ಪಾಲ್ ಬ್ಲೂಮ್ ಎನ್ನುವ ಮನೋವಿಜ್ಞಾನಿಯ ಪ್ರಕಾರ, ಮನುಷ್ಯರಲ್ಲಿ ನ್ಯಾಯದ ಪರಿಕಲ್ಪನೆ ಬಹಳ ಸ್ವಾಭಾವಿಕವಾಗಿ ಒಡಮೂಡಿ ಬಂದಿದೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಬಹಳಷ್ಟು ಜನ ಪ್ರಾಚೀನ ಗ್ರೀಕ್ ಫಿಲಾಸೊಫರ್ ಗಳು ನ್ಯಾಯಭಾವ (sense of justice ) ನಮ್ಮ ಆತ್ಮದಲ್ಲೇ ಬರೆಯಲ್ಪಟ್ಟಿದೆ ಎಂದು ವಾದ ಮಾಡುತ್ತಾರೆ . ಇಂದಿನ ಕಾಲದಲ್ಲಿ ನಾವು “ಆತ್ಮ” ಅಥವಾ ಪ್ಲೇಟೋನಿಕ್ ಆದರ್ಶಗಳ ಬಗ್ಗೆ ಅಷ್ಟು ಮಾತನಾಡುವುದಿಲ್ಲ. ಆದರೆ ಅಭಿವೃದ್ಧಿ ಮನೋವಿಜ್ಞಾನದ (evolutionary psychology) ದೃಷ್ಟಿಯಿಂದ ನೋಡಿದರೆ, ಆ ಪ್ರಾಚೀನ ಗ್ರೀಕರು ಹೇಳಿದ ಮಾತುಗಳು ಅರ್ಥಗರ್ಭಿತ ಎಂದು ನಮಗೆ ಗೊತ್ತಾಗುತ್ತದೆ.
ಪಾಲ್ ಬ್ಲೂಮ್ ಎನ್ನುವ ಮನೋವಿಜ್ಞಾನಿಯ ಪ್ರಕಾರ, ಮನುಷ್ಯರಲ್ಲಿ ನ್ಯಾಯದ ಪರಿಕಲ್ಪನೆ ಬಹಳ ಸ್ವಾಭಾವಿಕವಾಗಿ ಒಡಮೂಡಿ ಬಂದಿದೆ. ನಮಗೆ ಅನ್ಯಾಯವಾಗುತ್ತದೆ ಅಥವಾ ಯಾರಾದರೂ ನಮ್ಮನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವ ಭಾವನೆ ಬಂದಾಗ, ನಮ್ಮೊಳಗೆ ಗಾಢವಾದ ಕೋಪ ಹುಟ್ಟಿಕೊಳ್ಳುತ್ತದೆ.
ಬ್ಲೂಮ್ ಅವರು ಮಕ್ಕಳ ಮೇಲೆ ನಡೆಸಲಾದ ಒಂದು ಆಸಕ್ತಿದಾಯಕ ಅಧ್ಯಯನವನ್ನು ಉದಾಹರಣೆಯಾಗಿ ಹೇಳುತ್ತಾರೆ. ಒಬ್ಬ ಮಗುವಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ ಎಂದು ಊಹಿಸೋಣ:
ಆಯ್ಕೆ A: ಒಂದು ಮಗುವಿಗೂ ಮತ್ತು ಅದರ ಸ್ನೇಹಿತನಿಗೂ ತಲಾ ಎರಡು ಸಿಹಿತಿಂಡಿಗಳು ಸಿಗುತ್ತವೆ.
ಆಯ್ಕೆ B: ಒಂದು ಮಗುವಿಗೆ ಮೂರು ಸಿಹಿತಿಂಡಿಗಳು ಸಿಗುತ್ತವೆ, ಆದರೆ ಅದರ ಸ್ನೇಹಿತನಿಗೆ ಐದು ಸಿಗುತ್ತವೆ.
ಇಲ್ಲಿ ಎರಡೂ ಪರಿಸ್ಥಿತಿಗಳಲ್ಲೂ ಮಗು ಲಾಭದಲ್ಲೇ ಇದೆ. ಆದರೆ ಮಗು ಎರಡನೇಯ ಆಯ್ಕೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಭಾವಿಸುತ್ತದೆ. ಬ್ಲೂಮ್ ಅವರು ಹೇಳುವಂತೆ, ಬಹುತೇಕ ಮಕ್ಕಳು ಲಾಭ ಕಡಿಮೆ ಇದ್ದರೂ ಸಹ, ಆಯ್ಕೆ A ಅನ್ನು ಆಯ್ಕೆಮಾಡುತ್ತಾರೆ, ಏಕೆಂದರೆ ಅದರಲ್ಲಿ ನ್ಯಾಯ ಇದೆ.
ಈ ಸಮಾನತೆ ಮತ್ತು ನ್ಯಾಯದ ಕುರಿತಾದ ನಮ್ಮ ನಿರಂತರ ಇಚ್ಛೆ, ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಸಾಧ್ಯ ಮಾಡುತ್ತದೆ. ಒಳ್ಳೆಯ ಪರಿಣಾಮ ಏನೆಂದರೆ, ಇದು ಅಪರಾಧಗಳನ್ನು ಶಿಕ್ಷಿಸುವ ಬಯಕೆಯನ್ನು ನಮ್ಮಲ್ಲಿ ಹುಟ್ಟಿಸುತ್ತದೆ, ಕೆಲವೊಮ್ಮೆ ಹೆಚ್ಚು ಕಠಿಣವಾಗಿ, ಕೆಲವೊಮ್ಮೆ ಅವಶ್ಯಕತೆಗಿಂತಲೂ ಹೆಚ್ಚು.
ಆದರೆ ಕೆಟ್ಟ ಪರಿಣಾಮ ಏನೆಂದರೆ, ಇದು “ನಾವು ಕೂಡ ಇತರರಂತೆ ಇರಬೇಕು” ಎಂಬ ಮನೋಭಾವವನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ. ಮದುವೆಗಳು, ಪ್ರತಿಮೆಗಳು, ಬರ್ಥ್ ಡೇ ಪಾರ್ಟಿಗಳು — ಇವು ಎಲ್ಲವೂ ಇತರರಷ್ಟೇ ಅಥವಾ ಇನ್ನೂ ಉತ್ತಮವಾಗಿರಬೇಕು ಎಂಬ ಒತ್ತಡವನ್ನು ನಮ್ಮ ಮೇಲೆ ಹೇರುತ್ತವೆ.
ಜನರಿಗೆ ತಮ್ಮನ್ನು ಎರಡನೇ ಸ್ಥಾನದಲ್ಲಿ ಇರಿಸುವ ಭಾವ ಇಷ್ಟವಿಲ್ಲ. ಮನುಷ್ಯನ ಇದೇ ಭಾವ ಅನೇಕ ಸಲ ಯುದ್ಧಗಳ ಮೂಲ ಕಾರಣವಾಗಿದೆ, ಮತ್ತು ನಮ್ಮ ನ್ಯಾಯ ವ್ಯವಸ್ಥೆಯ ಹಿಂದಿರುವ ಮನೋಭಾವಕ್ಕೆ , ಹಾಗು ನಾವು ಅನೇಕ ವಿಷಯಗಳಿಗೆ ಅಪಾರ ಹಣ ಖರ್ಚು ಮಾಡುವ ಕಾರಣವೂ ಇದೇ ಆಗಿದೆ.
********************************

