ನಾವು ವಿಮಾನ ಅಪಘಾತದ ಸುದ್ದಿಯನ್ನು ನೆನಪಿಟ್ಟುಕೊಳ್ಳುತ್ತೇವೆ, ಆದರೆ ಪ್ರತಿದಿನ ಸುರಕ್ಷಿತವಾಗಿ ವಿಮಾನದಲ್ಲಿ ಪ್ರಯಾಣಿಸುವ ಲಕ್ಷಾಂತರ ಜನರನ್ನು ಗಮನಿಸುವುದಿಲ್ಲ. ಫೋನ್ ಬಳಸುತ್ತಾ ಕಾರು ಚಾಲನೆ ಮಾಡುವಾಗ ಅಪಘಾತಕ್ಕೊಳಗಾದ ಯಾರ ಬಗ್ಗೆಯೂ ನಮಗೆ ತಿಳಿದಿಲ್ಲ, ಆದ್ದರಿಂದ ನಾವು ಅದನ್ನೇ ಮುಂದುವರಿಸುತ್ತೇವೆ. ಸಮಸ್ಯೆ ಏನೆಂದರೆ, ಇಂಥದು ನಮ್ಮ ಕೆಟ್ಟ ನಿರ್ಧಾರಗಳಿಗೆ ಕಾರಣವಾಗುತ್ತದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಧೂಮಪಾನ ಮಾಡುವುದು ಕೆಟ್ಟದ್ದು, ಮತ್ತು ವ್ಯಾಯಾಮ ಮಾಡುವುದು ಒಳ್ಳೆಯದು ಎನ್ನುವುದು ನಮಗೆಲ್ಲ ಗೊತ್ತು. ಆದರೆ, ನಮಗೆ ಯಾರೋ ಒಬ್ಬರು
ತಮ್ಮ ಮಾವನ ಬಗ್ಗೆ ಹೇಳುತ್ತಾರೆ — ಅವರು ಪ್ರತಿ ದಿನವೂ ಧೂಮಪಾನ ಮಾಡುತ್ತಿದ್ದರೂ, ಮತ್ತು ಅವರು ಎಂದೂ ವ್ಯಾಯಾಮ ಮಾಡದೇ ಇದ್ದರೂ 95 ವರ್ಷ ಬದುಕಿದ್ದರು ಎಂದು. ಇದು ತತ್ವಜ್ಞಾನಿಗಳು ಮತ್ತು ತರ್ಕಶಾಸ್ತ್ರಜ್ಞರು “ಅನುಭವಾಧಾರಿತ ಕುತರ್ಕ” (Anecdotal Fallacy) ಎಂದು ಕರೆಯುವ ಪರಿಕಲ್ಪನೆಯೊಂದರ ಉದಾಹರಣೆ.
ಇದರ ಪ್ರಕಾರ ನಾವು ಒಂದು isolated ಅನುಭವದ ಕಥೆಯನ್ನು ಬಳಸಿಕೊಂಡು ಸಾಮಾನ್ಯ ಸತ್ಯವನ್ನು ತಪ್ಪೆಂದು ನಿರಾಕರಿಸುತ್ತೇವೆ. ಉದಾಹರಣೆಗೆ ಒಂದು cold winter ನ ಕಾರಣದಿಂದ climate change ನ ನಿರಾಕರಿಸುವುದು, ಅಥವಾ ಯಾರಾದರೂ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಇದ್ದರೂ ಅಪಘಾತದಿಂದ ಬದುಕಿದರು ಎನ್ನುವ ಸುದ್ದಿ ಕೇಳಿ, ಸೀಟ್ ಬೆಲ್ಟ್ ಅಂಥ ಪರಿಣಾಮಕಾರಿಯೇನಲ್ಲ ಎಂದು ನಂಬುವುದು ಇತ್ಯಾದಿ. ಒಂದು ಸಣ್ಣ ವಿವಿಕ್ತ (isolated) ಅನುಭವ ಕಥನವನ್ನು ಆಧರಿಸಿ, ನಾವು ದೊಡ್ಡ ಪ್ರಮಾಣದ ಸಾಕ್ಷ್ಯಗಳನ್ನು ನಿರಾಕರಿಸುತ್ತೇವೆ — ಇದೇ ಈ ತಪ್ಪಿನ ಸಾರಾಂಶ.
ಸುಮಾರು 400 ವರ್ಷಗಳ ಹಿಂದೆ, ನಾವು ಇಂದು ಮಾತನಾಡುತ್ತಿರುವ ತಪ್ಪುಧಾರಣೆಗಳು (fallacies) ಮತ್ತು ಪೂರ್ವಾಗ್ರಹಗಳ (biases) ಬಗ್ಗೆಯ ಮಾತುಕತೆಗೂ ಮೊದಲು, ತತ್ವಜ್ಞಾನಿ ಫ್ರಾನ್ಸಿಸ್ ಬೇಕನ್ ಇದನ್ನು Idol of the Cave) ಎಂದು ಕರೆಯುತ್ತಿದ್ದ.
ಇದು ನಮ್ಮ ಸ್ವಭಾವ — ನಮ್ಮ ಸೀಮಿತ ವೈಯಕ್ತಿಕ ಅನುಭವಗಳನ್ನು ನಾವು ವಿಶಾಲವಾದ ಸತ್ಯಗಳಿಗಿಂತ ಹೆಚ್ಚು ನಂಬುವ ಪ್ರವೃತ್ತಿ. ನಾವು ನಮ್ಮದೇ ಸಣ್ಣ ಅನುಭವಗಳ ಗುಹೆಯಲ್ಲಿ ಬದುಕುತ್ತೇವೆ, ಮತ್ತು ಅಲ್ಲಿ ನಾವು ನೋಡಿದದ್ದೇ ಸಂಪೂರ್ಣ ಜಗತ್ತನ್ನು ಪ್ರತಿನಿಧಿಸುತ್ತದೆ ಎಂದು ಊಹಿಸುತ್ತೇವೆ.
ಸಮಸ್ಯೆ ಏನೆಂದರೆ, ಮನುಷ್ಯರು ಅಂಕಿಅಂಶಗಳಿಗಿಂತ ಕಥೆಗಳನ್ನು ಹೆಚ್ಚು ನೆನಪಿಡುತ್ತಾರೆ. ನಾವು ವಿಮಾನ ಅಪಘಾತದ ಸುದ್ದಿಯನ್ನು ನೆನಪಿಟ್ಟುಕೊಳ್ಳುತ್ತೇವೆ, ಆದರೆ ಪ್ರತಿದಿನ ಸುರಕ್ಷಿತವಾಗಿ ವಿಮಾನದಲ್ಲಿ ಪ್ರಯಾಣಿಸುವ ಲಕ್ಷಾಂತರ ಜನರನ್ನು ಗಮನಿಸುವುದಿಲ್ಲ.
ಫೋನ್ ಬಳಸುತ್ತಾ ಕಾರು ಚಾಲನೆ ಮಾಡುವಾಗ ಅಪಘಾತಕ್ಕೊಳಗಾದ ಯಾರ ಬಗ್ಗೆಯೂ ನಮಗೆ ತಿಳಿದಿಲ್ಲ, ಆದ್ದರಿಂದ ನಾವು ಅದನ್ನೇ ಮುಂದುವರಿಸುತ್ತೇವೆ. ಸಮಸ್ಯೆ ಏನೆಂದರೆ, ಇಂಥದು ನಮ್ಮ ಕೆಟ್ಟ ನಿರ್ಧಾರಗಳಿಗೆ ಕಾರಣವಾಗುತ್ತದೆ. ನಾವು ವಿಮಾನ ಪ್ರಯಾಣದ ಬಗ್ಗೆ ಭಯಪಡುತ್ತೇವೆ, ಆದರೆ ಕಾರಿನಲ್ಲಿ ಮೆಸೇಜ್ ಮಾಡುತ್ತ ಡ್ರೈವ್ ಮಾಡುತ್ತೇವೆ. ನಾವು ಸಾಮಾನ್ಯವಾಗಿ ಪರಿಣಿತರ ಅಭಿಪ್ರಾಯಕ್ಕಿಂತ ನಮ್ಮ ಪರಿಚಿತರ ಸಲಹೆಯನ್ನು ಹೆಚ್ಚು ನಂಬುತ್ತೇವೆ.
ಫ್ರಾನ್ಸಿಸ್ ಬೇಕನ್ ನ ಸಲಹೆಗಳು ಆಗಿನಂತೆ ಇಂದಿಗೂ ಅಷ್ಟೇ ಮಹತ್ವದ್ದಾಗಿದೆ. ನಿಮ್ಮದೇ ಗುಹೆಯ ಗೋಡೆಯ ಮೇಲೆ ಕಾಣಿಸುವ ನೆರಳುಗಳನ್ನು ನಿಜವೆಂದು ಭ್ರಮಿಸಬೇಡಿ, ಏಕೆಂದರೆ ಒಂದು ಕಥೆ ಎಂದರೆ ಅದು ಕೇವಲ ಒಂದು ಮಾಹಿತಿ ಬಿಂದು (data point) ಮಾತ್ರ. ಸಾಮಾನ್ಯ ಮಾದರಿ (pattern) ಮತ್ತು ಸಾಮಾನ್ಯ ನಿಯಮಗಳು (rule), ಅಪವಾದಗಳಿಗಿಂತಲೂ ಹೆಚ್ಚು ಮಹತ್ವದ್ದಾಗಿರುತ್ತವೆ.

