ಎಲ್ಲ ಬದ್ಧತೆಗಳನ್ನೂ ಬಿಡಿಸಿಕೊಂಡು ಸಿದ್ಧಾರ್ಥ ಪ್ರತಿಯೊಂದಕ್ಕೂ ಬೆನ್ನು ತಿರುಗಿಸಿದ್ದ. ಕುಲದ ಮೇಲರಿಮೆ ಎತ್ತಿ ಹಿಡಿಯುವ ವ್ಯಾಜ್ಯಕ್ಕೆ ಬೆನ್ನು ತಿರುಗಿಸಿದ. ಸ್ಥಾನದ ಮೇಲರಿಮೆ ಎತ್ತಿಹಿಡಿಯುವ ರಾಜಕುಮಾರನ ಪಟ್ಟಕ್ಕೆ ಬೆನ್ನು ತಿರುಗಿಸಿದ. ಸಂಬಂಧದ ಮೇಲರಿಮೆ ಸಾರುವ ಗಂಡನ ಮತ್ತು ತಂದೆಯ ಸ್ಥಾನಕ್ಕೆ ಬೆನ್ನು ತಿರುಗಿಸಿದ. ಈ ಮೂಲಕ ಮದ – ಮತ್ಸರ, ಕಾಮ – ಮೋಹಗಳನ್ನು ಮಣಿಸಿದ. ಕೊನೆಗೆ ಮುಪ್ಪಾಗುವ, ನರಳುವ, ತೀರಿಹೋಗುವ ದೇಹದ ಸುಖಕ್ಕಾಗಿ ಅರಿಷಡ್ವರ್ಗಗಳ ಜೊತೆ ಸ್ನೇಹ ಬೆಳೆಸುವ ಸಂಸಾರಕ್ಕೂ ಬೆನ್ನು ತಿರುಗಿಸಿಬಿಟ್ಟ. ಆಮೇಲೇ ಅವನು ಬುದ್ಧನಾಗಿದ್ದು । ಚೇತನಾ ತೀರ್ಥಹಳ್ಳಿ
ಬೆನ್ನು ತಿರುಗಿಸುವ ಧೀರತನ ಎಲ್ಲರಿಗೂ ಇರುವುದಿಲ್ಲ. ವಾಸ್ತವದಲ್ಲಿ, ಎದೆಗೊಡಲು ಬೇಕಾದುದಕ್ಕಿಂತ ಹೆಚ್ಚಿನ ಧೈರ್ಯ ಬೆನ್ನು ತೋರಲು ಬೇಕಾಗುತ್ತದೆ. ಯಾಕೆಂದರೆ ಅಲ್ಲಿ ನಾವು ಒಳಗಿನ ವೈರಿಗಳೊಡನೆ ಹೋರಾಡುತ್ತ ಇರುತ್ತೇವೆ, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳೆಂಬ ಅರಿಷಡ್ವರ್ಗಗಳ ಜೊತೆ. ಇವುಗಳಲ್ಲಿ ಯಾವುದು ಬಲವಾಗಲು ಬಿಟ್ಟರೂ ನಮ್ಮ ಬೆನ್ನು ತಿರುಗುವುದಿಲ್ಲ. ಮಹತ್ವಾಕಾಂಕ್ಷೆಯ ಹೊರೆ, ಅದು ತಿರುಗಲು ಬಿಡುವುದೂ ಇಲ್ಲ.
ಬುದ್ಧ ಮಹಾಗುರುವಾಗುವುದು ಇಲ್ಲಿ; ತೊರೆಯುವ ಮೂಲಕ, ಬೆನ್ನು ತಿರುಗಿಸುವ ಮೂಲಕ ಒಳ ಹೊರಗಿನ ಎರಡೂ ಕಡೆಯ ವೈರಿಗಳನ್ನು ಗೆಲ್ಲುವಲ್ಲಿ.
ಹುಟ್ಟಿದಾಗಿಂದ ಎರಡೂವರೆ ದಶಕಗಳ ಕಾಲ ಅರಮನೆಯೊಳಗೇ ಇದ್ದ ಶಾಕ್ಯ ಕುಲದ ರಾಜಕುಮಾರ ಸಿದ್ಧಾರ್ಥ, ಒಂದು ದಿನ ನಗರ ಸಂಚಾರ ಹೊರಟ. ರೋಗದ, ಮುಪ್ಪಿನ, ಸತ್ತುಹೋದ ಮನುಷ್ಯರನ್ನು ಕಂಡ. ಕೊನೆಯದಾಗಿ ಒಬ್ಬ ಸಮಣನನ್ನು ಕಂಡು, ಎಲ್ಲದರ ದುಃಖ ಕಳೆದುಕೊಳ್ಳಲು ಪರಿತ್ಯಾಗವೇ ಅತ್ಯುತ್ತಮ ಮಾರ್ಗ ಅಂದುಕೊಂಡ. ಅದರಿಂದ ಪ್ರಭಾವಿತನಾಗಿ ನಡುರಾತ್ರಿಯಲ್ಲಿ ಮನೆ ತೊರೆದು ಕಾಡು ಸೇರಿ, ಧ್ಯಾನ ಸಾಧನೆಯಿಂದ ಜ್ಞಾನೋದಯ ಪಡೆದ – ಅನ್ನುತ್ತವೆ ಜನಪ್ರಿಯ ಕತೆಗಳು.
ಬುದ್ಧನ ಚಿಂತನೆಯನ್ನು ಸುಲಭವಾಗಿ ಅರ್ಥ ಮಾಡಿಸಲೆಂದೇ ಸರಳ ರೇಖೆಯಲ್ಲಿ ಕೂರಿಸಿ ಕಟ್ಟಿರುವ ಈ ಕತೆಗಳು, ವಾಸ್ತವದಲ್ಲಿ ಬುದ್ಧನ ನೈಜ ಚಿಂತನೆಯನ್ನು ಜನರಿಂದ ದೂರ ಮಾಡುತ್ತವೆ. ಈ ಕತೆಗಳು ಬುದ್ಧನನ್ನು ದೈಹಿಕ ಬದಲಾವಣೆಯ ನೋವು ಮತ್ತು ಸಾವಿನ ದುಃಖದಿಂದ ಆತಂಕಗೊಂಡನೆಂದು ತಪ್ಪಾಗಿ ಬಿಂಬಿಸುತ್ತವೆ. ಇಷ್ಟಕ್ಕೂ ರಾಜಕುಮಾರ ಸಿದ್ಧಾರ್ಥ, ಸಾಕಷ್ಟು ಶಿಕ್ಷಣ ಪಡೆದಿದ್ದವನು, ಹೆಂಡತಿಯನ್ನೂ ಮಗನನ್ನೂ ಹೊಂದಿದ್ದವನು, ಬಾಲ್ಯದಿಂದ ತನ್ನ ತಂದೆ ತಾಯಂದಿರ ಮತ್ತು ಖುದ್ದು ತನ್ನ ದೈಹಿಕ ಬದಲಾವಣೆಯನ್ನು ಕಾಣುತ್ತ ಬಂದವನು. ಅಂಥವನಿಗೆ ಮುಪ್ಪು, ಸಾವುಗಳ ಸತ್ಯ ಗೊತ್ತಿರಲಿಲ್ಲ ಅನ್ನುವುದು ನಂಬಲಾಗದ ಮಾತು. ಆದರೆ, ಸಿದ್ಧಾರ್ಥ ಅರಮನೆ ತೊರೆಯುವಲ್ಲಿ ಆ ನಾಲ್ಕು ಸತ್ಯಗಳ ಕೊಡುಗೆಯನ್ನು ಅಲ್ಲಗಳೆಯಲೂ ಆಗುವುದಿಲ್ಲ. ಹಾಗಾದರೆ ಸಂಪೂರ್ಣ ನಿಜ ಅನ್ನಬಹುದಾದ ಕಾರಣ ಏನಿರಬಹುದು?
ಇದಕ್ಕೆ ಉತ್ತರ ಡಾ.ಬಿ.ಆರ್.ಅಂಬೇಡ್ಕರರ ‘ಬುದ್ಧ ಮತ್ತು ಅವನ ಧಮ್ಮ’ ಕೃತಿಯಲ್ಲಿ ಸಿಗುತ್ತದೆ. ಅಂಬೇಡ್ಕರ್ ಪ್ರಕಾರ, ಬಂಧುಗಳಾಗಿದ್ದ ಶಾಕ್ಯ ಮತ್ತು ಕೋಲೀಯರು ರೋಹಿಣೀ ನದಿಯ ನೀರಿಗಾಗಿ ನಡೆಸುತ್ತಿದ್ದ ವ್ಯಾಜ್ಯ ಸಿದ್ಧಾರ್ಥನ ಮನಸ್ಸಿನಲ್ಲಿ ಅಶಾಂತಿಯ ಅಲೆಗಳನ್ನು ಎಬ್ಬಿಸಿತ್ತು. ಎರಡೂ ಕಡೆಯವರೂ ಆ ನೀರಿನ ಮೇಲೆ ತಮ್ಮ ಸಂಪೂರ್ಣ ಹಕ್ಕು ಸಾಧಿಸಲು ಪಟ್ಟುಹಿಡಿದಿದ್ದರು. ಆ ಸಂದರ್ಭದಲ್ಲಿ ಬಹುಶಃ ಸಿದ್ಧಾರ್ಥನಿಗೆ ಮುಪ್ಪಾಗಿ ತೀರಿಹೋಗುವ, ರೋಗಬಾಧೆಯಿಂದ ಬಳಲುವ ನಶ್ವರ ಶರೀರದ ಅಹಂಕಾರಕ್ಕಾಗಿ ಎಷ್ಟೆಲ್ಲ ಆಟ ಕಟ್ಟುತ್ತೇವಲ್ಲ ಅನ್ನುವ ಆಲೋಚನೆ ಕಾಡಿರಬೇಕು. ಆ ಸಮಯದಲ್ಲೇ ಸಮಣನೊಬ್ಬನನ್ನು ಭೇಟಿಯಾದ ಅವನಲ್ಲಿ, ನಾನು – ನನ್ನದೆನ್ನುವ ಮಮಕಾರಕ್ಕೆ ಬೆನ್ನು ತಿರುಗಿಸಿದರಷ್ಟೆ ಶಾಂತಿ ಅನ್ನುವ ಆಲೋಚನೆಯ ಕಿಡಿ ಹೊತ್ತಿರಬೇಕು. ಸಿದ್ಧಾರ್ಥ ಅರಮನೆ ತೊರೆಯಲು, ಅಂಬೇಡ್ಕರರು ಹೇಳುವಂತೆ ನದೀವಿವಾದದಲ್ಲಿ ತನ್ನವರ ಪರ ವಹಿಸದೆ ಇದ್ದುದಕ್ಕೆ ಕುಲನಿಯಮದಂತೆ ಶಿಕ್ಷೆಯಾಗಿದ್ದೊಂದು ಕಾರಣ. ಅದರ ಜೊತೆಗೇ ಅವನಲ್ಲಿ, ಮಮಕಾರಕ್ಕೆ ಬೆನ್ನು ತಿರುಗಿಸಿದರೆ ನಿಜಕ್ಕೂ ಶಾಂತಿ ದೊರೆಯುವುದೇ ಎಂದು ಪರೀಕ್ಷಿಸುವ ಉದ್ದೇಶ ಇದ್ದಿರಬೇಕು.
ನಡುರಾತ್ರಿಯಲ್ಲೆದ್ದು, ಸತಿ ಸುತರನ್ನು ತೊರೆದು, ಊರ ಗಡಿಯಲ್ಲಿ ಸಾರಥಿ ಚೆನ್ನನನ್ನು ತಬ್ಬಿ ಬೀಳ್ಕೊಟ್ಟಾಗಲೇ ಸಿದ್ಧಾರ್ಥನಿಗೆ ಶಾಂತಿ ಸಿಕ್ಕಿಬಿಡಬೇಕಿತ್ತು. ಹಾಗಾಗಲಿಲ್ಲ. ಅದರ ಸಿದ್ಧಿಗಾಗಿ ಅವನು ಕಾಡಿನಲ್ಲಿ ವರ್ಷಗಟ್ಟಲೆ ಧ್ಯಾನ ನಡೆಸಬೇಕಾಯಿತು. ಅಹಂಕಾರದ ಪ್ರಾಬಲ್ಯವನ್ನು ಇಂಚಿಂಚೂ ಮಣಿಸಿ ಹಣಿಯುವವರೆಗೂ ಕಾಯಬೇಕಾಯಿತು. ದೇಹಪ್ರಜ್ಞೆಗೆ ಅಂಟಿಕೊಂಡಿದ್ದ ಶುದ್ಧಪ್ರಜ್ಞೆಯನ್ನು ಅದರಿಂದ ಬೇರ್ಪಡಿಸುವ ಸಲುವಾಗಿ, ತನ್ನನ್ನು ಪ್ರಾಪಂಚಿಕರಿಂದ ದೂರವಿಟ್ಟುಕೊಳ್ಳಬೇಕಾಯಿತು. ಅದು ಸಿದ್ಧಿಸಿದ ಮೇಲಷ್ಟೇ ಅವನು ಜನರ ನಡುವೆ ಬೆರೆತಿದ್ದು, ಅನ್ನಾಹಾರ ಸೇವನೆಯ ಮೂಲಕ ದೇಹಪೋಷಣೆಗೆ ಮರಳಿದ್ದು.
ಎಲ್ಲ ಬದ್ಧತೆಗಳನ್ನೂ ಬಿಡಿಸಿಕೊಂಡು ಸಿದ್ಧಾರ್ಥ ಪ್ರತಿಯೊಂದಕ್ಕೂ ಬೆನ್ನು ತಿರುಗಿಸಿದ್ದ. ಕುಲದ ಮೇಲರಿಮೆ ಎತ್ತಿ ಹಿಡಿಯುವ ವ್ಯಾಜ್ಯಕ್ಕೆ ಬೆನ್ನು ತಿರುಗಿಸಿದ. ಸ್ಥಾನದ ಮೇಲರಿಮೆ ಎತ್ತಿಹಿಡಿಯುವ ರಾಜಕುಮಾರನ ಪಟ್ಟಕ್ಕೆ ಬೆನ್ನು ತಿರುಗಿಸಿದ. ಸಂಬಂಧದ ಮೇಲರಿಮೆ ಸಾರುವ ಗಂಡನ ಮತ್ತು ತಂದೆಯ ಸ್ಥಾನಕ್ಕೆ ಬೆನ್ನು ತಿರುಗಿಸಿದ. ಈ ಮೂಲಕ ಮದ – ಮತ್ಸರ, ಕಾಮ – ಮೋಹಗಳನ್ನು ಮಣಿಸಿದ. ಕೊನೆಗೆ ಮುಪ್ಪಾಗುವ, ನರಳುವ, ತೀರಿಹೋಗುವ ದೇಹದ ಸುಖಕ್ಕಾಗಿ ಅರಿಷಡ್ವರ್ಗಗಳ ಜೊತೆ ಸ್ನೇಹ ಬೆಳೆಸುವ ಸಂಸಾರಕ್ಕೂ ಬೆನ್ನು ತಿರುಗಿಸಿಬಿಟ್ಟ. ಆಮೇಲೇ ಅವನು ಬುದ್ಧನಾಗಿದ್ದು.
ಸಿದ್ಧಾರ್ಥನ ಬೆನ್ನು ತಿರುಗಿಸುವಿಕೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕ್ರಿಯೆಯಾಗಿರಲಿಲ್ಲ. ಅದು ಸೃಷ್ಟಿಯಲ್ಲಿರುವ ಪ್ರತಿಯೊಂದನ್ನೂ ಪ್ರತಿಯೊಬ್ಬರೊಡನೆ ಹಂಚಿಕೊಳ್ಳುವ ಔದಾರ್ಯವಾಗಿತ್ತು. ಅವನು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ತನ್ನ ಸಂಸಾರ ತೊರೆಯಲಿಲ್ಲ. ಸಂಸಾರದ ಚೌಕಟ್ಟು ಮೀರಿ ವಿಶ್ವಕುಟುಂಬಿಯಾದ, ಬಂಧಗಳಿಲ್ಲದ ಬಂಧುತ್ವದಲ್ಲಿ ಜನರನ್ನು ಒಗ್ಗೂಡಿಸಿದ.
ಬುದ್ಧ ಪ್ರಾಮುಖ್ಯತೆ ಪಡೆಯುವುದೇ ಇಲ್ಲಿ. ನಾವು ನಮ್ಮ ಗುರುತಿಗಾಗಿ ಸ್ವಾರ್ಥಿಗಳಾಗುತ್ತೇವೆ, ಆ ಕಾರಣದಿಂದಲೇ ಸ್ವಯಂರಕ್ಷಣೆಯ ಹೆಸರಲ್ಲಿ ಮತ್ತೊಬ್ಬರ ಮೇಲೇರಿ ಹೋಗುತ್ತೇವೆ. ಕೆಲವೊಮ್ಮೆ, ನಮ್ಮ ವೈಯಕ್ತಿಕ ಲಾಭಕ್ಕಾಗಿಯಲ್ಲದೆ, ನಾವು ಗುರುತಿಸಿಕೊಂಡ ಕುಟುಂಬ, ಕುಲ, ಗಡಿಗಳ ಕಾರಣಕ್ಕಾಗಿ ಯುದ್ಧಕ್ಕಿಳಿಯುತ್ತೇವೆ, ದ್ವೇಷಕ್ಕೆ ಎದೆಗೊಡುತ್ತೇವೆ. ಅವುಗಳ ಗೆಲುವಿನಲ್ಲಿ ನಮ್ಮ ಗೆಲುವನ್ನು ಕಾಣುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಅಹಂಕಾರ ಸಮುದಾಯದ ಸ್ವರೂಪ ಪಡೆಯುತ್ತದೆ. ವೈಯಕ್ತಿಕ ಅಹಂಕಾರವೇ ವಿಧ್ವಂಸಕಾರಿ, ಇನ್ನು ಸಾಮುದಾಯಿಕ ಅಹಂಕಾರದ ಪರಿಣಾಮ ಹೇಗಿರಬೇಡ? ಸಿದ್ಧಾರ್ಥನ ಬೆನ್ನು ತಿರುಗಿಸುವಿಕೆ ತಡೆದಿದ್ದು ಇಂಥದೊಂದು ವಿನಾಶವನ್ನು.
ಎಲ್ಲವನ್ನೂ ತೊರೆದು ಹೋಗುವ ಸಿದ್ಧಾರ್ಥನ ನಿರ್ಧಾರ ಕೇವಲ ಸ್ವಯಂಮುಕ್ತಿಗಾಗಿ ಆಗಿರಲಿಲ್ಲ, ತನ್ನ ಸುತ್ತಲಿನ ಪ್ರತಿಯೊಬ್ಬರ ಮುಕ್ತಿಗಾಗಿಯೂ ಆಗಿತ್ತು. ಅವನು ಬುದ್ಧಗುರುವಾದ ನಂತರದಲ್ಲಿ ಶಾಕ್ಯ – ಕೋಲೀಯರಿಬ್ಬರೂ ಮತ್ತೊಮ್ಮೆ ನದೀನೀರಿನ ವಿವಾದ ಅವನ ಮುಂದಿಟ್ಟಿದ್ದರು. ಆಗ ಬುದ್ಧ, “ಯುದ್ಧದಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಅದು ಕೇವಲ ದ್ವೇಷವನ್ನು ಹೆಚ್ಚಿಸುತ್ತದೆ” ಎಂದು ತಿಳಿಹೇಳಿ ಅವರಿಬ್ಬರ ನಡುವೆ ಸಂಧಾನ ಮಾಡಿಸಿದ್ದ.
ಸಿದ್ಧಾರ್ಥನಿಂದ ಸಾಧ್ಯವಾಗದ್ದು ಬುದ್ಧನಿಂದ ಸಾಧ್ಯವಾಗಿದ್ದು ಹೇಗೆ? ಕಾರಣ ಸ್ಪಷ್ಟ: ಆ ಹೊತ್ತು ಅವನು, ಎಲ್ಲ ಗುರುತುಗಳಿಗೂ ಬೆನ್ನು ತಿರುಗಿಸಿ ನಿಂತಿದ್ದ.
(ಕೃಪೆ: ಬೋಧಿವೃಕ್ಷ, ವಿಜಯಕರ್ನಾಟಕ)

