ಸಣ್ಣ ನಿರ್ಧಾರಗಳ ದೌರ್ಜನ್ಯ!

ಇಲ್ಲಿ ಪ್ರತಿಯೊಂದು ಆಯ್ಕೆಯೂ, ಪ್ರತ್ಯೇಕವಾಗಿ ನೋಡಿದರೆ, ನಮಗೆ ಅಷ್ಟೊಂದು ಮಹತ್ವದ್ದಾಗಿ ಕಾಣುವುದಿಲ್ಲ. ಒಂದು ದಿನ ನೀವು ಜಿಮ್‌ಗೆ ಹೋಗುವುದನ್ನು ಬಿಡುತ್ತೀರಿ, ಇನ್ನೊಂದು ಬಾರಿ ಕೆಲಸದ ಸಲುವಾಗಿ ಆಫೀಸಿನಲ್ಲಿ late stay ಮಾಡುತ್ತೀರಿ, ನಿಮ್ಮ ಸಂಗಾತಿಯ ಕಡೆ ಗಮನ ಕೊಡಬೇಕಾದಾಗ ಸಮಯದಲ್ಲಿ ಫೋನ್ ನೋಡುತ್ತಾ ಕುಳಿತುಕೊಳ್ಳುತ್ತೀರಿ. ಈ ಯಾವ ಒಂದು ನಿರ್ಧಾರವೂ ತನ್ನ ಜಾಗದಲ್ಲಿ ಅಂಥ ದೊಡ ಸಮಸ್ಯೆಯೇನಲ್ಲ. ಆದರೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಯಾರು ಕೂಡ ತಮ್ಮ ಬದುಕನ್ನು ತಾವೇ ಹಾಳುಮಾಡಿಕೊಳ್ಳಬೇಕೆಂದು ಬಯಸುವುದಿಲ್ಲ. ಯಾರು ಕೂಡ ಬೆಳಗ್ಗೆ ಎದ್ದು, “ಇಂದು ನಾನು ನನ್ನ ಮದುವೆಯನ್ನ, ನನ್ನ ಮನೆಯನ್ನ ಅಥವಾ ನನ್ನ ಕೆಲಸವನ್ನ ಹಾಳುಮಾಡಿಕೊಳ್ಳುತ್ತೇನೆ ”ಎಂದುಕೊಳ್ಳುವುದಿಲ್ಲ. ಆದರೂ ಜನರು ಇದೇ ಕೆಲಸವನ್ನು ಮಾಡುತ್ತಾರೆ — ಇದು ಒಂದೇ ಒಂದು ಮಹಾದುರಂತದ ಕ್ಷಣದಲ್ಲಿ ಸಂಭವಿಸುವುದಿಲ್ಲ. ಬದಲಿಗೆ, ಇದು ಸಂಭವಿಸುವುದು ಸಾವಿರಾರು ಸಣ್ಣ ಸಣ್ಣ ನಿರ್ಧಾರಗಳ ಮೂಲಕ. ಆದರೆ ಆ ನಿರ್ಧಾರಗಳಲ್ಲಿ ಪ್ರತಿಯೊಂದೂ ಆ ಕ್ಷಣದಲ್ಲಿ ಅಷ್ಟು ಮಹತ್ವದ ನಿರ್ಧಾರದಂತೆ ನಮಗೆ ಅನಿಸುವುದಿಲ್ಲ. ಅರ್ಥಶಾಸ್ತ್ರಜ್ಞ Alfred Kahn ಇದನ್ನು “ಸಣ್ಣ ನಿರ್ಧಾರಗಳ ದೌರ್ಜನ್ಯ” (tyranny of small decisions) ಎಂದು ಕರೆಯುತ್ತಾರೆ.

ಇಲ್ಲಿ ಪ್ರತಿಯೊಂದು ಆಯ್ಕೆಯೂ, ಪ್ರತ್ಯೇಕವಾಗಿ ನೋಡಿದರೆ, ನಮಗೆ ಅಷ್ಟೊಂದು ಮಹತ್ವದ್ದಾಗಿ ಕಾಣುವುದಿಲ್ಲ. ಒಂದು ದಿನ ನೀವು ಜಿಮ್‌ಗೆ ಹೋಗುವುದನ್ನು ಬಿಡುತ್ತೀರಿ, ಇನ್ನೊಂದು ಬಾರಿ ಕೆಲಸದ ಸಲುವಾಗಿ ಆಫೀಸಿನಲ್ಲಿ late stay ಮಾಡುತ್ತೀರಿ, ನಿಮ್ಮ ಸಂಗಾತಿಯ ಕಡೆ ಗಮನ ಕೊಡಬೇಕಾದಾಗ ಸಮಯದಲ್ಲಿ ಫೋನ್ ನೋಡುತ್ತಾ ಕುಳಿತುಕೊಳ್ಳುತ್ತೀರಿ. ಈ ಯಾವ ಒಂದು ನಿರ್ಧಾರವೂ ತನ್ನ ಜಾಗದಲ್ಲಿ ಅಂಥ ದೊಡ ಸಮಸ್ಯೆಯೇನಲ್ಲ. ಆದರೆ ಈ ಎಲ್ಲವನ್ನೂ ಒಟ್ಟಿಗೆ ನೋಡಿದಾಗ, ಮತ್ತು ತಿಂಗಳು, ವರ್ಷಗಳ ಕಾಲ ಇವು ನಿರಂತರವಾಗಿ ಮುಂದುವರಿದಾಗ, ನೀವು ಯಾವುದನ್ನ ಬಯಸಿರುವುದಿಲ್ಲವೋ ಅಂಥ ಬದುಕೊಂದನ್ನ ಈ ಎಲ್ಲವೂ ಸೇರಿ ನಿಮಗಾಗಿ ನಿರ್ಮಿಸಿರುತ್ತವೆ.

ಕಾನ್ ಅವರು ಮೂಲತಃ ಈ ಕಲ್ಪನೆಯನ್ನು ಅರ್ಥಶಾಸ್ತ್ರಕ್ಕೆ ಅನ್ವಯಿಸಿದರು. ಅಲ್ಲಿ, ಯಾರೂ ಅಂಥದನ್ನು ಬಯಸಿರದಿದ್ದರೂ , ಹೇಗೆ ವ್ಯಕ್ತಿಗತ ಗ್ರಾಹಕರ ಸಣ್ಣ ಸಣ್ಣ ನಿರ್ಧಾರಗಳು, ಸಂಪೂರ್ಣ ಉದ್ಯಮಗಳನ್ನು ಅಥವಾ ಸಮುದಾಯವನ್ನೇ ಹಾಳುಮಾಡಬಹುದು ಎನ್ನುವುದನ್ನ ನಾವು ಗಮನಿಸಬಹುದು.

ಉದಾಹರಣೆಗೆ, ನಾನು “ಒಮ್ಮೆ ಮಾತ್ರ” ಎಂದುಕೊಂಡು ಸ್ಟಾರ್ ಬಕ್ಸ್ ನಲ್ಲಿ ಕಾಫಿ ಖರೀದಿಸುತ್ತೇನೆ ಎಂದುಕೊಳ್ಳಿ. ಸ್ಟಾರ್ ಬಕ್ಸ್ ನಲ್ಲಿ ಕಾಫೀ ಕೊಳ್ಳುವುದು, ತ್ವರಿತ ಮತ್ತು ಸುಲಭ, ಮತ್ತು ಹೀಗೆ ಕಾಫೀ ಕೊಳ್ಳುತ್ತಿರುವವನು ನಾನು ಒಬ್ಬನೇ ವ್ಯಕ್ತಿ ಮಾತ್ರ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ನಮಗೆ ಗೊತ್ತಿರುವ ಪ್ರತಿಯೊಬ್ಬರೂ “ಒಮ್ಮೆ ಮಾತ್ರ” ಎಂದುಕೊಂಡೇ ಸ್ಟಾರ್ ಬಕ್ಸ್ ನಲ್ಲಿ ಕಾಫೀ ಖರೀದಿಸಿರುತ್ತಾರೆ. ಎಲ್ಲರೂ ಹೀಗೆ ಮಾಡಿದಾಗ, ಮನೆಯ ಪಕ್ಕದ ಸಣ್ಣ ಕಾಫಿ ಅಂಗಡಿಯೊಂದು ಬಂದ್ ಆಗುತ್ತದೆ ಮತ್ತು ಆಗ ನಮಗೆ ದುಃಖವಾಗುತ್ತದೆ ಮತ್ತು ಆಶ್ಚರ್ಯವಾಗುತ್ತದೆ ಕೂಡ.

ಆದರೆ ಈ ತತ್ವ ಮಾತ್ರ ಸಾರ್ವತ್ರಿಕವಾದದ್ದು ಇದನ್ನು ನಾವು ಎಲ್ಲ ಕಡೆಯೂ ಅನ್ವಯಿಸಿ ನೋಡಬಹುದು. ಒಂದು ರಿಲೇಷನ್ ಶಿಪ್ ಸಾಮಾನ್ಯವಾಗಿ, ಒಂದು ದ್ರೋಹದ ಕಾರಣವಾಗಿ, ಒಂದು ದೊಡ್ಡ ಘಟನೆಯ ಕಾರಣವಾಗಿ ಕೊನೆಯಾಗುವುದಿಲ್ಲ. ಅದು ಸಾವಿರಾರು ಸಣ್ಣ ನಿರ್ಲಕ್ಷ್ಯದ ಕ್ರಿಯೆಗಳ ಮೂಲಕ ಕೊನೆಗೊಳ್ಳುತ್ತದೆ. ಆರೋಗ್ಯವೂ ಒಂದು ರಾತ್ರಿಯ ಒಳಗೇ ಹದಗೆಡುವುದಿಲ್ಲ; ನಾವು ಸೇದುತ್ತಿರುವ ಪ್ರತಿ ಸಿಗರೇಟಿನೊಂದಿಗೆ ಅದು ನಿಧಾನವಾಗಿ ಹದಗೆಡುತ್ತ ಬರುತ್ತದೆ.

ಸಣ್ಣ ನಿರ್ಧಾರಗಳ ದೌರ್ಜನ್ಯ (tyranny of small decisions) ಎನ್ನುವ ತತ್ವ ನಮಗೆ, ನಾವು ಆಗಾಗ ಮಾಡುವ ಇಂಥ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನ ಕಲಿಸುತ್ತದೆ. ಏಕೆಂದರೆ ಅನೇಕ ಸಣ್ಣ ಸಂಗತಿಗಳು ಸೇರಿಯೇ ಬೆಳೆದು ದೊಡ್ಡದಾಗಿ, ಕೆಲವೊಮ್ಮೆ ಪರಿಹರಿಸಲಾಗದ ಸಮಸ್ಯೆಯಾಗಿ ರೂಪುಗೊಳ್ಳುತ್ತವೆ. ಪ್ರತಿ ನಿರ್ಧಾರವೂ ಮಹತ್ವದ್ದಾಗಿದೆ, ಮತ್ತು ನಾವು ಮಾಡುವ ಪ್ರತಿಯೊಂದು ಆಯ್ಕೆಯೂ ನಾವು ಬದುಕಬೇಕಾದ ಜೀವನವನ್ನು ರೂಪಿಸುತ್ತದೆ. ನಮ್ಮ ನಿರ್ಧಾರಗಳು ಇಟ್ಟಿಗೆಗಳಾದರೆ, ನಾವು ಬದುಕಲು ಬಯಸುವ ಮನೆಯನ್ನೇ ನಾವು ಕಟ್ಟಿಕೊಳ್ಳುತ್ತಿದ್ದೇವೆಯೋ ಇಲ್ಲವೋ ಎನ್ನುವುದನ್ನ ನಾವು ಮೇಲಿಂದ ಮೇಲೆ ಖಚಿತಪಡಿಸಿಕೊಳ್ಳಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.