ಭೂಮಿ ಸ್ಪರ್ಶ: ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #1.9

ನಿಮ್ಮಲ್ಲೂ ದುಃಖ, ಅಸಮಾಧಾನ ಮೂಡಿದಾಗ ಭೂಮಿಯ ಮೊರೆ ಹೋಗಿ. ಭೂಮಿಯ ನೆರವು ಕೇಳಿ. ಬುದ್ಧನಿಗೆ ನೀಡಿದ ಹಾಗೆಯೇ ನಿಮಗೂ ತನ್ನ ಸೃಷ್ಟಿಯನ್ನು ಉಡುಗೊರೆಯಾಗಿ ಕೊಡುತ್ತಾಳೆ. ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿನ  ಸಂತೋಷ ದೊರೆಯುತ್ತದೆ… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 1.9: ಗಮನದ ಎಚ್ಚರ  ಭೂಮಿ ಸ್ಪರ್ಶ

ನಾನು ಅನುಸರಿಸುವ ಬುದ್ಧ ಪರಂಪರೆಯಲ್ಲಿ “ಭೂಮಿ  ಸ್ಪರ್ಶ”ವೆಂಬ ಅಭ್ಯಾಸವನ್ನು ದಿನವೂ ಮಾಡುತ್ತೇವೆ. ಇದನ್ನು ಅನುಸರಿಸುವುದರಿಂದ ನಿಮಗೂ ಸಹಾಯವಾಗಬಹುದು.

ನಿಮ್ಮ ಮನಸು ಚಡಪಡಿಸುತಿರುವಾಗ, ಆತ್ಮವಿಶ್ವಾಸ ಕಡಿಮೆಯಾಯಿತು ಅನಿಸಿದಾಗ, ಸಿಟ್ಟೋ ಅಸಮಾಧಾನವೋ ಇರುವಾಗ ನೀವು ಮೊಳಕಾಲೂರಿ, ನಿಮ್ಮ ಕೈಯಿಂದ ನೆಲವನ್ನು ಗಾಢವಾಗಿ ಸ್ಪರ್ಶಿಸಿ. ನೆಲವು ನಿಮ್ಮ ಪ್ರಿಯ ವಸ್ತು, ನಿಮ್ಮ ಆತ್ಮೀಯ ಸಂಗಾತಿ ಅನ್ನುವ ಭಾವ ನಿಮ್ಮ ಸ್ಪರ್ಶದಲ್ಲಿರಲಿ.

ಎಷ್ಟೋ ಕಾಲದಿಂದ ಇದ್ದೇ ಇರುವ ಭೂಮಿ ನಮ್ಮೆಲ್ಲರ ತಾಯಿ. ಭೂಮಿಗೆ ಎಲ್ಲವೂ ಗೊತ್ತು. ಬುದ್ಧನಲ್ಲಿ ಅರಿವಿನ ಎಚ್ಚರ ಮೂಡುವ ಮುನ್ನ ಯಾವುದೇ ಸಂಶಯ, ಭಯ ಮನಸಿನಲ್ಲಿ ಮೂಡಿದಾಗ ಭೂಮಿಯನ್ನು ತನ್ನ ಸಾಕ್ಷಿಯಾಗಿರುವಂತೆ ಕೋರುತ್ತಿದ್ದ. ಭೂಮಿ ತಾಯಿಯಾಗಿ ಅವನೆದುರು ಕಾಣಿಸಿಕೊಳ್ಳುತಿದ್ದಳು. ಹೂ, ಹಣ್ಣು, ಪ್ರಾಣಿ, ಪಕ್ಷಿ, ಚಿಟ್ಟೆಗಳ ಉಡುಗೊರೆ ನೀಡುತಿದ್ದಳು. ಬುದ್ಧನ ಸಂಶಯ, ಭಯಗಳು ತಟ್ಟನೆ ಮಾಯವಾಗುತಿದ್ದವು.

ನಿಮ್ಮಲ್ಲೂ ದುಃಖ, ಅಸಮಾಧಾನ ಮೂಡಿದಾಗ ಭೂಮಿಯ ಮೊರೆ ಹೋಗಿ. ಭೂಮಿಯ ನೆರವು ಕೇಳಿ. ಬುದ್ಧನಿಗೆ ನೀಡಿದ ಹಾಗೆಯೇ ನಿಮಗೂ ತನ್ನ ಸೃಷ್ಟಿಯನ್ನು ಉಡುಗೊರೆಯಾಗಿ ಕೊಡುತ್ತಾಳೆ. ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿನ  ಸಂತೋಷ ದೊರೆಯುತ್ತದೆ.

ಭೂಮಿಯ ಪ್ರೀತಿ, ಸಹನೆ ನಿಮಗೆ ದೊರೆಯುತ್ತವೆ. ನಿಮ್ಮ ವೇದನೆ ಭೂಮಿಗೆ ತಿಳಿಯುತ್ತದೆ. ನಿಮಗೆ ಸಹಾಯ ಮಾಡುತ್ತಾಳೆ. ನಿಮ್ಮನ್ನು ಕಾಪಾಡುತ್ತಾಳೆ. ನಾವು ಸತ್ತಮೇಲೆ ಭೂಮಿಯ ತೋಳ ತೆಕ್ಕೆಗೆ ಮರಳುತ್ತೇವೆ. ಭೂಮಿಯೊಡನೆ ನಾವು ಸದಾ ಕ್ಷೇಮವಾಗಿರುತ್ತೇವೆ.

ಭೂಮಿ ಯಾವಾಗಲೂ ಇದ್ದೇ ಇರುತ್ತದೆ. ಮರ, ಹೂವು, ಚಿಟ್ಟೆ, ಬೆಳಕು, ಬಿಸಿಲಿನಂತ ಬೆರಗು ಹುಟ್ಟಿಸುವ ರೂಪಗಳಲ್ಲಿ ಕಾಣುತ್ತಾಳೆ. ಭೂಮಿ ಸ್ಪರ್ಶ ನಿಮಗೆ ಮರುಚೈತನ್ಯ ನೀಡುವ, ಆನಂದ ತರುವ ಅಭ್ಯಾಸ.

*

ಈ  ಭಾಗ ಅನುವಾದ ಮಾಡುತ್ತ  ಈ ಕೆಲವು ಸಂಗತಿ ನೆನಪಾದವು:

ಶಿಕಾರಿಪುರದ ಹತ್ತಿರದ  ಹಳ್ಳಿಯಲ್ಲಿ ಹುಟ್ಟಿದ ನನ್ನ ಗೆಳೆಯ ಪ್ರೊಫೆಸರ್‌ ಆದಾಗಲೂ “ಭೂಮ್ತಾಯಾಣೆಗೂ”, “ಭೂಮ್ತಾಯಿ ಸತ್ಯ” ಅನ್ನುವ  ನುಡಿಗಟ್ಟು ಬಳಸುತ್ತಿದ್ದ.

ಬೇಂದ್ರೆ ಕವಿತೆಯಲ್ಲಿ ಭೂಮಿ ಹೇಳುವ ಮಾತು: “ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ” ಸ್ಥಿರೆ ಅಥವಾ ಕನ್ನಡದಲಿ “ತಿರೆʼ: ಎಂಬುದು ಭೂಮಿಯ ಹೆಸರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.