ಧ್ಯಾನವೆಂದರೆ ಪೂರ್ತಿಯಾಗಿ ಅಲ್ಲೇ ಇರುವುದು—ನೀವು ಕುಳಿತ ಸ್ಥಳದಲ್ಲಿ, ನಿಮ್ಮ ಧ್ಯಾನದ ದಾರಿಯಲ್ಲಿ ಇರುವುದು. ನೀವು ಉಣ್ಣುವ ಅನ್ನದೊಡನೆ ನೂರಕ್ಕೆ ನೂರರಷ್ಟು ನೀವು ಇರುವುದಕ್ಕೆ ಸಾಧ್ಯವಾಗುವುದಾದರೆ ತಿನ್ನುವುದು ಕೂಡ ಧ್ಯಾನ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.5: ಗಮನದ ಎಚ್ಚರ । ವಿರಾಮ
ಗೆಳೆಯರೇ,
ಕಲ್ಲನ್ನು ಹಿಡಿದವರು ಯಾರೋ ಅದನ್ನು ಗಾಳಿಗೆ ಎಸೆದರು ಅದು ಹೊಳೆಗೆ ಬೀಳುತ್ತಿದೆ ಎಂದು ಕಲ್ಪಿನೆ ಮಾಡಿಕೊಳ್ಳಿ. ನೀರನ್ನು ಸೋಕಿದ ಕಲ್ಲು ಒಂದಿಷ್ಟೂ ವಿರೋಧಿಸದೆ ನಿಧಾನವಾಗಿ ಮುಳುಗಲು ತೊಡಗುತ್ತದೆ. ಒಂದಿಷ್ಟೂ ಪ್ರಯತ್ನಪಡದೆ ಸಾವಕಾಶವಾಗಿ ಹೊಳೆಯ ತಳವನ್ನು ಮುಟ್ಟುತ್ತದೆ. ಅಲ್ಲೇ ವಿರಮಿಸುತ್ತದೆ. ನೀರು ತನ್ನನ್ನು ಆವರಿಸಿಕೊಂಡು ಹರಿದು ಹೋಗಲು ಅವಕಾಶ ಕೊಡುತ್ತದೆ.
ಕಲ್ಲು ತೀರ ಹತ್ತಿರದ ದಾರಿಯನ್ನು ಹಿಡಿದು ಹೊಳೆಯ ತಳವನ್ನು ಮುಟ್ಟುತ್ತದೆ. ಯಾಕೆಂದರೆ ಅದು ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನೆ ಬೀಳುತ್ತದೆ. ಧ್ಯಾನ ಮಾಡುವಾಗ ನಾವು ಆ ಕಲ್ಲಿನ ಹಾಗೆ ವಿರಾಮವಾಗಿ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು. ಹೇಗೆ ಕೂರಬೇಕು, ಯಾವ ಭಂಗಿಯಲ್ಲಿ ಇರಬೇಕು ಅಂತೆಲ್ಲ ಹೆಣಗದೆ ಕಲ್ಲಿನ ಹಾಗೆ ನಿರಾಯಾಸ ಮುಳುಗಬೇಕು. ವಿರಾಮದ ಕಲೆಯನ್ನು ಅಭ್ಯಾಸಮಾಡಬೇಕು.
ದೇಹ ಮನಸುಗಳು ವಿರಾಮವಾಗಿರಬೇಕು. ದೇಹದ ಹಾಗೆ ಮನಸಿಗೂ ವಿರಾಮ ಬೇಕು. ಸಮಸ್ಯೆ ಏನೆಂದರೆ ಹೆಣಗಾಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಏನೂ ಮಾಡದೆ ಸುಮ್ಮನೆ ಇರಲಾರೆವು. ಮಲಗಿ ನಿದ್ರೆಮಾಡುವಾಗಲೂ ಮನಸಿನೊಳಗಿನ ಹೋರಾಟ ಮುಂದುವರೆಯುತ್ತದೆ. ಒಳಗಿನ ಹೋರಾಟ, ಹೆಣಗಾಟಗಳು ಅಭ್ಯಾಸಮಾತ್ರವೆಂದು ಗುರುತಿಸುವುದಕ್ಕೆ ನಮಗೆ ಸಾಧ್ಯವಾದಾಗ ನಮ್ಮನ್ನು ದಣಿಸುವ ಹೋರಾಟ ಶಕ್ತಿಹೀನವಾಗುತ್ತದೆ.
ಧ್ಯಾನವೆಂದರೆ ಪೂರ್ತಿಯಾಗಿ ಅಲ್ಲೇ ಇರುವುದು—ನೀವು ಕುಳಿತ ಸ್ಥಳದಲ್ಲಿ, ನಿಮ್ಮ ಧ್ಯಾನದ ದಾರಿಯಲ್ಲಿ ಇರುವುದು. ನೀವು ಉಣ್ಣುವ ಅನ್ನದೊಡನೆ ನೂರಕ್ಕೆ ನೂರರಷ್ಟು ನೀವು ಇರುವುದಕ್ಕೆ ಸಾಧ್ಯವಾಗುವುದಾದರೆ ತಿನ್ನುವುದು ಕೂಡ ಧ್ಯಾನ. ಧ್ಯಾನ ಮಾಡಲು ಯಾವ ಪ್ರಯತ್ನವನ್ನೂ ದಯವಿಟ್ಟು ಮಾಡಬೇಡಿ.ನೀರಿನಲ್ಲಿ ಮುಳುಗಿರುವ ಕಲ್ಲಿನಂತಿರಿ. ಕಲ್ಲು ಏನೂ ಮಾಡದೆ ಸುಮ್ಮನೆ ಇರುತ್ತದಲ್ಲ, ಹಾಗೇ ಇರಿ. ನಡೆಯುತ್ತಿರುವಾಗ ಆರಾವಮಾಗಿರಿ, ಕುಳಿತಾಗ ಆರಾಮವಾಗಿರಿ.
“ಅಭ್ಯಾಸ ಮಾಡದಿರುವುದೇ ನನ್ನ ಅಭ್ಯಾಸ”ವೆಂದು ಬುದ್ಧ ಹೇಳಿದ. ಧ್ಯಾನಿಸುತ್ತಿರುವಾಗಲೋ ನಡೆಯುತ್ತಿರುವಾಗಲೋ ನೀವು
ಹೆಣಗುತ್ತಿದ್ದರೆ ನೀವು ಧ್ಯಾನಿಸುವ, ನಡೆಯುವ ರೀತಿ ಸರಿ ಇಲ್ಲವೆಂದೇ ಅರ್ಥ. ಎಲ್ಲ ಹೆಣಗಾಟ, ಪ್ರಯತ್ನ ಬಿಟ್ಟುಬಿಡಿ. ಆರಾಮವಾಗಿರಿ. ನಾನು ಧ್ಯಾನಕ್ಕೆ ಕೂರುವಾಗ ಅದು ಸುಖ ಎಂದೇ ತಿಳಿಯುತ್ತೇನೆ. ಕೂರುವಾಗ ಪ್ರಯತ್ನಪಡುವುದು ಇಲ್ಲ. ಕೂರುವ ಚಾಪೆಯೊಡನೆ ಹೆಣಗಾಟವೂ ಇಲ್ಲ. ಆರಾಮದಲ್ಲಿರುತ್ತೇನೆ. ಪ್ರಯತ್ನಪಡುವುದಿಲ್ಲ ಅನ್ನುವ ಕಾರನಕ್ಕೇ ಕೂರುವುದರಲ್ಲಿ ಕಷ್ಟವಿರುವುದಿಲ್ಲ. ಕುಳಿತ ಮೇಲೂ ಮೈಯ ಮಾಂಸಖಂಡಗಳೆಲ್ಲ ಆರಾಮವಾಗಿರುತ್ತವೆ. ಧ್ಯಾನದಲ್ಲಿ ಹೆಣಗಾಟವಿದ್ದರೆ ಭುಜ, ಬೆನ್ನು ನೋಯುತ್ತವೆ. ಆರಾಮವಾಗಿದ್ದರೆ ಬಹಳ ಹೊತ್ತು, ಪ್ರತಿ ನಿಮಿಷವೂ ಹಗುರವಾಗಿ, ಹೊಸತನ ಅನುಭವಿಸುತ್ತ, ಶಕ್ತಿ ತುಂಬಿಕೊಳ್ಳುತ್ತ, ಸ್ವಸ್ಥವಾಗಿ ಕೂರಬಹುದು.
ಜ್ಞಾನ ಸಾಕ್ಷಾತ್ಕಾರಕ್ಕೆ ಧ್ಯಾನಮಾಡಲು ಕೂರುವುದಲ್ಲ, ಕೂರುವ ಸುಖಕ್ಕಾಗಿ ಕೂರಬೇಕು. ನಡೆಯುವ ಸುಖಕ್ಕಾಗಿಯೇ ನಡೆಯಬೇಕು. ಉಣ್ಣುವ ಸುಖಕ್ಕಾಗಿ ಉಣ್ಣಬೇಕು.ಮಾಡುತ್ತಿರುವುದರಲ್ಲೇ ನೂರಕ್ಕೆ ನೂರು ಮಗ್ನವಾಗಿರುವುದೊಂದು ಕಲೆ. ದಿನದ ಬದುಕಿನಲ್ಲಿ ಪ್ರತಿ ಕ್ಷಣವೂ ಆ ಕ್ಷಣದಲ್ಲೇ ನೂರಕ್ಕೆ ನೂರು ಮಗ್ನವಾಗಿರಬೇಕು ಅನ್ನುವುದೇ ಬೌದ್ಧ ಧ್ಯಾನದ ತಿರುಳು.
ಉಸಿರೆಳೆದುಕೊಳ್ಳುತ್ತ “ಇಲ್ಲಿ, ಇಲ್ಲಿ” ಎಂದು ಹೇಳಿಕೊಳ್ಳಿ. ಉಸಿರು ಬಿಡುತ್ತಾ “ಈಗ, ಈಗ” ಎಂದು ಹೇಳಿಕೊಳ್ಳಿ. ಉಸಿರಾಟದ ಅಭ್ಯಾಸದಲ್ಲಿ ನೀವು ಯಾವುದೇ ಎರಡು ಪದ ಬಳಸಿದರೂ ಅರ್ಥ ಮಾತ್ರ “ಈಗ-ಇಲ್ಲಿ” ಎಂದೇ. ಈಗ ಇಲ್ಲಿ ಆರಾಮವಾಗಿದ್ದೇನೆ.
ಹೀಗೆ ಅಭ್ಯಾಸ ಮಾಡುತ್ತ “ನಿಲ್ಲಿಸುವುದು” ಅಭ್ಯಾಸವಾಗುತ್ತದೆ. ನಿಲ್ಲಿಸುವುದೇ ಬೌದ್ಧ ಧ್ಯಾನದ ತಿರುಳು. ಓಡುವುದು ನಿಲ್ಲಿಸಿ. ಪ್ರಯತ್ನಪಡುವುದು ನಿಲ್ಲಿಸಿ. ವಿರಾಮದಲ್ಲಿರಿ. ಆರಾಮವಾಗಿರಿ. ಸ್ವಸ್ಥರಾಗಿರಿ. ಶಾಂತರಾಗಿರಿ.
*
[ವಚನಕಾರರು “ನೆನೆ” ಎಂಬ ಮಾತನ್ನು ಕ್ರಿಯಾಪದವಾಗಿ ನೆನಪು ಮಾಡಿಕೋ ಎಂದು ಮಾತ್ರವಲ್ಲ, ಧ್ಯಾನವೆಂಬ ನಾಮಪದವಾಗಿಯೂ ಬಳಸುತ್ತಾರೆ. ನೀರಿನಲ್ಲಿ ನೆನೆವ ಕಲ್ಲಿನ ಹಾಗೆ ಇದ್ದರೆ-ಹರಿವ ನೀರು ನಮ್ಮನ್ನು ಸುತ್ತಿ, ಬಳಸಿ, ಮುಳುಗಿಸಿ ಹರಿದು ಹೋಗಲು ಅಡ್ಡಿಮಾಡದೆ ಇದ್ದರೆ ಅದೇ ಧ್ಯಾನ ಅನ್ನುತ್ತಿದ್ದಾರೋ ಏನೋ.]

