ಪ್ರತಿ ದಿನವೂ ಮರು ಹುಟ್ಟು ಪಡೆಯುವುದನ್ನು ಅಭ್ಯಾಸ ಮಾಡಬೇಕು ನಾವು. ಉಸಿರು ಒಳಗೆಳೆದುಕೊಂಡಾಗ ನೀವು ನಿಮ್ಮ ಮನಸನ್ನು ದೇಹದೊಂದಿಗೆ ಮರಳಿ ಹೊಂದಿಸುತ್ತೀರಿ. ಮತ್ತೆ ಜೀವಂತವಾಗುತ್ತೀರಿ, ಈಗ, ಇಲ್ಲಿ ಇರುತ್ತೀರಿ. ಸಂತೋಷ, ಶಾಂತಿ, ಸುಖ ಎಲ್ಲವೂ ಸಾಧ್ಯವಾಗುತ್ತವೆ. ಬದುಕಿನೊಡನೆ ನಿಮ್ಮ ಭೇಟಿ ನಿಗದಿಯಾಗಿದೆ. ಆ ಭೇಟಿ ಇಲ್ಲಿಯೇ ಈಗಲೇ ನಡೆಯಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.6: ಗಮನದ ಎಚ್ಚರ । “ಇರುವ” ಪ್ರೀತಿ
“ಇಲ್ಲಿ ಇರುವುದು”—ಇದೇ ಧ್ಯಾನದ ಪವಾಡ. ನಿಜವಾಗಿ ಇಲ್ಲಿ ಇರುವುದು ಮುಖ್ಯ. ಇಲ್ಲಿರಬೇಕು-ನಮಗಾಗಿ, ನಾವು ಪ್ರೀತಿಸುವವರಿಗಾಗಿ. ನಾವು ಇಲ್ಲಿರದಿದ್ದರೆ ಇಲ್ಲಿರುವವರನ್ನು ಪ್ರೀತಿಸುವುದು ಹೇಗೆ?
ಇಲ್ಲಿರುವ ಯಾರನ್ನಾದರೂ ಏನನ್ನಾದರೂ ಪ್ರೀತಿಸುವುದಾದರೆ ನಾವೂ ಇಲ್ಲೇ ಇರಬೇಕು ಅನ್ನುವುದೇ ಮೊದಲ ಅಗತ್ಯ ಅಲ್ಲವೇ? ಇಲ್ಲೇ ಇರುವುದರ ಸಾಧನೆ ಕಷ್ಟದ್ದಲ್ಲ. ಗಮನವಿರಿಸಿ ಉಸಿರಾಡುತ್ಥಾ ಎಲ್ಲ ಯೋಚನೆ, ಯೋಜನೆಗಳನ್ನು ತೊರೆದರೆ ಸಾಕು. ನಿಮ್ಮಲ್ಲಿಗೆ ಮರಳಿರಿ. ನಿಮ್ಮ ಉಸಿರಾಟ ಗಮನಿಸುತ್ತಾ ಮೆಲುವಾಗಿ ನಕ್ಕುಬಿಡಿ. ಇಲ್ಲಿರುತ್ತೀರಿ. ದೇಹ ಮನಸು ಒಂದಾಗುತ್ತವೆ. ಪೂರಾ ಜೀವಂತವಾಗಿರುತ್ತೀರಿ. ಅದೊಂದು ಪವಾಡ.
ಕೆಲವು ಜನ ಆಗಲೇ ಸತ್ತವರ ಹಾಗೆ ಬದುಕುತ್ತಾರೆ. ತಮ್ಮ ಗತಕಾಲದ ನೆನಪುಗಳಿಗೆ ಆಹಾರವಾಗಿ, ಮುಂದೆ ಏನಾಗುತ್ತದೋ ಎಂದು ಹೆದರುತ್ತಾ, ಕೋಪ, ಅಸೂಯೆಗಳ ಸುಳಿಯಲ್ಲಿ ಬದುಕುವವರು ಇನ್ನು ಕೆಲವರು. ಅವರು ಜೀವಂತವಾಗಿಲ್ಲ. ಅವರು ನಡೆವ ಹೆಣ, ನುಡಿವ ಹೆಣಗಳು. ಗಮನಿಸಿ ನೋಡಿದರೆ ಝಾಂಬಿಗಳ ಹಾಗೆ ಬದುಕುತ್ತಿರುವವರು ನಿಮ್ಮ ಸುತ್ತಮುತ್ತಲಲ್ಲೇ ಸಿಗುತ್ತಾರೆ. ಅಂಥವರ ಬಗ್ಗೆ ನಿಮ್ಮಲ್ಲಿ ಅಪಾರವಾದ ಕರುಣೆ ಇರಲಿ. ಬದುಕು ಈಗ, ಇಲ್ಲಿ ಮಾತ್ರ ದೊರೆಯುವುದು ಎಂಬ ಅರಿವು ಅವರಿಗಿಲ್ಲ.
ಪ್ರತಿ ದಿನವೂ ಮರು ಹುಟ್ಟು ಪಡೆಯುವುದನ್ನು ಅಭ್ಯಾಸ ಮಾಡಬೇಕು ನಾವು. ಉಸಿರು ಒಳಗೆಳೆದುಕೊಂಡಾಗ ನೀವು ನಿಮ್ಮ ಮನಸನ್ನು ದೇಹದೊಂದಿಗೆ ಮರಳಿ ಹೊಂದಿಸುತ್ತೀರಿ. ಮತ್ತೆ ಜೀವಂತವಾಗುತ್ತೀರಿ, ಈಗ, ಇಲ್ಲಿ ಇರುತ್ತೀರಿ. ಸಂತೋಷ, ಶಾಂತಿ, ಸುಖ ಎಲ್ಲವೂ ಸಾಧ್ಯವಾಗುತ್ತವೆ. ಬದುಕಿನೊಡನೆ ನಿಮ್ಮ ಭೇಟಿ ನಿಗದಿಯಾಗಿದೆ. ಆ ಭೇಟಿ ಇಲ್ಲಿಯೇ ಈಗಲೇ ನಡೆಯಬೇಕು.
ಬದುಕಿನ ಸ್ಪರ್ಶ ಗಹನವಾಗಿ ದೊರೆಯಬೇಕೆಂದಿದ್ದರೆ ನೀವು ಈ ಕ್ಷಣಕ್ಕೆ ಮರಳಲೇಬೇಕು. ದೇವರ ಸೀಮೆಯಲ್ಲಿ, ಬುದ್ಧನ ಪರಿಶುದ್ಧ ರಾಜ್ಯದಲ್ಲಿ ಪ್ರತಿ ದಿನವೂ ಓಡಾಡುವ ಅವಕಾಶ, ಸಾಮರ್ಥ್ಯ ನಮಗೆಲ್ಲರಿಗೂ ಇದೆ. ಕಾಲು, ಶ್ವಾಸಕೋಶ, ಕಣ್ಣು, ಮನಸ್ಸು ಇಷ್ಟು ಸಾಕು. ಗಮನದ ಎಚ್ಚರದ ಚತನ್ಯವು ನಿಮ್ಮೊಳಗೇ ಹುಟ್ಟುತ್ತದೆ—ದೀಪವನ್ನು ಬೆಳಗಿದ ಹಾಗೆ.
ನೀವು ನಿಜವಾಗಿ ಜೀವಂತವಾದಾಗ ದೇವರ ಸೀಮೆಗೆ ಕಾಲಿಟ್ಟಿರುತ್ತೀರಿ. ದೇವರ ರಾಜ್ಯವೆನ್ನುವುದು ಕಲ್ಪನೆಯಲ್ಲ, ಐಡಿಯಾ ಕೂಡ ಅಲ್ಲ. ಪ್ರತಿದಿನದ ಬದುಕಿನಲ್ಲಿ ನಾವೆಲ್ಲರೂ ಸ್ಪರ್ಶಿಸಬಹುದಾದ ಸತ್ಯ. ದೇವರ ರಾಜ್ಯ ಇರುವುದು ಈಗ ಮಾತ್ರ. ಈಗ ಅಲ್ಲದಿದ್ದರೆ ಎಂದೂ ಇರಲು ಸಾಧ್ಯವಿಲ್ಲ. ಅದನ್ನು ಮುಟ್ಟುವ ಸಾಮರ್ಥ್ಯ, ಕೇವಲ ಮನಸಿನಿಂದ ಮಾತ್ರಲ್ಲ, ನಮ್ಮ ಪಾದಗಳ ಮೂಲಕ ಸ್ಪರ್ಶಿವು ಸಾಮರ್ಥ್ಯ ಎಲ್ಲರಿಗೂ ಇದೆ. ಎಚ್ಚರದ ಗಮನದ ಚೈತನ್ಯ ಸಹಾಯ ಮಾಡುತ್ತದೆ. ಒಂದು ಹೆಜ್ಜೆ ಇಟ್ಟರೆ ಸಾಕು. ದೇವರ ಸೀಮೆಯಲ್ಲಿರುತ್ತೀರಿ.
*
ಪ್ರತಿದಿನವೂ ಕೂಡಲಸಂಗಮನನ್ನು ಕಣ್ಣಾರೆ ಕಾಣಲಾಗದ ಮನುಷ್ಯನ ಬದುಕು ಬದುಕಲ್ಲ, ಸಾವು. ಅಂಥವರು ನಡೆವ, ನುಡಿವ, ಬೀಳುವ ಹೆಣ ಅನ್ನುತ್ತದೆ ಬಸವ ವಚನ.
ಹೊತ್ತಾರೆ ಎದ್ದು ಶಿವಲಿಂಗದೇವನ/ದೃಷ್ಟವಾರಿ ನೋಡದವನ ಸಂಸಾರವೇನವನ/ಬಾಳುವೆಣನ ಬೀಳುವೆಣನ ಸಂಸಾರವೇನವನ / ನಡೆವೆಣನ ನುಡಿವೆಣನ ಸಂಸಾರವೇನವನ/ ಕರ್ತು ಕೂಡಲಸಂಗಾ
ದೇವರು ಒಮ್ಮೆ ಪ್ರತ್ಯಕ್ಷವಾಗುವುದಲ್ಲ, ಒಮ್ಮೆ ಕಂಡು ಸಾಧನೆ ಆಯಿತು ಅನ್ನುವುದಲ್ಲ, ಪ್ರತಿಕ್ಷಣವೂ, ಯಾವಾಗಲೂ, ಈಗಲೂ ದೇವರು ಕಣ್ಣೆದುರು ಕಾಣುತ್ತಲೇ ಇರಬೇಕು, ಅದು “ಪ್ರತ್ಯಕ್ಷ” ಅನ್ನುವಂತಿದೆ ಈ ವಚನ, ಅಲ್ಲವೇ?

