ನೋವು, ಬಗೆಬಗೆಯ ತೀವ್ರ ಭಾವಗಳು, ಮನಸನ್ನು ಕದಡುವ, ಕೆರಳಿಸುವ ಗ್ರಹಿಕೆಗಳು ಇವೆಲ್ಲ ತೀರ ನಿಜವಾಗಿಯೇ ಇರುತ್ತವೆ. ಇಂಥ ಕಷ್ಟಕರ ಭಾವಗಳಿಂದ ಪಲಾಯನ ಮಾಡದೆ ಎಚ್ಚರದ ಗಮನದೊಂದಿಗೆ ಅವುಗಳೊಡನೆ ನಾವು ಇದ್ದು, ಮಗುವನ್ನು ಆಲಂಗಿಸುವ ಹಾಗೆ ಭಾವಗಳನ್ನು ಅಪ್ಪಿಕೊಂಡು, “ನಿಮ್ಮನ್ನು ಅರ್ಥಮಾಇಕೊಳ್ಳುತ್ತೇನೆ, ನಿಮ್ಮಲ್ಲಿಗೆ ಮರಳಿದ್ದೇನೆ,ʼ ಎಂದು ಹೇಳಲು ಸಾಧ್ಯವಾಗಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.11: ಗಮನದ ಎಚ್ಚರ । ಐದು ಸ್ಕಂಧಗಳ ಆಳ್ವಿಕೆ
ನಾವು ಒಬ್ಬೊಬ್ಬರೂ ನಮ್ಮ ಬದುಕಿನ ಸಾಮ್ರಾಜ್ಯದ ಸಾಮ್ರಾಟರು. ನಮ್ಮ ರಾಜ್ಯದಲ್ಲಿ ಐದು ಪ್ರಾಂತಗಳು ಇವೆ. ಅವನ್ನು ಘಟಕಗಳು, ಸೀಮೆಗಳು ಅಂತ ಬೇಕಾದರೂ ಕರೆಯಿರಿ, ಸಂಸ್ಕೃತದಲ್ಲಿ ಸ್ಕಂಧಗಳು ಅನ್ನುತ್ತಾರೆ.
ರೂಪ [ದೇಹ ಮತ್ತು ಇಂದ್ರಿಯಗಳು], ವೇದನಾ [ಹಿತ, ಅಹಿತ ಮತ್ತು ತಟಸ್ಥ ಸಂವೇದನೆಗಳು], ಸಂಜ್ಞಾ [ಇಂದ್ರಿಯಗಳ ಮೂಲಕ ದೊರೆಯುವ ಮಾಹಿತಿಯನ್ನು ಅರಿಯುವ ಸಾಮರ್ಥ್ಯ], ಸಂಸ್ಕಾರ [ಆಲೋಚನೆ, ಇಚ್ಛೆ, ಕೋಪ, ಪ್ರೀತಿ ಮೊದಲಾದ ಮಾನಸಿಕ ನಿರ್ಧಾರ ಮತ್ತು ಕ್ರಿಯೆಗಳು], ಮತ್ತು ವಿಜ್ಞಾನ [ಅರಿವು ಅಥವಾ ಪ್ರಜ್ಞೆಯ ಸ್ಥಿತಿ] ಎಂದು ಅವನ್ನು ಗುರುತಿಸುತ್ತೇವೆ. ಸತತ ಅಭ್ಯಾಸದ ಮೂಲಕ ಈ ಐದು ಸ್ಕಂಧಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ನೋವು, ನರಳಾಟ, ಸಂತೋಷ, ಶಾಂತಿ, ನಿರ್ಭಯತೆಗಳ ನಿಜ ಸ್ವರೂಪವನ್ನು ಕಂಡುಕೊಳ್ಳಬೇಕು.
ನಮ್ಮ ಸಾಮ್ರಾಜ್ಯಕ್ಕೆ ತಕ್ಕ ಗಮನ ನೀಡದಿದ್ದರೆ ನಾವು ಜವಾಬ್ದಾರಿಯುಳ್ಳ ಸಾಮ್ರಾಟರಾಗುವುದಿಲ್ಲ. ನಮ್ಮ ಐದು ಸೀಮೆಗಳನ್ನು ಗಮನಿಸುವ ಬದಲಾಗಿ ಉದಾಸೀನವಾಗಿ ಬದುಕುತ್ತ ನಮ್ಮ ಸಾಮ್ರಾಜ್ಯದಲ್ಲಿ ಸಂಘರ್ಷ, ಅವ್ಯವಸ್ಥೆಗಳು ತಲೆ ಎತ್ತುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ನಮ್ಮ ರಾಜ್ಯದೊಳಗಿನ ಕಷ್ಟಗಳನ್ನು ಎದುರಿಸಲೂ ನಮಗೆ ಮನಸ್ಸಿಲ್ಲ.
ನಮಗೆ ಎರಡು ಗಂಟೆ, ಒಂದು ಗಂಟೆ, ಕೊನೆಗೆ ಐದು ನಿಮಿಷ ಫ್ರೀ ಟೈಮ್ ಸಿಕ್ಕರೂ ಟಿವಿ, ದಿನಪತ್ರಿಕೆ, ಸಂಗೀತ, ಹರಟೆ ಆಥವಾ ಫೋನಿನ ಬಳಿಗೆ ಧಾವಿಸಿ ನಮ್ಮದೇ ಜೀವ ಸಾಮ್ರಾಜ್ಯದ ವಾಸ್ತವವನ್ನು ಮರೆತುಬಿಡುತ್ತೇವೆ…ನಾವು ನಮ್ಮಲ್ಲಿಗೇ ಮರಳಿ ಎಲ್ಲವನ್ನೂ ವ್ಯವಸ್ಥೆಗೊಳಿಸಿಕೊಳ್ಳಬೇಕಾಗಿದೆ. ಹೇಗೆ ಇದನ್ನು ಮಾಡಬೇಕು ಅನ್ನುವುದಕ್ಕೆ ಬುದ್ಧ ಖಚಿತವಾದ ಅಭ್ಯಾಸಗಳನ್ನು ಹೇಳಿದ್ದಾನೆ. ಅವನು ಹೇಳಿದ ಹಾಗೆ ನಮ್ಮ ಐದು ಸ್ಕಂಧಗಳನ್ನು ಸ್ವಚ್ಛಮಾಡಿ, ಅವನ್ನು ಬದಲಾಯಿಸಿಕೊಳ್ಳಲು ಗಮನದ ಎಚ್ಚರದ ಚೈತನ್ಯ ಬೇಕು…
ನಡೆಯುವಾಗ, ಕೆಲಸ ಮಾಡುವಾಗ, ಪಾತ್ರೆ ತೊಳೆಯುವಾಗ, ಬಟ್ಟೆ ಒಗೆಯುವಾಗ, ಸುಮ್ಮನೆ ಕುಳಿತಿರುವಾಗ ಕೂಡ ನಮ್ಮ ಉಸಿರಾಟದ ಬಗ್ಗೆ ಎಚ್ಚರದ ಗಮನ ನೀಡುತಿದ್ದರೆ ಕೆಲವೇ ದಿನಗಳಲ್ಲಿ ನಮ್ಮೊಳಗಿನ ಎಚ್ಚರದ ಗಮನವೆಂಬ ಚೈತನ್ಯ ಬಲಗೊಳ್ಳುತ್ತದೆ. ನಮ್ಮ ಸಾಮ್ರಾಜ್ಯವನ್ನು ಸರಿಯಾಗಿ ಪಾಲಿಸುವುದಕ್ಕೆ ಸಹಾಯ ಮಾಡುತ್ತದೆ.
ನೋವು, ಬಗೆಬಗೆಯ ತೀವ್ರ ಭಾವಗಳು, ಮನಸನ್ನು ಕದಡುವ, ಕೆರಳಿಸುವ ಗ್ರಹಿಕೆಗಳು ಇವೆಲ್ಲ ತೀರ ನಿಜವಾಗಿಯೇ ಇರುತ್ತವೆ. ಇಂಥ ಕಷ್ಟಕರ ಭಾವಗಳಿಂದ ಪಲಾಯನ ಮಾಡದೆ ಎಚ್ಚರದ ಗಮನದೊಂದಿಗೆ ಅವುಗಳೊಡನೆ ನಾವು ಇದ್ದು, ಮಗುವನ್ನು ಆಲಂಗಿಸುವ ಹಾಗೆ ಭಾವಗಳನ್ನು ಅಪ್ಪಿಕೊಂಡು, “ನಿಮ್ಮನ್ನು ಅರ್ಥಮಾಇಕೊಳ್ಳುತ್ತೇನೆ, ನಿಮ್ಮಲ್ಲಿಗೆ ಮರಳಿದ್ದೇನೆ,ʼ ಎಂದು ಹೇಳಲು ಸಾಧ್ಯವಾಗಬೇಕು.
ಬುದ್ಧನ ದಾರಿಯಲ್ಲಿ ನಡೆಯಲು ಶುರು ಮಾಡಿದಾಗ ನೀವು ಅರೆಕಾಲಿಕ ಬುದ್ಧರಾಗಿರುತ್ತೀರಿ. ನಿಧಾನವಾಗಿ ಪೂರ್ಣ ಬುದ್ಧರಾ ಗುತ್ತೀರಿ. ಕೆಲವೊಮ್ಮೆ ಹಿಂದೆಬಿದ್ದು ಮತ್ತೆ ಅರೆಕಾಲಿಕ ಬುದ್ಧರೂ ಆಗಬಹುದು. ಬಿಡದೆ ಅಭ್ಯಾಸ ಮಾಡುತಿದ್ದರೆ ಪೂರ್ಣ ಬುದ್ಧರೇ ಆಗುತ್ತೀರಿ. ಬುದ್ಧತ್ವ ಕೈಗೆಟಕುವಂತೆಯೇ ಇರುತ್ತದೆ. ಬುದ್ಧನ ಹಾಗೆಯೇ ನೀವೂ ಮನುಷ್ಯರು. ಯಾವಾಗ ಬೇಕಾದರೂ ನೀವು ಬುದ್ಧರಾಗಬಹದು. ಬುದ್ಧತ್ವ ಈಗಲೇ ಇಲ್ಲೇ, ಯಾವಾಗ ಎಲ್ಲಿ ಬೇಕಾದರೂ ದೊರೆಯುವ ಸ್ಥಿತಿ. ಅರೆಕಾಲಿಕ ಬುದ್ಧರಾಗಿದ್ದಾಗ ಕೆಲವೊಮ್ಮೆ ಹಿತ ಕೆಲವೊಮ್ಮೆ ಅಹಿತ ಅನಿಸಬಹುದು. ಪೂರ್ಣ ಬುದ್ಧರಾದಾಗ ಯಾವುದೇ ಸಂದರ್ಭ, ಯಾವುದೇ ಕಷ್ಟ ಎದುರಾದರೂ ಸಂತೋಷವಿರುತ್ತದೆ.
ಬುದ್ಧರಾಗುವುದು ಕಷ್ಟವಲ್ಲ. ಬುದ್ಧನು ಅರಿವಿನ ಎಚ್ಚರದ ಬೆಳಕು ಕಂಡವನು. ಎಲ್ಲರನ್ನೂ ಪ್ರೀತಿಸಬಲ್ಲವನು, ಕ್ಷಮಿಸಬಲ್ಲವನು. ಕೆಲವೊಂದು ಕ್ಷಣಗಳಲ್ಲಿ ನೀವೂ ಹಾಗೆಯೇ ಇರುತ್ತೀರಿ. ಬುದ್ಧರಾಗಿರುವ ಸಂತೋಷವನ್ನು ಇಷ್ಟಪಡಿ. ನೀವು ಕೂತಾಗ ನಿಮ್ಮೊಳಗಿನ ಬುದ್ಧನೂ ಕೂರಲಿ, ನಡೆಯುವಾಗ ನಿಮ್ಮೊಳಗಿನ ಬುದ್ಧನೂ ನಡೆಯಲಿ. ನೀವಲ್ಲದೆ ಮತ್ತೆ ಯಾರು ಬುದ್ಧರಾಗಲು ಸಾಧ್ಯ?
*
ಜಿಡ್ಡು ಕೃಷ್ಣಮೂರ್ತಿಯವರು ಹೇಳಿದ ಮಾತು
“ದೇವರ ವಿಷಯದಲ್ಲಿ ಮನಸ್ಸು ಮಗ್ನವಾಗುವುದು, ಹಣದ ವಿಷಯದಲ್ಲಿ ಮನಸ್ಸು ಮಗ್ನವಾಗುವುದು ಎರಡೂ ಒಂದೇ. ಹಣದ ಬಗ್ಗೆ ಚಿಂತಿಸುವವನಿಗಿಂತ ದೇವರ ಧ್ಯಾನದಲ್ಲಿ ನಿರತನಾದ ಮನಸ್ಸಿನ ವ್ಯಕ್ತಿ ಹೆಚ್ಚು ಪವಿತ್ರ ಎಂದು ನಾವು ಭಾವಿಸುತ್ತೇವೆ. ಆದರೆ ವಸ್ತುತಃ ಎರಡೂ, ಇಬ್ಬರೂ ಒಂದೇ. ಇಬ್ಬರಿಗೂ ಫಲಿತಾಂಶ ಬೇಕು. ಎರಡು ಮನಸ್ಸುಗಳೂ ಮಗ್ನವಾಗಿರಲು ಬಯಸುತ್ತವೆ. ಆದುದರಿಂದ ಮಗ್ನತೆಯ ಹೊರತಾಗಿ ಮನಸ್ಸು ಇರಬಲ್ಲುದೆ?”
ಜೊತೆಗೆ ಚುಮ್ಮಾ ಇರು ಎಂದ ರಮಣರು, ಸುಮ್ಮನಿರುವ ಸುಮ್ಮಾನ ಎಂದು ದಾವ್ ನನ್ನು ಕನ್ನಡಿಸಿದ ಮಂಜುನಾಥ್ ನೆನಪಾಗುತಿದ್ದಾರೆ. ಅರ್ಥಪೂರ್ಣವೆಂದು ನಾವು ಭಾವಿಸುವ ಭಾಷೆಯೇ ದೊಡ್ಡ ತೊಡಕು, ದೊಡ್ಡ ಬಂಧನ ಇರಬಹುದು.

