ಗಮನದ, ಎಚ್ಚರದ ಬೀಜಗಳು ನಮ್ಮೆಲ್ಲರಲ್ಲೂ ಇವೆ. ಮನಸಿಟ್ಟು ಉಸಿರಾಡುವುದು, ಗಮನದೊಡನೆ ಎಚ್ಚರದೊಡನೆ ಹೆಜ್ಜೆ ಇಡುವುದು ಇಂಥದರಿಂದ ನಿಮ್ಮ ಮನಸು ಮತ್ತೆ ನಿಮ್ಮ ದೇಹಕ್ಕೆ ಮರಳುವುದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.2: ಗಮನದ ಎಚ್ಚರ । ನಿಜ ಮನೆ
ಈಗ ನಿಮ್ಮ ನಿಜವಾದ ಮನೆ ಇದೇ. ಇಲ್ಲೇ. ಈ ಮನೆಗೆ ಕಾಲ, ದೇಶ, ರಾಷ್ಟ್ರ, ಕುಲಗಳ ಹಂಗಿಲ್ಲ, ಗಡಿಯಿಲ್ಲ.
ನಿಜವಾದ ಮನೆ ಅನ್ನುವುದು ಕಲ್ಪನೆಯಲ್ಲ, ಐಡಿಯಾ ಅಲ್ಲ. ನೀವು ಪ್ರತಿ ಕ್ಷಣವೂ ಮುಟ್ಟಿ ಅನುಭವಿಸಬಹುದಾದ, ಪ್ರತಿ ಕ್ಷಣವೂ ಬದುಕಬಹುದಾದ ಮನೆ ಅದು. ಗಮನವಿದ್ದರೆ, ಎಚ್ಚರವಿದ್ದರೆ, ಬುದ್ಧ ಚೈತನ್ಯವಿದ್ದರೆ ನಿಮ್ಮ ನಿರಾಳ ಮನಸು, ದೇಹಗಳಲ್ಲಿ ನಿಮ್ಮ ಮನೆ ಈ ಕ್ಷಣವೇ ನಿಮಗೆ ಸಿಗಬಹುದು. ಬೇರೆಯ ಜನ ಬಂದು ನಿಮ್ಮ ದೇಶವನ್ನು ವಶಮಾಡಿಕೊಳ್ಳಬಹುದು, ನಿಮ್ಮನ್ನು ಸೆರೆಮನೆಗೂ ದೂಡಬಹುದು. ಆದರೂ ನಿಮ್ಮ ನಿಜ ಮನೆಯನ್ನು ನಿಮ್ಮ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಲು ಆಗದು.
ಮಾತು ನಿಲ್ಲಿಸಿ, ಯೋಚನೆ ನಿಲ್ಲಿಸಿ, ಉಸಿರು ಎಳೆದುಕೊಳ್ಳುತ್ತ, ಉಸಿರು ಬಿಡುತ್ತಾ ನಮ್ಮ ನಿಜ ಮನೆಯೊಳಗೆ ನಾವು ಆನಂದವಾಗಿದ್ದರೆ ಬದುಕಿನ ಅಚ್ಚರಿಗಳನ್ನೆಲ್ಲ ಸ್ಪರ್ಶಿಸಬಹುದು. ಇದು ಬುದ್ಧ ತೋರಿದ ದಾರಿ. ಉಸಿರು ತೆಗೆದುಕೊಳ್ಳುವಾಗ ನಿಮ್ಮ ದೇಹ, ನಿಮ್ಮ ಮನಸು, ನೀವು ಇಡಿಯಾಗಿ ಒಂದೇ ಆಗುತ್ತೀರಿ. ಗಮನ, ಎಚ್ಚರಗಳಿದ್ದು ನೀವು ಒಂದು ಹೆಜ್ಜೆ ನಡೆಯುವುದಕ್ಕೆ ಸಾಧ್ಯ ಆಗುವುದಾದರೆ ಇನ್ನೊಂದು, ಮತ್ತೊಂದು ಹೆಜ್ಜೆ ಸಾಗಬಹುದು. ನಿಮ್ಮ ನಿಜ ಮನೆಯ ಒಳನೋಟ ನಿಮಗೇ ದೊರೆಯಬಹುದು. ನೀವು ಜೀವಂತ, ನೀವು ಪೂರಾ ಈ ಕ್ಷಣದಲ್ಲಿ ಇರುವಿರಿ, ನೀವು ನಿಜವನ್ನು ಸೋಕಿದ್ದೀರಿ. ನಿಮ್ಮ ನಿಜ ಮನೆ ಖಚಿತ, ಸ್ಪಷ್ಟ. ನಿಮ್ಮ ಪಾದ, ನಿಮ್ಮ ಹಸ್ತ, ನಿಮ್ಮ ಮನಸ್ಸು ಅದನ್ನು ಮುಟ್ಟಿ ಅನುಭವಿಸಬಹುದು.
ಇಲ್ಲೇ ಈಗಲೇ ನಿಮ್ಮ ನಿಜ ಮನೆಯನ್ನು ಮುಟ್ಟಿ ಅನುಭವಿಸಬೇಕು. ಇದು ಮುಖ್ಯ. ಗಮನದ, ಎಚ್ಚರದ ಬೀಜಗಳು ನಮ್ಮೆಲ್ಲರಲ್ಲೂ ಇವೆ. ಮನಸಿಟ್ಟು ಉಸಿರಾಡುವುದು, ಗಮನದೊಡನೆ ಎಚ್ಚರದೊಡನೆ ಹೆಜ್ಜೆ ಇಡುವುದು ಇಂಥದರಿಂದ ನಿಮ್ಮ ಮನಸು ಮತ್ತೆ ನಿಮ್ಮ ದೇಹಕ್ಕೆ ಮರಳುವುದು. ದಿನದ ಬದುಕಿನಲ್ಲಿ ನಿಮ್ಮ ಮನಸು, ನಿಮ್ಮ ದೇಹ ಬೇರೆ ಬೇರೆ ದಾರಿಗಳಲ್ಲಿ ಸಾಗುತ್ತವೆ. ಅಂಗಿಯ ಗುಂಡಿ ಹಾಕಿಕೊಳ್ಳುತಿರುವಾಗ ನಿಮ್ಮ ಮನಸು ನಿನ್ನೆ ಆದದ್ದನ್ನೋ ನಾಳೆ ಮಾಡಬೇಕಾದ್ದನ್ನೋ ಧ್ಯಾನಿಸುತಿರಬಹುದು. ಮನಸೆಲ್ಲೊ ಇರುವುದು, ದೇಹವೆಲ್ಲೋ ಇರುವುದು.
ದೇಹ ಮನಸುಗಳ ನಡುವೆ ಉಸಿರು ಇದೆ. ನಿಮ್ಮ ಉಸಿರು. ನಿಮ್ಮ ಉಸಿರು ನಿಮ್ಮ ಗಮನದಲ್ಲಿ, ನಿಮ್ಮ ಎಚ್ಚರದಲ್ಲಿ ಇದ್ದರೆ ನಿಮ್ಮ ಮನಸು ದೇಹಗಳು ಬಲು ಬೇಗನೆ ಒಂದಾಗುತವೆ. ಉಸಿರು ಎಳೆದುಕೊಳ್ಳುವಾಗ ನಿಮ್ಮ ಪೂರಾ ಗಮನ, ನೂರಕ್ಕೆ ನೂರರಷ್ಟು ನಿಮ್ಮ ಒಳಹೊಗುತ್ತಿರುವ ಉಸಿರಿನ ಮೇಲೇ ಇರಲಿ. ನೀವೇ ಉಸಿರಾಗಿರುತ್ತೀರಿ. ಆ ಒಂದು ಕ್ಷಣ ನಿಮ್ಮ ಉಸಿರೇ ನಿಮ್ಮ ದೇಹ, ನಿಮ್ಮ ಮನಸು ಆಗಿರುವುದು. ತಟ್ಟನೆ ನೀವು ಪೂರಾ ಎಚ್ಚರವಾಗಿರುತೀರಿ, ಪೂರಾ ಬದುಕಿರುತೀರಿ.
*
[ನಡೆಯುವ ಧ್ಯಾನವನ್ನೇ ಅಲ್ಲಮನ ಈ ವಚನ ಹೇಳುತಿದೆ, ಅಲ್ಲವೇ?
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ/ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ/ನಿಂದ ಹೆಜ್ಜೆಯನರಿಯಬಾರದು/
ಮುಂದಣ ಹೆಜ್ಜೆಯಳಿದಲ್ಲದೆ ಒಂದು ಪಾದ ನೆಲೆಗೊಳ್ಳದು/ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ
ತಾನಾಗಬಾರದು ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ
ಪ್ರತಿ ಹೆಜ್ಜೆಯೂ ಗಮನದ ಎಚ್ಚರವಾಗಿರುವಾಗ ಅರಿವಿನ ಮಿಂಚು ಹೊಳೆಯುವುದು ತೀರ ಸಹಜ, ಗುಹೇಶ್ವರನ ಅರಿವು ಮಿಂಚಲು ನೆಲದ ಮೇಲೆ ನಾವಿಡುವ ಹೆಜ್ಜೆ ಹೆಜ್ಜೆಯೂ ಗಮನದ ಎಚ್ಚರದ ಹೆಜ್ಜೆ ಆಗಬೇಕು]

