ನಮ್ಮ ಮನಸ್ಸೇ ಸಕಲವನ್ನೂ ಸೃಷ್ಟಿ ಮಾಡುವುದು. ಬಾನನ್ನು ಸೋಕುವಂತಿರುವ ಪರ್ವತದ ಹಿಮಶಿಖರವನ್ನು ಎಚ್ಚರದಿಂದ ಗಮನಿಸುವಷ್ಟೂ ಹೊತ್ತು ನೀವೇ ಅದಾಗಿರುತ್ತೀರಿ. ಪರ್ವತ ಶಿಖರ ಇರುವುದು ನಿಮ್ಮ ಗಮನದ ಎಚ್ಚರದಲ್ಲಿ. ಮನಸ್ಸು ಎಚ್ಚರವಾಗಿದ್ದರೆ ನೀವು ಕಣ್ಣು ಮುಚ್ಚಿರುವಾಗಲೂ ಪರ್ವತ ಶಿಖರ ನಿಮ್ಮೊಳಗೇ ಇರುತ್ತದೆ… । ಟಿಕ್ ನಾಟ್ ಹಾನ್ ; ವ್ಯಾಖ್ಯಾನ : ನಾಗಭೂಷಣ ಸ್ವಾಮಿ। ಗಮನ-ಪಾಕೆಟ್ ಬುಕ್: ಭಾಗ ೧: ಗಮನದ ಎಚ್ಚರ
ಹೊಳೆಯ ಅಂಚಿನಲ್ಲಿ ಕೂತರೆ ಮಿರುಗುವ ನೀರಿನ ನಗೆಯಾಟ ಕಿವಿ ತುಂಬುವುದು. ಸ್ವಚ್ಛ ನೀರಿನ ಅಡಿಯಲ್ಲಿ ಬೇರೆ ಬೇರೆ ಗಾತ್ರದ ಕಲ್ಲು, ಹರಿವ ನೀರಿನಲ್ಲಿ ಸುತ್ತಲ ಗಿಡ ಮರಗಳ ಹಸಿರು ಬಿಂಬ ಕಣ್ಣು ತುಂಬುವುದು. ನಾವು ಸಂತೋಷದಲ್ಲಿ ಮೈ ಮರೆತೇವು. ಹರಿವ ನೀರಿನ ತಾಜಾತನ, ಶುದ್ಧತೆ, ಪಾರದರ್ಶಕ ಸ್ಪಷ್ಟತೆ ಇವೆಲ್ಲದರೊಡನೆ ನಾವೂ ಒಂದಾಗುವೆವು. ಆ ಕ್ಷಣದಲ್ಲೇ ʻಸಾಕುʼ ಅನ್ನಿಸೀತು. ಮನಸು ಕಲಕುತ್ತದೆ. ಬೇರೆಯ ಸಂಗತಿಗಳು ಮನಸಿಗೆ ಬರುತ್ತವೆ. ನಾವೀಗ ಹೊಳೆಯಿಂದ ಬೇರಾಗಿದ್ದೇವೆ.
ನಮ್ಮ ಮನಸ್ಸು ನಗರದಲ್ಲಿದ್ದು ನಾವು ಪ್ರಶಾಂತವಾದ ಕಾಡಿನಲ್ಲಿದ್ದರೆ ಫಲವಿಲ್ಲ. ನಮ್ಮೊಡನೆ ಇರುವ ಸ್ನೇಹಿತರ ಗೆಳೆತನ, ಮಕ್ಕಳ ಮುಗ್ಧತೆ ನಮ್ಮನ್ನು ನಿರಾಳಗೊಳಿಸುವುದು. ಆದರೂ ನಮ್ಮ ಮನಸು ಗೆಳೆಯರೊಡನೆಯೋ ಮಗುವಿನೊಡನೆಯೋ ಇರದಿದ್ದರೆ, ಅವರೊಡನೆ ನಾವಿರುವ ಅಮೂಲ್ಯ ಕ್ಷಣ ಇಲ್ಲವಾಗುವುದು. ನಮ್ಮೊಡನೆ ಇರುವವರ ಬೆಲೆ ತಿಳಿಯಲು ನಮ್ಮ ಗಮನ ಅವರೊಡನೆ ಒಂದಾಗಿರಬೇಕು. ಅವರೇ ನಮ್ಮ ಆನಂದವಾಗಿರಲು ಅವಕಾಶ ಕೊಡಬೇಕು.
ಮರೆವಿನಿಂದಲೋ ಎಚ್ಚರ ತಪ್ಪಿಯೊ ಅವರ ಬಗ್ಗೆ ನಮ್ಮಲ್ಲಿ ಅತೃಪ್ತಿ ಹುಟ್ಟಿದರೆ, ಅವರಿಂದ ಮತ್ತೂ ಹೆಚ್ಚಿನದು ಬಯಸಿದರೆ, ಅಥವಾ ಅವರನ್ನು ನಿಂದಿಸಿದರೆ ಆಗ ನಮ್ಮೊಡನೆ ಇರುವವರು ಇಲ್ಲವಾಗುವರು. ಅವರು ಇಲ್ಲವಾದಮೇಲೆ ಅವರ ಬೆಲೆ ತಿಳಿಯುವುದು, ಅಯ್ಯೋ ಅನಿಸುವುದು, ಮನಸು ತಪಿಸುವುದು. ಅವರಿಲ್ಲವಾದಮೇಲೆ ಅವೆಲ್ಲ ಭಾವಗಳೂ ವ್ಯರ್ಥ.
ನಮ್ಮ ಸುತ್ತಲೂ ಪವಾಡಗಳ ಸ್ಫೋಟವೇ ನಡೆದಿದೆ. ಗ್ಲಾಸಿನ ತುಂಬ ಇರುವ ನೀರು, ಸೂರ್ಯನ ಕಿರಣ, ಮೊಳೆತು ಕಂಪಿಸುತಿರುವ ಚಿಗುರು, ತೆವಳುವ ಕಂಬಳಿ ಹುಳು, ಪುಟ್ಟ ಹೂವು, ನಗು, ಎಲೆಯ ತುದಿಯ ಇಬ್ಬನಿ…ಮನಸು ಎಚ್ಚರವಾಗಿದ್ದರೆ ಪವಾಡಗಳೇ ಎಲ್ಲೆಲ್ಲೂ ಕಾಣುತವೆ.
ಒಬ್ಬೊಬ್ಬ ಮನುಷ್ಯ ಜೀವಿಯೂ ಬಗೆಬಗೆಯ ಪವಾಡಗಳ ಮೊತ್ತ. ಸಾವಿರ ಬಣ್ಣ, ರೂಪ, ಆಕಾರಗಳನ್ನು ಗುರುತಿಸುವ ಕಣ್ಣು, ನೊಣದ ಸದ್ದನ್ನೂ ಸಿಡಿಲ ಆರ್ಭಟವನ್ನೂ ಕೇಳಬಲ್ಲ ಕಿವಿ, ಆಕಾಶದ ಅನಂತ ವಿಸ್ತಾರವನ್ನೂ ಅಂಗಿಯ ಮೇಲೆ ಬಿದ್ದಿರುವ ಧೂಳಿನ ಕಣವನ್ನೂ ಕುರಿತು ಚಿಂತಿಸಬಲ್ಲ ಮಿದುಳು, ಜೊತೆಯ ಮನುಷ್ಯ ಜೀವಿಗಳ ಎದೆಬಡಿತದ ಲಯಕ್ಕೆ ತಕ್ಕಂತೆ ತಾನೂ ಬಡಿವ ಹೃದಯ…ನಾವು ದಣಿದಿರುವಾಗ, ಬದುಕಿನ ಹೋರಾಟದಲ್ಲಿ ಎದೆಗುಂದಿರುವಾಗ ಈ ಪವಾಡಗಳು ಯಾವುದೂ ನಮ್ಮ ಗಮನಕ್ಕೆ ಬರುವುದಿಲ್ಲ. ಬರದಿದ್ದರೂ ಅವು ಎಲ್ಲೆಲ್ಲೂ ಯಾವಾಗಲೂ ಇದ್ದೇ ಇವೆ.
ನಿಮ್ಮ ಮನೆಯ ಅಂಗಳದಲ್ಲಿರುವ ಮಾವಿನ ಮರವನ್ನು ನೋಡಿ. ಪೂರಾ ಗಮನವಿಟ್ಟು ನೋಡಿ. ಆ ಮರವೊಂದು ಪವಾಡ. ಮರವನ್ನು ಗಮನಿಸಿದರೆ, ಮರವನ್ನು ಎಚ್ಚರದಿಂದ ಆರೈಕೆಮಾಡಿದರೆ ನೀವೂ ಆ ವೃಕ್ಷಪವಾಡದ ಭಾಗವಾಗುತ್ತೀರಿ. ಮರವನ್ನು ಒಂದೇ ಒಂದು ವಾರ ನೋಡಿಕೊಂಡರೂ ಸಾಕು. ಅದರ ಎಲೆ ಹೆಚ್ಚು ಹಸಿರಾಗಿ, ಹೆಚ್ಚು ಥಳಥಳಿಸುವ ಹಾಗೆ ಕಾಣುವುದು. ಸುತ್ತಲೂ ಇರುವ ಜನರೂ ಹಾಗೆಯೇ. ನೀವು ಕೊಡುವ ಗಮನದ ಪ್ರಭಾವದಿಂದ ನಿಮ್ಮ ಎಚ್ಚರ, ನಿಮ್ಮ ತಿಳಿವಳಿಕೆ, ನಿಮ್ಮ ಪ್ರೀತಿ ಎಲ್ಲವೂ ಹೆಚ್ಚುತ್ತವೆ. ನಿಮ್ಮ ಅಂತರಂಗ ಪುಷ್ಟವಾಗುತ್ತದೆ. ನಿಮ್ಮೊಳಗೆ ಬೆಳೆಯುವ ಪ್ರೀತಿ ಅವರನ್ನೂ ಬೆಳೆಸುತ್ತದೆ, ಅರಳಿಸುತ್ತದೆ,
ನಮ್ಮ ಮನಸ್ಸೇ ಸಕಲವನ್ನೂ ಸೃಷ್ಟಿ ಮಾಡುವುದು. ಬಾನನ್ನು ಸೋಕುವಂತಿರುವ ಪರ್ವತದ ಹಿಮಶಿಖರವನ್ನು ಎಚ್ಚರದಿಂದ ಗಮನಿಸುವಷ್ಟೂ ಹೊತ್ತು ನೀವೇ ಅದಾಗಿರುತ್ತೀರಿ. ಪರ್ವತ ಶಿಖರ ಇರುವುದು ನಿಮ್ಮ ಗಮನದ ಎಚ್ಚರದಲ್ಲಿ. ಮನಸ್ಸು ಎಚ್ಚರವಾಗಿದ್ದರೆ ನೀವು ಕಣ್ಣು ಮುಚ್ಚಿರುವಾಗಲೂ ಪರ್ವತ ಶಿಖರ ನಿಮ್ಮೊಳಗೇ ಇರುತ್ತದೆ. ಇಂದ್ರಿಯಗಳೆಂಬ ಕಿಟಕಿಗಳನ್ನೆಲ್ಲ ಮುಚ್ಚಿ ಧ್ಯಾನದಲ್ಲಿರುವಾಗ ಇಡೀ ವಿಶ್ವವೇ ಅನುಭವಕ್ಕೆ ಬರುವುದು. ಯಾಕೆಂದರೆ ನಿಮ್ಮ ಮನಸ್ಸು ವಿಶ್ವದಲ್ಲಿರುವುದು. ಕಣ್ಣು ಮುಚ್ಚಿರುವಾಗಲೂ ಚೆನ್ನಾಗಿಯೇ ಕಾಣುವುದು. ಲೋಕದ ನೋಟ, ಸದ್ದುಗಳು ನಿಮ್ಮ ಶತ್ರುಗಳಲ್ಲ. ಮರೆವು, ಎಚ್ಚರದ ಗಮನವಿರದ ಮನಸ್ಸು ನಿಮ್ಮ ಶತ್ರುಗಳು.
[ಗಜೇಶ ಮಸಣಯ್ಯನವರ “ಮಾಗಿಯ ಹುಲ್ಲಿನ ಸೋಂಕಿನಂತೆ ತನು ಪುಳಕಿತಳಾದಳವ್ವೆ” ಎಂಬ ಮಾತು ಮಾಗಿಯ ಹುಲ್ಲು ಅಂಗಾಲಿಗೆ ಸೋಂಕಿದ್ದೇ ದೈವಿಕ ಅನುಭವವೆಂದು ಹೇಳುವುದು ನೆನಪಾಯಿತು. ಪವಾಡ ಎಲ್ಲೆಲ್ಲೂ ಕಂಡಾವು. ಜೆಕೆ ಮರವನ್ನು ನೋಡಿದ್ದೀರಾ ಎಂದು ಹೇಳುತ್ತಾ ಮರವನ್ನು ನೋಡುವ ಬಗ್ಗೆ ಹೇಳುವುದಿದೆ. ಜಿಎಸ್‌ಶಿವರುದ್ರಪ್ಪನವರು “ತೆಂಗು” ಕವಿತೆಯಲ್ಲಿ ಮತ್ತು “ಕವಿತೆ ಕಂಡದ್ದು ಹೀಗೆ” ಕವಿತೆಯ ಕೊನೆಯಲ್ಲಿ ತೆಂಗಿನ ಮರ ಕಂಡದ್ದನ್ನು ಹೇಳಿರುವ ರೀತಿ ನೆನಪಾಯಿತು.
ಹೀಗೆ ಪಟ್ಟಿ ಬೆಳೆಸುವುದಲ್ಲ, ಸಾಮಾನ್ಯ ಸಂಗತಿಯಲ್ಲೂ ಇರುವ ಅಪೂರ್ವವನ್ನು ಅನುಭವಿಸುವ ಗಮನ ನಮಗೇ ಬರುವುದು ಮುಖ್ಯ, ಅಲ್ಲವೇ]

