ಪುಟ್ಟದೊಂದು ತರಬೇತಿ ಸಿಕ್ಕರೆ ಸಾಕು. ಅಭ್ಯಾಸದ ಬಲ ತಲೆ ಎತ್ತಿದ ತಕ್ಷಣ ಅದು ನಮಗೆ ತಿಳಿದುಬಿಡುತ್ತದೆ. ಸಂತೋಷವಾಗಿರಲು ಕಾಯಬೇಕು ಯಾಕೆ? ನಡೆಯುವಾಗ ನಿಮ್ಮ ಪ್ರತಿ ಹೆಜ್ಜೆಯೂ ನಿಮಗೆ ಪುಷ್ಟಿ ಕೊಡುವ ಹಾಗೆ, ನಿಮಗೆ ಚೇತರಿಕೆ ತರುವ ಹಾಗೆ ನಡೆಯುವುದು ಸಾಧ್ಯ. ಕಷ್ಟವೇನೂ ಇಲ್ಲ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.4: ಗಮನದ ಎಚ್ಚರ । ಸ್ವಾತಂತ್ರ್ಯ
ಸ್ವಾತಂತ್ರ್ಯವಿದ್ದರೆ ಮಾತ್ರ ಸಂತೋಷವಿರಲು ಸಾಧ್ಯ. ನಿಮ್ಮ ಮನಸಿನಲ್ಲಿ ಏನೋ ಇದ್ದು ಅದನ್ನೇ ಚಿಂತೆ ಮಾಡುತಿದ್ದರೆ ನೀವು ಅದರಲ್ಲೇ ಸಿಕ್ಕಿಬಿದ್ದಿರುತ್ತೀರಿ, ನಿಮಗೆ ಸ್ವಾತಂತ್ರ್ಯ ಇರುವುದಿಲ್ಲ. ಆಗಿ ಹೋದ ಸಂಗತಿಯ ಬಗ್ಗೆ ದುಃಖವೋ ಪಶ್ಚಾತ್ತಾಪವೋ ಇದ್ದರೆ, ನಾಳೆ ಮಾಡುವ ಕೆಲಸದ ಬಗ್ಗೆ ಆತಂಕವೋ ಭಯವೋ ಇದ್ದರೆ ಆಗ ನೀವು ಈ ಕ್ಷಣದಲ್ಲಿ ದೊರೆಯುವ ಸಂತೋಷವನ್ನು ನಿಜವಾಗಿ ಅನುಭವಿಸಲಾರಿರಿ. ನೀಲಿಯ ಆಕಾಶ, ಚೆಲುವಾದ ಮರ, ಮಕ್ಕಳ ಮುದ್ದು ಮುಖ, ಹೂವು, ಹಕ್ಕಿ ಇವೆಲ್ಲಕ್ಕೂನಮ್ಮ ಈ ಕ್ಷಣದ ದುಗುಡವನ್ನು ನಿವಾರಿಸಿ ಸ್ವಸ್ಥಗೊಳಿಸುವ ಶಕ್ತಿ ಇವೆ.
ಸಂತೋಷವಾಗಿರಲು ಏನು ಬೇಕೋ ಅದೆಲ್ಲಾ ಇದ್ದರೂ ನಮ್ಮ ಸಮಾಜದಲ್ಲಿರುವ ಬಹಳಷ್ಟು ಜನ ಸಂತೋಷವಾಗಿಲ್ಲ. ಅವರು ಬೆಳೆಸಿಕೊಂಡಿರುವ ʻಅಭ್ಯಾಸ ಬಲʼ ಇಲ್ಲಿ, ಈಗ ಸಂತೋಷವಾಗಿರಲು ಅವರನ್ನು ಬಿಡುವುದೇ ಇಲ್ಲ. ಭವಿಷ್ಯದತ್ತ ಅವರನ್ನು ಸದಾ ಮುಂದೊತ್ತುತ್ತಾ ಇರುತ್ತದೆ.
ಪುಟ್ಟದೊಂದು ತರಬೇತಿ ಸಿಕ್ಕರೆ ಸಾಕು. ಅಭ್ಯಾಸದ ಬಲ ತಲೆ ಎತ್ತಿದ ತಕ್ಷಣ ಅದು ನಮಗೆ ತಿಳಿದುಬಿಡುತ್ತದೆ. ಸಂತೋಷವಾಗಿರಲು ಕಾಯಬೇಕು ಯಾಕೆ? ನಡೆಯುವಾಗ ನಿಮ್ಮ ಪ್ರತಿ ಹೆಜ್ಜೆಯೂ ನಿಮಗೆ ಪುಷ್ಟಿ ಕೊಡುವ ಹಾಗೆ, ನಿಮಗೆ ಚೇತರಿಕೆ ತರುವ ಹಾಗೆ ನಡೆಯುವುದು ಸಾಧ್ಯ. ಕಷ್ಟವೇನೂ ಇಲ್ಲ.
ಆಫೀಸಿನಲ್ಲಿ ಒಂದು ಕೋಣೆಯಿಂದ ಇನ್ನೊಂದಕ್ಕೆ ಓಡಾಡುವ ಅಧಿಕಾರಿಯಾಗಿರಿ, ವಿಧಾನ ಸಭೆಯ ಮೆಟ್ಟಿಲು ಏರುತ್ತಿರುವ ಶಾಸಕರಾಗಿರಿ, ಟ್ರಾಫಿಕ್ಕು ನಿರ್ವಹಣೆ ಮಾಡುತ್ತಿರುವ ಪೋಲೀಸರೇ ಆಗಿರಿ…ನೀವು ಇಡುವ ಪ್ರತಿ ಹೆಜ್ಜೆಯನ್ನೂ ಪೂರ್ಣ ಗಮನ, ಪೂರ್ಣ ಎಚ್ಚರದೊಡನೆ ಇಡುವುದನ್ನು ಅಭ್ಯಾಸ ಮಾಡಿಕೊಳ್ಳುವದು ಕಷ್ಟವಲ್ಲ. ನಡೆಯುವ ಕಲೆ ನಿಮಗೆ ಗೊತ್ತಿದ್ದರೆ ಈಗ, ಈ ಕ್ಷಣದಲ್ಲಿ ಇಲ್ಲೇ ಪೂರ್ಣವಾಗಿ ಇರುತ್ತೀರಿ. ನೀವು ಬದುಕಿಗೆ ಸಿಗುತ್ತೀರಿ, ಬದುಕು ನಿಮಗೆ ಸಿಗುತ್ತದೆ.
ನಮ್ಮಲ್ಲಿ ಪ್ರತಿಯೊಬ್ಬರಿಗೂ ಧಾವಿಸುವ, ಓಡುವ ಪ್ರವೃತ್ತಿ ಇದೆ. ಬದುಕಿಡೀ ಓಡುತ್ತಲೇ ಇರುತೇವೆ. ನಮ್ಮ ಪಾಲಿನ ಸಂತೋಷ ಭವಿಷ್ಯದಲ್ಲಿ ಎಲ್ಲೋ ನಮಗಾಗಿ ಕಾಯುತಿದೆ ಎಂದೇ ತಿಳಿಯುತೇವೆ. ಓಡುವ ಈ ಅಭ್ಯಾಸ ತಂದೆ ತಾಯಿಗಳಿಂದ, ಹಿರೀಕರಿಂದ ನಮಗೆ ಬರುತ್ತದೆ. ಓಡುತಿದ್ದೇವೆ ಅನ್ನುವುದು ಗೊತ್ತಾದರೆ ಸಾಕು. ಗಮನವಿಟ್ಟು ನಡೆಸುವ ಉಸಿರಾಟವೇ ನಮ್ಮ ಈ ಅಭ್ಯಾಸಕ್ಕೆ ಇಲ್ಲವಾಗುವುದು. ಓಡುವ ಅಭ್ಯಾಸವನ್ನು ವಿರೋಧಿಸಿ ಹೊರಾಡುವ ಅಗತ್ಯವಿಲ್ಲ. ಈ ಅಭ್ಯಾಸದ ಬಗ್ಗೆ ಎಚ್ಚರದ ಗಮನ ಮೂಡಿದರೆ ಸಾಕು. ಅದರಿಂದ ಬಿಡುಗಡೆ ದೊರೆಯುವುದು. ಪೂರ್ಣ ಗಮನದೊಡನೆ ಉಸಿರೆಳೆದುಕೊಳ್ಳುತ್ತ, ಉಸಿರು ಬಿಡುತ್ತಾ ಈ ಕ್ಷಣವನ್ನು ಆನಂದಿಸಿ.
*
[ನಗೆಯ ಮಾರಿತಂದೆ ಎಂಬ ವಚನಕಾರ ತನ್ನ ಇಷ್ಟದೈವನ್ನು “ಆತುರವೈರಿ ಮಾರೇಶ್ವರಾ” ಎಂದು ಕರೆಯುತ್ತಾನೆ. ಆತುರವೆನ್ನುವುದು, ಅರ್ಜೆಂಟು ಅನ್ನುವುದು ಮಾಡಬೇಕೆಂದು ನಮಗೆ ನಾವೇ ಒತ್ತಾಯ ಹೇರಿಕೊಂಡ ಕೆಲಸಗಳು ಮಾತ್ರವಲ್ಲ, ಅದು ನಮ್ಮ ಮನಸಿನ ಮನೊಧರ್ಮವೇ ಆಗಿದೆ ಅನಿಸುತ್ತದೆ. ಎಲ್ಲವೂ ಸಾಧ್ಯವಾದಷ್ಟು ಬೇಗ ಆಗಿ ಮುಗಿಯಬೇಕು ಅನ್ನುವ ಆತುರದ ವೈರಿ ದೇವರು! ಬದುಕು ಆತುರ ಯಾಕಾಗಬೇಕು, ಪ್ರತಿಕ್ಷಣ ಇಡಿಯಾಗಿ ಬದುಕುವುದಕ್ಕೆ ಕಲಿಯುವುದೇ ಕಲಿಕೆ ಅಲ್ಲವೇ…]

