ಕೈರೋಸ್ ಎಂದರೆ…

ನಿನ್ನ ಸ್ನೇಹಿತರ ಬಳಿ ಕ್ಷಮೆ ಕೇಳಲು ಒಂದು ಸರಿಯಾದ ಸಮಯ ಇರುತ್ತದೆ. ಧೈರ್ಯ ತೋರಲು ಕೂಡ ಒಂದು ಸರಿಯಾದ ಸಮಯ ಇರುತ್ತದೆ. ಕುದುರೆಗಳು ಓಡಿಹೋದ ನಂತರ ಬಾಗಿಲು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ‘ಕೈರೋಸ್’ ಎಂದರೆ ಆ ಸರಿಯಾದ ಸಮಯ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಿಮ್ಮ ಜೀವಮಾನದಲ್ಲಿ ಅಂಥದೊಂದು ಸಮಯ ಬಂದೇ ಬರುತ್ತದೆ — ಅದು ಇವತ್ತಿನ ರಾತ್ರಿಯೇ ಆಗಿರಬಹುದು, ಅಥವಾ ಮುಂದಿನ ವರ್ಷವಾಗಿರಬಹುದು — ಆಗ ನೀವು ಪ್ರೀತಿಸುವ ಯಾರಿಗಾದರೂ, ಏನೋ ಒಂದು ಮಾತು ಹೇಳಬೇಕಾಗುತ್ತದೆ, ಮತ್ತು ಅದನ್ನು ಹೇಳಲು ನಿಮಗೆ ಕೇವಲ ಒಂದೇ ಒಂದು ಅವಕಾಶ ಇರುತ್ತದೆ. ಇದನ್ನೇ ಪ್ರಾಚೀನ ಗ್ರೀಕರು ‘ಕೈರೋಸ್’ ಎಂದು ಕರೆಯುತ್ತಿದ್ದರು.

‘ಕೈರೋಸ್’ ಎಂದರೆ ಸರಿಯಾದ ಸಮಯ. ಅದು ಅತ್ಯಂತ ಸೂಕ್ತವಾದ ಕ್ಷಣ. ನೀವು ಕಾಯುತ್ತಿದ್ದರೆ, ಅಥವಾ ವಿಳಂಬ ಮಾಡಿದರೆ, ಆ ಕ್ಷಣ ಶಾಶ್ವತವಾಗಿ ಕಳೆದುಹೋಗುತ್ತದೆ. ಅದು ಕ್ಷಮೆಯಾಚನೆಯ ಮೊದಲು ನೀವು ತೆಗೆದುಕೊಳ್ಳುವ ಆ ಒಂದು ದೀರ್ಘ ಉಸಿರು. ಅದು ನಿಮ್ಮ ಚುಂಬನದ ಮುಂಚಿನ ಆ ಒಂದು ಗಳಿಗೆ. ಅಥವಾ ಯಾರಾದರೂ ಕ್ರೂರ ಮಾತು ಹೇಳಿದಾಗ, ಅದನ್ನು ತಕ್ಷಣ ಎದುರಿಸಲು ನಿಮಗೆ ಸಿಗುವ ಒಂದೇ ಒಂದು ಅವಕಾಶ.

ಪ್ರಾಚೀನ ಗ್ರೀಕ್ ತತ್ತ್ವಶಾಸ್ತ್ರದಲ್ಲಿ ‘ಫ್ರೋನೇಸಿಸ್’ (Phronesis) ಎಂದರೆ ಪ್ರಾಯೋಗಿಕ ಜ್ಞಾನ ಅಥವಾ ಜೀವನದ ತಿಳುವಳಿಕೆ. ಇದರ ದೊಡ್ಡ ಭಾಗವೆಂದರೆ, ಯಾವುದನ್ನಾದರೂ ಮಾಡುವುದಕ್ಕೆ ಒಂದು ಸರಿಯಾದ ಸಮಯ ಇದ್ದೇ ಇರುತ್ತದೆ ಎನ್ನುವುದನ್ನು ಗುರುತಿಸುವುದು.

ನಿನ್ನ ಸ್ನೇಹಿತರ ಬಳಿ ಕ್ಷಮೆ ಕೇಳಲು ಒಂದು ಸರಿಯಾದ ಸಮಯ ಇರುತ್ತದೆ. ಧೈರ್ಯ ತೋರಲು ಕೂಡ ಒಂದು ಸರಿಯಾದ ಸಮಯ ಇರುತ್ತದೆ. ಕುದುರೆಗಳು ಓಡಿಹೋದ ನಂತರ ಬಾಗಿಲು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ.

‘ಕೈರೋಸ್’ ಎಂದರೆ ಆ ಸರಿಯಾದ ಸಮಯ.

ಇಂದು ನಾವು ಸಮಯವನ್ನು ಗಡಿಯಾರಗಳು, ಕ್ಯಾಲೆಂಡರ್‌ಗಳು ಮತ್ತು ನೋಟಿಫಿಕೇಷನ್ ಗಳ ಮೂಲಕ ಅಳೆಯುತ್ತೇವೆ. ಆದರೆ ಇವುಗಳಲ್ಲಿ ಯಾವುದು ಕೂಡ, ಯಾವ ಕ್ಷಣಗಳು ನಿಜವಾಗಿಯೂ ಮಹತ್ವದ್ದಾಗಿವೆ ಎನ್ನುವುದನ್ನು ನಮಗೆ ತಿಳಿಸಿ ಹೇಳುವುದಿಲ್ಲ. ಒಂದು ಕೆಲಸಕ್ಕೆ ಎಷ್ಟು ಸಮಯ ಬೇಕು ಎನ್ನುವುದನ್ನ ನಾವು ನಿಖರವಾಗಿ ತಿಳಿದುಕೊಳ್ಳಬಹುದು, ಆದರೆ ಆ ಕೆಲಸವನ್ನು ನಿಜವಾಗಿಯೂ ಮಾಡಬೇಕೇ ಬೇಡವೇ ಎನ್ನುವುದರ ಕುರಿತು ನಮಗೆ ಯಾವುದೇ ಅರಿವು ಇಲ್ಲದೇ ಇರಬಹುದು.

ಅರಿಸ್ಟೋಟಲ್ ನ ಪ್ರಕಾರ, ನಾವು ಜೀವನಪೂರ್ತಿ ಮಾಡುವ ಸಣ್ಣ ಸಣ್ಣ ಆಯ್ಕೆಗಳು, mindful ಆಗಿ ಬದುಕುವುದು, ಮತ್ತು ನಾವು ಯಾವೆಲ್ಲ ಕಡೆ ಸರಿಯಾಗಿ ನಡೆದುಕೊಂಡೆವು, ಯಾವೆಲ್ಲ ಅವಕಾಶಗಳನ್ನು ಕಳೆದುಕೊಂಡೆವು ಎನ್ನುವುದನ್ನ ಸರಿಯಾಗಿ ಪರಿಶೀಲಿಸುವ ಮೂಲಕ ನಮ್ಮ ‘ಫ್ರೋನೇಸಿಸ್’ — ಅಂದರೆ ಪ್ರಾಯೋಗಿಕ ಜ್ಞಾನವನ್ನು — ತರಬೇತಿಗೊಳಿಸಿತೊಳ್ಳಬಹುದು.

ಏಕೆಂದರೆ ‘ಕೈರೋಸ್’ ಒಂದು ಸವಾಲು — ಅದು ಬ್ರಹ್ಮಾಂಡ ನಮಗೆ ನೀಡಿರುವ ಒಂದು ಪರೀಕ್ಷೆ.
ಅದು ಯಾವುದೇ ಮುನ್ಸೂಚನೆ ಇಲ್ಲದೆ, ಸಾಮಾನ್ಯ ದಿನವೊಂದರಲ್ಲಿ ಹಠಾತ್ತನೆ ನಮ್ಮ ಮುಂದೆ ಬರುತ್ತದೆ.
ಆ ಕ್ಷಣ ಬಂದಾಗ ಅದನ್ನು ಹಿಡಿದುಕೊಳ್ಳಲು ಸಿದ್ಧರಾಗಿ ಇರುವುದರಲ್ಲೇ ನಿಜವಾದ ಜ್ಞಾನ ಇದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.