ಹಾಗಾದರೆ ನಿಜದಲ್ಲಿ ನಿರ್ವಾಣ ಎಂದರೇನು? ಇದನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೊದಲು ನೀವು ಇದು ಯಾವ ಸಮಸ್ಯೆಗೆ ಪರಿಹಾರ ನೀಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ನೀವು ಯಾರಾದರೂ ಸಾಮಾನ್ಯ ಜನರನ್ನ ಬುದ್ಧಿಸಂ ನ ತತ್ವಜ್ಞಾನ ನಿರ್ವಾಣ ದ ಬಗ್ಗೆ ಕೇಳಿದರೆ, ಅದನ್ನು ಅವರು ಒಂದು ಸುಂದರ ಸ್ವರ್ಗ, ಇಲ್ಲಿ ಬಂಗಾರದ ಕಿರಣಗಳು ಕಾಣಿಸುತ್ತವೆ, ಇಲ್ಲಿ ಶಾಶ್ವತವಾದ ಸುಖ ಇದೆ ಎಂದೆಲ್ಲ ಬಣ್ಣಿಸಬಹುದು. ಆದರೆ ನೀವು ಪ್ರಾಚೀನ ಬುದ್ಧಿಸಂ ನ ಅಭ್ಯಾಸ ಮಾಡಿದರೆ ನಿಮಗೆ ಗೊತ್ತಾಗುತ್ತದೆ, ನಿರ್ವಾಣದ ಕುರಿತಾದ ಈ ಪಾಶ್ಚಿಮಾತ್ಯ ಐಡಿಯಾ ಸಂಪೂರ್ಣ ತಪ್ಪು ಎನ್ನುವುದು. ಶಾಶ್ವತವಾಗಿ ಸ್ವರ್ಗದಲ್ಲಿ ಬದುಕ ಬಯಸುವ ನಿಮ್ಮ ಕನಸಿನ ಬಗ್ಗೆ ಬುದ್ಧನಿಗೇನಾದರೂ ಗೊತ್ತಾದರೆ ಅವನು ಹೇಳುತ್ತಿದ್ದ ನಿಮ್ಮದು ಮುಕ್ತಿಯಲ್ಲ ಬದಲಾಗಿ ದುಃಖದ ಒಂದು ಭಾಗವೇ ಎಂದು.
ಹಾಗಾದರೆ ನಿಜದಲ್ಲಿ ನಿರ್ವಾಣ ಎಂದರೇನು? ಇದನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೊದಲು ನೀವು ಇದು ಯಾವ ಸಮಸ್ಯೆಗೆ ಪರಿಹಾರ ನೀಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪಾಶ್ಚಿಮಾತ್ಯ ಧರ್ಮಗಳು ನಮಗೆ ಹೇಳುವುದೇನೆಂದರೆ, ಆತ್ಮ ಅತ್ಯಮೂಲ್ಯವಾದದ್ದು. ಮತ್ತು ನೀವು ಗಳಿಸಬಹುದಾದ ದೊಡ್ಡ ಬಹುಮಾನವೆಂದರೆ ಈ ಆತ್ಮವನ್ನು ಸ್ವರ್ಗದಲ್ಲಿ ಶಾಶ್ವತವಾಗಿ ಜೀವಂತವಾಗಿಡುವುದು. ಆದರೆ ಬುದ್ಧಿಸಂ ನಮಗೆ ಕಲಿಸುವುದೇನೆಂದರೆ, ನಿಮ್ಮ ಆತ್ಮ, ನಿಮ್ಮ ಅಹಂ, ನಿಮ್ಮ ಐಡೆಂಟಿಟಿ, ನಿಮ್ಮ ಬಯಕೆಗಳೇ ನಿಮ್ಮ ಎಲ್ಲ ದುಃಖಗಳಿಗೆ ಮೂಲ ಕಾರಣ. ಒಮ್ಮೆ ಯೋಚಿಸಿ ನೋಡಿ, ನೀವು ನೀವಾಗಿರುವುದು ಎಷ್ಟು ತ್ರಾಸದಾಯಕ ಎಂದು. ನೀವು ಯಾವಾಗಲೂ ನಿಮ್ಮ ರೆಪ್ಯುಟೇಷನ್ ನ ಕಾಯ್ದುಕೊಳ್ಳಬೇಕಾಗುತ್ತದೆ, ನಿಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ. ನೀವು ಕೋಪ ಮಾಡಿಕೊಳ್ಳುವುದು, ಚಿಂತೆ ಮಾಡುವುದು, ನಿಮ್ಮ ಹೃದಯ ಒಡೆದು ಹೋಗುವುದು ಇವು ನಿರಂತರವಾಗಿ ಸಂಭವಿಸುತ್ತಿರುತ್ತವೆ.
ಈಗ ಯೋಚಿಸಿ, ನಿಮ್ಮ ಇಂಥ ದುರ್ಬಲ ಆಸೆಬುರುಕ ಅಹಂ ನ ಕೋಟ್ಯಾಂತರ ವರ್ಷಗಳಿಗಾಗಿ ಸ್ವರ್ಗಕ್ಕೆ ತೆಗೆದುಕೊಂಡು ಹೋಗುವಿರಾದರೆ, ಆಗ ಅದು ಸ್ವರ್ಗವಾಗಿ ಉಳಿಯುವುದಿಲ್ಲ, ಅದು ನಿಮ್ಮ ಬಯಕೆಗಳ ಶಾಶ್ವತ ಬಂದೀಖಾನೆಯಾಗಿ ಪರಿವರ್ತಿತಗೊಳ್ಳುತ್ತದೆ. ಬುದ್ಧ ಇದನ್ನೇ ಸ್ಪಷ್ಟವಾಗಿ ಅರಿತುಕೊಂಡಿದ್ದ, ಎಲ್ಲಿವರೆಗೆ ಸಂಗತಿಗಳನ್ನು ಅನುಭವಿಸಲು ‘ನಾನು’ ಎನ್ನುವ ಭಾವ, self, ನಿಮ್ಮ ಜೊತೆ ಇರುತ್ತದೆಯೋ ಅಲ್ಲಿಯವರೆಗೆ ನಿಮ್ಮ ಜೊತೆ ದುಃಖವೂ ಇರುತ್ತದೆ.
ಆದ್ದರಿಂದ ನಿಮ್ಮ ಆತ್ಯಂತಿಕ ಗುರಿ ಈ ಸೆಲ್ಫ್ ನ ಯಾವುದಾದರೂ ಉತ್ತಮ ಜಾಗಕ್ಕೆ ತೆಗೆದುಕೊಂಡು ಹೋಗುವುದು ಆಗದೇ, ಈ ಸೆಲ್ಫ್ ನ ಭ್ರಮೆಯಿಂದ ಸಂಪೂರ್ಣವಾಗಿ ಸ್ವತಂತ್ರವಾಗುವುದಾಗಿರಬೇಕು. Blowing out ನ ಪರಿಕಲ್ಪನೆ ಹುಟ್ಟಿಕೊಳ್ಳುವುದು ಇಲ್ಲಿಯೇ. ಒಂದು ಉರಿಯುತ್ತಿರುವ ಮೊಂಬತ್ತಿಯನ್ನು ಕಲ್ಪನೆ ಮಾಡಿಕೊಳ್ಳಿ. ಆ ಮೊಂಬತ್ತಿಯ ಜ್ವಾಲೆ ನಿಮ್ಮ ಅಹಂ ಮತ್ತು ಆ ಮೇಣ ನಿಮ್ಮ ಕರ್ಮ ಮತ್ತು ಬಯಕೆಗಳು. ಮೊಂಬತ್ತಿ ಆರಿದಾಗ ಯಾರೂ ಪ್ರಶ್ನೆ ಮಾಡುವುದಿಲ್ಲ, ಆ ಜ್ವಾಲೆ ಎಲ್ಲಿ ಹೋಯಿತೆಂದು. ಆ ಜ್ವಾಲೆ ಯಾವುದಾದರೂ ಸ್ವರ್ಗಕ್ಕೆ ಹೋಯಿತಾ? ನರಕಕ್ಕೆ ಹೋಯಿತಾ? ಹಾಗಾದರೆ ಎಲ್ಲಿಗೆ ಹೋಯಿತು? ನಿಜದಲ್ಲಿ ಅದು ಎಲ್ಲಿಗೂ ಹೋಗಿಲ್ಲ, ಅದನ್ನು ಜೀವಂತವಾಗಿಟ್ಟಿದ್ದ ಇಂಧನ ತೀರಿ ಹೋಯಿತು ಅಷ್ಟೇ. ಆದ್ದರಿಂದಲೇ ಅದು ಆರಿ ಹೋಗಿದೆ.
ನಿರ್ವಾಣವೂ ಹಾಗೆಯೇ. ಲೋಭ, ಅಜ್ಞಾನ, ದ್ವೇಷ ಮುಂತಾದವುಗಳ ಜ್ವಾಲೆ ಆರಿ ಹೋಗುವುದು. ನಿರ್ವಾಣ, ಸತ್ತ ಮೇಲೆ ಹೋಗಿ ತಲುಪುವ ಜಾಗವಲ್ಲ. ಇದೊಂದು ಮಾನಸಿಕ ಸ್ಥಿತಿ. ಈ ಸ್ಥಿತಿಯಲ್ಲಿ ಲೋಭ, ದ್ವೇಷ, ಭ್ರಮೆಗಳ ಬೆಂಕಿಗೆ ಇಂಧನವಾಗಿದ್ದ ಆಕ್ಸಿಜನ್ ಸರಬರಾಜು ಸುಮ್ಮನೇ ನಿಂತು ಹೋಗುತ್ತದೆ. ಈ ಸ್ಥಿತಿಯನ್ನು ತಲುಪಿದಾಗ ನೀವು ನಿಮ್ಮ ದೇಹ, ನಿಮ್ಮ ಹೆಸರು, ನಿಮ್ಮ ವಿಚಾರಗಳ ಜೊತೆ ಗುರುತಿಸಿಕೊಳ್ಳುವುದನ್ನು ನಿಲ್ಲಿಸಿ ಬಿಡುತ್ತೀರಿ. ಆದ್ದರಿಂದ ನಿಮ್ಮ ಎಲ್ಲ ಬಯಕೆಗಳು ಪೂರ್ಣಗೊಳ್ಳುವ ಆ ಮಾಂತ್ರಿಕ ಜಾಗವನ್ನು ಹುಡುಕುವುದನ್ನು ನಿಲ್ಲಿಸಿಬಿಡಿ. ಬಯಕೆಗಳು ಯಾವತ್ತೂ ಪೂರ್ತಿಯಾಗುವುದಿಲ್ಲ, ಈ ಬಯಕೆಗಳನ್ನೇ ನಾವು ಬಿಟ್ಟು ಬಿಡಬೇಕು ಅಷ್ಟೇ. ಆಗ ಮಾತ್ರ ನಿರ್ವಾಣ ಸಾಧ್ಯ.

