ಧರ್ಮ ಮತ್ತು ಅಧ್ಯಾತ್ಮ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ


ಧರ್ಮ ಮತ್ತು ಅಧ್ಯಾತ್ಮಗಳ ನಡುವಿನ ವ್ಯತ್ಯಾಸ ಏನು? ಈ ಪ್ರಶ್ನೆ ಒಮ್ಮಿಲ್ಲ ಒಮ್ಮೆಯಾದರೂ ನಿಮ್ಮ ಮನಸ್ಸಿನಲ್ಲಿ ಬಂದೇ ಬಂದಿರುತ್ತದೆ. ಒಮ್ಮೆ ನಿಮ್ಮ ಸುತ್ತ ಮುತ್ತ ನೋಡಿ ವಿಚಾರ ಮಾಡಿ ಹೇಳಿ, ಈಗ ನಮ್ಮ ದೇಶದಲ್ಲಿನ ದ್ವೇಷ, ಹಿಂಸೆ, ಪ್ರತ್ಯೇಕತೆಗಳಿಗೆ ಅತ್ಯಂತ ದೊಡ್ಡ ಕಾರಣ ಯಾವುದು?  ವ್ಯಂಗ್ಯ ಏನೆಂದರೆ ಇದಕ್ಕೆ ಯಾವುದೋ ಕಾರಣವೋ ಅದೇ ನಮಗೆ ಶಾಂತಿ, ಸಮಾಧಾನಗಳನ್ನು ನೀಡುವ ಪ್ರಮಾಣ ಮಾಡುತ್ತಿದೆ, ಧರ್ಮ.

ರವೀಂದ್ರನಾಥ ಠಾಕೂರರು ಈ ದ್ವಂದ್ವವನ್ನು ಮೊದಲೇ ಗುರುತಿಸಿದ್ದರು. ಮತ್ತು ಅವರು ಹೇಳುವಂತೆ ಈ ಸಂಘಟಿತ ಧರ್ಮಗಳು ಭಗವಂತನನ್ನು ತಲುಪುವ ದಾರಿಗಳಲ್ಲ ಬದಲಿಗೆ ಇವೇ ಆ ದಾರಿಯ ದೊಡ್ಡ ಅಡ್ಡಗೋಡೆಗಳು. ಠಾಕೂರರ ಪ್ರಕಾರ ಈ ಧರ್ಮಗಳ ಸೃಷ್ಟಿಯಾಗಿರುವುದೇ ನಮ್ಮ ಮತ್ತು ಇನ್ನೊಬ್ಬರ ನಡುವೆ ಗೋಡೆಯನ್ನು ಕಟ್ಟುವುದಕ್ಕಾಗಿ.  ಆದರೆ ಅಧ್ಯಾತ್ಮ ಎನ್ನುವುದು ಪ್ರತ್ಯೇಕತೆ ಎನ್ನುವ ಯಾವ ಗೋಡೆಯೂ ಇಲ್ಲ ಎನ್ನುವುದನ್ನ ನಮಗೆ ಅರಿವು ಮಾಡಿಸುವ ಸಂಗತಿ. ಆಳವಾಗಿ ಯೋಚನೆ ಮಾಡಿ ನೋಡಿ, ಈ ಸಂಘಟಿತ ಧರ್ಮಗಳು ಬದುಕುವುದು ಹೇಗೆ? ಪ್ರತಿ ಸಂಘಟನೆಗೆ ಅಧಿಕಾರವನ್ನು ಗಳಿಸಿಕೊಳ್ಳಲು ಇನ್ನೊಬ್ಬರ ವಿಧೇಯತೆ ಬೇಕು. ಮತ್ತು ವಿಧೇಯತೆಯನ್ನು ಗಳಿಸಿಕೊಳ್ಳುವ ಅತ್ಯಂತ ತ್ವರಿತ ಮಾರ್ಗವೆಂದರೆ ವೈರಿಗಳನ್ನು ಸೃಷ್ಟಿಸುವುದು. ಈ ಸಂಘಟಿತ ಧರ್ಮಗಳ ಬಯಕೆ “us v/s them” ಎನ್ನುವ ಮನಸ್ಥಿತಿ ಸೃಷ್ಟಿಯಾಗಬೇಕು ಎನ್ನುವುದು.

ಸಂಘಟಿತ ಧರ್ಮಗಳು ಹೇಳುವುದೇನೆಂದರೆ ನಮ್ಮ ಪವಿತ್ರ ಗ್ರಂಥವೇ ಸರ್ವಶ್ರೇಷ್ಠ, ನಾವು ಭಗವಂತ  ಅಯ್ಕೆಮಾಡಿಕೊಂಡ ಜನರು, ನಮ್ಮ ವಿರೋಧಿಗಳು ನರಕಕ್ಕೆ ಹೋಗುತ್ತಾರೆ ಎಂದು. ರವೀಂದ್ರರು ಗಮನಿಸಿದ್ದು ಏನೆಂದರೆ, ಯಾವಾಗ ನೀವು ಬ್ರಹ್ಮಾಂಡದ ಅಗಣಿತ ನಿಗೂಢಗಳನ್ನು ಕೆಲವು ನಿರ್ದಿಷ್ಟ ಗುಂಪಿನ ಕಠಿಣ ನಿಯಮಗಳಿಗೆ ಸೀಮಿತಗೊಳಿಸುತ್ತೀರೋ ಆಗ ನೀವು ಡಿವೈನ್ ನ ನಾಶ ಮಾಡುತ್ತೀರಿ. ಆಗ ನೀವು ಸೃಷ್ಟಿಕರ್ತನನ್ನು ಆರಾಧಿಸುವುದಿಲ್ಲ, ಬದಲಾಗಿ ಕೇವಲ ನಿಮ್ಮ ಗುಂಪನ್ನು ಮಾತ್ರ ಪೂಜಿಸುತ್ತೀರಿ.

ಮತ-ಧರ್ಮಗಳು ನಿಮಗೆ ಯುನಿಫಾರ್ಮ ಕೊಡುತ್ತವೆ, ಧ್ವಜ ಕೊಡುತ್ತವೆ, ನೀತಿ ನಿಯಗಳನ್ನ, ಕರ್ಮ ಕಾಂಡಗಳನ್ನು ಅಂಟಿಸುತ್ತವೆ ಮತ್ತು ಈ ಎಲ್ಲದರಿಂದಾಗಿ ನೀವು ಸುರಕ್ಷಿತರಾಗಿ ಉಳಿಯುವಿರಿ ಎನ್ನುವ ಭ್ರಮೆ ಹುಟ್ಟಿಸುತ್ತವೆ.  ರವೀಂದ್ರರು ಈ ಎಲ್ಲವೂ ನಿಮ್ಮನ್ನು ಒಂದು ಆರಾಮದಾಯಕ ಜೈಲಿನ ಕೈದಿಯಾಗಿಸುತ್ತವೆ ಎಂದು ಹೇಳುತ್ತಾರೆ. ನೀವು ನಿಮ್ಮ ಥರದ ಯುನಿಫಾರ್ಮ ಧರಿಸದ ಪ್ರತಿ ವ್ಯಕ್ತಿಯಿಂದ ಭೀತಿಗೊಳಗಾಗುತ್ತೀರಿ. ಸರಿ, ಹಾಗಾದರೆ ಇದಕ್ಕೆ ಪರ್ಯಾಯ ಏನು?

ರವೀಂದ್ರನಾಥ ಠಾಕೂರರು ಪುಸ್ತಕ The Religion of Man ನಲ್ಲಿ, ಅಧ್ಯಾತ್ಮದ ಕುರಿತಾಗಿ ಒಂದು ಮಾತು ಹೇಳಿದ್ದಾರೆ. ಅವರ ಪ್ರಕಾರ, ನಿಜವಾದ ಅಧ್ಯಾತ್ಮ ಎಂದರೆ ಭಗವಂತನನ್ನು ಮಂದಿರ, ಮಸಿದಿ, ಚರ್ಚಿನಂಥ ಯಾವುದೋ ಕಟ್ಟಡದಲ್ಲಿ ಹುಡುಕುವುದಲ್ಲ. ನಿಜವಾದ ಅಧ್ಯಾತ್ಮ  ಎಂದರೆ, ಪ್ರತಿಯೊಬ್ಬರಲ್ಲಿ ಇರುವ ದೈವಿಕ ಕಿಡಿಯನ್ನು ( Devine spark) ಗುರುತಿಸುವುದು. ನಿಜವಾದ ಅಧ್ಯಾತ್ಮ ಜೀವಿ ಎದುರಿಗಿನ ಮನುಷ್ಯ ಜಾತಿ, ಧರ್ಮವನ್ನು ಕೇಳುವುದಿಲ್ಲ, ಬದಲಾಗಿ ಅವನು ಆ ಇನ್ನೊಬ್ಬ ಮನುಷ್ಯನನ್ನು ತನ್ನ ಕನ್ನಡಿಯಂತೆ ಯೋಚಿಸುತ್ತಾನೆ, ಅವನಲ್ಲಿ ತನ್ನ ಪ್ರತಿಬಿಂಬವನ್ನೇ ನೋಡುತ್ತಾನೆ. ಸಂಘಟಿತ ಧರ್ಮಗಳು the other ಗೆ  ಹೆದರುವುದನ್ನ ಹೇಳಿಕೊಟ್ಟರೆ, ಅಧ್ಯಾತ್ಮ, other ಎನ್ನುವುದು ಇಲ್ಲವೇ  ಇಲ್ಲ, ಪ್ರತಿಯೊಬ್ಬರೂ ನಿಮ್ಮದೇ ಇನ್ನೊಂದು ರೂಪ ಎನ್ನುವುದನ್ನ ಕಲಿಸುತ್ತದೆ. ಯಾವಾಗ ನೀವು ಈ ಏಕತೆಯನ್ನು ಅನುಭವಿಸುತ್ತೀರೋ ಆಗ ಧರ್ಮಗಳ ನಡುವಿನ ಎಲ್ಲ ಗೋಡೆಗಳು ನಾಶವಾಗುತ್ತವೆ. ಆಗ ನಿಮಗೆ ಯಾವ ಪುಸ್ತಕ, ಯಾವ ಕರ್ಮಕಾಂಡಗಳ ಅವಶ್ಯಕತೆ ಇಲ್ಲ ಎನ್ನುವುದು ಗೊತ್ತಾಗುತ್ತದೆ.

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.