು ಬಳಸಿದ್ದಾರೆ ಎಂದು ವಿಕಿಪೀಡಿಯಾ ಮಾಹಿತಿ ಹೇಳುತ್ತದೆ. ತೀರ್ಥಂಕರರ ಭವಾವಳಿಗಳ ಹಾಗೆ ಇವು ಕೂಡ ಅನಿಸಿತು. ವಿಯೆಟ್ನಾಂನಲ್ಲಿ ಬೌದ್ಧ ಸಂನ್ಯಾಸಿಯಾಗಿ, ಸಾಂಪ್ರದಾಯಿಕ ಬೌದ್ಧಧರ್ಮದಲ್ಲಿ ಬದಲಾವಣೆಗಳಿಗೆ ಕಾರಣರಾಗಿ, ನಂತರ ವಿಯೆಟ್ನಾಂನ ಶಾಂತಿ ಚಳವಳಿಯ ನೇತಾರರಾದರು. ಆನಂತರ ಜಗತ್ತಿನ ಎಲ್ಲೆಡೆಗಳಲ್ಲಿ ಅವರು ಆನ್ವಯಿಕ ಬೌದ್ಧ ಸೂತ್ರಗಳ ಪ್ರಚಾರಕ್ಕೆ ತೊಡಗಿದರು. ಯಾವುದೇ ಮತ್ತು ಎಲ್ಲ ಬಗೆಯ ಹಿಂಸೆಯ ವಿರುದ್ಧ ಅವರು ನಡೆಸಿದ ಚಳವಳಿಂದ ಅನೇಕ ಶತ್ರುಗಳೂ ಹುಟ್ಟಿದರು ಎಂಬ ಮಾಹಿತಿ ದೊರೆಯುತ್ತದೆ. ಅವರು ೧೯೬೬ರಲ್ಲಿ ಪಶ್ಚಿಮ ದೇಶಗಳ ಪ್ರವಾಸ ಮಾಡುತ್ತಾ ಶಾಂತಿಯ ಬೋಧನೆ ಮಾಡುತ್ತಿರುವಾಗ ದಕ್ಷಿಣ ವಿಯೆಟ್ನಾಂನ ಸರ್ಕಾರ ಅವರು ತಮ್ಮ ನಾಡಿಗೆ ಮರಳದಂತೆ ನಿಷೇಧವನ್ನೂ ವಿಧಿಸಿತು.

ಟಿಕ್‌ ನಾಟ್‌ ಹಾನ್‌ ಅವರ ಈ ಬರವಣಿಗೆಯನ್ನು ನನ್ನ ಉಳಿದ ಅನುವಾದಗಳ ಹಾಗೆ ತೀರ ಮೂಲನಿಷ್ಠವಾಗಿ ಮಾಡಿಲ್ಲ. ಓದಿದ್ದು ನನ್ನ ಕನ್ನಡದಲ್ಲಿ ನನಗೆ ಹೇಗೆ, ಎಷ್ಟು ಅರ್ಥವಾಯಿತೋ ಅದನ್ನು ಹಾಗೇ ಹೇಳಿದ್ದೇನೆ. ನುಡಿ-ಖಚಿತತೆಗಿಂತ ಭಾವಸ್ಪಷ್ಟವಾಗುವುದು ಮುಖ್ಯ ಅನ್ನುವ ಧೋರಣೆ ಇಲ್ಲಿ ಕೆಲಸ ಮಾಡಿದೆ. Mindfullness ಅನ್ನುವುದನ್ನು ಗಮನ ಎಂದೂ awareness ಎಂಬುದನ್ನು ಎಚ್ಚರವೆಂದೂ ಕನ್ನಡ ಮಾಡಿಕೊಂಡಿದ್ದೇನೆ. ಯಾವುದೇ ಪದದ ಅರ್ಥ ಅದು ಬಳಕೆಯಾಗುವ ಒಟ್ಟು ಸಂದರ್ಭದಲ್ಲಿ ಸ್ಪಷ್ಟವಾಗುತ್ತದೆ ಅನ್ನುವುದು ನನ್ನ ನಂಬಿಕೆ. ಕನ್ನಡ ಓದುಗರು ಅಷ್ಟು ಮಟ್ಟಿಗೆ ಈ ಬರಹ ಅರ್ಥಮಾಡಿಕೊಳ್ಳುತ್ತಾರೆ ಅನ್ನುವ ವಿಶ್ವಾಸವೂ ಇದೆ. ಬೌದ್ಧ ತಾತ್ವಿಕ ಪರಿಭಾಷೆಗಳಿಗೆ ಸಂಬಂಧಿಸಿದ ಹಾಗೆ ಇಂಗ್ಲಿಶ್‌ ಪದದ ಕನ್ನಡ ರೂಪ ಬಳಸದೆ ಸಂಸ್ಕೃತ, ಪ್ರಾಕೃತ ಅಥವಾ ಪಾಳಿಯ ರೂಪಗಳನ್ನೇ ಬಳಸಿದ್ದೇನೆ.

ನನಗೆ ಹೆಚ್ಚು ಪರಿಚಿತವಾಗಿರುವ ವಚನಗಳ ಅಥವಾ ಇತರ ಚಿಂತಕರ ವಿಚಾರವನ್ನು ಪ್ರತಿಯೊಂದು ಶೀರ್ಷಿಕೆಯ ಕನ್ನಡ ಅವತರಣಿಕೆಯ ನಂತರ ನೀಡಿದ್ದೇನೆ, ಅವನ್ನು ವಿವರಿಸಲು ಹೋಗದೆ ಆ ಸಂದರ್ಭದ ಮೇಲೆ ಬೇರೆಯ ಕೋನದಿಂದ ಬೆಳಕು ಬಿದ್ದದಂತಾಗುವುದನ್ನು ಓದುಗರು ಗಮನಿಸುತ್ತಾರೆ ಎಂದು ನಂಬಿದ್ದೇನೆ.

ಇದನ್ನು ಕನ್ನಡಗೊಳಿಸುವಾಗ ಲಾಮಾ ಅನಾಗರಿಕ ಗೋವಿಂದ, ಜಿಡ್ಡು ಕೃಷ್ಣಮೂರ್ತಿ, ಯುಜಿ, ನಿಸರ್ಗದತ್ತ ಮಹಾರಾಜ್‌, ರಮಣ ಮಹರ್ಷಿ, ಸಿಮಿಯೋನ್‌ ವೇಲ್‌, ಮಾಸ್ಟರ್‌ ಎಕ್‌ಹಾರ್ಟ್‌, ಕೃಷ್ಣಾನಂದ, ಬ್ರಹ್ಮಾನಂದ, ಮಲ್ಲಣ್ಣ, ಎಲ್ಲಕ್ಕಿಂತ ಮಿಗಿಲಾಗಿ ವಚನಕಾರರು, ಇನ್ನೂ ಅನೇಕ ಕವಿ ಲೇಖಕರ ಬರವಣಿಗೆ, ಬೋಧನೆಗಳು ನೆನಪಾಗುತಿದ್ದವು. ಯಾಂತ್ರಿಕವಲ್ಲದ ಬದುಕನ್ನು ಬಯಸುವ, ಕಲ್ಪಿತವಾದ ಮೇಲು-ಕೀಳು, ಹಿರಿಮೆ-ಗರಿಮೆ ಇಂಥ ಎಲ್ಲವನ್ನೂ ನಿರಾಕರಿಸುವ, ದೇಹ, ಬುದ್ಧಿ, ಮನಸ್ಸುಗಳ ನಡುವೆ ಹೊಂದಾಣಿಕೆ ಬಯಸುವ, ವ್ಯಕ್ತಿ ಮತ್ತು ಸಮಾಜ, ಇಹ ಮತ್ತು ಪರ, ಒಳಿತು ಮತ್ತು ಕೆಡುಕು, ಹುಟ್ಟು ಮತ್ತು ಸಾವು, ಇಹ ಮತ್ತು ಪರ ಇಂಥ ವಿಂಗಡಣೆಗಳು ಆತ್ಯಂತಿಕವಲ್ಲ, ಒಂದು ಇನ್ನೊಂದರೊಳಗೇ ಇರುತ್ತವೆ ಎಂದು ನಂಬುವ ಎಲ್ಲ ಪಂಥಗಳೂ, ತತ್ವಗಳೂ ಒಂದೇ ರೀತಿಯ ಬೋಧನೆಗಳನ್ನು ಮಾಡುತ್ತವೆ. ನುಡಿ ಬೇರೆಯಾದರೂ ಕಾಲ ಭಿನ್ನವಾದರೂ, ಭಾವ ಒಂದೇ ಅನಿಸುತ್ತದೆ.  

ಇಂಥವನ್ನು ಓದುವುದು ವ್ಯರ್ಥವೋ ಅನ್ನುವ ಅನುಮಾನವೂ ಬರುತ್ತದೆ. ಅನುಮಾನಕ್ಕೆ ಎರಡು ಕಾರಣಗಳಿವೆ. ಇವರು ಮಾತ್ರವಲ್ಲ ಆ ಅವರೂ ಹೀಗೇ ಹೇಳಿದ್ದಾರಲ್ಲಾ ಅಂದುಕೊಳ್ಳುತ್ತ ಓದುತ್ತಿರುವುದನ್ನು ಬಿಟ್ಟು ಬೇರೆ ಇನ್ನೆಲ್ಲಿಗೋ ಗಮನ ಅಲೆಯುವುದು, ಅದು ಸರಿ, ಇದು ಅಷ್ಟು ಸರಿಯಲ್ಲ ಅಂದುಕೊಳ್ಳುವುದು, ಓದುತ್ತಿರುವ ಮಾತಿಗೆ ಎದುರುತ್ತರ ಊಹಿಸುವುದು ಹೀಗೆಲ್ಲ ನಮ್ಮ ಮನಸು ಆಟ ಕಟ್ಟುತ್ತದೆ. “ವಿಚಾರವೆಂಬುದು ಸಂದೇಹಕ್ಕೆ ಒಳಗು” ಅಂದ ಅಲ್ಲಮ ನಿಜವನ್ನೇ ಹೇಳಿದ. ವಿಚಾರಗಳ ಬಲೆ ನೇಯ್ದು ಸಿಕ್ಕಿ ದಣಿಯುವುದು ಯಾಕೆ?

ಅನುಮಾನಕ್ಕೆ ಇನ್ನೊಂದು ಕಾರಣ, ಇಂಥ ಬೋಧನೆಗಳು ನಿಜ, ಓದುವ ಹೊತ್ತಿನಲ್ಲಿ, ಅರ್ಥವಾಯಿತು ಅನಿಸಿದ ಕ್ಷಣದಲ್ಲಿ ಮನಸು ತುಂಬಿದಂತೆ ಅನಿಸುವುದೂ ನಿಜ. ಮತ್ತೆ ಮಾಮೂಲು ಬದುಕಿಗೇ ಜಾರುವುದು ಕೂಡ ಇದೆಯಲ್ಲ! ಓದಿ, ಬುದ್ಧಿಯೂ ಮನಸೂ ಮೆಚ್ಚಿದರೆ ಸಾಕೇ? ನನಗೆ ಇವೆಲ್ಲ ಗೊತ್ತು ಅಂದುಕೊಂಡರೆ, ಹೆಮ್ಮೆ ಪಟ್ಟರೆ ಅದರಿಂದ ಏನಾದಹಾಗಾಯಿತು? ಮತ್ತೆ ನಿರ್ಜೀವ ಮಾಮೂಲುತನಕ್ಕೆ ನಾವು ಮರಳುತ್ತೇವಲ್ಲ ಯಾಕೆ? ಒಳಗಿನ ಆಲಸ್ಯವೋ ಹೊರಗಿನ ತಿಳಿವಳಿಕೆಯ ಮುಖವಾಡವೋ?

ಜೆಕೆ ಅನುವಾದ ಮಾಡುವಾಗ ನೋಡು, ಕೇಳು, ಇಡಿಯಾಗಿ ಗಮನಿಸು, ಟಿಕ್‌ ನಾಟ್‌ ಹಾನ್‌ ಓದುತ್ತಿರುವಾಗ ಗಮನದ ಎಚ್ಚರ, ಒಂದು ಇನ್ನೊಂದಾಗಿ ಬದಲಾಗುವುದು, ಗುರಿ ಇರದೆ ಬದುಕುವುದೇ ಶೂನ್ಯ, ರಮಣರು ಹೇಳಿದ ಸುಮ್ಮನೆ ಇರು, ನಿಸರ್ಗದತ್ತರು ಹೇಳುವ ನಾನೇ ಅದು, ಬ್ರಹ್ಮಾನಂದರು ಹೇಳುತಿದ್ದ ಬಳೆಯನ್ನೂ ಬಳೆಯ ಚಿನ್ನವನ್ನೂ ಬೇರೆಮಾಡಲಾಗದು ಇಂಥ ಸೂತ್ರ ರೂಪದ ಮಾತುಗಳು ಅವರೆಲ್ಲರ ಬೋಧನೆಯಲ್ಲೂ ಮತ್ತೆ ಮತ್ತೆ ರಿಪೀಟ್‌ ಆಗದರೂ ಒಂದೊಂದು ಸಲವೂ ಒಂದೊಂದು ಅರ್ತ ಹೊಳೆಯುವುದು ಗಮನಿಸಿದ್ದೇನೆ. ಅನಿಸಿದ್ದು ಇದು. ನಮ್ಮನ್ನೇ ನೋಡಿಕೊಳ್ಳುವ ಗಮನದಲ್ಲಿ ಸರಿ-ತಪ್ಪುಗಳ ತೀರ್ಮಾನವಾಗಲಿ ಸಮರ್ಥನೆ-ವಿರೋಧಗಳಾಗಲೀ ಇರಬಾರದು, ಈಗ ಇರುವುದಲ್ಲದೆ ಬೇರೆ ಏನೋ ಅಗಲು ಬಯಸಬಾರದು, ಗುರುವನ್ನು ಹುಡುಕುವುದೂ ಬೇಕಿಲ್ಲ ಎಂದು ಬುದ್ಧಿ ಒಪ್ಪಿದರೂ ಹಾಗೆ ಇರಲಾಗದು. ಸ್ವಲ್ಪ ಹೊತ್ತಿನಲ್ಲೇ ಜಾರಿ ಮಾಮೂಲಾದಾಗ ಹಾಗೆ ಆದದ್ದನ್ನೂ ಸುಮ್ಮನೆ ಗಮನಿಸುವುದೊಂದೇ ಎಚ್ಚರದ ಕಲಿಕೆ. ಎಲ್ಲಿಯವರೆಗೆ ಘರ್ಷಣೆ ಇರದೆ, ಕಲಿಯುತ್ತ ಇರುತ್ತೇವೆಯೋ ಅಲ್ಲಿಯವರೆಗೆ ಬದುಕಿರುತ್ತೇವೆ. ಹಾಗೆ ಎಚ್ಚರವನ್ನು ಉಳಿಸಿಕೊಳ್ಳುವುದೇ ಜೀವಂತಿಕೆ ಅಲ್ಲವೇ ಅನ್ನಿಸುತ್ತದೆ. ಇದು ಸದ್ಯದ ಸಮರ್ಥನೆಯೂ ಇರಬಹುದು.


ನಾಳೆಯಿಂದ ಎರಡು ದಿನಕ್ಕೊಮ್ಮೆ ಟಿಕ್‌ ನಾಟ್‌ ಹಾನ್‌ ಬೋಧನೆಗಳ ವ್ಯಾಖ್ಯಾನ ಬರಹಗಳು ಸರಣಿಯಾಗಿ ಪ್ರಕಟವಾಗಲಿವೆ. ಹಿರಿಯ – ಬಹುಶ್ರುತ ಲೇಖಕರೂ ಅನುವಾದಕರೂ ಆದ ಓ.ಎಲ್.ನಾಗಭೂಷಣ ಸ್ವಾಮಿಯವರು ಅರಳಿಮರಕ್ಕಾಗಿಯೇ ಈ ಸರಣಿ ರೂಪಿಸಿದ್ದಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.