ಗಮನವಿರಿಸಿ ಬದುಕುವುದು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #1.10

ನಾನು ಬೋಧನೆಯ ಕಾರ್ಯ ಶುರು ಮಾಡುವ ಮೊದಲು “ನನಗೆ ಇವತ್ತು ಯಾವ ಪ್ರಶ್ನೆಗಳು ಎದುರಾಗಬಹುದು?” ಎಂದು ಯೋಚಿಸುವುದಿಲ್ಲ. ನನ್ನ ಕೋಣೆಯಿಂದ ಬೋಧನೆಯ ಕೊಠಡಿಯವರೆಗೆ ಇಡುವ ಪ್ರತಿ ಹೆಜ್ಜೆಯಲ್ಲೂ ಸಂತೋಷ ಅನುಭವಿಸುತ್ತಾ ನಡೆಯುತ್ತೇನೆ. ಅಲ್ಲಿಗೆ ತಲುಪಿದಾಗ ಪ್ರಶ್ನೆಗಳಿಗೆ ಉತ್ತರ ಹೇಳಲು ಸಿದ್ಧವಾಗಿರುತ್ತೇನೆ… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 1.10: ಗಮನದ ಎಚ್ಚರ  ಗಮನವಿರಿಸಿ ಬದುಕುವುದು

ಬೆಳಗಿನ ಉಪಾಹಾರ ಮಾಡುವಾಗ ಆ ಉಪ-ಆಹಾರವನ್ನು ಸಾಧ್ಯವಾದಷ್ಟೂ ಸ್ವತಂತ್ರ ಭಾವದಲ್ಲಿ ಸೇವಿಸಿ. ಉಪಾಹಾರ ಮಾಡುತಿರುವಾಗ ಭವಿಷ್ಯದ ಬಗ್ಗೆ, ಅಂದು ನೀವು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚನೆ ಮಾಡಬೇಡಿ. ಉಪಾಹಾರವನ್ನು ಮಾತ್ರ  ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಒಂದೊಂದು ತುತ್ತನ್ನೂ ಸಂತೋಷವಾಗಿ, ಸ್ವತಂತ್ರವಾಗಿ, ನೀವೇ ಆಗಿ ಇಡಿಯಾಗಿ ಅನುಭವಿಸಿ.

ಬ್ರೆಡ್ಡಿನ ತುಣುಕು ಕೈಯಲ್ಲಿ ಹಿಡಿದಿರುವಾಗ ಅದನ್ನು ಗಮನವಿರಿಸಿ ನೋಡುತ್ತೇನೆ. ಹಾಗೆ ನೋಡುವಾಗ  ಒಂದೊಂದು ಸಲ ನನ್ನ ಮುಖದಲ್ಲಿ ನಗೆ ಮೂಡಿರುತ್ತದೆ. ನನ್ನ ಪೋಷಣೆಗೆ ನನ್ನ ದೇಹದ ಬೆಂಬಲಕ್ಕೆ ಇಡೀ ವಿಶ್ವ ನೀಡಿರುವ ಆಹಾರ ಅದು. ಗೋಧಿಯ ಬೆಳೆಯ ಮೇಲೆ ಬಿದ್ದ ಎಳೆ ಬಿಸಿಲು, ಮಳೆ ಸುರಿಸಿದ  ಮೋಡ, ಗೋಧಿಯ ಹೊಲ ಎಲ್ಲವೂ ಮನಸಿಗೆ ಬರುತ್ತವೆ. ಬಿಸಿಲಿಲ್ಲದೆ ಗೋಧಿ ಬೆಳೆಯದು. ಮೋಡವಿರದೆ ಮಳೆ ಬಾರದು. ಮಳೆ ಇರದೆ ಗೋಧಿಯೂ ಇಲ್ಲ. ಭೂಮಿ ಇರದೆ ಯಾವ ಆಹಾರವೂ ಇಲ್ಲ. ನನ್ನ ಕೈಯಲ್ಲಿರುವ ಬ್ರೆಡ್ಡಿನ ತುಂಡು ಬದುಕಿನ ಅಚ್ಚರಿ. ಅದು ನಮಗಾಗಿ ಇದೆ, ನಾವೂ ಅದಕ್ಕಾಗಿ ಇರಬೇಕು.

ಕೃತಜ್ಞತೆಯೊಡನೆ ಆಹಾರ ಸ್ವೀಕರಿಸಿ. ಬ್ರೆಡ್ಡನ್ನು ಮಾತ್ರ ನೀವು ಜಗಿದು ತಿನ್ನಬೇಕೇ ಹೊರತು ನಿಮ್ಮ ಪ್ರಾಜೆಕ್ಟು, ಚಿಂತೆ ಅಥವಾ ಸಿಟ್ಟವನ್ನು ಅದರೊಡನೆ ಬೆರೆಸಬಾರದು. ಇದು ಎಚ್ಚರದ ಗಮನದ ಅಭ್ಯಾಸ.  ಪ್ರತಿಯೊಂದು ತುತ್ತನ್ನು ತಿನ್ನುವಾಗಲೂ ಅದರ ರುಚಿ, ಅದರ ಅನುಭವ ಇವು ನಿಮ್ಮ ಗಮನದಲ್ಲಿರಲಿ. ಹೀಗೆ ತಿನ್ನುವುದು ನಾವು ಬೆಳೆಸಿಕೊಳ್ಳಬೇಕಾದ ಅಭ್ಯಾಸ.

ಎಷ್ಟು ಸಮಯ ಹಲ್ಲಜ್ಜುತ್ತೀರಿ? ಒಂದು ನಿಮಿಷ, ಎರಡು ನಿಮಿಷ? ಅಷ್ಟು ಹೊತ್ತೂ ನಿಮ್ಮ ಮನಸ್ಸು ಪೂರ್ತಿ ಅದಕ್ಕೇ ಗಮನ ನೀಡಲಿ. ಹಲ್ಲುಜ್ಜಿ ಆದಮೇಲೆ ಮಾಡಬೇಕಾದ ಕೆಲಸಗಳ ಬಗ್ಗೆ ಮನಸು ಅಲೆದಾಡುವುದು ಬೇಡ. 

ಇಲ್ಲಿದ್ದೇನೆ. ಹಲ್ಲುಜ್ಜುತಿದ್ದೇನೆ. ಉಜ್ಜಲು ಹಲ್ಲು ಇವೆ, ಉಜ್ಲು ಪೇಸ್ಟು ಇದೆ, ಬ್ರಷ್‌ ಇದೆ. ಈ ಕ್ಷಣದಲ್ಲಿ ಸಂತೋಷವಾಗಿರಬೇಕು ಇದರಲ್ಲೇ. ನಾನು ಏಳುವ ಮುಂದೆ ಇದ್ದ ನೆನಪು, ಹಲ್ಲುಜ್ಜಿ ಆದಮೇಲೆ ಮಾಡಬೇಕಾದ್ದರ ಚಿಂತೆ ಬೇಡ—ಹೀಗೆ ಅಭ್ಯಾಸ ಮಾಡುವುದರಿಂದ ಸ್ವತಂತ್ರವಾಗಿರುವುದು ಅಭ್ಯಾಸವಾಗುತ್ತದೆ ನಿಮಗೆ. ಸ್ವಾತಂತ್ರ್ಯದ ಸಂತೋಷ ಅರಿವಾಗುತ್ತದೆ. ನಿಮ್ಮ ಆಲೋಚನೆ, ನಿಮ್ಮ ಆತಂಕಗಳು ಈ ಕ್ಷಣವನ್ನು ನಿಮ್ಮಿಂದ ಕೊಚ್ಚಿಕೊಂಡು ಹೋಗದಿರಲಿ.

ಅಮೆರಿಕೆಯಲ್ಲಿ ರೆಸ್ಟ್‌ ರೂಮ್‌ ಅನ್ನುವ ಮಾತು ಬಳಸುತ್ತಾರೆ. ಫ್ರಾನ್ಸಿನಲ್ಲಿ ಲಾ ಕ್ಯಾಬಿನ್‌ ಲಾ ಕಾಬೀನ್‌ ಡಿ ಅಝಾನ್ಸ್‌ ಅನ್ನುತ್ತಾರೆ. ಅಂದರೆ ಆರಾಮದ ಸ್ಥಳ. ರೆಸ್ಟ್‌ರೂಮಿಗೆ ಹೋದಾಗ ವಿರಮಿಸಿ, ಆರಾಮವಾಗಿರಿ. ನಿಮ್ಮ ಮನಸು ಈ ಕ್ಷಣದಲ್ಲಿ ಸ್ವತಂತ್ರವಾಗಿದ್ದರೆ ಎಲ್ಲ ಬಗೆಯ ವಿಸರ್ಜನೆಯ ಕಾರ್ಯಗಳೂ ಸಂತೋಷದ ಕ್ಷಣಗಳೇ ಆಗುತ್ತವೆ.

ಮನೆಯಿಂದ ಕೆಲಸದ ಜಾಗಕ್ಕೆ ಡ್ರೈವ್‌ ಮಾಡುತ್ತ ಹೋಗುವುದಾದರೆ ನೀವು ತಲುಪಬೇಕಾದ ಜಾಗ, ಮಾಡಬೇಕಾದ ಕೆಲಸಗಳ ಬಗ್ಗೆ ಯೋಚನೆ ಮಾಡುವ ಬದಲು ಡ್ರೈವ್‌ ಮಾಡುತ್ತಿರುವ ಪ್ರತಿ ಕ್ಷಣವನ್ನೂ ಆನಂದಿಸಿ.

ನಾನು ಬೋಧನೆಯ ಕಾರ್ಯ ಶುರು ಮಾಡುವ ಮೊದಲು “ನನಗೆ ಇವತ್ತು ಯಾವ ಪ್ರಶ್ನೆಗಳು ಎದುರಾಗಬಹುದು?” ಎಂದು ಯೋಚಿಸುವುದಿಲ್ಲ. ನನ್ನ ಕೋಣೆಯಿಂದ ಬೋಧನೆಯ ಕೊಠಡಿಯವರೆಗೆ ಇಡುವ ಪ್ರತಿ ಹೆಜ್ಜೆಯಲ್ಲೂ ಸಂತೋಷ ಅನುಭವಿಸುತ್ತಾ ನಡೆಯುತ್ತೇನೆ. ಅಲ್ಲಿಗೆ ತಲುಪಿದಾಗ ಪ್ರಶ್ನೆಗಳಿಗೆ ಉತ್ತರ ಹೇಳಲು ಸಿದ್ಧವಾಗಿರುತ್ತೇನೆ.

ದಿನ ನಿತ್ಯದ ಬದುಕಿನ ಪ್ರತಿ ಕ್ಷಣವನ್ನೂ ಎಚ್ಚರದ ಗಮನದಲ್ಲಿ ಬದುಕುವುದು ಸಾಧ್ಯ.

*

ಈ ಭಾಗ ಅನುವಾದಿಸುವಾಗ ಬಹಳ ವರ್ಷಗಳ ಹಿಂದೆ ಹಕ್ಸ್‌ಲೀ ಬರೆದ ಬ್ರೇವ್‌ ನ್ಯೂ ವರ್ಲ್ಡ್ ಮತ್ತು ಇತರ ಲೇಖನಗಳನ್ನು ಓದಿದ್ದು ನೆನಪಾಯಿತು. ತಿನ್ನುವುದು ಅಭ್ಯಾಸವಾದಾಗ ಸಂತೋಷವಿರುವುದಿಲ್ಲ ಎಂದು ಹೇಳಿದ್ದ.‌ ಅಭ್ಯಾಸವನ್ನು ಮುರಿದರೆ ಮಾತ್ರ ಅನುಭವ ಜೀವಂತವಾಗುವುದು. ಹುಡುಗನಾಗಿದ್ದಾಗ ಮೊದಲ ಎರಡು ಮೂರು ಅಗುಳು ಅನ್ನ  ಭೂಮಿಗೆ ಇಟ್ಟು ಮೊದಲ ತುತ್ತು ಕಣ್ಣಿಗೊತ್ತಿಕೊಂಡು ತಿನ್ನುವ ಅಭ್ಯಾಸ ಇದ್ದದ್ದು, ಅಮೇಲೆ ಇಲ್ಲವಾದದ್ದು ನೆನಪಾಯಿತು. ಈ ೨೦೨೪ರಲ್ಲೂ ಮೈಸೂರಿನ ಹಳೆಯ ಏರಿಯಗಳಲ್ಲಿ ಬೆಳಗ್ಗೆ ಹೋಟೆಲು ಬಾಗಿಲು ತೆಗೆದ ತಕ್ಷಣ ಮೊದಲ ಕಪ್‌ ಕಾಫಿಯನ್ನೋ ಟೀಯನ್ನೋ ನೆಲಕ್ಕೆ ಹಾಕುವುದು ನೋಡಿದ್ದೇನೆ.ಎಲ್ಲವೂ ಅಭ್ಯಾಸಗಳೇ ಆದರೆ ನಿರ್ಜೀವ. ಎಚ್ಚರದ ಗಮನದೊಂದಿಗೆ ಅನುಭವಿಸಿದರೆ ಸಂತೋಷ, ಅಲ್ಲವೇ?

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು/ನಾನೇವೆನಯ್ಯಾ/ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ…ಕೂಡಲಸಂಗಮದೇವಾ

ಈ ಬಸವಚನವೂ ಯಾಂತ್ರಿಕ ಅಭ್ಯಾಸವಾದರೆ ಅದು ಭಕ್ತಿಯಲ್ಲ ಅನ್ನುತ್ತದೆ, ಅಲ್ಲವೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.