ಮುಳ್ಳುಹಂದಿಯ ದ್ವಂದ್ವ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಗಮನಿಸಿದ್ದೀರಾ? ನೀವು ಒಂಟಿಯಾಗಿದ್ದಾಗ ನಿಮಗೆ ಯಾರಾದರೂ ಜೊತೆಯಾಗಬೇಕು ಅನಿಸುತ್ತದೆ. ನಿಮ್ಮನ್ನು ಅರ್ಥಮಾಡಿಕೊಳ್ಳುವವರು, ನಿಮ್ಮನ್ನು ಪ್ರೀತಿಸುವವರು ಹತ್ತಿರ ಇರಬೇಕು ಅನಿಸುತ್ತದೆ.  ಆದರೆ ಒಬ್ಬ ವ್ಯಕ್ತಿ ನಿಮಗೆ ಹತ್ತಿರವಾದಾಗ, ನಿಮ್ಮ ಕುರಿತು ಕಾಳಜಿ ಮಾಡಲು ಶುರು ಮಾಡಿದಾಗ, ಇನ್ನೂ ನಿಮ್ಮ ಹತ್ತಿರ ಬರಲು ಬಯಸಿದಾಗ, ಆಗಲೂ ಕೂಡ ನಿಮಗೆ ಹೆದರಿಕೆಯಾಗುತ್ತದೆ. ಏಕೆಂದರೆ ಆ ವ್ಯಕ್ತಿಯಲ್ಲಿ ನಿಮಗೆ ಏನಾದರೊಂದು ಕೊರತೆ ಕಾಣಲು ಶುರುವಾಗುತ್ತದೆ. ಸಣ್ಣ ಸಣ್ಣ ಸಂಗತಿಗಳನ್ನು ಮುಂದಿಟ್ಟುಕೊಂಡು ನೀವು ಮಧ್ಯೆ ಗೋಡೆಯನ್ನು ಕಟ್ಟಿಕೊಳ್ಳುತ್ತೀರಿ. ಆಗ ನಿಮ್ಮ ಜೀವನದಲ್ಲಿ ಒಂಟಿತನ ಮತ್ತೆ ದಾಖಲಾಗುತ್ತದೆ.

ನಿಮ್ಮೊಳಗಿನ ಈ ವಿಚಿತ್ರ ಭಯದ ಕಾರಣ ಏನು? ನಿಮಗೆ ಒಂಟಿತನದಿಂದಲೂ ಭಯ, ಸಂಗಾತದಿಂದಲೂ ಭಯ. 1851 ರಲ್ಲಿ ಜರ್ಮನಿ ತತ್ವಜ್ಞಾನಿ Arthur Schopenhauer ಈ ವಿಷಕಾರಿ ಮನುಷ್ಯ ವರ್ತನೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದ. ಮತ್ತು ಮನುಷ್ಯನ ಈ ದ್ವಂದ್ವಕ್ಕೆ ಅವನು The Porcupine dilemma ಹೆಸರಿಟ್ಟ.

ಒಂದು ಮುಳ್ಳುಹಂದಿಗಳ ಗುಂಪನ್ನು ಕಲ್ಪನೆ ಮಾಡಿಕೊಳ್ಳಿ ಮತ್ತು ಸುತ್ತಲೂ ಕೊರೆಯುವ ಚಳಿ. ಈ ಥಂಡಿಯಿಂದ ತಪ್ಪಿಸಿಕೊಳ್ಳಲು ಆ ಮುಳ್ಳುಹಂದಿಗಳು ಪರಸ್ಪರ ಹತ್ತಿರ ಬರಲು ಬಯಸುತ್ತವೆ. ಆದರೆ ಅವು ಒಂದಕ್ಕೊಂದು ಹತ್ತಿರವಾಗುತ್ತಿದ್ದಂತೆಯೇ ಅವುಗಳ ಮುಳ್ಳುಗಳು ಪರಸ್ಪರ ಚುಚ್ಚಲು ಶುರುಮಾಡುತ್ತವೆ. ಈ ನೋವು ಎಷ್ಟು ಭೀಕರವಾಗಿರುತ್ತದೆಯೆಂದರೆ ಅವು ಮತ್ತು ದೂರ ಸರಿಯುತ್ತವೆ. ದೂರವಾದುತ್ತಿದ್ದಂತೆಯೇ ಮತ್ತೆ ಥಂಡಿ ಅವುಗಳನ್ನು ಕಾಡಲು ಶುರು ಮಾಡುತ್ತದೆ. ಅವು ಚಳಿಯಿಂದ ನಡುಗಲು ಶುರುಮಾಡುತ್ತವೆ. ಹೀಗೆ ಅವು ಈ ದುಃಖಭರಿತ ಸಂಕಟದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಹತ್ತಿರಬಂದರೆ ರಕ್ತ ಸುರಿಯುತ್ತದೆ, ಮತ್ತು ದೂರಾದರೆ ಥಂಡಿ ಆವರಿಸಿಕೊಳ್ಳುತ್ತದೆ.

Schopenhauer ನ ಪ್ರಕಾರ ಮನುಷ್ಯನ ಇಂಟಿಮಸಿಯ ಪರಿಸ್ಥಿತಿಯೂ ಥೇಟ್ ಇದೇ ಥರ. ನಾವು ಮನುಷ್ಯರು ಒಂಟಿತನದ ಥಂಡಿಯಲ್ಲಿ ನಡುಗುತ್ತೇವೆ, ನಮಗೆ ಇನ್ನೊಬ್ಬರ ಬೆಚ್ಚನೆಯ ಸಂಗಾತ ಬೇಕೆನಿಸುತ್ತದೆ. ಆದರೆ ಪ್ರತಿ ವ್ಯಕ್ತಿ ನಮ್ಮ ಹತ್ತಿರ ತನ್ನ ಹರಿತ ಮುಳ್ಳುಗಳೊಂದಿಗೆ ಬರುತ್ತಾನೆ. Trauma, ಅಸುರಕ್ಷತೆ, ದ್ರೋಹ, ವಿಷಕಾರಿ ಹವ್ಯಾಸ ಇತ್ಯಾದಿ ಮುಳ್ಳುಗಳು. ನಾವು ಹತ್ತಿರವಾಗುತ್ತಿದ್ದಂತೆಯೇ ನಮಗೆ ಬೆಚ್ಚನೆ ಸ್ಪರ್ಶದ ಜೊತೆ ಈ ಮುಳ್ಳುಗಳೂ ಚುಚ್ಚಲು ಶುರು ಮಾಡುತ್ತವೆ. ನಮಗೆ ಇನ್ನೊಬ್ಬರೊಂದಿಗೆ ಆಳ ಸಂಪರ್ಕದ ಬಯಕೆ ಇದೆ ನಿಜ ಆದರೆ ನಾವು ಈ ಸಂಬಂಧವನ್ನು ಮೇಲುಮೇಲಿನದಾಗಿ, ತೆಳುವಾಗಿ ಇಡುತ್ತೇವೆ. ನಮಗೆ ಸಂಗಾತದ ಬಿಸಿ ಬೇಕು ಆದರೆ ಆ ವ್ಯಕ್ತಿ ನಮಗೆ ತೀರ ಹತ್ತಿರವಾಗಿಬಿಟ್ಟರೆ  ಎಲ್ಲಿ ಅವರಿಗೆ ನಮ್ಮ ದೌರ್ಬಲ್ಯಗಳು ಗೊತ್ತಾಗಿಬಿಡುತ್ತವೆ ಎನ್ನುವ ಭಯ ನಮಗೆ ಶುರುವಾಗುತ್ತದೆ. ಆದ್ದರಿಂದ ಜನ ಒಂದು ಸುರಕ್ಷಿತ ದೂರವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಈ ದೂರ ಎಷ್ಟೆಂದರೆ ಒಂಟಿತನದ ಅನುಭವವೂ ಆಗಬಾರದು ಮತ್ತು ನಮಗೆ ಅವರ ಮುಳ್ಳುಗಳೂ ಚುಚ್ಚಬಾರದು.

ಈ ಕಾರಣವಾಗಿಯೇ casual relationship, Situation-ship, friends with benefits ಮುಂತಾದ ಇತ್ತೀಚಿನ ವಹಿವಾಟುಗಳು ಹುಟ್ಟಿಕೊಂಡಿರೋದು. ನಾವೆಲ್ಲರೂ ಮುಳ್ಳುರಹಿತ ಪರಿಪೂರ್ಣ ಸಂಗಾತಿಯನ್ನು ಬಯಸುತ್ತೇವೆ. ಆದರೆ ಈ ಮುಳ್ಳುಗಳನ್ನು ನಾವು ಕೂಡ ಹೊಂದಿರುವುದನ್ನು ಮರೆತುಬಿಡುತ್ತೇವೆ. ಈ ಮುಳ್ಳುಗಳ ಕಾರಣವಾಗಿಯೇ ನಾವು ಇನ್ನೊಬ್ಬರ ನೋವಿಗೆ ಕಾರಣವಾಗುತ್ತೇವೆ. ಪ್ರೀತಿಯ ಅರ್ಥ, ನಿಮ್ಮನ್ನು ಹರ್ಟ್ ಮಾಡದ ವ್ಯಕ್ತಿಯನ್ನು ಹೊಂದುವುದಲ್ಲ, ಇಂಥ ವ್ಯಕ್ತಿ ಅಸ್ತಿತ್ವದಲ್ಲಿಯೇ ಇಲ್ಲ. ಪ್ರೀತಿ ಎಂದರೆ, ಯಾರ ಬೆಚ್ಚಗಿನ ಸಂಗಾತ ಅವರ ಮುಳ್ಳಿನ ನೋವಿಗಿಂತ ನಮಗೆ ಹೆಚ್ಚು ಆಪ್ತವೋ, ಅಂಥ ವ್ಯಕ್ತಿಯನ್ನು ಹೊಂದುವುದು.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.