ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಬಹುತೇಕ ಭಿನ್ನಾಭಿಪ್ರಾಯಗಳಿಗೂ ವಾಸ್ತವಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ತಮ್ಮ ಪುಸ್ತಕ The Righteous Mind ನಲ್ಲಿ ಲೇಖಕ ಜೊನಾಥನ್ ಹೈಡ್ ವಾದ ಮಾಡುವುದೇನೆಂದರೆ, ಮನುಷ್ಯರು ಮೂಲಭೂತವಾಗಿ ತಾರ್ಕಿಕ ಸತ್ಯಾನ್ವೇಷಕರಲ್ಲ (rational truth seekers). ಬದಲಾಗಿ ಅವರು ನೈತಿಕ ಕಥಾ ಹೇಳುಗರು (moral story tellers).
ನಮಗೆ ಮೊದಲು ದೊರಕುವುದು ನೈತಿಕ ಹೊಳಹುಗಳು ನಂತರ ಮಾತ್ರ ಹುಟ್ಟಿಕೊಳ್ಳುತ್ತವೆ ನಮ್ಮ ಕಾರಣಗಳು, ತರ್ಕಗಳು. ನಾವು, ವಕೀಲರು ತಮ್ಮ ಕಕ್ಷಿದಾರರನ್ನು ಡಿಫೆಂಡ್ ಮಾಡಿಕೊಳ್ಳುವಂತೆ ವಾದ ಮಾಡುತ್ತೇವೆಯೇ ಹೊರತು, ವಿಜ್ಞಾನಿಗಳು ತಮ್ಮ ಸಿದ್ಧಾಂತವನ್ನು ಡಿಫೆಂಡ್ ಮಾಡಿಕೊಳ್ಳುವಂತೆ ಅಲ್ಲ, ಇದು ವಿಜ್ಞಾನಿಗಳು ಕೂಡ ಮನುಷ್ಯರು ಎನ್ನುವುದು ನಮಗೆ ಗೊತ್ತಿರುವಾಗಲೂ. ಆದ್ದರಿಂದಲೇ, ರಾಜಕೀಯ, ಸಾಂಸ್ಕೃತಿಕ ಮತ್ತು ವೈಯಕ್ತಿಕ ವಾದಗಳನ್ನು ಪರಿಹರಿಸಿಕೊಳ್ಳುವುದು ಬಹಳ ಕಷ್ಟಕರ.
ಹೀಗೆ ಆಗುವುದು ಏಕೆಂದರೆ, ಜನರಿಗೆ fact ಗಳ ಬಗ್ಗೆ, data ಬಗ್ಗೆ ಅಂಥ ಭಿನ್ನಾಭಿಪ್ರಾಯ ಇಲ್ಲದಿರುವಾಗಲೂ, ಅವರು ವಿಭಿನ್ನ ನೈತಿಕ ತಳಹದಿಯ ಮೇಲಿಂದ ವಾದ ಮಾಡುತ್ತಿರುತ್ತಾರೆ, ಉದಾಹರಣೆಗೆ ಕಾಳಜಿ Vs ಹಾನಿ, ಅಧಿಕಾರ Vs ವಿಧ್ವಂಸಕತೆ, ಸ್ವಾತಂತ್ರ್ಯ Vs ದಬ್ಬಾಳಿಕೆ … ಇತ್ಯಾದಿ. ಈ ಪುಸ್ತಕವನ್ನು ನೀವು ನಿಮ್ಮ translation manual ಆಗಿ ಬಳಸಿ.
ಯಾವಾಗ ಒಬ್ಬರು ಗಟ್ಟಿಯಾದ ನೈತಿಕ ವಾದವೊಂದಕ್ಕೆ ಮುಂದಾದಾಗ, ನೀವು ಕೇಳಿಕೊಳ್ಳುವ ಮೊದಲ ಪ್ರಶ್ನೆ “ ಇದು ನಿಜವೇ? “ ಆಗಿರದೇ, ಅವರು ಯಾವ ಮೌಲ್ಯದ ಚೌಕಟ್ಟಿನಲ್ಲಿ ನಿಂತು ವಾದ ಮಾಡುತ್ತಿದ್ದಾರೆ? ಎನ್ನುವುದಾಗಿರಬೇಕು. ನಿಮಗೆ ಅವರ ನೈತಿಕ ಭಾಷೆಯನ್ನು ಭಾಷಾಂತರಿಸಿಕೊಳ್ಳುವುದು ಸಾಧ್ಯವಾಗದಿದ್ದರೆ, ಅವರನ್ನು ಒಪ್ಪಿಸುವುದು ಸಾಧ್ಯವಿಲ್ಲ. ಅಷ್ಟೇ ಅಲ್ಲ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದೂ ಸಾಧ್ಯವಿಲ್ಲ.

