ಮನಸ್ಸಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು, ನಮಗೆ ಅರಿವು ಎಂಬ ಪೊಲೀಸ್ ಅಧಿಕಾರಿ ಬೇಕು. ನಮ್ಮ ಮನಸ್ಸು “ಹೊತ್ತೊಯ್ಯುವ ಸ್ಥಳ” ಅಲ್ಲ… “ಬಿಡುವ ಸ್ಥಳ” ಆಗಬೇಕು । ಡಾ. ಸಹನಾ ಪ್ರಿಯದರ್ಶಿನಿ
ಇಬ್ಬರು ಭಿಕ್ಷುಗಳು (ಸನ್ಯಾಸಿಗಳು) ಮಳೆ ಬಂದು ಕೆಸರು ತುಂಬಿದ ದಾರಿಯಲ್ಲಿ ನಡೆಯುತ್ತ ಹೋಗುತ್ತಿದ್ದರು. ಅಲ್ಲಿ ಒಬ್ಬಳು ಯುವತಿ ಆ ಕೆಸರನ್ನು ದಾಟಲು ಸಾಧ್ಯವಾಗದೆ ಕಂಗಾಲಾಗಿ ನಿಂತಿದ್ದಳು. ಆ ಭಿಕ್ಷುಗಳಲ್ಲಿ ಒಬ್ಬನು ತಕ್ಷಣ ಆಕೆಯನ್ನು ಎತ್ತಿಕೊಂಡು, ಕೆಸರನ್ನು ದಾಟಿಸಿ, ಸುರಕ್ಷಿತವಾಗಿ ಇಳಿಸಿದ. ಯುವತಿಯು ಅವರಿಗೆ ಧನ್ಯವಾದ ಹೇಳಿ ಮುಂದೆ ಹೋದಳು. ನಂತರ ಇಬ್ಬರೂ ಭಿಕ್ಷುಗಳು ತಮ್ಮ ದಾರಿಯಲ್ಲಿ ಮುಂದೆ ನಡೆದುಕೊಂಡು ಹೋದರು.
ಸ್ವಲ್ಪ ಸಮಯದ ನಂತರ, ಇನ್ನೊಬ್ಬ ಭಿಕ್ಷು ಸಹಿಸಿಕೊಳ್ಳಲಾಗದೆ ಕೇಳಿದ:
“ನಾವು ಮಹಿಳೆಯರನ್ನು ಮುಟ್ಟಬಾರದು ಎಂದು ನಿಯಮ ಇರುವಾಗ, ನೀನು ಯಾಕೆ ಆಕೆಯನ್ನು ಎತ್ತಿಕೊಂಡೆ?”
ಮೊದಲ ಭಿಕ್ಷು ಶಾಂತವಾಗಿ ಉತ್ತರಿಸಿದ:
“ನಾನು ಆಕೆಯನ್ನು ಅಲ್ಲಿಯೇ ಇಳಿಸಿ ಬಿಟ್ಟೆ…
ನೀನು ಇನ್ನೂ ಆಕೆಯನ್ನು ಹೊತ್ತುಕೊಂಡೇ ಇದ್ದೀಯಾ?”
ಈ ಕಥೆ ನಮ್ಮ ದಿನನಿತ್ಯ ಜೀವನದ ಸತ್ಯವನ್ನು ತೋರಿಸುತ್ತದೆ. ಹಲವಾರು ಬಾರಿ ಅನೇಕ ಘಟನೆಗಳು ನಡೆಯುತ್ತದೆ, ಏನೋ ತಪ್ಪು ಆಗುತ್ತದೆ, ಅಥವಾ ಯಾರಾದರೂ ನಮ್ಮನ್ನು ನೋಯಿಸುತ್ತಾರೆ. ಆ ಕ್ಷಣದಲ್ಲಿ ಅದು ಮುಗಿದರೂ, ನಾವು ಅದನ್ನು ಮನಸ್ಸಿನಲ್ಲಿ ಮತ್ತೆ ಮತ್ತೆ ನೆನಪಿಸಿಕೊಂಡು ಹೊತ್ತುಕೊಂಡೇ ಇರುತ್ತೇವೆ.
ಇದು ನಮ್ಮ ಮನಸ್ಸಿಗೆ ಅನಗತ್ಯವಾದ ಭಾರವನ್ನು ಕೊಡುತ್ತದೆ. ಕೋಪ, ಅಸಮಾಧಾನ, ನೋವು- ಇವುಗಳು ನಿಧಾನವಾಗಿ ನಮ್ಮೊಳಗೆ ಜಮೆಯಾಗುತ್ತಾ ಹೋಗುತ್ತವೆ . ಫಲಿತಾಂಶ ಏನು? ಶಾಂತಿ- ನೆಮ್ಮದಿ ಕಳೆದುಹೋಗುತ್ತದೆ.
ಮೊದಲ ಭಿಕ್ಷುವಿನಂತೆ, ಘಟನೆ ನಡೆದ ಕ್ಷಣದಲ್ಲೇ ಅದನ್ನು ಬಿಡಲು ಕಲಿತರೆ, ಮನಸ್ಸು ಹಗುರವಾಗಿರುತ್ತದೆ. ಆದರೆ ಎರಡನೇ ಭಿಕ್ಷುವಿನಂತೆ, ನಾವು ಅದನ್ನು ಹಿಡಿದುಕೊಂಡೇ ಇದ್ದರೆ, ಅದು ನಮ್ಮನ್ನು ಒಳಗೇ ಕಾಡುತ್ತದೆ.
ಜೀವನದಲ್ಲಿ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಅನ್ನುವುದನ್ನು ನಿಯಂತ್ರಿಸಬಹುದು. ಹೋದದ್ದನ್ನು ಬಿಡುವುದು, ಕ್ಷಮಿಸುವುದು, ಮುಂದಕ್ಕೆ ಸಾಗುವುದು- ಇವೇ ಮನಸ್ಸಿನ ಶಾಂತಿಯ ಮಾರ್ಗ. ಮನಸ್ಸಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು, ನಮಗೆ ಅರಿವು ಎಂಬ ಪೊಲೀಸ್ ಅಧಿಕಾರಿ ಬೇಕು.
ನಮ್ಮ ಮನಸ್ಸು “ಹೊತ್ತೊಯ್ಯುವ ಸ್ಥಳ” ಅಲ್ಲ… “ಬಿಡುವ ಸ್ಥಳ” ಆಗಬೇಕು.
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

