ಧರ್ಮ ಮತ್ತು ರಾಜಕಾರಣ : ಅಧ್ಯಾತ್ಮ ಡೈರಿ

ಧರ್ಮ ಮತ್ತು ಅಧ್ಯಾತ್ಮ ಬೇರೆ ಬೇರೆ. ಆದ್ದರಿಂದ ಧಾರ್ಮಿಕ ಸಂಗತಿಗಳು ಅಲೌಕಿಕವಾಗಿರಬೇಕೆಂದಿಲ್ಲ. ಆದರೆ, ಯಾವುದೇ ಧರ್ಮದ ಮೂಲ ವಿಚಾರ ಸರ್ವವಸಮಭಾವ ಮತ್ತು ಭಗವಂತನ ಸಾಯುಜ್ಯ (ಅಥವಾ ಮುಕ್ತಿ, ನಿರ್ವಾಣ ಇತ್ಯಾದಿ) ಆಗಿರುತ್ತದೆಯಾದ್ದರಿಂದ, ಜನರನ್ನು ಭಿನ್ನ ಗಡಿ – ಗೋಡೆಗಳಲ್ಲಿ ಗುರುತಿಸುವ ರಾಜಕೀಯದೊಡನೆ ಅದರ ಸಂಬಂಧ, ಅದರ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ… । ಚೇತನಾ ತೀರ್ಥಹಳ್ಳಿ

ಧರ್ಮಗುರುಗಳು ರಾಜರಿಗೆ ಪಟ್ಟ ಕಟ್ಟುವುದು ಬಹುಶಃ ಎಲ್ಲ ದೇಶಕಾಲಗಳ ವಿದ್ಯಮಾನ. ಧರ್ಮ ಮತ್ತು ರಾಜಕೀಯ ಒಂದಕ್ಕೊಂದು ಗಟ್ಟಿಯಾಗಿ ಬೆಸೆದುಕೊಂಡ ಕೊಂಡಿಗಳು, ಒಂದಿಲ್ಲದೆ ಮತ್ತೊಂದು ಸ್ಥಿರವಾಗಿ ಉಳಿಯಲಾರದು ಬಹುಶಃ (ಹಾಗೆಂದೇ ಮಾರ್ಕ್ಸ್‌ನ ಕಮ್ಯುನಿಸಮ್ ತನ್ನ ಅತ್ಯುನ್ನತ ಸಾಮಾಜಿಕ ಚಿಂತನೆಯ ಹೊರತಾಗಿಯೂ ಜನಸಾಮಾನ್ಯರ ಪಾಲಿಗೆ ರಾಜಕೀಯ ಪಕ್ಷವಾಗಿ ಮನ್ನಣೆ ಪಡೆಯದೆ ಹೋಗಿದ್ದು).

ಈ ಮಾತು ಭಾರತದ ರಾಜವಂಶಗಳು, ಪಶ್ಚಿಮದ ಪೋಪ್‌ಗಳು ಮತ್ತು ಸಾಮ್ರಾಜ್ಯಗಳ ಮೇಲಿನ ಅವರ ಹಿಡಿತ, ಅರೇಬಿಯಾದ ಮೌಲ್ವಿಗಳು ಮತ್ತು ಆಳರಸರು – ಎಲ್ಲರಿಗೂ ಅನ್ವಯ; ಬೌದ್ಧ ಧರ್ಮಕ್ಕೆ ಕೂಡ.

ಯಾವ ಧರ್ಮವನ್ನು ಶುದ್ಧ ಅಲೌಕಿಕ ಎಂದು ನಾವು ಭಾವಿಸಿದ್ದೀವೋ ಆ ಧರ್ಮವೂ ರಾಜಕೀಯದಿಂದ ಹೊರತಾಗಿಲ್ಲ. ಸಾಮ್ರಾಜ್ಯಗಳ ಸ್ಥಾಪನೆ, ರಾಜರಿಗೆ ಪಟ್ಟ ಕಟ್ಟುವ ಪ್ರಕ್ರಿಯೆಗಳು ಎಲ್ಲ ಸಲವೂ ಸ್ವಾರ್ಥದಿಂದಲೇ ಕೂಡಿರಬೇಕೆಂದಿಲ್ಲ, ಹಾಗೆಂದು ರಾಜಕಾರಣದಲ್ಲಿ ಧರ್ಮಗಳ ಮತ್ತು ಧರ್ಮಗಳಲ್ಲಿ ರಾಜಕಾರಣದ ಹಸ್ತಕ್ಷೇಪವನ್ನು ಮೃದು ಧೋರಣೆಯಿಂದ ನೋಡಲಾಗದು.

ಧರ್ಮ ಮತ್ತು ಅಧ್ಯಾತ್ಮ ಬೇರೆ ಬೇರೆ. ಆದ್ದರಿಂದ ಧಾರ್ಮಿಕ ಸಂಗತಿಗಳು ಅಲೌಕಿಕವಾಗಿರಬೇಕೆಂದಿಲ್ಲ. ಆದರೆ, ಯಾವುದೇ ಧರ್ಮದ ಮೂಲ ವಿಚಾರ ಸರ್ವವಸಮಭಾವ ಮತ್ತು ಭಗವಂತನ ಸಾಯುಜ್ಯ (ಅಥವಾ ಮುಕ್ತಿ, ನಿರ್ವಾಣ ಇತ್ಯಾದಿ) ಆಗಿರುತ್ತದೆಯಾದ್ದರಿಂದ, ಜನರನ್ನು ಭಿನ್ನ ಗಡಿ – ಗೋಡೆಗಳಲ್ಲಿ ಗುರುತಿಸುವ ರಾಜಕೀಯದೊಡನೆ ಅದರ ಸಂಬಂಧ, ಅದರ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಹಾಗೇ, ಎಲ್ಲವನ್ನೂ ಒಂದು ಗುರುತಿನ ಅಡಿಯಲ್ಲಿ ಸೇರಿಸುವ ಮೂಲಕ ಭಿನ್ನ ಅಸ್ಮಿತೆಗಳನ್ನು ಅಳಿಸಿಹಾಕುವ ವಿಪರ್ಯಾಸವೂ ಪ್ರಶ್ನಾರ್ಹವಾಗುತ್ತದೆ.

ಭೂತಾನ್‌ಗೆ ಹೋದಾಗ ಬೌದ್ಧ ಧರ್ಮ ಹೇಗೆ ಭೂತಾನ್ ದೇಶವನ್ನು ಆವರಿಸಿಕೊಂಡಿತು, ಹೇಗೆ ಅಲ್ಲಿನ ರಾಜರು ಆ ಧರ್ಮಕ್ಕೆ ಆಶ್ರಯ ಕೊಟ್ಟರು, ಖುದ್ದು ಬೌದ್ಧರಾದರು ಅನ್ನುವುದನ್ನು ಗೋಡೆ ಬರಹಗಳಲ್ಲಿ ಓದಿದ್ದೆ ಮತ್ತು ಗೈಡ್‌ಗಳ ಬಾಯಲ್ಲಿ ಕೇಳಿದ್ದೆ. ಗೈಡ್ ಅದನ್ನು ಹೇಳುವಾಗ ದನಿಯಲ್ಲಿ ಅಂಥಾ ಉತ್ಸಾಹವೇನೂ ಇರಲಿಲ್ಲ. ಆತ ಹೊಸತಾಗಿ ಕ್ರಿಶ್ಚಿಯಾನಿಟಿಗೆ ಕನ್ವರ್ಟ್ ಆಗಿದ್ದ. ನಮ್ಮನ್ನು ಸುತ್ತಾಡಿಸಿದ್ದ ಡ್ರೈವರ್ ಅಲ್ಲಿಯ ಮೂಲನಿವಾಸಿ ಧರ್ಮದವನು. ಕೊನೆಯಲ್ಲಿ ಅರ್ಧ ದಿನದ ಮಟ್ಟಿಗೆ ಡ್ರೈವರ್ ಆಗಿ ಬಂದವಳು ಬೌದ್ಧಳು (ವೆಜಿಟೇರಿಯನ್ ಅಂತ ಗೈಡ್ ಅಸಮಾಧಾನ ತೋರಿದ್ದ).

ಸಿಕ್ಕಿಮ್‌ನ ರುಮ್ತೇಕ್ ಮೊನಾಸ್ಟರಿಯಲ್ಲಿ ಕರ್ಮಪಾಗಳ ರಾಜಕೀಯದ ಪರಿಚಯವಾಯ್ತು. ಕಳೆದ ಸಲದ ಭೇಟಿಯಲ್ಲಿ ಸಿಕ್ಕಿದ್ದ ಗೈಡ್ ಲಾಮಾರ ಬಗ್ಗೆ ಅಸಮಾಧಾನ ತೋರಿದ್ದರೆ, ಈ ಸಲ ಡ್ರೈವರ್ ಸದ್ಯದ ಕರ್ಮಪಾರ ಹಣದಾಹದ ಬಗ್ಗೆ ಅಸಮಾಧಾನ ತೋರಿದ್ದ.

ಸಿಕ್ಕಿಮ್‌ನಲ್ಲಿ ಬೌದ್ಧ ಧರ್ಮದ ಇತಿಹಾಸ ಬಹಳ ಹಳತೇನಲ್ಲ. 8 – 9ನೇ ಶತಮಾನದಲ್ಲಿ ಗುರು ರಿನ್‌ಪೋಚೆ ಸಿಕ್ಕಿಮ್‌ಗೆ ಭೇಟಿಯಿತ್ತು, ಅದನ್ನು ಧಮ್ಮದ ಗುಪ್ತಕಣಿವೆ ಎಂದು ಕರೆದು, ಅಲ್ಲೊಂದು ಉಳಿಕೆಯ ತಾಣಕ್ಕೆ ಬುನಾದಿ ಹಾಕಿದ್ದರಂತೆ. ಆದರೆ ಸಿಕ್ಕಿಮ್ ಮೂಲನಿವಾಸಿಗಳು ಅಷ್ಟೇನೂ ಉತ್ಸಾಹ ತೋರಲಿಲ್ಲವಾಗಿ, ಬೌದ್ಧ ಧರ್ಮ ಅಲ್ಲಿ ಚಿಗುರಲಿಲ್ಲ. ನಂತರ 17ನೇ ಶತಮಾನದಲ್ಲಿ ಟಿಬೆಟ್‌ನಿಂದ ಬಂದ ಮೂವರು ಲಾಮಾಗಳು ಯುಕ್ಸೋಮ್‌ನಲ್ಲಿ ಫುಂತ್ಸೋಗ್ ನಮ್‌ಗ್ಯಾಲ್ ಎನ್ನುವ ಸ್ಥಳೀಯ ಮುಖಂಡನಿಗೆ ಪಟ್ಟ ಕಟ್ಟಿ, ಸಿಕ್ಕಿಮ್‌ನ ರಾಜನನ್ನಾಗಿ ಘೋಷಿಸಿದರಂತೆ.

ಸಿಕ್ಕಿಂ ಜನರು ಸ್ವಭಾತಃ ಸೌಮ್ಯ ಮನಸ್ಸಿನವರು ಮತ್ತು ಶಾಂತಿಪ್ರಿಯರು. ಬುಡಕಟ್ಟುಗಳ ನಡುವೆಯಾಗಲಿ ಹಳ್ಳಿಗಳ ನಡುವೆಯಾಗಲಿ ಜಗಳವೇನು ಇರಲಿಲ್ಲ. ಆದರೆ ಆ ಇಡಿಯ ಪ್ರಾಂತ್ಯಕ್ಕೆ ನಿರ್ದಿಷ್ಟ ಅಸ್ಮಿತೆ ಇರಲಿಲ್ಲ ಮತ್ತು ರಾಜ್ಯಧರ್ಮ ಇರಲಿಲ್ಲ ಅನ್ನುವುದು ಪಟ್ಟ ಕಟ್ಟಿದ ಲಾಮಾಗಳ ತರ್ಕವಾಗಿತ್ತು. ಅವರು ತಮ್ಮ ಧರ್ಮವನ್ನು ಆ ಪ್ರಾಂತ್ಯದಲ್ಲಿ ಹರಡಲು ಬಯಸಿದ್ದರಿಂದಲೇ ತಮಗೆ ಅನುಕೂಲವಾಗಬಲ್ಲ ರಾಜನನ್ನು ಆಯ್ಕೆ ಮಾಡಿದ್ದರು.

ಅವರ ಈ ರಾಜಕೀಯ ಬಹಳ ಮಜವಾಗಿದೆ. ಫುಂತ್ಸೋಗ್ ನಮ್‌ಗ್ಯಾಲ್ ಮೂಲತಃ ಟಿಬೆಟ್‌ನ ಬುಟಿಯಾ ಸಮುದಾಯದವರು. ಅವರ ಐದು ತಲೆಮಾರುಗಳಷ್ಟು ಹಿಂದಿನ ಹಿರಿಯರು ಅಲ್ಲಿಂದ ಗಂಗಾತೋಕಕ್ಕೆ (ಗ್ಯಾಂಗ್‌ಟೋಕ್) ಬಂದು ನೆಲೆಸಿದ್ದರು. ಫುಂತ್ಸೋಗ್ ಸಿಕ್ಕಿಂನ ಮೂಲನಿವಾಸಿಗಳಾದ ಲೇಪ್ಚಾ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಟಿಬೇಟಿನಿಂದ ಬಂದ ಲಾಮಾಗಳು ಮೂಲನಿವಾಸಿಗಳನ್ನು ಆಳಬಲ್ಲ ತಮ್ಮ ಕಡೆಯ ಬುಟಿಯಾ ಜನಾಂಗದ ವ್ಯಕ್ತಿಯನ್ನು ರಾಜನನ್ನಾಗಿ ಆಯ್ಕೆ ಮಾಡಿ ಪಟ್ಟ ಕಟ್ಟಿದರು ಮತ್ತು ಸಿಕ್ಕಿಂ‌ನ ಎಲ್ಲ ಪ್ರಾಂತ್ಯಗಳೂ ಒಗ್ಗೂಡಿ ಒಂದು ಸಾಮ್ರಾಜ್ಯವಾಗಬೇಕೆಂದು ನಿರ್ದೇಶನ ನೀಡಿದರು.

ಬುಡಕಟ್ಟು ಆಚರಣೆಗಳ, ತಾವೇ ಆಯ್ಕೆ ಮಾಡಿ ನೇಮಿಸುತ್ತಿದ್ದ ನಾಯಕರ ಆಡಳಿತಕ್ಕೆ ಒಳಪಟ್ಟಿದ್ದ ಸಿಕ್ಕಿಮ್‌ನ ಜನರು ಮೇಲಿನಿಂದ ಬಂದ (ಹಿಮಾಲಯದಿಂದ) ಬಂದ ಈ ನಿರ್ದೇಶನವನ್ನು ಒಪ್ಪಿಕೊಂಡರು. ಬೌದ್ಧ ಧರ್ಮಕ್ಕೆ ನೆರೆಹೊರೆಯ ರಾಜಾಶ್ರಯ ಇದ್ದು, ಅದು ಬಹಳ ಪ್ರಭಾವಶಾಲಿಯಾಗಿದ್ದುದರಿಂದ ಅವರ ಹಸ್ತಕ್ಷೇಪಕ್ಕೆ ಹೆಚ್ಚಿನ ವಿರೋಧ ಬರಲಿಲ್ಲವೇನೋ. ಹೀಗೆ, 17ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಪ್ರದೇಶವಾಗಿದ್ದ ಸಿಕ್ಕಿಂ, ಬೌದ್ಧ ಧರ್ಮೀಯರ ಕಾರಣದಿಂದ ರಾಜಾಡಳಿತಕ್ಕೆ ಒಳಪಟ್ಟಿತು ಮತ್ತು 1975ರವರೆಗೂ ವಂಶಪಾರಂಪರ್ಯ ಹಿಡಿತದಲ್ಲಿತ್ತು.

ಫುಂತ್ಸೋಗ್ ನಮ್‌ಗ್ಯಾಲ್ ಮತ್ತವರ ವಂಶಸ್ಥರು ಸಿಕ್ಕಿಂ ಅನ್ನು ಬಹಳ ಘನತೆಯಿಂದಲೇ ಆಳಿದರು ಮತ್ತು ಜನರನ್ನು ಕರುಣೆಯಿಂದ ನಡೆಸಿಕೊಂಡರು. ಅದು ಬೇರೆ ವಿಚಾರ. ಶಿಕ್ಷಣ ಮತ್ತು ಆಧುನೀಕರಣಕ್ಕೆ ಭದ್ರ ಬುನಾದಿ ಹಾಕಿ, ಗಡಿ ಭಾಗದ ಈ ರಾಜ್ಯವನ್ನು ಪ್ರಗತಿಯ ಮುಂಚೂಣಿಯಲ್ಲಿ ನಿಲ್ಲಿಸಿದ್ದು ಈ ವಂಶಸ್ಥರೇ. ಜೊತೆಗೆ, ಮೂಲನಿವಾಸಿ ಲೇಪ್ಚಾಗಳೊಂದಿಗೆ ಮದುವೆ ಸಂಬಂಧಗಳನ್ನು ಸ್ಥಾಪಿಸಿ ಎರಡೂ ಸಂಸ್ಕೃತಿಗಳನ್ನು ಪರಸ್ಪರ ಬೆಸೆದು ಹೊಸತೊಂದು ಸಂಸ್ಕೃತಿಯ ಉಗಮಕ್ಕೆ ಕಾರಣರಾದರು. ನೇಪಾಳದಿಂದ ಹಿಂದೂಗಳು ವಲಸೆ ಬರುವವರೆಗೂ ಸಿಕ್ಕಿಂನಲ್ಲಿ ಹಿಂದೂ ಧರ್ಮ ಆಚರಣೆಯಲ್ಲಿ ಇರಲಿಲ್ಲ. 18ನೇ ಶತಮಾನದ ನಂತರದಲ್ಲಿ ನೇಪಾಳಿ ವಲಸಿಗರ ಸಂಖ್ಯೆ ಹೆಚ್ಚಾಗಿ, ಸಿಕ್ಕಿಂ – ಲೇಪ್ಚಾ, ಬುಟಿಯಾ ಮತ್ತು ನೇಪಾಳಿ ಸಮುದಾಯಗಳ ಜನರನ್ನು ಹೊಂದಿರುವ ರಾಜ್ಯವಾಯಿತು. ಈ ನೇಪಾಳಿಗರು ತಮ್ಮನ್ನು ಒಟ್ಟಾರೆ ಹಿಂದೂಗಳೆಂದು ಗುರುತಿಸಿಕೊಂಡಿದ್ದರಿಂದ, ಸಿಕ್ಕಿಂನಲ್ಲಿ ಅವರನ್ನು ನಿರ್ದಿಷ್ಟ ಜಾತಿಯಿಂದ ಗುರುತಿಸಲಾಗುವುದಿಲ್ಲ.

ಧರ್ಮದಲ್ಲಿ ರಾಜಕೀಯ ಮತ್ತು ರಾಜಕೀಯದಲ್ಲಿ ಧರ್ಮ ಹೇಗೆ ಹಾಸುಹೊಕ್ಕಾಗಿರುತ್ತದೆಂಬ ಕುತೂಹಲಕ್ಕೆ ಇಷ್ಟು ಬರೆಯಬೇಕಾಯಿತು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.