ಆಕ್ಸಫರ್ಡ್ ಮನಶಾಸ್ತ್ರಜ್ಞ Robin Dunbar ತಮ್ಮ ಇಡೀ ಜೀವಮಾನದಲ್ಲಿ ಸಾಬೀತು ಮಾಡಲು ಪ್ರಯತ್ನಿಸಿದ್ದು ‘ಗಾಸಿಪ್ ಕಾರಣವಾಗಿಯೇ ಮನುಷ್ಯರು ಜೀವಂತವಾಗಿದ್ದಾರೆ’ ಎನ್ನುವುದನ್ನ. ಈ ಬಗ್ಗೆ ಅವರ ಸಂಶೋಧನೆಯನ್ನು ವಿವರವಾಗಿ ಪರಿಶೀಲಿಸೋಣ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಸಂಶೋಧನೆಯ ಬಗ್ಗೆ ನಮಗೆ ಇಷ್ಟವಾಗುವ ಒಂದು ವಿಷಯವೇನೆಂದರೆ, ಅದು ನಮ್ಮ ಊಹಾಪೋಹಗಳನ್ನು ಪರಿಗಣಿಸುವುದೇ ಇಲ್ಲ. ಮತ್ತು ಪ್ರತಿಯೊಂದು ವಿಷಯದ ಮೇಲೂ ಸಂಶೋಧನೆಯನ್ನು ವಿವರವಾಗಿ ಮಾಡಲಾಗುತ್ತದೆ. ನಾವು ಕೇವಲ ಕೆಟ್ಟ ಅಭ್ಯಾಸ ಎಂದುಕೊಂಡಿದ್ದ ಕೆಲವು ಸಂಗತಿಗಳಿಗೆ ಸಹ ವಿಕಾಸಾತ್ಮಕ ಕಾರಣಗಳಿರಬಹುದು. ಇದನ್ನು ಸ್ವಲ್ಪ ಎಚ್ಚರಿಕೆಯಿಂದ ತೆಗೆದುಕೊಳ್ಳೊಣ, ಮತ್ತು ದುರುದ್ದೇಶಪೂರಿತ ಗಾಸಿಪ್ ಅನ್ನು ಯಾವತ್ತೂ ಪ್ರೋತ್ಸಾಹಿಸಬಾರದು ಎನ್ನುವುದನ್ನ ಗಮನದಲ್ಲಿಡೋಣ.
ರಾಬಿನ್ ಡನ್‌ಬಾರ್ ಅವರ ಗಾಸಿಪ್ ವಿಜ್ಞಾನದ ಕುರಿತ ಸಂಶೋಧನೆಯಿಂದ ಹೊರಹೊಮ್ಮಿದ 6 ಆಸಕ್ತಿದಾಯಕ ಸಂಗತಿಗಳು:
1. ಮಾನವ ಸಂಭಾಷಣೆಯ 65% ಗಾಸಿಪ್ ಆಗಿರುತ್ತದೆ.
ಡನ್‌ಬಾರ್ ಅವರ ತಂಡವು ಹಲವಾರು ದೇಶಗಳಲ್ಲಿ (ಕೆಫೆಗಳು, ಕಚೇರಿಗಳು, ರೈಲುಗಳು ಇತ್ಯಾದಿ ಸ್ಥಳಗಳಲ್ಲಿ) ಸಾವಿರಾರು ಗಂಟೆಗಳ ನೈಜ ಸಂಭಾಷಣೆಯನ್ನು ದಾಖಲಿಸಿತು. ಅದರಲ್ಲಿ ಸರಾಸರಿ 65% ಸಂಭಾಷಣೆ ಇತರ ಜನರ ಕುರಿತಾಗಿಯೇ ಇತ್ತು.
2. ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಗಾಸಿಪ್ ಮಾಡುತ್ತಾರೆ.
ಅಪವಾದಗಳನ್ನು ಹೊರತುಪಡಿಸಿ ಪುರುಷರು ಮತ್ತು ಮಹಿಳೆಯರು ಮಾತನಾಡುವ ವಿಷಯಗಳು ಬೇರೆ ಬೇರೆಯಾಗಿರುತ್ತವೆ. ಪುರುಷರು ಸಾಮಾನ್ಯವಾಗಿ ಸ್ಥಾನಮಾನ, ಸಾಧನೆಗಳು ಮತ್ತು ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಮತ್ತು ಮಹಿಳೆಯರು ಸಂಬಂಧಗಳು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಆದರೆ ಗಾಸಿಪ್ ಮಾಡುವ ಪ್ರಮಾಣ ಇಬ್ಬರಲ್ಲೂ ಒಂದೇ ಆಗಿರುತ್ತದೆ.
3. ಗಾಸಿಪ್‌ನಲ್ಲಿ ನಿಪುಣರಾಗಿರುವುದು ಉನ್ನತ ಸಾಮಾಜಿಕ ಬುದ್ಧಿಮತ್ತೆಯ ಸಂಕೇತವಾಗಿದೆ.
ಯಾರು ಏನು ಮಾಡಿದರು?, ಯಾರನ್ನು ನಂಬಬಹುದು?, ಯಾರು ಕೆಟ್ಟ ರೀತಿಯಲ್ಲಿ ವರ್ತಿಸುವ ಸಾಧ್ಯತೆ ಇದೆ? …. ಇವುಗಳನ್ನು ಅರ್ಥಮಾಡಿಕೊಳ್ಳಲು ಮನಸ್ಸಿನಲ್ಲಿ ಸಂಕೀರ್ಣವಾದ ಸಾಮಾಜಿಕ ನಕ್ಷೆಗಳನ್ನು ಹಿಡಿದಿಡಬೇಕು. ಡನ್‌ಬಾರ್ ಅವರ ಸಂಶೋಧನೆ, ಗಾಸಿಪ್ ಮಾಡುವ ಸಾಮರ್ಥ್ಯವನ್ನು ನೇರವಾಗಿ “ನಿಯೋಕಾರ್ಟೆಕ್ಸ್” ಎಂಬ ಮೆದುಳಿನ ಭಾಗದ ಗಾತ್ರದೊಂದಿಗೆ ಕನೆಕ್ಟ್ ಮಾಡುತ್ತದೆ — ಇದು ಸಂಕೀರ್ಣ ಚಿಂತನೆಯೊಂದಿಗೆ ಸಂಬಂಧಿಸಿದ ಭಾಗವಾಗಿದೆ.
4. ನಿಮ್ಮ ಮೆದುಳು ವಸ್ತುಗಳಿಗಿಂತ ಜನರನ್ನು ಹೆಚ್ಚು ಆಸಕ್ತಿದಾಯಕವಾಗಿ ಕಾಣುವಂತೆ ರೂಪುಗೊಂಡಿದೆ.
ನಾವು ಇತರ ಜನರ ಬಗ್ಗೆ ಮಾಹಿತಿಯನ್ನು ಸಂಸ್ಕರಿಸುವಾಗ, ನಮ್ಮ ಮೆದುಳಿನ ಒಂದು ವಿಶೇಷ ಭಾಗ ಸಕ್ರಿಯಗೊಳ್ಳುತ್ತದೆ. ಅದು ಕೇವಲ ವಾಸ್ತವಾಂಶಗಳು ಅಥವಾ ವಸ್ತುಗಳಿಗಾಗಿ ಅಷ್ಟಾಗಿ ಸಕ್ರಿಯವಾಗುವುದಿಲ್ಲ. ನಾವು ನ್ಯೂರಾಲಾಜಿಕಲೀ ಇತರ ಮನುಷ್ಯರ ಬಗ್ಗೆ ಆಸಕ್ತಿ ಹೊಂದುವಂತೆ ರೂಪಗೊಂಡಿದ್ದೇವೆ.
5. ಡನ್‌ಬಾರ್ ಸಂಖ್ಯೆ ಕೇವಲ 150 ಮಾತ್ರವಲ್ಲ — ಅದು ಒಂದು ಸಂಪೂರ್ಣ ಸರಣಿ.
* ಸಂಕಷ್ಟದ ಸಮಯದಲ್ಲಿ ಕರೆ ಮಾಡುವ 5 ಜನ
* ಅತ್ಯಂತ ಹತ್ತಿರದ 15 ಸ್ನೇಹಿತರು
* ಒಳ್ಳೆಯ 50 ಸ್ನೇಹಿತರು
* ಅರ್ಥಪೂರ್ಣ 150 ಸಂಬಂಧಗಳು
* ಪರಿಚಯದ 500 ಜನ
ಗಾಸಿಪ್ ಎನ್ನುವುದು ನಿಮ್ಮ ಮೆದುಳು ಈ ಪ್ರತಿಯೊಂದು ಸಂಬಂಧದ ಹಂತವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳುವ ಒಂದು ವಿಧಾನವಾಗಿದೆ.
ಗಾಸಿಪ್ ಇಲ್ಲದಿದ್ದರೆ, ಆ ಸಂಬಂಧಗಳು ನಿಧಾನವಾಗಿ ಒಂದರಲ್ಲೊಂದು ಸುಮ್ಮನೇ ಕರಗಿಹೋಗುತ್ತಿದ್ದವು.
6. ಆನ್‌ಲೈನ್ ಗಾಸಿಪ್ ಅದೇ ಅನುಭವವನ್ನು ನೀಡುವುದಿಲ್ಲ.
ಲೈಕ್ಸ್, ಕಾಮೆಂಟ್‌ಗಳು ಮತ್ತು ಡಿಎಮ್‌ಗಳು ನೈಜ ಸಮಯದ ಮುಖಾಮುಖಿ ಸಂಭಾಷಣೆಯಷ್ಟು “ಆಕ್ಸಿಟೋಸಿನ್” ಅನ್ನು ಬಿಡುಗಡೆ ಮಾಡುವುದಿಲ್ಲ.
ಆ ಬಂಧದ ಅನುಭವಕ್ಕೆ ನಿಜವಾದ ಸಾಮಾಜಿಕ ಹಾಜರಾತಿ ಅಗತ್ಯ. ಆದ್ದರಿಂದಲೇ, ನಿಮ್ಮ ಬಳಿ 5,000 ಫಾಲೋವರ್ಸ್ ಇದ್ದರೂ ಸಹ, ನೀವು ಒಳಗೊಳಗೆ ಒಂಟಿತನ ಅನುಭವಿಸಬಹುದು.
ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ನಿಮ್ಮ ಎದೆ ಬಡಿತ ತೀವ್ರವಾಗುತ್ತದೆ, ನೀವು ಒತ್ತಡಕ್ಕೊಳಗಾಗುತ್ತೀರಿ. ನಿಮ್ಮ ದೇಹ cortisol ನ ರಿಲೀಸ್ ಮಾಡುತ್ತದೆ. ಆದರೆ, ಈ ಬಗ್ಗೆ ನೀವು ಯಾರ ಜೊತೆಗಾದರೂ ಮಾಹಿತಿ ಹಂಚಿಕೊಂಡಾಗ, ನಿಮ್ಮ ಹೃದಯದ ಬಡಿತ ಮತ್ತೆ ನಾರ್ಮಲ್ ಆಗುತ್ತದೆ. ಆದ್ದರಿಂದ ಗಾಸಿಪ್ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಇಂಥ ಮಾಹಿತಿ ಹಂಚಿಕೊಳ್ಳುವಿಕೆಯನ್ನು ಗಾಸಿಪ್ ಎನ್ನುವ ಹೆಸರಿನಿಂದ ಅಪಮಾನ ಮಾಡದಿರೋಣ. ಬದಲಾಗಿ ಇದನ್ನ social information exchange ಎನ್ನೋಣ. ಆದರೆ ಮತ್ತೊಮ್ಮೆ ನೆನಪಿರಲಿ, ನಿಮ್ಮ ಗಾಸಿಪ್ ನಿಂದ ಇನ್ನೊಬ್ಬರ ಘನತೆಗೆ ಯಾವತ್ತೂ ಹಾನಿಯಾಗದಿರಲಿ.
********************************

