ಉಸಿರಾಟ: ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #1.7

ಎಚ್ಚರದ ಗಮನವೊಂದಿಗೆ ನಡೆಸುವ ಉಸಿರಾಟ ದೇಹ ಮನಸುಗಳನ್ನು ಕೂಡಿಸುವ ಸೇತುವೆ. ಉಸಿರಿನ ಲಯ, ಆಳ, ಶಾಂತಿಯನ್ನು ಅನುಭವಿಸುತ್ತಾ ನಿಮ್ಮ ಮನಸಿನಲ್ಲಿ ಆಗುವ ಪರಿಣಾಮ ನಿಮ್ಮ ದೇಹಕ್ಕೂ ವ್ಯಾಪಿಸುತ್ತದೆ. ಮನಸಿನಲ್ಲಿ ಆಗುವುದೆಲ್ಲವೂ ದೇಹದ ಮೇಲೆ, ದೇಹಕ್ಕೆ ಆಗುವುದೆಲ್ಲವೂ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಉಸುರಿನ ಶಾಂತಿ, ನೆಮ್ಮದಿಗಳು ದೇಹ, ಮನಸನ್ನೂ ಪರಿಣಾಮಿಸುತ್ತವೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 1.7: ಗಮನದ ಎಚ್ಚರ  ಉಸಿರಾಟ

ಉಸಿರಾಟಕ್ಕೆ ಎಚ್ಚರದ ಗಮನ ನೀಡುವ ಮೂಲಕ ಈಗ, ಇಲ್ಲಿ ಇರುವುದು ಸಾಧ್ಯವಾಗುತ್ತದೆ. ಉಸಿರಾಡಲು ಯಾವ ಕೌಶಲವೂ ಕೈವಾಡವೂ ಬೇಡ. ಗಾಳಿಯ ಹಾಗೆ, ಬೆಳಕಿನ ಹಾಗೆ ಉಸಿರಾಟ ಸಹಜ. ಉಸಿರಿಗೆ ಯಾವ ಅಡಚಣೆಯನ್ನೂ ಮಾಡದೆ ಅದರ ಪಾಡಿಗೆ ಅದನ್ನು ಬಿಡಬೇಕು. ನಮ್ಮ ಉಸಿರಿನ ಮೇಲೆ ಬೆಳಕು ಬೀರುವ ಅರಿವಿನ ಎಚ್ಚರದ ದೀಪವನ್ನು ಬೆಳಗುವ ಕೆಲಸವನ್ನಷ್ಟೇ ನಾವು ಮಾಡಬೇಕು. ಈ ಕ್ಷಣದಲ್ಲಿ ಆಗುತ್ತಿರುವುದೆಲ್ಲಕ್ಕೂ ನಮ್ಮ ಎಚ್ಚರದ ಗಮನ ಸಲ್ಲಬೇಕು.

ಉಸಿರೆಳೆದುಕೊಳ್ಳುವಾಗ, ʻನಾನೀಗ ಉಸಿರೆಳೆದುಕೊಳ್ಳತ್ತಿದ್ದೇನೆʼ ಎಂದು ನಿಮಗೆ ನೀವೇ ಹೇಳಿಕೊಳ್ಳಬಹುದು. ಹಾಗೆ ಮಾಡಿದಾಗ, ಮರದ ರೆಂಬೆ ಕೊಂಬೆ ಎಲೆಗಳನ್ನು ಬಿಸಿಲು ಆವರಿಸುವ ಹಾಗೆ ನಿಮ್ಮ ಎಚ್ಚರದ ಗಮನ ನಿಮ್ಮೊಳಹೊಗುತ್ತಿರುವ ಉಸಿರನ್ನು ಆವರಿಸುತ್ತದೆ. ಉಸಿರು ಬಿಡುವಾಗ ʻನಾನೀಗ ಉಸಿರು ಬಿಡುತ್ತಿದ್ದೇನೆʼ ಅಂದುಕೊಳ್ಳಬಹುದು. ಇದರಿಂದ ಎಚ್ಚರದ ಗಮನದ ಬೆಳಕು ಯಾವುದೇ ಹಿಂಸೆಯಿರದೆ, ಯಾವುದೇ ಬಲವಂತದ ಮಧ್ಯಪ್ರವೇಶವಿದೆ ನಿಮ್ಮ ಉಸಿರನ್ನು ಆವರಿಸುತ್ತದೆ.

ಕೂಸನ್ನು ಸಲಹುವ ಹಾಗೆ ನನ್ನ ಉಸಿರನ್ನು ಸಲಹುತ್ತೇನೆ. ಉಸಿರೆಳೆದುಕೊಳ್ಳುವಾಗ ಸಂತೋಷಪಡುತ್ತಾ, ನಗೆ ಮೊಗ್ಗಿನೊಡನೆ ಉಸಿರನ್ನು ಬಿಡುತ್ತಾ ನಾನು ಮಾಡುತಿರುವುದನ್ನು ಎಚ್ಚರದ ಗಮನಕ್ಕೆ ಒಳಪಡಿಸುತ್ತೇನೆ. ನೀವೂ ಈ ಅಭ್ಯಾಸ ಮಾಡಬಹುದು. ಒಂದು ನಿಮಿಷ ಹೀಗೆ ಉಸಿರಾಡಿದರೆ ಆಗುವ ವ್ಯತ್ಯಾಸ ನಿಮಗೇ ಅರಿವಾಗುತ್ತದೆ. ನಿಮ್ಮ ಉಸಿರಿನ ಗುಣಮಟ್ಟ ಹೆಚ್ಚುತ್ತದೆ. ಉಸಿರಾಟ ಶಾಂತವಾಗಿ, ದೀರ್ಘವಾಗಿ ಇರುತ್ತದೆ. ಉಸಿರಾಟದ ಮಿದುತನ, ಸಾಮರಸ್ಯಗಳು ನಿಮ ದೇಹ, ಮನಸುಗಳ ಮೇಲೂ ಪರಿಣಾಮ ಬೀರುತ್ತದೆ.

ನೀವು ಸಂತೋಷವಾಗಿರುವಾಗ, ಉದಾಹರಣೆಗೆ, ಸೂರ್ಯಾಸ್ತವನ್ನು ನೋಡುತ್ತಾ ನಿಸರ್ಗದ ಚೆಲುವಿನಲ್ಲಿ ಒಂದಾಗಿರುವಾಗ ಎಚ್ಚರದ ಗಮನದೊಂದಿಗೆ ಉಸಿರಾಡಿ. ಉಸಿರೆಳೆದುಕೊಳ್ಳುವಾಗ ಸಂತೋಷ, ಉಸಿರು ಬಿಡುವಾಗ ಸುಂದರ ಸೂರ್ಯಾಸ್ತ. ಹೀಗೆ ಕೆಲವು ನಿಮಿಷ ಮುಂದುವರೆಸಿ. ನಿಸರ್ಗದ ಒಡನಾಟದಿಂದ  ಬದುಕು ಚೆಲುವಾಗುತ್ತದೆ. ಉಸಿರಾಟದ ಬಗ್ಗೆ ಎಚ್ಚರದ ಗಮನವಿರುವಾಗ ಸೂರ್ಯಾಸ್ತದ ಚೆಲುವು ಮತ್ತೂ ಗಹನವಾಗಿ ನಿಮ್ಮ ಅನುಭವಕ್ಕೆ ಬರುತ್ತದೆ.  ಎಲೆ, ಹೂವು, ಮರ, ಹಕ್ಕಿಯ ಹಾಡು ಎಲ್ಲವನ್ನೂ ಅನುಭವಿಸುತ್ತಾ ನಿಮ್ಮ ಉಸಿರಿನ ಬಗ್ಗೆ ಎಚ್ಚರದ ಗಮನವಿದ್ದರೆ ನಿಸರ್ಗದ ಸಂಪರ್ಕ ಘನವಾಗುತ್ತದೆ, ಗಹನವೂ ಆಗುತ್ತದೆ. ಒಂದು ನಿಮಿಷದಲ್ಲಿ ನಿಮ್ಮ ಉಸಿರು ಮಿದುವಾಗುತ್ತ, ಆಳವೂ ಆಗುತ್ತದೆ. ಈ ಮಿದುತನ, ಈ ಆಳ ನಿಮ್ಮ ಮೇಲೆ ಪ್ರಭಾವ ಬೀರುತ್ತವೆ.

ಎಚ್ಚರದ ಗಮನವೊಂದಿಗೆ ನಡೆಸುವ ಉಸಿರಾಟ ದೇಹ ಮನಸುಗಳನ್ನು ಕೂಡಿಸುವ ಸೇತುವೆ. ಉಸಿರಿನ ಲಯ, ಆಳ, ಶಾಂತಿಯನ್ನು ಅನುಭವಿಸುತ್ತಾ ನಿಮ್ಮ ಮನಸಿನಲ್ಲಿ ಆಗುವ ಪರಿಣಾಮ ನಿಮ್ಮ ದೇಹಕ್ಕೂ ವ್ಯಾಪಿಸುತ್ತದೆ. ಮನಸಿನಲ್ಲಿ ಆಗುವುದೆಲ್ಲವೂ ದೇಹದ ಮೇಲೆ, ದೇಹಕ್ಕೆ ಆಗುವುದೆಲ್ಲವೂ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಉಸುರಿನ ಶಾಂತಿ, ನೆಮ್ಮದಿಗಳು ದೇಹ, ಮನಸನ್ನೂ ಪರಿಣಾಮಿಸುತ್ತವೆ.

ಧ್ಯಾನದ ಅಭ್ಯಾಸದಿಂದ ಹುಟ್ಟುವ ಶಾಂತಿ, ಸಂತೋಷಗಳು ದೇಹ, ಮನಸು, ಉಸಿರಿನ ಚೈತನ್ಯಗಳು ಒಂದಾಗುತ್ತವೆ.

“ನಾನೀಗ ಉಸಿರೆಳೆದುಕೊಳ್ಳುತಿದ್ದೇನೆ,” ಎಂದು ಹೇಳಿಕೊಳ್ಳುತ್ತ ಎಚ್ಚರವಾಗಿರುವುದು ಸರಳವಾದದ್ದು.  ನೀವು ಎಳೆದುಕೊಳ್ಳುವ ಉಸಿರು ಕಿರಿದಾಗಿದ್ದರೆ “ಉಸಿರು ಕಿರಿದಾಗಿದೆ” ಎಂದು ಗಮನಿಸಿ, ಅಷ್ಟೇ. ಉಸಿರೆಳೆದುಕೊಂಡದ್ದು ದೀರ್ಘವಾಗಿದ್ದರೆ “ನಿಡಿದಾಗಿ ಉಸಿರೆಳೆದುಕೊಂಡೆ” ಎಂದು ಗಮನಿಸಿ. ಅಷ್ಟೇ. ಉಸಿರನ್ನು ಕಿರಿದು ಮಾಡಲೋ ಹಿರಿದು ಮಾಡಲೋ ಪ್ರಯತ್ನ ಮಾಡಬೇಡಿ. ಹೇಗೆ ಉಸಿರಾಡುತಿದ್ದೀರಿ ಎಂದು ಎಚ್ಚರದಿಂದ ಗಮನಿಸಿ ಅಷ್ಟೇ. ಉಸಿರು ಒಳಕ್ಕೆ, ಉಸಿರು ಹೊರಕ್ಕೆ. ಮಕ್ಕಳಾಟದಷ್ಟೇ ಸಹಜ. ಯಾವ ಬಲವಂತವೂ ಬೇಡ ಎಚ್ಚರದ ಗಮನ ಮಾತ್ರ ಇರಲಿ. ನೀವು ಬದುಕಿಗಾಗಿ, ಬದುಕು ನಿಮಗಾಗಿ. ಯಾವುದೇ ಒತ್ತಾಯ, ಹೆಣಗಾಟ, ಪ್ರಯತ್ನ ಬೇಡ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.