ಅಭ್ಯಾಸದ ಬಲವನ್ನು ಇಲ್ಲವಾಗಿಸಲು, ನಾಶದ ದಾರಿಯಿಂದ ಹೊರಳಲು ಎಚ್ಚರದ ಗಮನದ ಚೈತನ್ಯ ನಮಗೆ ಬೇಕು. ಅಂಥ ಗಮನವಿದ್ದಾಗ ಮಾತ್ರ ಪ್ರತಿ ಬಾರಿ ನಮ್ಮ ಅಭ್ಯಾಸ ತಲೆ ಎತ್ತಿದಾಗಲೂ ಅದನ್ನು ಗುರುತಿಸಲು ಸಾಧ್ಯವಾಗುತ್ತದೆ. ಗುರುತಿಸಿದ ಕ್ಷಣವೇ ಅಭ್ಯಾಸದ ಬಲ ಬಹಳಷ್ಟು ಕುಗ್ಗುತ್ತದೆ. ಅಭ್ಯಾಸದ ಬಲವನ್ನು ಗುರುತಿಸಿ, ಅದು ನಮ್ಮನ್ನು ಹಾಳು ಮಾಡದಂತೆ ತಡೆಯಲು ಎಚ್ಚರದ ಗಮನದ ಚೈತನ್ಯವಿರಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.12: ಗಮನದ ಎಚ್ಚರ । ಅಭ್ಯಾಸಬಲ
ಒಂದು ಝೆನ್ ಕತೆ ಇದೆ.
ಒಬ್ಬಾತ ಕುದುರೆಯ ಮೇಲೆ ಕೂತಿದ್ದ. ಕುದುರೆ ಬಹಳ ವೇಗವಾಗಿ ಓಡುತಿತ್ತು. ಅವನು ಯಾವುದೋ ಮುಖ್ಯವಾದ ಕೆಲಸಕ್ಕೆ ಎಲ್ಲಿಗೋ ಹೊರಟಿದ್ದಾನೆ ಅನಿಸುತಿತ್ತು. ರಸ್ತೆಯ ಮೇಲೆ ನಿಂತಿದ್ದವನೊಬ್ಬನು, “ಅಯ್ಯಾ, ಇಷ್ಟು ಆತುರವಾಗಿ ಎಲ್ಲಿಗೆ ಹೋಗುತ್ತಿದ್ದೀಯಾ?” ಎಂದು ಕೇಳಿದ. ಅದಕ್ಕೆ ಆ ಮನುಷ್ಯ, “ನನಗೆ ಗೊತ್ತಿಲ್ಲ, ಕುದುರೆಯನ್ನೇ ಕೇಳು,” ಅಂದನಂತೆ.
ನಮ್ಮ ಕತೆಯೂ ಹೀಗೇ. ನಾವೂ ಕುದುರೆ ಸವಾರಿ ಮಾಡುತಿದ್ದೇವೆ. ಎಲ್ಲಿಗೆ ಹೋಗುತಿದ್ದೇವೆ-ಗೊತ್ತಿಲ್ಲ. ಕುದುರೆ ನಿಲ್ಲಿಸಬೇಕು-ಆಗುತ್ತಿಲ್ಲ. ನಮ್ಮ ಅಭ್ಯಾಸಗಳ ಬಲವೇ ನಮ್ಮನ್ನು ಎಲಿಗೋ ಕರೆದುಕೊಂಡು ಹೋಗುತಿರುವ ಕುದುರೆ. ಅಭ್ಯಾಸ ಬಲದ ಎದುರಿನಲ್ಲಿ ನಾವು ಅಸಹಾಯಕರಾಗಿದ್ದೇವೆ. ನಿದ್ದೆಯಲ್ಲೂ ನಾವು ಹೆಣಗಾಡುತ್ತಲೇ ಇರುತ್ತೇವೆ. ನಮ್ಮೊಡನೆಯೇ ಕಾದಾಡುತ್ತಿರುತ್ತೇವೆ. ಬೇರೆಯವರ ಜೊತೆ ಯುದ್ಧ ಮಾಡಲು ಸದಾ ಸಿದ್ಧರಾಗಿರುತ್ತೇವೆ.
ನಿಲ್ಲಿಸುವ ಕಲೆಯನ್ನು ಕಲಿಯಬೇಕು. ನಮ್ಮ ಆಲೋಚನೆಗಳನ್ನು ನಿಲ್ಲಿಸಬೇಕು. ಅಭ್ಯಾಸಗಳನ್ನು ನಿಲ್ಲಿಸಬೇಕು. ಮರೆವನ್ನು ನಿಲ್ಲಿಸಬೇಕು. ನಮ್ಮನ್ನು ಆಳುವ ಪ್ರಬಲ ಭಾವಗಳನ್ನು ನಿಲ್ಲಿಸಬೇಕು. ತೀವ್ರಭಾವವೊಂದು ಬಿರುಗಾಳಿಯ ಹಾಗೆ ಬೀಸುತಿವಾಗ ನಮಗೆ ಶಾಂತಿ ಇರುವುದಿಲ್ಲ. ಟಿವಿ ಹಾಕುತ್ತೇವೆ, ಟಿವಿ ಆಫ್ ಮಾಡುತ್ತೇವೆ. ಪುಸ್ತಕ ಎತ್ತಿಕೊಳ್ಳುತ್ತೇವೆ, ಮತ್ತೆ ಕೆಳಗೆ ಇಡುತ್ತೇವೆ. ಅದೇ ರೀತಿ ನಮ್ಮೊಳಗಿನ ಕಳವಳದ ಸ್ತಿತಿಯನ್ನು, ಭಯವನ್ನು, ದುಗುಡವನ್ನು, ಸಿಟ್ಟನ್ನು, ತೀವ್ರ ಹಂಬಲವನ್ನು ನಿಲ್ಲಿಸಲು ಯಾಕೆ ಆಗುವುದಿಲ್ಲ?
ಎಚ್ಚರದ ಗಮನದೊಂದಿಗೆ ಉಸಿರಾಟಮಾಡುತ್ತಾ, ಅದೇ ಗಮನದೊಡನೆ ಮಾತನಾಡುತ್ತಾ, ಎಲ್ಲವನ್ನೂ ಗಹನವಾಗಿ ನೋಡಿ ಅರಿಯುತ್ತಾ ನಿಲ್ಲಿಸಲಾಗದು ಎಂದು ಭಾವಿಸಿರುವುದನ್ನೂ ನಿಲ್ಲಿಸಬಹುದು. ಎಚ್ಚರದ ಗಮನೊಂದಿಗೆ ಈ ಕ್ಷಣವನ್ನು ಆಳವಾಗಿ ಸ್ಪರ್ಶಿಸಿದಾಗ ಸದಾ ಸಿಗುವ ಫಲಗಳೆಂದರೆ- ತಿಳಿವು, ಒಪ್ಪಿಗೆ, ಒಲವು; ಮತ್ತು ವೇದನೆಯನ್ನು ತೊರೆದು ಆನಂದವನ್ನು ಪಡೆಯುವ ಸಾಮರ್ಥ್ಯ
ಆದರೂ ನಮ್ಮ ಆಸೆಗಿಂದ ನಮ್ಮ ಅಭ್ಯಾಸಗಳ ಬಲವೇ ಮಿಗಿಲಾಗಿರುತ್ತದೆ. ನಾವು ಆಡಬಾರದ ಮಾತು ಆಡುತ್ತೇವೆ, ಮಾಡಮಾರದ ಕೆಲಸ ಮಾಡುತ್ತೇವೆ, ಆಮೇಲೆ ಪರಿತಪಿಸುತ್ತೇವೆ. ನಾವು ನರಳುತ್ತೇವೆ, ಬೇರೆಯವರನ್ನೂ ನರಳಿಸುತ್ತೇವೆ. ಮತ್ತೆ ಹೀಗಾಗಲು ಅವಕಾಶ ಕೊಡುವುದಿಲ್ಲವೆಂದು ಶಪಥ ಮಾಡುತ್ತೇವೆ, ಕಾಲ ಕಳೆದಂತೆ ಮತ್ತೆ ಹಾಗೇ ನಡೆದುಕೊಳ್ಳುತ್ತೇವೆ. ಹೀಗಾಗುವುದಕ್ಕೆ ನಾವು ಬೆಳೆಸಿಕೊಂಡಿರುವ ಅಭ್ಯಾಸಗಳ ಬಲವೇ ಕಾರಣ.
ಅಭ್ಯಾಸದ ಬಲವನ್ನು ಇಲ್ಲವಾಗಿಸಲು, ನಾಶದ ದಾರಿಯಿಂದ ಹೊರಳಲು ಎಚ್ಚರದ ಗಮನದ ಚೈತನ್ಯ ನಮಗೆ ಬೇಕು. ಅಂಥ ಗಮನವಿದ್ದಾಗ ಮಾತ್ರ ಪ್ರತಿ ಬಾರಿ ನಮ್ಮ ಅಭ್ಯಾಸ ತಲೆ ಎತ್ತಿದಾಗಲೂ ಅದನ್ನು ಗುರುತಿಸಲು ಸಾಧ್ಯವಾಗುತ್ತದೆ. ಗುರುತಿಸಿದ ಕ್ಷಣವೇ ಅಭ್ಯಾಸದ ಬಲ ಬಹಳಷ್ಟು ಕುಗ್ಗುತ್ತದೆ. ಅಭ್ಯಾಸದ ಬಲವನ್ನು ಗುರುತಿಸಿ, ಅದು ನಮ್ಮನ್ನು ಹಾಳು ಮಾಡದಂತೆ ತಡೆಯಲು ಎಚ್ಚರದ ಗಮನದ ಚೈತನ್ಯವಿರಬೇಕು.
ಮರೆವು ಈ ಚೈತನ್ಯಕ್ಕೆ ವಿರುದ್ಧವಾದದ್ದು. ಟೀ ಕುಡಿಯುತ್ತೇವೆ, ಟೀಯ ಅರಿವು ಇರುವುದಿಲ್ಲ. ಪ್ರೀತಿಪಾತ್ರರೊಡನೆ ಇರುತ್ತೇವೆ, ಅವರು ಅಲ್ಲಿರುವುದೇ ನಮ್ಮ ಗಮನಕ್ಕೆ ಬರುವುದಿಲ್ಲ. ನಡೆಯುತ್ತೇವೆ, ಮನಸು ಮಾತ್ರ ಬೇರೆಲ್ಲೋ ಇರುತ್ತದೆ, ಭೂತದಲ್ಲೊ ಭವಿಷ್ಯದಲ್ಲೋ ಅಲೆಯುತ್ತಿರುತ್ತದೆ. ಅಭ್ಯಾಸವೆಂಬ ಬಲಶಾಲೀ ಕುದುರೆ ನಮ್ಮನ್ನು ಹೊತ್ತು ಸಾಗುತ್ತಿರುತ್ತದೆ. ನಾವು ಅದರ ಅಡಿಯಾಳುಗಳು. ನಾವು ಅಭ್ಯಾಸಗಳಿಂದ ಸ್ವತಂತ್ರರಾಗಬೇಕು. ನಾವು ಮಾಡುವ ಎಲ್ಲ ಕೆಲಸಗಳಲ್ಲಿ ಎಚ್ಚರದ ಗಮನದ ಬೆಳಕು ಇರಬೇಕು. ಆಗ ಮಾತ್ರ ಮರೆವಿನ ಕತ್ತಲೆ ಕಳೆಯುತ್ತದೆ.
[ಈ ಭಾಗವನ್ನು ಕನ್ನಡಿಸುವಾಗ ಅಮುಗೆ ರಾಯಮ್ಮನವರ ವಚನ ನೆನಪಿಗೆ ಬಂದಿತು:
ಕಾಲಿಲ್ಲದ ಕುದುರೆಯನೇರಿ ರಾವುತಿಕೆಯ ಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ ಅಮುಗೇಶ್ವರಲಿಂಗಕ್ಕೆ
ಅಧಿಕನೆಂಬೆ
ಮಾತೂ ಸೇರಿದಂತೆ ಎಲ್ಲ ಕೆಲಸಗಳು ಅಭ್ಯಾಸಗತವೆಂಬುದು ಓದುತ್ತಿರುವಾಗ ಬಸವಣ್ಣನವರ ವಚನ ನೆನಪಿಗೆ ಬಂದಿತು
ಶಬ್ದಸಂಭಾಷಣೆಯ ನುಡಿಯ ವರ್ತಿಸಿ ನುಡಿವೆ,
ತೊಡಹದ ಕೆಲಸದ ಬಣ್ಣದಂತೆ
ಕಡಿಹಕ್ಕೆ ಒರೆಗೆ ಬಾರದು, ನೋಡಾ.
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ.
ಕೂಡಲಸಂಗಮದೇವಾ
ಮಾತಿನ ವರ್ತನೆ ತೊಡುವ ಬಟ್ಟೆಯ ಬಣ್ಣದ ಹಾಗೆ. ಅದನ್ನು ಕತ್ತರಿಸಿ ನೋಡಲು, ಒರೆಗೆ ಹಚ್ಚಲು ಆಗದು. ಮನದಲ್ಲೊಂದು, ಹೃದಯದಲ್ಲೊಂದು, ವಚನದಲ್ಲೊಂದು ಎಂಬ ವರ್ತನೆ ನನ್ನದು ನೋಡು ಅನ್ನುತ್ತಿದೆ ಬಸವವಚನ.]

