ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಸಾಮಾನ್ಯವಾಗಿ ಯಾರಿಗಾದರೂ ತುಂಬಾ ವಿಷಯಗಳು ಗೊತ್ತಿದ್ದರೆ, ಅವರು ಬಹಳ ಬುದ್ಧಿವಂತರು ಎಂದು ನಾವು ಭಾವಿಸುತ್ತೇವೆ. ಆದರೆ ಪ್ಲೂಟಾರ್ಕ್ ನ ಪ್ರಕಾರ, ನಿಜವಾದ ಬುದ್ಧಿವಂತಿಕೆ ಎನ್ನುವುದು ಬಹಳ ಬಾರಿ ಇದಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ.
ಪ್ಲೂಟಾರ್ಕ್ ಒಮ್ಮೆ ಹೀಗೆ ಬರೆದಿದ್ದ:
“ ಮೈಂಡ್ ಎನ್ನುವುದು ತುಂಬಿಸಬೇಕಾದ ಪಾತ್ರೆಯಲ್ಲ, ಅದು ಹೊತ್ತಿಸಬೇಕಾದ ಕಿಡಿಯಾಗಿದೆ!” ಇದನ್ನು ಅರ್ಥ ಮಾಡಿಕೊಳ್ಳಲು ನಾವು ನಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಳ್ಳಬಹುದು, ಬೇಸರದಿಂದ, ಮನಸ್ಸಿಲ್ಲದೆ ತರಗತಿಗಳಲ್ಲಿ ಕೂತಿದ್ದ ಕ್ಷಣಗಳನ್ನು. ನಮಗೆ ಆಸಕ್ತಿ ಇಲ್ಲದ ವಿಷಯಗಳ ಬಗ್ಗೆ ಶಿಕ್ಷಕರು ನಿರಂತರವಾಗಿ ಮಾತನಾಡುತ್ತಿದ್ದಾಗ, ನಾವು ಅಲ್ಲಿ ಸಿಕ್ಕಿಹಾಕಿಕೊಂಡವರಂತೆ ಕುಳಿತುಕೊಳ್ಳುತ್ತಿದ್ದೆವು, ಖಾಲಿ ಮತ್ತು ಬೀಗ ಹಾಕಿದ ಪಾತ್ರೆಯಂತೆ, ಅದರಲ್ಲಿ ಇತರರು ತಮ್ಮ ಆಲೋಚನೆಗಳನ್ನು ತುಂಬಿಸುತ್ತಿರುವಂತೆ.
ಯಾವುದೇ ಶಿಕ್ಷಣ ವ್ಯವಸ್ಥೆ, ಪರೀಕ್ಷೆಗಳು ಮತ್ತು ಪ್ರಮಾಣಪತ್ರಗಳ ಮೇಲೆಯೇ ಅತಿಯಾದ ಆಸಕ್ತಿಯನ್ನು ಬೆಳೆಸಿಕೊಂಡರೆ, ಅದು ತಪ್ಪು ದಾರಿಯಲ್ಲೇ ಸಾಗುವುದು ಅನಿವಾರ್ಯ. ಯಾರಾದರೊಬ್ಬರ ತಲೆ ಎಷ್ಟು ಅಪ್ರಯೋಜಕ ಮಾಹಿತಿಯಿಂದ ತುಂಬಿದೆ ಎನ್ನುವುದನ್ನೇ ನಾವು ಯಶಸ್ಸಿನ ಅಳತೆಗೋಲಾಗಿ ನೋಡಿದರೆ, ನಾವು ಮನಸ್ಸನ್ನು ಕೇವಲ ಒಂದು ಪಾತ್ರೆಯಾಗಿ ಮಾತ್ರ ಬದಲಾಯಿಸಿಕೊಂಡು ಬಿಟ್ಟಿದ್ದೇವೆ. .
ಆದರೆ ಪ್ಲೂಟಾರ್ಕ್ ನ ವಾದದ ಪ್ರಕಾರ, ಕಲಿಯುವುದು ಎಂದರೆ ಅದು ಹಾಗೆ ಅಲ್ಲ. ಮೈಂಡ್ ನ ಹೊಂದುವುದು ಎಂದರೆ ಕೂಡ ಅದು ಹಾಗಲ್ಲ. ಜರ್ಮನ್ ತತ್ವಜ್ಞಾನಿ Franz Brentano ಅವರ ಪ್ರಕಾರ, ಮೈಂಡ್ ಎನ್ನುವುದು ಜಗತ್ತಿನತ್ತ ತಾನೇ ಚಾಚಿಕೊಳ್ಳುವ ಒಂದು ಸಂಗತಿ. ಅದು ಚುರುಕಾದುದು, ಶಕ್ತಿಯುತವಾದುದು. ಅದು ಸದಾ ಪ್ರಶ್ನಿಸುವ, ಹುಡುಕುವ, ಪರಿಶೀಲಿಸುವ ಒಂದು ಬೆಳಕಿನ ಕಿರಣದಂತಿದೆ. ಮತ್ತು ಅದು ತನ್ನನ್ನು ತಾನು ನಿರಂತರವಾಗಿ ಜಗತ್ತಿನತ್ತ ಹರಡಿಕೊಳ್ಳುತ್ತಿರುತ್ತದೆ.
ಅತ್ಯುತ್ತಮ ಶಿಕ್ಷಕರು ಮತ್ತು ನಿಜವಾದ ಮಹಾನ್ ವ್ಯಕ್ತಿಗಳು ಎಂದರೆ, ಆ ಒಳಗಿನ ಬೆಳಕಿನೊಂದಿಗೆ ಕೆಲಸ ಮಾಡುವವರು. ಅವರು ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಾರೆ ಮತ್ತು ಅದರ ತೀಕ್ಷ್ಣತೆಯನ್ನು ಹೆಚ್ಚಿಸುತ್ತಾರೆ. ಒಳ್ಳೆಯ ಶಿಕ್ಷಣವೆಂದರೆ ಒಂದು ಆಹ್ವಾನ. ಅದು ನಿಮ್ಮನ್ನು, ತುಂಬಿಸಬೇಕಾದ ಖಾಲಿ ಪಾತ್ರೆಯಂತೆ ಕಾಣುವುದಿಲ್ಲ. ಬದಲಾಗಿ ಅದು ನಿಮ್ಮೊಳಗಿನ ಅತ್ಯುತ್ತಮವಾದದ್ದನ್ನು ಹೊರತರುವ ಪ್ರಯತ್ನ ಮಾಡುತ್ತದೆ. ಏಕೆಂದರೆ ಮೈಂಡ್ ಎನ್ನುವುದು ಒಂದು ಉರಿಯುವ, ಪ್ರಕಾಶಮಾನವಾದ ಜ್ಯೋತಿಯಂತಿದೆ. ಅದು ಸಾಧ್ಯವಾದಷ್ಟು ಹೆಚ್ಚು ಪ್ರಕಾಶಿಸಲೆಂದು ನಾವು ಅದನ್ನು ಉತ್ತೇಜಿಸಿ, ಅದರ ಬೆಳಕನ್ನು ಮತ್ತಷ್ಟು ಹೊಳೆಯುವಂತೆ ಮಾಡಬೇಕು.
*********************************

