ನಮ್ಮ ದೇಹ ಮನಸುಗಳ ಸಂಬಂಧ ಅರ್ಥವಾದರೆ ಬುದ್ಧನ ಹಾಗೆ ಹೆಜ್ಜೆ ಹಾಕುವುದು ಅತಿ ಸುಲಭ, ಅತಿ ಸಂತೋಷದ ಸಂಗತಿಯಾಗುತ್ತದೆ. ನೀವು ಇಡುವ ಪ್ರತಿ ಹೆಜ್ಜೆಯೂ ಇಲ್ಲಿ, ಈಗ, ಈ ಕ್ಷಣಕ್ಕೆ ತಲುಪಿಸುತ್ತಿರುವ ಹೆಜ್ಜೆ ಎಂಬ ಅರಿವು ಅದು. ನಿಮ್ಮ ಪಾದ ಪೂರ್ತಿ ಎಚ್ಚರದ ಗಮನದಲ್ಲಿ ನೆಲವನ್ನು ಸೋಕಿದರೆ ಸಾಕು. ಮತ್ತೆ ಯಾವ ಪ್ರಯತ್ನವೂ ಬೇಡ.ಇಲ್ಲಿ, ಈ ಕ್ಷಣದಲ್ಲಿ ಇರುತ್ತೀರಿ. ತಟ್ಟನೆ ಸ್ವತಂತ್ರರಾಗುತ್ತೀರಿ. ಎಲ್ಲ ಪ್ರಾಜೆಕ್ಟು, ಎಲ್ಲ ಆತಂಕ, ಎಲ್ಲ ನಿರೀಕ್ಷೆ ಇಲ್ಲವಾಗುತ್ತವೆ. ಇಡಿಯಾಗಿ ಇರುತ್ತೀರಿ, ಪೂರ್ತಿಯಾಗಿ ಜೀವಂತವಾಗಿರುತ್ತೀರಿ. ಭೂಮಿಯನ್ನು ಸ್ಪರ್ಶಿಸುತ್ತಾ ಇರುತ್ತೀರಿ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.8: ಗಮನದ ಎಚ್ಚರ । ಬುದ್ಧನ ಹಾಗೆ ಹೆಜ್ಜೆ ಹಾಕಿ
ನಡಿಗೆ ಬೌದ್ಧರ ಧ್ಯಾನದ ಒಂದು ಮುಖ್ಯ ರೂಪ. ನಡೆಯುವುದು ಗಹನವಾದ ಆಧ್ಯಾತ್ಮಿಕ ಅನುಭವವಾಗಬಲ್ಲುದು. ಬುದ್ಧ ನಡೆಯುವಾಗ ನಿರಾಯಾಸವಾಗಿ, ಅಪ್ರಯತ್ನವಾಗಿ ಹೆಜ್ಜೆ ಹಾಕುತಿದ್ದ. ನಡೆಯುವುದರಲ್ಲಿ ಸಂತೋಷವಿತ್ತು ಅವನಿಗೆ. ಎಚ್ಚರದ ಗಮನದೊಂದಿಗೆ ಹೆಜ್ಜೆ ಹಾಕುವಾಗ ನಿಮ್ಮೊಳಗಿನ, ನಿಮ್ಮ ಸುತ್ತಲಿನ ಬದುಕಿನ ಅಚ್ಚರಿಗಳನ್ನು ಸ್ಪರ್ಶ ಮಾಡುತ್ತೀರಿ.
ನಡೆಯುವುದು ಅಭ್ಯಾಸವಲ್ಲದ ಅಭ್ಯಾಸ. ನಡೆಯುವುದಕ್ಕೆ ಪ್ರಯತ್ನಪಡುವುದು-ಇಲ್ಲ, ಹೆಣಗುವುದು-ಇಲ್ಲ. ಸಂತೋಷವಾಗಿ ನಡೆಯಿರಿ ಅಷ್ಟೇ. “ನಡೆಯುವುದು ನನ್ನ ಅಭ್ಯಾಸವಲ್ಲದ ಅಭ್ಯಾಸ. ಏನನ್ನೂ ಗಳಿಸದೆ ಇರುವುದನ್ನು ಗಳಿಸುವ ನಡಿಗೆ ಅದುʼ ಎಂದು ಬುದ್ಧ ಹೇಳಿದ್ದ.
ನಿರಾಯಾಸವಾದ ಎಚ್ಚರದ ಗಮನ, ಧ್ಯಾನಗಳು ನಮ್ಮಲ್ಲಿ ಅನೇಕರಿಗೆ ಬಹಳ ಕಷ್ಟವನಿಸುತ್ತವೆ. ಯಾಕೆಂದರೆ ನಾವು ಹೆಜ್ಜೆ ಹಾಕುತಿದ್ದರೂ ನಮ್ಮ ಮನಸ್ಸು ಮಾತ್ರ ಇನ್ನೆಲ್ಲೋ ಇರುತ್ತದೆ. ನಾವು ಇಡಿಯಾಗಿ, ಪೂರ್ಣ ಎಚ್ಚರದೊಡನೆ ನಡೆಯುವುದಿಲ್ಲ. ನಮ್ಮ ದೇಹ ಮತ್ತು ನಮ್ಮ ಮನಸ್ಸು ಎರಡೂ ಬೇರೆ ಬೇರೆ ಎಂದೇ ನಮಗೆ ಕಾಣುತ್ತವೆ. ನಮ್ಮ ಕಾಲು ಒಂದು ದಿಕ್ಕಿಗೆ ಹೋಗುತ್ತಿರುವಾಗ ನಮ್ಮ ಮನಸು ಇನ್ನೊಂದು ದಿಕ್ಕಿನಲ್ಲಿ ಅಲೆಯುತ್ತಿರುತ್ತದೆ.
ಬುದ್ಧನಿಗಾದರೋ ಮನಸು ದೇಹಗಳು ಎರಡೂ ಒಂದೇ ಜೀವದ ಎರಡು ಅಂಶಗಳು, ನೋಟಗಳು. ಒಂದು ಹೆಜ್ಜೆಯ ಮುಂದೆ ಇನ್ನೊಂದು ಹೆಜ್ಜೆಯನ್ನು ಇಡುವ ಸರಳವಾದ ಕೆಲಸ ನಮಗೆ ಕಷ್ಟದ್ದು, ದಣಿವಿನದು ಅನಿಸುತ್ತದೆ. ನೂರು ಇನ್ನೂರು ಅಡಿ ದೂರಕ್ಕೆ ವಾಹನದಲ್ಲಿ ಹೋಗಿ ಸಮಯ ಉಳಿಸಲು ಬಯಸುತ್ತೇವೆ.
ನಮ್ಮ ದೇಹ ಮನಸುಗಳ ಸಂಬಂಧ ಅರ್ಥವಾದರೆ ಬುದ್ಧನ ಹಾಗೆ ಹೆಜ್ಜೆ ಹಾಕುವುದು ಅತಿ ಸುಲಭ, ಅತಿ ಸಂತೋಷದ ಸಂಗತಿಯಾಗುತ್ತದೆ. ನೀವು ಇಡುವ ಪ್ರತಿ ಹೆಜ್ಜೆಯೂ ಇಲ್ಲಿ, ಈಗ, ಈ ಕ್ಷಣಕ್ಕೆ ತಲುಪಿಸುತ್ತಿರುವ ಹೆಜ್ಜೆ ಎಂಬ ಅರಿವು ಅದು. ನಿಮ್ಮ ಪಾದ ಪೂರ್ತಿ ಎಚ್ಚರದ ಗಮನದಲ್ಲಿ ನೆಲವನ್ನು ಸೋಕಿದರೆ ಸಾಕು. ಮತ್ತೆ ಯಾವ ಪ್ರಯತ್ನವೂ ಬೇಡ.ಇಲ್ಲಿ, ಈ ಕ್ಷಣದಲ್ಲಿ ಇರುತ್ತೀರಿ. ತಟ್ಟನೆ ಸ್ವತಂತ್ರರಾಗುತ್ತೀರಿ. ಎಲ್ಲ ಪ್ರಾಜೆಕ್ಟು, ಎಲ್ಲ ಆತಂಕ, ಎಲ್ಲ ನಿರೀಕ್ಷೆ ಇಲ್ಲವಾಗುತ್ತವೆ. ಇಡಿಯಾಗಿ ಇರುತ್ತೀರಿ, ಪೂರ್ತಿಯಾಗಿ ಜೀವಂತವಾಗಿರುತ್ತೀರಿ. ಭೂಮಿಯನ್ನು ಸ್ಪರ್ಶಿಸುತ್ತಾ ಇರುತ್ತೀರಿ.
ನೀವು ಒಬ್ಬರೇ ಸಾವಕಾಶ ನಡಿಗೆಯ ಧ್ಯಾನವನ್ನು ಅಭ್ಯಾಸ ಮಾಡುತಿದ್ದರೆ ಹೀಗೆ ಮಾಡಿನೋಡಿ: ಉಸಿರೆಳೆದುಕೊಳ್ಳಿ. ಒಂದು ಹಜ್ಜೆ ಇಡಿ. ನಿಮ್ಮ ಇಡೀ ಗಮನ ನಿಮ್ಮ ಪಾದದ ಮೇಲಿರಲಿ. ನೀವು ನೂರಕ್ಕೆ ನೂರು ಈ ಕ್ಷಣ, ಇಲ್ಲಿ ಇರದಿದ್ದರೆ ಮುಂದಿನ ಹಜ್ಜೆ ಇಡಬೇಡಿ. ಅಂಥ ಲಕ್ಷುರಿ ನಿಮಗೆ ಇರುತ್ತದೆ. ನೂರಕ್ಕೆ ನೂರು ಇಲ್ಲಿ, ಈಗ ಇದ್ದೀರಿ ಎಂದು ಖಚಿತವಾದಾಗ ಮುಂದಿನ ಹೆಜ್ಜೆ ಇಡಿ. ಹೀಗೆ ನಡೆಯುವಾಗ ನಡಿಗೆ ಸ್ಥಿರವಾಗಿರುತ್ತದೆ, ನಿಮ್ಮ ಸ್ವಾತಂತ್ರ್ಯ, ನೆಲದ ಮೇಲೆ ಊರಿರುವ ನಿಮ್ಮ ಸಂತೋಷ ಅರಿವಾಗುತ್ತದೆ. ನಿಮ್ಮ ಒಂದೊಂದು ಹಜ್ಜೆಯೂ ಚಕ್ರವರ್ತಿಯ ಮುದ್ರೆ. ನಿಮ್ಮ ಹೆಜ್ಜೆಯ ಗುರುತು ನಿಮ್ಮ ಸ್ವಾತಂತ್ರ್ಯ, ನಿಮ್ಮ ಸ್ಥಿರತೆ, ನಿಮ್ಮ ಸಂತೋಷ, ನಿಮ್ಮ ಜೀವಂತಿಕೆಯ ಗುರುತು ಆಗಿರುತ್ತದೆ.
ನಿಮ್ಮೊಳಗೆ ಬುದ್ಧ ಇರುವುದರಿಂದ ಹೀಗೆ ಹೆಜ್ಜೆ ಹಾಕುವುದು ನಿಮಗೆ ಸಾಧ್ಯ. ಈ ನಂಬಿಕೆ ನನಗಿದೆ. ಏನು ಆಗುತ್ತಿದೆ ಎಂಬುದ್ನು ಅರಿಯುವ ಬುದ್ಧ ಸ್ವಭಾವ ಎಲ್ಲರಲ್ಲೂ ಇದೆ. ಏನಾಗುತ್ತದೆ ಅಂದರೆ ನಾನು ಜೀವಂತವಾಗಿರುವೆ, ನಾನು ಹಜ್ಜೆ ಇಡುತಿರುವೆ, ನಾನು ವ್ಯಕ್ತಿ, ನಾನು ಮನುಷ್ಯ ಜೀವಿ. ಹೀಗೆ ಇರುವುದು ನನಗೆ ಸಾಧ್ಯ. ನಮ್ಮೆಲ್ಲರ ಒಳಗೂ ಇರುವ ಬುದ್ಧ ಬುದ್ಧನ ಹಾಗೆನಡೆಯಲು ನಾವು ಅವಕಾಶ ಮಾಡಿಕೊಡಬೇಕು.
*
[ಇದನ್ನು ಓದುತ್ತ ಅನುವಾದ ಮಾಡುತ್ತ ಇರುವಾಗ ಅಲ್ಲಮನ ವಚನ ನೆನಪಿಗೆ ಬಂದಿತು.
ನಾನು ಅನುವಾದ ಮಾಡುವ ಕ್ಷಣದಲ್ಲಿ ಇರಲಿಲ್ಲವೋ ಅಥವಾ ಅಲ್ಲಮನೂ ಟಿಕ್ ನಾಟ್ ಹಾನ್ ಮತ್ತು ಬುದ್ಧರೂ ಒಟ್ಟಿಗೆ ಅರಿವಾಗುತ್ತಿದ್ದರೋ!
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ
ತಾನಾಗಬಾರದು._ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ
ಪೂರ್ಣ ಗಮನದ ಎಚ್ಚರದಲ್ಲಿ ಒಂದು ಹೆಜ್ಜೆ ಇರಿಸಿ ಮುಗಿದ ಮೇಲಷ್ಟೇ ಮತ್ತೆ ಅದೇ ಥರದ ಗಮನ, ಎಚ್ಚರದಲ್ಲಿ ಇನ್ನೊಂದು ಹೆಜ್ಜೆ ಇಡುತ್ತಾ ಇಲ್ಲಿ, ಈಗ, ನೆಲದ ಮೇಲೆ “ನೆಲೆ”ಯಾಗಿದ್ದರೆ ಮಾತ್ರ ಮನದ ಮುಗಿಲಲ್ಲಿ ಅರಿವಿನ ಮಿಂಚು ಅನ್ನುತಿದೆಯೋ ಈ ವಚನ!
ಇದಕ್ಕಿಂತ ಭಿನ್ನವಾದ ಅಲ್ಲಮನ ಮಾತು ಕೂಡ ಇದೆ: “ಮನದ ಕಾಲತ್ತಲು ತನುವಿನ ಕಾಲಿತ್ತಲು./ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು” ಬಹಳಷ್ಟು ಮನುಷ್ಯರ ನಡೆವ ರೀತಿಯ ಚಿತ್ರಣ ಇದು ಅನಿಸುತ್ತದೆ.

