ಮುಖ್ಯವಾದ ಮಾತು ಇದು. ಹತೋಟಿಗೆ ಸಿಗದ ಆಲೋಚನೆಗಳೆಂಬ “ಶತ್ರು”ಗಳನ್ನು ದಮನಿಸಲು ಇರುವ ಗೆಳೆಯ ನಿಮ್ಮ ಎಚ್ಚರದ ಗಮನ ಎಂದು ತಿಳಿಯಬಾರದು. ನಿಮ್ಮ ಮನಸನ್ನು ಯುದ್ಧಭೂಮಿಯಾಗಿಸಬಾರದು. ಯಾಕೆಂದರೆ ಸಂತೋಷ, ದುಃಖ, ಸಿಟ್ಟು, ದ್ವೇಷ ಮೊದಲಾದ ಭಾವಗಳೆಲ್ಲವೂ ಆಲೋಚನೆಗಳೆಲ್ಲವೂ ನಿಮ್ಮದೇ ಅಂಶಗಳು… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.13: ಗಮನದ ಎಚ್ಚರ । ಕತ್ತಲೆಯೇ ಬೆಳಕಾಗುವುದು
ನಿಮ್ಮೊಳಗೆ ಆಗುವ ಬದಲಾವಣೆಗಳನನು ಅರಿವಿನ ಎಚ್ಚರದ ಬೆಳಕಿನಲ್ಲಿ ಗಮನಿಸಿ.
ನಾನು-ನನ್ನ ಮನಸ್ಸು, ನನ್ನ ದೇಹ-ನಾನು ಇತ್ಯಾದಿಯಾಗಿ “ನಾನು ಎರಡು ಅಲ್ಲ” ಅನ್ನುವ ಸಂಗತಿ ನಿಮ್ಮ ಅರಿವಿಗೆ ಬರುತ್ತದೆ, ಹಾಗಾದಾಗ ಆಲೋಚನೆ, ಭಾವನೆ ಮತ್ತು ಅವುಗಳ ಪರಿಣಾಮ ಎಲ್ಲವೂ ತಟ್ಟನೆ ಬದಲಾದ ಅನುಭವವಾಗುತ್ತದೆ ನಿಮ್ಮ ಆಲೋಚನೆ, ಭಾವನೆಗಳನ್ನು ಸರಿ ಅಥವಾ ತಪ್ಪು ಎಂದು ತೀರ್ಮಾನಿಸದೆ, ಅಥವಾ ಹತ್ತಿಕ್ಕದೆ ಅವೆಲ್ಲವೂ ನಿಮ್ಮ ಗಮನಿಸುವ ಮನಸಿನೊಂದಿಗೆ ಹೆಣೆದುಕೊಳ್ಳುತ್ತವೆ.
ಆಗಾಗ ನಿಮಗೆ ತಳಮಳವಾಗಬಹುದು. ಅಂತ ಹೊತ್ತಿನಲ್ಲಿ ಸುಮ್ಮನೆ ಕುಳಿತು ನಿಮ್ಮ ಉಸಿರನ್ನು ಗಮನಿಸಿ. ಕಿರುನಗೆಯೊಂದಿಗೆ ನಿಮ್ಮ ಎಚ್ಚರದ ಗಮನವು ತಳಮಳದ ಮೇಲೆ ಬೀಳುವಂತೆ ಅವಕಾಶ ಮಾಡಿಕೊಡಿ. ನಿಮ್ಮ ತಳಮಳವನನು ಇಲ್ಲವಾಗಿಸಲು ಹೆಣಗಬೇಡಿ, ನಾಶಮಾಡಲು ಪ್ರಯತ್ನಪಡಬೇಡಿ. ಯಾಕೆಂದರೆ ನೀವು ಬೇರೆಯಲ್ಲ, ನಿಮ್ಮ ತಳಮಳ ಬೇರೆಯಲ್ಲ. ತಳಮಳ ಹುಟ್ಟುತ್ತದೆ, ಸ್ವಲ್ಪ ಹೊತ್ತು ಇರುತ್ತದೆ, ಸಹಜವಾಗಿಯೇ ಹೊರಟೂ ಹೋಗುತ್ತದೆ. ತಳಮಳ ಯಾಕೆ ಹುಟ್ಟಿತು ಎಂದು ಕಾರಣ ಹುಡುಕಲು ಧಾವಂತಪಡಬೇಡಿ. ತಳಮಳವನ್ನು ಮಾಯವಾಗಿಸಲು ಕಷ್ಟಪಡಬೇಡಿ.
ನಿಮ್ಮ ಅರಿವಿನ ಎಚ್ಚರದ ಗಮನದ ಬೆಳಕು ಬೀಳಲಿ, ಅಷ್ಟೇ. ತಳಮಳವು ಇಷ್ಟಿಷ್ಟೆ ಬದಲಾಗುತ್ತಾ ನಿಮ್ಮೊಳಗೆ, ಅಂದರೆ ತಳಮಳವನ್ನು ಗಮನಿಸುತ್ತಿರುವ ನಿಮ್ಮೊಡನೆಯೇ ಒಂದಾಗುವುದು ತಿಳಿಯುತ್ತದೆ. ನಿಮ್ಮ ಎಚ್ಚರದ ಗಮನಕ್ಕೆ ಸಿಕ್ಕಿದ ತಳಮಳವು ಸಾವಕಾಶವಾಗಿ ಎಚ್ಚರದ ಗಮನವುಳ್ಳ ಮನಸಿನಂತೆಯೇ ಬದಲಾಗುತ್ತದೆ.
ಧ್ಯಾನದ ಉದ್ದಕ್ಕೂ ನಿಮ್ಮ ಎಚ್ಚರದ ಗಮನವೆಂಬ ಬೆಳಕು, ಮರದ ಒಂದೊಂದೂ ಎಲೆ, ಬಯಲಿನ ಹುಲ್ಲಿನ ಒಂದೊಂದು ಎಸಳನ್ನು ಬೆಳಗುವ ಸೂರ್ಯನ ಬಿಸಿಲಿನಂತೆ ಉಳಿದಿರಲಿ. ನಮ್ಮ ಅರಿವಿನ ಬೆಳಕಿನಲ್ಲಿ ಪ್ರತಿಯೊಂದೂ ಆಲೋಚನೆ, ಪ್ರತಿಯೊಂದೂ ಭಾವನೆಯನ್ನು ಗಮನಿಸೋಣ. ಗುರುತಿಸೋಣ. ಅವು ಹುಟ್ಟಿದ್ದು, ಎಷ್ಟು ಹೊತ್ತು ಇದ್ದವು ಅನ್ನುವುದು, ಕರಗಿ ಹೋದದ್ದು ಎಲ್ಲವನ್ನೂ ಗಮನಿಸೋಣ. ಆಲೋಚನೆ, ಭಾವನೆಗಳ ಬೆಲೆಕಟ್ಟದೆ, ಬೇಡ, ಅವನ್ನು ಕುರಿತು ತೀರ್ಮಾನ ಮಾಡದೆ, ಅವನ್ನು ಸ್ವಾಗತಿದೆ, ದೂರ ತಳ್ಳದೆ ಸುಮ್ಮನೆ ಗಮನಿಸೋಣ.
ಮುಖ್ಯವಾದ ಮಾತು ಇದು. ಹತೋಟಿಗೆ ಸಿಗದ ಆಲೋಚನೆಗಳೆಂಬ “ಶತ್ರು”ಗಳನ್ನು ದಮನಿಸಲು ಇರುವ ಗೆಳೆಯ ನಿಮ್ಮ ಎಚ್ಚರದ ಗಮನ ಎಂದು ತಿಳಿಯಬಾರದು. ನಿಮ್ಮ ಮನಸನ್ನು ಯುದ್ಧಭೂಮಿಯಾಗಿಸಬಾರದು. ಯಾಕೆಂದರೆ ಸಂತೋಷ, ದುಃಖ, ಸಿಟ್ಟು, ದ್ವೇಷ ಮೊದಲಾದ ಭಾವಗಳೆಲ್ಲವೂ ಆಲೋಚನೆಗಳೆಲ್ಲವೂ ನಿಮ್ಮದೇ ಅಂಶಗಳು. ಎಚ್ಚರವೆಂಬುದು ಈ ಭಾವ, ಚಿಂತನೆಗಳನ್ನು ಮೆಲುವಾಗಿ ಮೃದುವಾಗಿ ಗಮನಿಸುತ್ತಾ ದಾರಿ ತೋರುವ ಹಿರಿಯಣ್ಣ ಅಥವಾ ಹಿರಿಯಕ್ಕ.
ಎಚ್ಚರದ ಗಮನವು ಸಹನೆಯುಳ್ಳ, ಸ್ಪಷ್ಟತೆಯುಳ್ಳ, ಎಂದೂ ಕ್ರೂರವಾಗದ, ತಾರತಮ್ಯವೆಣಿಸಿದ ಹಿರಿಯ ಸೋದರ, ಸೋದರಿಯಂತೆ ಅಷ್ಟೇ. ಆಲೊಚನೆ, ಭಾವನೆಗಳು ಒಳ್ಳೆಯವೋ ಕೆಟ್ಟವೋ ಎಂದು ನಿರ್ಣಯ ನೀಡುವುದಲ್ಲ, ಅವುಗಳೊಡನೆ ಹೋರಾಡಿ ಗೆಲ್ಲುವುದಲ್ಲ, ಅವನ್ನು ಗುರುತಿಸುವುದಕ್ಕಾಗಿ ಅಷ್ಟೇ ಅದು ಇರುವುದು.
ಕತ್ತಲೆ ಕೆಟ್ಟದ್ದು, ಬೆಳಕು ಒಳ್ಳೆಯದು ಎಂದು ವಿರುದ್ಧ ನೆಲೆಗಳಲ್ಲಿ ಗುರುತಿಸುವುದು ಅಭ್ಯಾಸವಾಗಿದೆ. ಬೇರೆಯ ರೀತಿಯಲ್ಲಿ ನೋಡಿದರೆ ಬೆಳಕು ಇರುವಾಗ ಕತ್ತಲೆ ಮಾಯವಾಗುವುದಿಲ್ಲ, ಹೊರಟು ಹೋಗುವುದಿಲ್ಲ, ಬದಲಾಗಿ ಬೆಳಕಿನಲ್ಲಿ ಕರಗುತ್ತದೆ, ಬೆಳಕೇ ಆಗುತ್ತದೆ. ಧ್ಯಾನವೆಂದರೆ ಸಮಸ್ಯೆಯೊಂದರ ಜೊತೆಯಲ್ಲಿ ಹೋರಾಡುವುದಲ್ಲ. ಧ್ಯಾನವೆಂದರೆ ಗಮನಿಸುವುದು. ನಿಮ್ಮ ನಗು ಮುಖವೇ ಅದಕ್ಕೆ ಸಾಕ್ಷಿ. ನಿಮ್ಮೊಡನೆ ನೀವು ಮೃದುವಾಗಿ ವರ್ತಿಸುತ್ತಿದ್ದೀರಿ ಅನ್ನುವುದರ ಸಾಕ್ಷಿ. ಎಚ್ಚರದ ಬೆಳಕು ನಿಮ್ಮೊಳಗೆ ಹರಡಿದೆ ಅನ್ನುವುದರ ಸಾಕ್ಷಿ. ನೀವು ಇರುವ ಪರಿಸ್ಥಿತಿ ನಿಮ್ಮ ವಶದಲ್ಲಿದೆ ಅನ್ನುವುದರ ಸಾಕ್ಷಿ.
ನೀವು ನೀವೇ ಆಗಿರುತ್ತೀರಿ. ಸ್ವಲ್ಪವಾದರೂ ಶಾಂತಿಯನ್ನು ಗಳಿಸಿರುತ್ತೀರಿ. ಇಂಥ ಶಾಂತಿ ನಿಮ್ಮೊಳಗೆ ಇರುವಾಗ ಮಕ್ಕಳು ನಿಮ್ಮೊಡನೆ ಇರಲು ಆಸೆಪಡುತ್ತವೆ.
*
[ಸಮರ್ಥನೆಯನ್ನೂ ಮಾಡಿಕೊಳ್ಳದೆ, ನಿಂದಿಸಿಕೊಳ್ಳದೆ ಸುಮ್ಮನೆ ನೋಡಿಕೊಂಡಾಗ ಭಾಷೆಯು ಹುಟ್ಟಿಸಿ, ನಿಜವಾಗಿಯೂ ಇವೆ ಎಂದು ತಿಳಿದಿರುವ ದ್ವಂದ್ವಗಳು ಇಲ್ಲವಾಗುತ್ತವೆ. ಈ ಭಾಗವನ್ನು ಓದಿ ಬರೆಯುತ್ತಿರುವಾಗ ಅಲ್ಲಮನ ಈ ವಚನ ಬೇರೆಯದೇ ರೀತಿಯಲ್ಲಿ ಕಂಡಿತು.
ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ
ಬೆಳಕೂ ಅದೇ, ಕತ್ತಲೆಯೂ ಅದೇ
ಇದೇನು ಚೋದ್ಯವೊ
ಒಂದಕ್ಕೊಂದಂಜದು
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ.]

