ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನೀವು ನಿಮ್ಮ ಸ್ನೇಹಿತೆಯ ಜೊತೆ ಮಾತನಾಡುತ್ತಿರುವುದನ್ನು ಕಲ್ಪನೆ ಮಾಡಿಕೊಳ್ಳಿ. ಆಕೆ ಹೇಳುತ್ತಾಳೆ: “ಎಲ್ಲಾ ಗಂಡಸರು ತಮ್ಮ ಭಾವನೆಗಳನ್ನು ನಿಭಾಯಿಸುವಲ್ಲಿ ದುರ್ಬಲರು!” ಆಗ ನೀವು ಥಟ್ಟನೇ ಅವಳ ಮಾತಿಗೆ ಆಕ್ಷೇಪ ಎತ್ತುತ್ತ ಕೆಲವು ವೈರುಧ್ಯದ ಉದಾಹರಣೆಗಳನ್ನು ನೀಡುತ್ತೀರಿ. ಮುಂದೆ ಕೆಲವೇ ಕೆಲವು ಕ್ಷಣಗಳಲ್ಲಿ, ಅವಳ ಮಾತಿನ ಧಾಟಿ ಹೀಗೆ ಬದಲಾಗುತ್ತದೆ : “ಸರಿ, ಆದರೆ ನಾನು ಡೇಟ್ ಮಾಡಿದ ಎಲ್ಲರೂ ಹಾಗೇ ಇದ್ದರು!” ಅವಳು ವಾದದಲ್ಲಿ ಸಂಪೂರ್ಣ ಸೋತಿಲ್ಲವಾದರೂ, ವಾದದಿಂದ ಜಾರಿಕೊಂಡಿದ್ದಾಳೆ. ಫಿಲಾಸೊಫರ್ ನಿಕೊಲಸ್ ಶಾಕೆಲ್ ಇದನ್ನು “ಮೋಟ್ ಮತ್ತು ಬೈಲಿ ಕುತರ್ಕ ” (Motte and Bailey Fallacy) ಎಂದು ಕರೆಯುತ್ತಾರೆ.
ಈ ಫ್ಯಾಲಸಿಯ ಪ್ರಕಾರ, ಯಾರಾದರೂಬ್ಬರು ಮೊದಲು ತುಂಬಾ ಧೈರ್ಯಶಾಲಿ ಮತ್ತು ಅತಿರೇಕದ ಹೇಳಿಕೆಯನ್ನು ನೀಡುತ್ತಾರೆಂದರೆ ; ಅದನ್ನೇ “ಬೈಲಿ” ಎಂದು ಕರೆಯಲಾಗುತ್ತದೆ. ಆ ಹೇಳಿಕೆಯನ್ನು ಇನ್ನೊಬ್ಬರು ಪ್ರಶ್ನಿಸುವ ತನಕ ಅವರು ಕಂಫರ್ಟೇಬಲ್ ಆಗಿರುತ್ತಾರೆ. ಆದರೆ ಯಾರಾದರೂ ಆ ಹೇಳಿಕೆಯನ್ನು ಪ್ರಶ್ನಿಸಿದಾಗ ಅಥವಾ ಆ ಹೇಳಿಕೆಯ ಮೇಲೆ ದಾಳಿ ಮಾಡಿದಾಗ, ಅವರು ತಕ್ಷಣವೇ ಒಂದು ಚಿಕ್ಕ, ಸುರಕ್ಷಿತವಾದ ಮತ್ತು ತಮ್ಮನ್ನು ಸುಲಭವಾಗಿ ರಕ್ಷಿಸಬಹುದಾದ ಹೇಳಿಕೆಗೆ ಹಿಂತಿರುಗುತ್ತಾರೆ. ಅದನ್ನೇ “ಮೋಟ್” ಎಂದು ಕರೆಯಲಾಗುತ್ತದೆ. “ನಾನು ಹೇಳಿದ್ದು ಈ ಅರ್ಥದಲ್ಲಿ” ಎಂದು ಅವರು ನಂತರ ಮಾತು ಬದಲಿಸುತ್ತಾರೆ.
ಇಂತಹ ಘಟನೆಗಳನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಯಾರೋ ಒಬ್ಬರು ಮೊದಲಿಗೆ ತುಂಬಾ ದೊಡ್ಡ ಹಾಗೂ ತೀವ್ರವಾದ ಹೇಳಿಕೆಯನ್ನು ನೀಡುತ್ತಾರೆ, ಉದಾಹರಣೆಗೆ, “ಎಲ್ಲಾ ರಾಜಕಾರಣಿಗಳೂ ಭ್ರಷ್ಟರು,”
ಅಥವಾ “ವಿಜ್ಞಾನ, ದೇವರಿಲ್ಲ ಎಂದು ಸಾಬೀತುಪಡಿಸಿದೆ!” ಇತ್ಯಾದಿಯಾಗಿ. ಆದರೆ ಯಾರಾದರೂ ಆ ಮಾತಿಗೆ ಆಕ್ಷೇಪ ಎತ್ತಿದ ಕ್ಷಣದಲ್ಲೇ, ಅವರ ಹೇಳಿಕೆ ಥಟ್ಟನೇ ತುಂಬಾ ಸೀಮಿತ ಮತ್ತು ಸುರಕ್ಷಿತ ರೂಪಕ್ಕೆ ಬದಲಾಗುತ್ತದೆ. “ ಅಂದರೆ… ಕೆಲವು ರಾಜಕಾರಣಿಗಳು ಭ್ರಷ್ಟರು,” ಅಥವಾ “ನಾನು ದೇವರಿಲ್ಲ ಎಂದು ಹೇಳಿದ್ದು ಕೇವಲ ಪ್ರಾಯೋಗಿಕ (empirical) ಅರ್ಥದಲ್ಲಿ!” ಮುಂತಾಗಿ. ಅವರು ತಮ್ಮ ಮೊದಲಿನ ತೀವ್ರ ನಿಲುವನ್ನು ಬಿಟ್ಟುಬಿಡುತ್ತಾರೆ, ಮತ್ತು ತಾವು ಸುಲಭವಾಗಿ ರಕ್ಷಿಸಿಕೊಳ್ಳಬಹುದಾದ ಸುರಕ್ಷಿತ ಸ್ಥಾನಕ್ಕೆ ಹಿಂತಿರುಗುತ್ತಾರೆ.
ಈ ಕಾರಣವಾಗಿಯೇ ನಮ್ಮ ಅನೇಕ ರಾಜಕೀಯ ಚರ್ಚೆಗಳು ಯಾರೂ ಗೆಲ್ಲಲಾಗದೇ ಕೊನೆಗೊಳ್ಳುತ್ತವೆ.
ಎಲ್ಲ ರಾಜಕೀಯ ವಾದಗಳು ವಿರೋಧವಿಲ್ಲದಾಗ “ಬೈಲಿ”ಯಲ್ಲಿ ವಾಸಿಸುತ್ತವೆ. ಆದರೆ ಯಾರಾದರೂ ಅವನ್ನು ಪ್ರಶ್ನಿಸಿದ ಕ್ಷಣದಲ್ಲೇ, ಅವು ಓಡಿಹೋಗಿ “ಮೋಟ್” ನ ಆಶ್ರಯ ಪಡೆಯುತ್ತವೆ. ಒಂದು ಪ್ರಚೋದನಕಾರಿ ಹೇಳಿಕೆ ಜನರನ್ನು ಉದ್ರೇಕಿಸುತ್ತದೆ ಮತ್ತು ಜನ ಬೆಂಬಲವನ್ನು ಗಳಿಸುತ್ತದೆ. ಆದರೆ ಒಂದು ಪರಿಪಕ್ವವಾದ ಹೇಳಿಕೆ, ಸಾಕ್ಷಿ, ತರ್ಕ ಮತ್ತು ಪರಿಶೀಲನೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅಪೇಕ್ಷಿಸುತ್ತದೆ.
ಆದ್ದರಿಂದ, ಮುಂದಿನ ಬಾರಿ ಯಾರಾದರೂ ಅತಿರೇಕದ ಅಥವಾ ವಿಚಿತ್ರವಾದ ಮಾತನ್ನು ಹೇಳಿದರೆ, ಅದನ್ನು ಕೂಡಲೇ ಪ್ರಶ್ನಿಸಿ. ಅನೇಕ ಸಂದರ್ಭಗಳಲ್ಲಿ, ಕೇವಲ ಸ್ವಲ್ಪ ಮಟ್ಟಿನ ಪ್ರತಿರೋಧವೇ ಸಾಕು, ಆ ವ್ಯಕ್ತಿಯ ಹೇಳಿಕೆ ಹೆಚ್ಚು ಸಮಂಜಸವಾದ, ರಕ್ಷಿಸಿಕೊಳ್ಳಬಹುದಾದ ಮತ್ತು ಸೂಕ್ಷ್ಮವಾದ ರೂಪಕ್ಕೆ ಬದಲಾಗಲು.

