ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದು, ‘ಇತರರು ನನ್ನ ಬಗ್ಗೆ ಹೇಗೆ ಯೋಚಿಸುತ್ತಾರೆ ಅಥವಾ ಭಾವಿಸುತ್ತಾರೆ ಎನ್ನುವುದನ್ನ ನಾನು ನಿಯಂತ್ರಿಸಬೇಕು’ ಎನ್ನುವ ನಂಬಿಕೆಯಿಂದ ಬರುತ್ತದೆ.. । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಗುರುಗಳೇ, ಎಲ್ಲವನ್ನೂ ಪರ್ಸ್ನಲ್ ಆಗಿ ತೆಗೆದುಕೊಳ್ಳುವುದನ್ನು ನಾನು ಹೇಗೆ ನಿಲ್ಲಿಸಲಿ?”
ಯುವ ಸನ್ಯಾಸಿಯೊಬ್ಬ ತನ್ನ ಗುರುವನ್ನ ಪ್ರಶ್ನೆ ಮಾಡಿದ.
ಗುರುಗಳು ಮುಗುಳ್ನಗುತ್ತ ಮಾತನಾಡಿದರು :
“ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಲು, ಮೊದಲು ನಿಜವಾಗಿಯೂ ನಿನಗೆ ಸೇರಿದ್ದು ಏನು — ಮತ್ತು ನಿನಗೆ ಎಂದಿಗೂ ಸೇರದ್ದು ಏನು — ಎನ್ನುವುದನ್ನ ತಿಳಿಯಬೇಕು.
ಜನರು ಹೇಳುವ ಅಥವಾ ಮಾಡುವ ಬಹುತೇಕ ಎಲ್ಲವೂ ಅವರ ಒಳಗಿನ ಸ್ಥಿತಿಯ ಪ್ರತಿಬಿಂಬವೇ ಹೊರತು, ನಿನ್ನ ಮೌಲ್ಯದ ಅಳತೆ ಅಲ್ಲ.
ಒಂದು ಬಿರುಗಾಳಿ ಆಕಾಶದಲ್ಲಿ ಹಾದುಹೋದಾಗ, ನೀನು ‘ನಾನು ಏನು ತಪ್ಪು ಮಾಡಿದೆ?’ ಎಂದು ಕೇಳುವುದಿಲ್ಲ. ಬದಲಾಗಿ ಅದು ಹಾದುಹೋಗಲು ಬಿಡುತ್ತೀಯ.
ಅದೇ ರೀತಿ, ಜನರ ಮಾತುಗಳು, ಮನಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳು ಬಹಳ ಸಲ ನಿನಗಿಂತ ಮುಂಚೆಯೇ ಅವರೊಳಗೆ ಹುಟ್ಟಿದ ಬಿರುಗಾಳಿಗಳಾಗಿರುತ್ತವೆ. ನೀನು ಅವುಗಳನ್ನು ಒಪ್ಪಿ ಅಪ್ಪಿಕೊಂಡಾಗ ಮಾತ್ರ ನಿನ್ನ ಶಾಂತಿ ಕದಡಲ್ಪಡುತ್ತದೆ.
ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದು, ‘ಇತರರು ನನ್ನ ಬಗ್ಗೆ ಹೇಗೆ ಯೋಚಿಸುತ್ತಾರೆ ಅಥವಾ ಭಾವಿಸುತ್ತಾರೆ ಎನ್ನುವುದನ್ನ ನಾನು ನಿಯಂತ್ರಿಸಬೇಕು’ ಎನ್ನುವ ನಂಬಿಕೆಯಿಂದ ಬರುತ್ತದೆ.
ಆದರೆ ಮತ್ತೊಬ್ಬರ ಮನಸ್ಸಿನೊಳಗೆ ಏನಿದೆ ಎನ್ನುವುದಕ್ಕೆ ನೀನು ಹೊಣೆಗಾರನಲ್ಲ.
ಪ್ರತಿಯೊಬ್ಬರಿಂದಲೂ ಒಪ್ಪಿಗೆ, ಅರ್ಥೈಸಿಕೊಳ್ಳುವಿಕೆ ಬೇಕೆಂದುಕೊಳ್ಳುವುದನ್ನು ನೀನು ನಿಲ್ಲಿಸುವ ಕ್ಷಣದಲ್ಲೇ, ನೀನು ನಿನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯುತ್ತೀಯ.
ನೀನು ನಿನ್ನ ಹಳೆಯ ಗಾಯಗಳ ಮೂಲಕ ಪ್ರತಿಕ್ರಿಯಿಸಬೇಡ; ಜಾಗೃತಿಯಿಂದ ಪ್ರತಿಕ್ರಿಯಿಸು.
ರಕ್ಷಣಾತ್ಮಕವಾಗುವುದಕ್ಕಿಂತ ಕುತೂಹಲದಿಂದಿರು.
ಪ್ರತಿಕ್ರಿಯಾತ್ಮಕವಾಗುವುದಕ್ಕಿಂತ ಸ್ಥಿರವಾಗಿರು.
ನಿನ್ನ ಮನಸ್ಸು ಸ್ಥಿರವಾಗಿದ್ದರೆ, ಅವರ ಕಠಿಣ ಮಾತುಗಳೂ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ.
ಇತರರ ಗೊಂದಲ ನಿನ್ನ ಒಳಜಗತ್ತಿನ ವಾತಾವರಣವಾಗಲು ಅವಕಾಶ ಮಾಡಿಕೊಡಬೇಡ.
ನಿನ್ನ ಶಾಂತಿಯನ್ನು ಕಾಪಾಡು. ನಿನಗೆ ಸೇರದ ಯುದ್ಧಗಳಿಂದ ದೂರ ನಡೆ.
ಮತ್ತು ಸಂಶಯ ಬಂದಾಗ, ಇದನ್ನು ನೆನಪಿಡು:
“ಇತರರ ಕೆಲಸಗಳು, ಪ್ರತಿಕ್ರಿಯೆಗಳು ಅವರ ಒಳಜಗತ್ತಿನಿಂದ ಬರುತ್ತವೆ — ನಿನ್ನ ಮೌಲ್ಯದಿಂದ ಅಲ್ಲ.”

