ನಾವು ಇಂದು ಬದುಕುತ್ತಿರುವ ಸಮಾಜ, ಮುಖಗಳನ್ನೇ ಅಳಿಸಿಬಿಡಲು ಯತ್ನಿಸುತ್ತಿದೆ. ಒಬ್ಬರ ಮುಖಭಾವ ಕುಸಿಯುವುದನ್ನು ನೋಡದೇ, ನಾವು ಅವರಿಗೆ ನಿಂದನೆಗಳನ್ನು ಕಳುಹಿಸಬಹುದು. ಡೇಟಿಂಗ್ ಆಪ್‌ನಲ್ಲಿ, ಒಬ್ಬರನ್ನು ಅವರು ಮನುಷ್ಯರೇ ಅಲ್ಲ ಎನ್ನುವಂತೆ, ಅವರನ್ನು ಒಂದು ಕ್ಯಾಟಲಾಗ್‌ನ ವಸ್ತುವಿನಂತೆಯೇ ಸ್ವೈಪ್ ಮಾಡುತ್ತ ಮುಂದಕ್ಕೆ ಹೋಗಬಹುದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಯಾರನ್ನಾದರೂ ಮುಖಾಮುಖಿಯಾಗಿ ನೋಯಿಸುವುದಕ್ಕಿಂತ, ಅವರ ಕಾಮೆಂಟ್ ಸೆಕ್ಷನ್‌ನಲ್ಲಿ ಕ್ರೂರಿಯಾಗಿ ವರ್ತಿಸುವುದು ನಮಗೆ ಏಕೆ ಬಹಳ ಸುಲಭವಾಗುತ್ತದೆ? ಕಠಿಣ ಮಾತುಕತೆಗಳನ್ನು ನಾವು ಫೋನ್‌ನಲ್ಲಿ ಅಥವಾ ಮೆಸೇಜ್ ಮೂಲಕ ನಡೆಸುವುದನ್ನು ಏಕೆ ಹೆಚ್ಚು ಇಷ್ಟಪಡುತ್ತೇವೆ?
ಫಿಲಾಸೊಫರ್ Emmanuel Levinas ಅವರ ಪ್ರಕಾರ, ನೀವು ಒಬ್ಬರ ಮುಖವನ್ನು ನಿಜವಾಗಿ ದಿಟ್ಟಿಸಿ ನೋಡಿದಾಗ, ನೀವು ನಿರ್ಲಕ್ಷಿಸಲಾಗದ ನಿಮ್ಮ ಅಸ್ತಿತ್ವದ ಭಾಗವೊಂದು ತೆರೆದುಕೊಳ್ಳುತ್ತದೆ. ಆಗ ನೀವು ಅವರ ಅಸಹಾಯಕತೆಯನ್ನು ಕಾಣುತ್ತೀರಿ. ಅವರ ಸಾವಿನ ನೆರಳನ್ನು ಕಾಣುತ್ತೀರಿ. ಅವರು ಜೀವಂತ ವ್ಯಕ್ತಿ ಎಂಬ ಸತ್ಯವನ್ನು ಅನುಭವಿಸುತ್ತೀರಿ. ಒಬ್ಬ ವ್ಯಕ್ತಿಯ ಮುಖವು, ಯಾವುದೇ ಶಬ್ದಗಳ ಸಹಾಯವಿಲ್ಲದೇ ನುಡಿಯುತ್ತದೆ : “I exist, ನಾನು ನೋವು ಅನುಭವಿಸುತ್ತೇನೆ. ದಯವಿಟ್ಟು ನನ್ನನ್ನು ನಾಶಮಾಡಬೇಡಿ.” ಇತ್ಯಾದಿಯಾಗಿ.
ತಮ್ಮ ಪುಸ್ತಕ The Drowned and the Saved ನಲ್ಲಿ ಲೇಖಕ Primo Levi ಬರೆಯುತ್ತಾರೆ : Holocaust ಸಮಯದಲ್ಲಿ ಗಾರ್ಡಗಳು ಕೈದಿಗಳ ಕಣ್ಣಿನಲ್ಲಿ ಕಣ್ಣಿಟ್ಟು ಬಹಳ ಕಡಿಮೆ ನೋಡುತ್ತಿದ್ದರು. ಏಕೆಂದರೆ ಒಮ್ಮೆ ಅವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದರೆ, ಅವರ ಮಾನವೀಯತೆಯನ್ನು ಒಪ್ಪಿಕೊಳ್ಳಬೇಕಾಗುತ್ತಿತ್ತು.
Primo Levi ಅವರು ಹೇಳುವಂತೆ : ಆ ಗಾರ್ಡಗಳು ಕೈದಿಗಳ ಮುಖಗಳನ್ನು ನೇರವಾಗಿ ನೋಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ಅವರು ಕೈದಿಗಳತ್ತ ನೇರವಾಗಿ ನೋಡುತ್ತಿರಲಿಲ್ಲ ; ಅವರ ಪಕ್ಕದಲ್ಲಿ, ಅವರ ಮೂಲಕ, ಅಥವಾ ಅವರ ಸುತ್ತಲೂ ನೋಡುತ್ತಿದ್ದರು. ಬೇರೆ ಎಲ್ಲಿಯಾದರೂ ನೋಡುತ್ತಿದ್ದರು, ಆದರೆ ಅವರ ಮುಖಗಳತ್ತ ಮಾತ್ರ ನೋಡುತ್ತಿರಲಿಲ್ಲ. ಏಕೆಂದರೆ ಆ ಮುಖಗಳು ವ್ಯವಸ್ಥೆ ಸಂಪೂರ್ಣವಾಗಿ ನಾಶಮಾಡಲು ಅಸಮರ್ಥವಾದ ಸಂಗತಿಗಳಾಗಿದ್ದವು.
ನಾವು ಇಂದು ಬದುಕುತ್ತಿರುವ ಸಮಾಜ, ಮುಖಗಳನ್ನೇ ಅಳಿಸಿಬಿಡಲು ಯತ್ನಿಸುತ್ತಿದೆ. ಒಬ್ಬರ ಮುಖಭಾವ ಕುಸಿಯುವುದನ್ನು ನೋಡದೇ, ನಾವು ಅವರಿಗೆ ನಿಂದನೆಗಳನ್ನು ಕಳುಹಿಸಬಹುದು. ಡೇಟಿಂಗ್ ಆಪ್‌ನಲ್ಲಿ, ಒಬ್ಬರನ್ನು ಅವರು ಮನುಷ್ಯರೇ ಅಲ್ಲ ಎನ್ನುವಂತೆ, ಅವರನ್ನು ಒಂದು ಕ್ಯಾಟಲಾಗ್‌ನ ವಸ್ತುವಿನಂತೆಯೇ ಸ್ವೈಪ್ ಮಾಡುತ್ತ ಮುಂದಕ್ಕೆ ಹೋಗಬಹುದು. ಯುದ್ಧಗಳನ್ನೂ, ಕೊಲೆಗಳನ್ನೂ ನಾವು ಒಂದು ಬಟನ್ ಒತ್ತುವ ಮೂಲಕ ಡ್ರೋನ್‌ಗಳಿಗೆ ಒಪ್ಪಿಸಿಬಿಡಬಹಪದು. ಸಾವಿರಾರು ಜನರು ಸತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ಓದಿ ಕೂಡ ಏನೂ ಫೀಲ್ ಮಾಡಿಕೊಳ್ಳದೇ ಇರಬಹುದು — ಏಕೆಂದರೆ ಅಲ್ಲಿ ಯಾವ ಮುಖವೂ ಇಲ್ಲ.
Emmanuel Levinas ಅವರ ವಾದ ಏನೆಂದರೆ — ಪ್ರತೀ ಬಾರಿ ನಾವು “ಮುಖ”ವನ್ನು ಸಮೀಕರಣದಿಂದ ಹೊರಗೆ ಇಟ್ಟಾಗ, ನಮ್ಮನ್ನು ನೈತಿಕವಾಗಿಸುವ ಅಂಶವನ್ನೇ ನಾವು ಕಳೆದುಕೊಳ್ಳುತ್ತೇವೆ. ಆದ್ದರಿಂದ, ನಮ್ಮ ಕಾಲದ ಅತ್ಯಂತ ಮಹತ್ವದ ನೈತಿಕ ಪ್ರಶ್ನೆ ಬಹುಶಃ
“ನಿಯಮಗಳು ಯಾವುವು?” ಅಥವಾ “ನೈತಿಕ ಮೌಲ್ಯಗಳು ಯಾವುವು?” ಎನ್ನುವುದಲ್ಲ. ಬದಲಾಗಿ ಅದು: “ಯಾರ ಮುಖಗಳನ್ನು ನೋಡುವುದನ್ನ ನಾವು ನಿಲ್ಲಿಸಿದ್ದೇವೆ?” ಎನ್ನುವುದಾಗಿರಬಹುದು.

