ಬೌದ್ಧ ಧರ್ಮವನ್ನು ಮೆಟ್ಟಿಲಾಗಿ ಬಳಸಿ ಚಕ್ರವರ್ತಿಯಾದ ದಿಟ್ಟೆ: ವು ಝಿಟಿಯಾನ್

ಚೀನಾ ದೇಶದ ಸಾಮಾಜಿಕ ಮತ್ತು ರಾಜಕೀಯ ಸಂಹಿತೆಗಳು ಕನ್ಫ್ಯೂಶಿಯಸ್ ಚಿಂತನೆಯನ್ನು ಆಧರಿಸಿದ್ದು, ಪುರುಷ ಪಕ್ಷಪಾತಿಯಾಗಿತ್ತು. ಅದು ಹೆಣ್ಣುಗಳಿಗೆ ಆಡಳಿತ ನಡೆಸುವ ಅಧಿಕಾರವನ್ನು ಬಲವಾಗಿ ನಿರಾಕರಿಸಿತ್ತು. ಆದರೆ 7 ನೇ ಶತಮಾನದಲ್ಲಿ ವು ಝಿಟಿಯಾನ್, ಬೌದ್ಧ ಧರ್ಮದ ಉಲ್ಲೇಖಗಳನ್ನು ಮುಂದಿಟ್ಟು, ತನ್ನದೇ ಆದ ‘ಝೌ’ ಸಾಮ್ರಾಜ್ಯವನ್ನು ಸ್ಥಾಪಿಸಿದಳು ಮತ್ತು ತನ್ನನ್ನು ತಾನು ಚಕ್ರವರ್ತಿಯೆಂದು ಘೋಷಿಸಿಕೊಂಡು ರಾಜ್ಯವಾಳಿದಳು. ತನ್ನ ಅರ್ಹತೆಯನ್ನು ಸಾಬೀತುಪಡಿಸಲು ಆಕೆ ಬಳಸಿದ್ದು, ‘ದಾಯೂನ್ ಜಿಂಗ್’ ಎಂಬ ಹೆಸರಿಂದ ಚೀನೀ ಭಾಷೆಗೆ ಅನುವಾದಗೊಂಡಿದ್ದ ‘ಮಹಾಮೇಘ ಸೂತ್ರ’ವನ್ನು ~ ಚೇತನಾ ತೀರ್ಥಹಳ್ಳಿ

ಹಿಂದೆ ಬರೆದಂತೆ, ಸಾಮ್ರಾಜ್ಯಗಳ ಸ್ಥಾಪನೆಯಲ್ಲಿ ಮತ್ತು ರಾಜರುಗಳಿಗೆ ಪಟ್ಟ ಕಟ್ಟುವಲ್ಲಿ ಧಾರ್ಮಿಕ ಮುಖಂಡರ ಹಸ್ತಕ್ಷೇಪ ಜಗತ್ತಿನ ಎಲ್ಲ ಭೂಭಾಗಗಳಲ್ಲೂ ಮತ್ತು ಪ್ರಮುಖ ಧರ್ಮಗಳಲ್ಲೂ ಕಂಡು ಬಂದಿದೆ ಮತ್ತು ಇದಕ್ಕೆ ಅಲೌಕಿಕ ಬದುಕನ್ನು ಬೋಧಿಸುವ ಬೌದ್ಧ ಧರ್ಮವೂ ಹೊರತಾಗಿಲ್ಲ. ಆಸಕ್ತಿಕರ ಸಂಗತಿ ಎಂದರೆ, ಜನಸಾಮಾನ್ಯರನ್ನು ಸೆಳೆಯಲಿಕ್ಕಾಗಿ ತಾನು ನಡೆದಲ್ಲೆಲ್ಲ ಸ್ಥಳೀಯ – ಜಾನಪದ ಆಚರ ವಿಚಾರ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು ಹೊಸ ರೂಪ ಪಡೆಯುತ್ತ ಹೋದ ಬೌದ್ಧ ಧರ್ಮ, ಹಲವು ಕ್ರಾಂತಿಗಳಿಗೂ ಕಾರಣವಾಗಿದ್ದು. ಉದಾಹರಣೆಗೆ: ಚೀನಾ ದೇಶದ ರಾಜಕುಮಾರಿ ವು ಝಿಟಿಯಾನ್ ಜೊಂಗ್‌ಗುವೋದ (ಚೀನಾ) ಮೊದಲ ಮತ್ತು ಕೊನೆಯ ಚಕ್ರವರ್ತಿಯಾಗಲು ಪ್ರಮುಖ ಕಾರಣವಾಗಿದ್ದು!

ಚೀನಾ ದೇಶದ ಸಾಮಾಜಿಕ ಮತ್ತು ರಾಜಕೀಯ ಸಂಹಿತೆಗಳು ಕನ್ಫ್ಯೂಶಿಯಸ್ ಚಿಂತನೆಯನ್ನು ಆಧರಿಸಿದ್ದು, ಪುರುಷ ಪಕ್ಷಪಾತಿಯಾಗಿತ್ತು. ಅದು ಹೆಣ್ಣುಗಳಿಗೆ ಆಡಳಿತ ನಡೆಸುವ ಅಧಿಕಾರವನ್ನು ಬಲವಾಗಿ ನಿರಾಕರಿಸಿತ್ತು. ಆದರೆ 7 ನೇ ಶತಮಾನದಲ್ಲಿ ವು ಝಿಟಿಯಾನ್, ಬೌದ್ಧ ಧರ್ಮದ ಉಲ್ಲೇಖಗಳನ್ನು ಮುಂದಿಟ್ಟು, ತನ್ನದೇ ಆದ ‘ಝೌ’ ಸಾಮ್ರಾಜ್ಯವನ್ನು ಸ್ಥಾಪಿಸಿದಳು ಮತ್ತು ತನ್ನನ್ನು ತಾನು ಚಕ್ರವರ್ತಿಯೆಂದು ಘೋಷಿಸಿಕೊಂಡು ರಾಜ್ಯವಾಳಿದಳು. ತನ್ನ ಅರ್ಹತೆಯನ್ನು ಸಾಬೀತುಪಡಿಸಲು ಆಕೆ ಬಳಸಿದ್ದು, ‘ದಾಯೂನ್ ಜಿಂಗ್’ ಎಂಬ ಹೆಸರಿಂದ ಚೀನೀ ಭಾಷೆಗೆ ಅನುವಾದಗೊಂಡಿದ್ದ ‘ಮಹಾಮೇಘ ಸೂತ್ರ’ವನ್ನು. ಈ ಸೂತ್ರದಲ್ಲಿ ದೇವತೆಯೊಬ್ಬನು ಮಹಿಳೆಯಾಗಿ ಮರುಜನ್ಮ ಪಡೆದು, ನಂತರ ಚಕ್ರವರ್ತಿಯಾಗಿ ಸಾಮ್ರಾಜ್ಯ ಆಳುತ್ತಾಳೆ ಮತ್ತು ನಾಡನ್ನು ಸಮೃದ್ಧಗೊಳಿಸುತ್ತಾಳೆ ಎಂದು ಉಲ್ಲೇಖಿಸಲಾಗಿತ್ತು. ಆ ದೇವತೆಯ ಮರುಜನ್ಮ ತಾನೇ ಎಂದು ವು ಝಿಟಿಯಾನ್ ಪ್ರಚುರಪಡಿಸಿದಳು. ಅಷ್ಟೇ ಅಲ್ಲ, ಭವಿಷ್ಯದ ಬುದ್ಧನಾದ ‘ಮೈತ್ರೇಯ’ನ ಅವತಾರ ತಾನೆಂದೂ, ತನ್ನಿಂದ ಭೂಮಿಯಲ್ಲಿ ಶಾಂತಿ ಸ್ಥಾಪನೆಯಾಗುವುದೆಂದೂ ಪ್ರಚಾರ ಮಾಡಿದಳು. ಫೆಂಗ್ಸಿಯಾನ್ ದೇವಾಲಯದಲ್ಲಿ 57 ಅಡಿ ಎತ್ತರದ ಬೃಹತ್ ‘ವೈರೋಚನ ಬುದ್ಧನ’ ಮೂರ್ತಿಯನ್ನು ನಿರ್ಮಿಸಿ ಬೌದ್ಧ ಧರ್ಮದ ಬಗೆಗಿನ ತನ್ನ ಒಲವನ್ನು ತೋರ್ಪಡಿಸಿಕೊಂಡಳು.

ವು ಝಿಟಿಯಾನ್ ಕಾಲಮಾನ, ಚೀನಾ ದೇಶವು ನಿರಂತರ ಯುದ್ಧಗಳಿಂದ ಬಸವಳಿದಿತ್ತು. ರಕ್ತಪಾತದಿಂದ ನಲುಗಿದ್ದ ಜನರು ತಂಗಾಳಿಯಂತೆ ಸುಳಿಯುತ್ತಿದ್ದ ಬೌದ್ಧ ಚಿಂತನೆಗಳಿಗೆ ಮಾರುಹೋಗಿದ್ದರು. ಸಹಜವಾಗೇ ಝಿಟಿಯಾನಳ ಮಾತುಗಳು ಅವರ ಅಂತಃಕರಣ ಗೆದ್ದು, ಅವಳನ್ನು ಚಕ್ರವರ್ತಿಯಾಗಿ ಒಪ್ಪಿಕೊಳ್ಳುವಂತೆ ಮಾಡಿದವು. ಆಡಿದ ಮಾತಿನಂತೆ ಅವಳು ಕೂಡ ತನ್ನ ಆಳ್ವಿಕೆಯ ಅವಧಿಯಲ್ಲಿ ಆ ವಿಶಾಲ ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿಗಳು ನೆಲೆಯಾಗುವಂತೆ ನೋಡಿಕೊಂಡಳು. ಭಾರತದಿಂದ ಬಿಕ್ಖುಗಳನ್ನು ಕರೆಸಿಕೊಂದು ಧಮ್ಮ ಮತ್ತು ಅರಿವಿನ ಪ್ರಚಾರಕ್ಕೆ ನೇಮಿಸಿದಳು. ಇವಳ ಆಡಳಿತಾವಧಿಯಲ್ಲಿ ಜೊಂಗ್‌ಗುವೋದ ಗಡಿಗಳು ಕೊರಿಯಾ ಮತ್ತು ವಿಯೆಟ್ನಾಮ್ ವರೆಗೂ ಚಾಚಿಕೊಂಡಿದ್ದವು.

ವು ಝಿಟಿಯಾನಳ ಈ ಹಾದಿ ಸುಲಭದ್ದೇನಾಗಿರಲಿಲ್ಲ. ಮೂಲತಃ ವ್ಯಾಪಾರಿ ಕುಟುಂಬದವಳಾದ ಆಕೆಯನ್ನು ಟಾಂಗ್ ರಾಜವಂಶದ ಎರಡನೇ ಚಕ್ರವರ್ತಿ ತೈಝಾಂಗ್ ರಾಜನ ಅಂತಃಪುರಕ್ಕೆ ಕಳಿಸಿಕೊಡಲಾಗಿತ್ತು. ಆಗಿನ್ನೂ ಅವಳಿಗೆ 14 ವರ್ಷ ವಯಸ್ಸು. ಆತನ ಮರಣದ ನಂತರ ಅವನ ಮಗ ಮತ್ತು ಮುಂದಿನ ಚಕ್ರವರ್ತಿಯಾದ ಗಾವೋಝಾಂಗ್ ಅವಳನ್ನು ತನ್ನ ಪತ್ನಿಯನ್ನಾಗಿ ಮಾಡಿಕೊಂಡು, ಪಟ್ಟದರಸಿಯನ್ನಾಗಿ ಘೋಷಿಸಿದ. ಗಾವೋಝಾಂಗನ ಮರಣದ ನಂತರ ವು ಝಿಟಿಯಾನ್ ಆಡಳಿತ ಸೂತ್ರ ಕೈಗೆತ್ತಿಕೊಂಡಳು. ಬಾಲ್ಯದಲ್ಲಿಯೇ ಸಾಕಷ್ಟು ಶಿಕ್ಷಣ ಪಡೆದಿದ್ದ, ಅತ್ಯಂತ ಚುರುಕು ಬುದ್ದಿಯ ಝಿಟಿಯಾನಳಿಗೆ ಇದೇನೂ ಕಷ್ಟದ ಕೆಲಸವಾಗಲಿಲ್ಲ. ಆದರೆ, ದರ್ಬಾರಿನ ಮಂತ್ರಿಗಳ ನಡು ಬಗ್ಗಿಸಲು ಮತ್ತು ಆಡಳಿತವನ್ನು ಅಧಿಕೃತವಾಗಿ ತನ್ನದಾಗಿಸಿಕೊಳ್ಳಲು ತಾನು ಚಕ್ರವರ್ತಿಯ ಸ್ಥಾನದಲ್ಲಿ ಕೂರಲೇಬೇಕೆಂಬುದನ್ನು ಅವಳು ಕಂಡುಕೊಂಡಳು. ಅದಾಗಲೇ ಬೌದ್ಧ ಧರ್ಮದ ಬಗ್ಗೆ ಒಲವು ಹೊಂದಿದ್ದು, ಸಾಕಷ್ಟು ಅಧ್ಯಯನ ಮಾಡಿದ್ದ ಅವಳಿಗೆ ಮಹಾಮೇಘ ಸೂತ್ರದ ಉಲ್ಲೇಖ ಬಹಳ ದೊಡ್ಡ ಆಸರೆಯಾಗಿ ಕಂಡಿತು. ತನ್ನನ್ನು ಬೆಂಬಲಿಸುವ ಬೌದ್ಧ ಬಿಕ್ಖುಗಳನ್ನು ಅದರ ಪ್ರಚಾರಕ್ಕಾಗಿ ನೇಮಿಸಿ, ಜನಸಾಮಾನ್ಯರ ನಡುವೆ ಅದರಲ್ಲಿನ ಉಲ್ಲೇಖಗಳು ಯಶಸ್ವಿಯಾಗಿ ಹರಡುವಂತೆ ನೋಡಿಕೊಂಡಳು. ನಿರೀಕ್ಷಿತ ಫಲಿತಾಂಶ ದೊರೆಯಿತು; ನಂತರದ್ದು ಈಗ ಮರೆಯಲಾಗದ ಇತಿಹಾಸ.

ವು ಝಿಟಿಯಾನ್ 80ನೇ ವರ್ಷದವಳಿದ್ದಾಗ ಅನಾರೋಗ್ಯಕ್ಕೆ ಒಳಗಾದಳು. ಆಡಳಿತದ ಮೇಲಿನ ಹಿಡಿತ ಕೈಜಾರಿ ಅರಮನೆಯಲ್ಲಿ ದಂಗೆ ಎದ್ದಿತು. ಅವಳು ಅನಿವಾರ್ಯವಾಗಿ ತನ್ನ ಮಗ ಜಾಂಗ್‌ಜಾಂಗ್‌ಗೆ ಅಧಿಕಾರ ಹಸ್ತಾಂತರಿಸಬೇಕಾಯಿತು. ಜಾಂಗ್‌ಜಾಂಗ್ ತನ್ನ ಆಡಳಿತವನ್ನು ಟಾಂಗ್ ಸಾಮ್ರಾಜ್ಯದ ಹೆಸರಿನಲ್ಲೇ ಮುಂದುವರಿಸಿದ. ಇದರೊಂದಿಗೆ, ವು ಝಿಟಿಯಾನಳ ಝೌ ಸಾಮ್ರಾಜ್ಯದ ಇತಿಹಾಸ ಕೊನೆಗೊಂಡಿತು.

ನಂತರದ ಒಂದು ವರ್ಷವನ್ನು ಏಕಾಂತದಲ್ಲಿ ಕಳೆದ ಝಿಟಿಯಾನ್, 81ನೇ ವಯಸ್ಸಿನಲ್ಲಿ ತೀರಿಕೊಂಡಳು. ಅವಳನ್ನು ಅವಳ ಗಂಡ ಗಾವೋಝಾಂಗನ ಸಮಾಧಿಯ ಪಕ್ಕದಲ್ಲೇ ಹೂಳಲಾಯಿತು ಮತ್ತು ಅವಳ ಬಯಕೆಯಂತೆ ಸಮಾಧಿಯ ಮೇಲೆ ಏನನ್ನೂ ಬರೆಯದೆ ಫಲಕವನ್ನು ಖಾಲಿ ಬಿಡಲಾಯಿತು.

ಅಂದಹಾಗೆ, ಚೀನಾ ದೇಶಕ್ಕೆ ಬೌದ್ಧ ಧರ್ಮದ ಚಿಹ್ನೆಯಾದ ‘ಸ್ವಸ್ತಿಕ’ವನ್ನು ಪರಿಚಯಿಸಿದ್ದು ಇವಳೇ. ಅದನ್ನು ‘ವಾನ್’ ಎಂದು ಕರೆದು ಜನಪ್ರಿಯಗೊಳಿಸಿದ್ದೂ ಇವಳೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.