ನಾವು ಏನು ಹುಡುಕುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲದಿದ್ದರೆ, ಅದನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಿಮ್ಮ ರಿಲೇಷನ್ ಶಿಪ್ ಗೆ ಈಗ ಮೂರು ವರ್ಷ, ನಿಮ್ಮ ಸಂಗಾತಿ ನಿಮ್ಮನ್ನು ಕೇಳುತ್ತಾಳೆ, “ನೀನು ಸಂತೋಷವಾಗಿದ್ದೀಯಾ?” ನೀವು ಉತ್ತರಿಸಲು ಬಾಯಿ ತೆರೆಯುತ್ತೀರಿ, ಆದರೆ ಮಾತು ಹೊರಬರುವುದಿಲ್ಲ.
ಅದು ಸಂಪೂರ್ಣವಾಗಿ “ಹೌದು” ಅಲ್ಲ.
ಅದು ಸಂಪೂರ್ಣವಾಗಿ “ಇಲ್ಲ” ಕೂಡ ಅಲ್ಲ.
ನೀವು ಹುಡುಕುತ್ತಿರುವ ಒಂದು ಉತ್ತರ ಇದೆ, ಆದರೆ ಅದನ್ನು ಹಿಡಿದುಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ.
ಪ್ಲೇಟೋನ ಪ್ರಕಾರ, 2500 ವರ್ಷಗಳ ಹಿಂದೆ, ಆ ಭಾವನೆ ತತ್ತ್ವಶಾಸ್ತ್ರದಲ್ಲಿನ ಅತ್ಯಂತ ಮಹತ್ವದ ಪ್ರಶ್ನೆಗಳಲ್ಲೊಂದಾಗಿತ್ತು.
Meno’s Paradox ಹೇಳುವುದೇನೆಂದರೆ —
ನಾವು ಏನು ಹುಡುಕುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲದಿದ್ದರೆ, ಅದನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಒಳ್ಳೆಯ ಸಂಬಂಧ ಹೇಗಿರಬೇಕು ಎನ್ನುವುದೇ ನಿಮಗೆ ಗೊತ್ತಿಲ್ಲದಿದ್ದರೆ, ನೀವು ಅದನ್ನು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ನಿಮಗೆ ಯಾವ ಕೆಲಸ ಬೇಕು ಎನ್ನುವುದೇ ಗೊತ್ತಿಲ್ಲದಿದ್ದರೆ, ಅದನ್ನು ಹುಡುಕುವುದು ಸಾಧ್ಯವಿಲ್ಲ. ಮತ್ತು ಸಂತೋಷ ಹೇಗಿರುತ್ತದೆ ಎನ್ನುವುದೇ ನಿಮಗೆ ಗೊತ್ತಿಲ್ಲದಿದ್ದರೆ, ಅದರ ಕಡೆಗೆ ಸಾಗುವುದು ಸಾಧ್ಯವಿಲ್ಲ.
ಈ ಸಮಸ್ಯೆಗೆ ನಾವು ಉತ್ತರವನ್ನು ಎರಡು ಹಂತಗಳಲ್ಲಿ ಕಂಡುಕೊಳ್ಳಬಹುದು. ಮೊದಲ ಹಂತವೆಂದರೆ, ನಾವು ಒಂದು ಮಾದರಿಯನ್ನು (prototype) ಕಂಡುಕೊಳ್ಳುವುದು. “ನಾನು ಸಂತೋಷವಾಗಿದ್ದೀನೆಯೇ?” ಎಂದು ಕೇಳಿಕೊಳ್ಳಬೇಡಿ. ಬದಲಾಗಿ, “ಕೊನೆಯದಾಗಿ ನಾನು ಯಾವಾಗ ನಿಜವಾಗಿಯೂ ಸಂತೋಷವಾಗಿದ್ದೆ?” ಎಂದು ಕೇಳಿ. ಆ ಬೆಳಿಗ್ಗೆ ನಾನು ಸಂತೋಷವಾಗಿದ್ದಾಗ, ಅಲ್ಲಿ ಯಾರು ಇದ್ದರು? ಏನು ನಡೆಯುತ್ತಿತ್ತು? ಆ ಮಧ್ಯಾಹ್ನ ನಾನು ದುಃಖಿತನಾಗಿದ್ದಾಗ, ಆಗ ಏನು ನಡೆಯುತ್ತಿತ್ತು? ಇತ್ಯಾದಿಯಾಗಿ ಪ್ರಶ್ನೆ ಮಾಡಿಕೊಳ್ಳಿ.
ಎರಡನೇ ಹಂತವೆಂದರೆ — ಆ ಮಾದರಿಯನ್ನು ಜೀವನದ ವಾಸ್ತವಿಕ ಜಗತ್ತಿನಲ್ಲಿ ಪರೀಕ್ಷಿಸುವುದು.
ಮತ್ತೊಮ್ಮೆ ಒಂದು ವಾರ ಅದೇ ರೀತಿಯಲ್ಲಿ ಬದುಕಿ ನೋಡಿ, ಫಲಿತಾಂಶಗಳು ಮತ್ತೆ ಅದೇ ಆಗುತ್ತವೆಯೇ ಎನ್ನುವುದನ್ನ ಗಮನಿಸಿ. ಆದರೆ, ಇದು ಕೇವಲ ಸಂತೋಷದ ಬಗ್ಗೆ ಮಾತ್ರ ಅಲ್ಲ! ಇದು ಜೀವನದ ಯಾವುದೇ ದೊಡ್ಡ ನಿರ್ಧಾರದ ಬಗ್ಗೆ.
ನೀವು ಈ ಕೆಲಸದಲ್ಲೇ ಮುಂದುವರಿಯಬೇಕೇ, ಬೇಡವೇ ಎಂದು ಯೋಚಿಸುವ ಕ್ಷಣಗಳ ಬಗ್ಗೆ.
ನೀವು ಈ ವ್ಯಕ್ತಿಯನ್ನು ನಿಜವಾಗಿಯೂ ಪ್ರೀತಿಸುತ್ತೀರಾ ಅಥವಾ ಇಲ್ಲವಾ ಎಂದು ಪ್ರಶ್ನಿಸಿಕೊಳ್ಳುವ ಸಂದರ್ಭಗಳ ಬಗ್ಗೆ. ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು, ಒಂದು ಅಸ್ಪಷ್ಟ ಚಿತ್ರವನ್ನು ಮನಸ್ಸಿನಲ್ಲಿ ಕಟ್ಟಿಕೊಂಡು, ಅದನ್ನು ಜೀವನದ ಜಗತ್ತಿನೊಳಗೆ ತೆಗೆದುಕೊಂಡು ಹೋಗಿ, ನಂತರ ಆ ಚಿತ್ರಕ್ಕೆ ಜಗತ್ತು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನ ಗಮನಿಸುವುದರ ಮೂಲಕ.
ನಿಮಗೆ ತಿಳಿಯದೇ ಇರುವ ವಸ್ತುಗಳನ್ನು, ಸಂಗತಿಗಳನ್ನ ಹುಡುಕಲು ಹೊರಡಬೇಡಿ. ಬದಲಾಗಿ, ನಿಮಗೆ ಏನು ಇಷ್ಟ, ನೀವು ಯಾವುದಕ್ಕೆ ಬೆಲೆಕಟ್ಟುತ್ತೀರಿ, ಮತ್ತು ನಿಜವಾಗಿಯೂ ನಿಮಗೆ ಏನು ಬೇಕು ಎನ್ನುವುದನ್ನು ಮೊದಲು ಅರಿತುಕೊಳ್ಳಿ. ಆ ಬಳಿಕ, ಆ ಅರಿವಿನ ಆಧಾರದ ಮೇಲೆ ನಿಮ್ಮ ಉಳಿದ ಜೀವನವನ್ನು ಕಟ್ಟಿಕೊಳ್ಳಿ.

