ಯಾವುದೇ ವಿಚಾರವಿರಲಿ, ಅದು ಸಾಂಸ್ಥಿಕವಾದ ಕೂಡಲೆ ಅದಕ್ಕೊಂದು ಮಿತಿಯೂ ಹುಟ್ಟಿಕೊಳ್ಳುತ್ತೆ. ಇದಕ್ಕೆ ಬೌದ್ಧ ಧರ್ಮವೂ ಹೊರತಲ್ಲ…~ ಚೇತನಾ ತೀರ್ಥಹಳ್ಳಿ
ಧರ್ಮ ಮತ್ತು ರಾಜಕಾರಣದ ಬಗ್ಗೆ ಬರೀತಾ ಶುದ್ಧ ಆಧ್ಯಾತ್ಮಿಕ ಮತ್ತು ಮಾನವರ ಸಹಜಧರ್ಮವಾಗಿ ಹುಟ್ಟಿಕೊಂಡಿದ್ದ ಬೌದ್ಧ ಧರ್ಮವೂ ಹೇಗೆ ರಾಜಕೀಯದ ದಾಳವಾಯಿತು ಅನ್ನುವುದರ ಈ ಹಿಂದೆ ಎರಡು ತುಣುಕುಗಳಲ್ಲಿ ಬರೆದಿದ್ದೆ. ಇವತ್ತು ಇನ್ನೂ ಒಂದು ಇಂಟರೆಸ್ಟಿಂಗ್ ಸಂಗತಿ ಸಿಕ್ಕಿತು. ಅದು, ಬೌದ್ಧ ಧರ್ಮ ಚೀನಾದಲ್ಲಿ ಹೇಗೆ ವರ್ಗಗಳನ್ನು ಪೋಷಿಸಿತು ಅನ್ನೋದು.
ಚೀನಾದಲ್ಲಿ ಜಾತಿಗಳು ಮೊದಲಿಂದಲೂ ಇಲ್ಲ. ಅಲ್ಲಿರುವುದು ವರ್ಗಗಳು ಮತ್ತು ಈ ವರ್ಗ ತಾರತಮ್ಯ ಭಾರತದ ಜಾತೀಯತೆಯಷ್ಟೇ ಮತ್ತು ಪಶ್ಚಿಮದ ರೇಸಿಸಮ್‌ನಷ್ಟೇ ಅಸಹ್ಯದ್ದಾಗಿತ್ತು. ಹಲವು ಕ್ರಾಂತಿಗಳ ನಂತರ ಇಂದಿನ ಚೀನಾದಲ್ಲಿ ವರ್ಗ ತಾರತಮ್ಯ ಅತ್ಯಂತ ತಳಕ್ಕಿಳಿದಿದೆ ಅನ್ನಲಾಗುತ್ತದೆ.
ಇಲ್ಲಿ ಪೋಸ್ಟ್ ಮಾಡಿರೋದು ಸೋವಿಯೆತ್ ರಷ್ಯಾದ ನಿಕೊಲಾಯ್ ಕೋಗೌಟ್ ಅವರು ‘ಗಾಡ್‌ಲೆಸ್ ಅಟ್ ದಿ ಮೆಷಿನ್’ (ಬೆಜ್‌ಬೋಜ್ನಿಕ್ ಉ ಸ್ಟಾಂಕಾ) ಪತ್ರಿಕೆಗಾಗಿ ರಚಿಸಿದ್ದ ಇಲಸ್ಟ್ರೇಶನ್. 1923ರಿಂದ 1931ರವರೆಗೆ ಅಸ್ತಿತ್ವದಲ್ಲಿದ್ದ ‘ಗಾಡ್‌ಲೆಸ್ ಅಟ್ ದಿ ಮೆಷಿನ್’ ಪತ್ರಿಕೆಯು ಸೋವಿಯತ್ ಒಕ್ಕೂಟದ ಎರಡು ಪ್ರಮುಖ ಧರ್ಮವಿರೋಧಿ ನಿಯತಕಾಲಿಕೆಗಳಲ್ಲಿ ಒಂದಾಗಿತ್ತು.
ಈ ಇಲಸ್ಟ್ರೇಶನ್‌ನಲ್ಲಿ ರಷ್ಯನ್ ಭಾಷೆಯಲ್ಲಿ ಎಲ್ಲಕ್ಕಿಂತ ಮೇಲೆ ಚೀನಾದ ‘ಕಾಯಿಸುವ ಪಾತ್ರೆ’ (ನಮ್ಮಲ್ಲಿ ಕಾಫಿ ಪಾತ್ರೆ, ಸಾರಿನ ತಪ್ಪಲೆ ಅಂದಂಗೆ) ಎಂದು ಬರೆಯಲಾಗಿದೆ. ಈ ಪಾತ್ರೆಯಲ್ಲಿ ಬೃಹದಾಕಾರದ ಬುದ್ಧನನ್ನು ಕೂರಿಸಲಾಗಿದೆ. ಆ ಬುದ್ಧನ ಕೆಳಗೆ ಜನಸಾಮಾನ್ಯರು ನುಜ್ಜು ಗುಜ್ಜಾಗಿದ್ದಾರೆ. ಅವರನ್ನು ಹಿಂಡಿ ತೆಗೆದ ಸಂಪತ್ತು ಬುದ್ಧನ ಮೂಲಕ ಚಿನ್ನವಾಗಿ ಸುರಿಯುತ್ತಿದೆ ಮತ್ತು ನೆಲದ ಮೇಲೆ ನಿಂತ ಉನ್ನತ ವರ್ಗದ ಅಧಿಕಾರಿಗಳು ಮತ್ತು ಶ್ರೀಮಂತರು ಅದನ್ನು ಮೊಗೆದುಕೊಳ್ಳುತ್ತಿದ್ದಾರೆ, ಮಜಾ ಮಾಡುತ್ತಿದಾರೆ.
ಈ ಚಿತ್ರದ ಕೆಳಗೆ ರಷ್ಯನ್ ಭಾಷೆಯಲ್ಲಿ (ಕ್ಯಾಪ್ಷನ್ ಅನುವಾದಕ್ಕೆ ಜೆಮಿನಿಯನ್ನು ಬಳಸಿದ್ದೇನೆ) ‘ಬೌದ್ಧ ಧರ್ಮವೂ ಎಲ್ಲ ಧರ್ಮಗಳ ಹಾಗೇ. ಚೀನಾದ ಪ್ರಮುಖ ಧರ್ಮವಾಗಿರುವ ಬೌದ್ಧ ಧರ್ಮವೂ ಕ್ರಿಶ್ಚಿಯನ್, ಇಸ್ಲಾಂ ಮತ್ತಿತರ ಧರ್ಮಗಳಂತೆ ವರ್ಗ ಪ್ರಾಬಲ್ಯವನ್ನು ಗಟ್ಟಿಗೊಳಿಸುವ ಒಂದು ಸಾಧನವಾಗಿದೆ’ ಎಂದು ಬರೆಯಲಾಗಿದೆ.
ಯಾವುದೇ ವಿಚಾರವಿರಲಿ, ಅದು ಸಾಂಸ್ಥಿಕವಾದ ಕೂಡಲೆ ಅದಕ್ಕೊಂದು ಮಿತಿಯೂ ಹುಟ್ಟಿಕೊಳ್ಳುತ್ತೆ. ಇದಕ್ಕೆ ಬೌದ್ಧ ಧರ್ಮವೂ ಹೊರತಲ್ಲ. ಯಾವಾಗ ಶುದ್ಧ ಅಲೌಕಿಕ ಮತ್ತು ಆಧ್ಯಾತ್ಮಿಕ ವಾದ ಬೌದ್ಧ ಚಿಂತನೆ ವಿಹಾರಗಳ ಗೋಡೆಗಳ ನಡುವೆ ಸ್ಥಾಯಿಯಾಯಿತೋ ಮತ್ತು ಆ ಗೋಡೆಗಳ ನಡುವೆ ಪೀಠದ ಮೇಲೆ ಲಾಮಾ ಮತ್ತು ಕರ್ಮಪಾಗಳು ದಂಡ ಹಿಡಿದು ಕುಳಿತರೋ, ಅಂದೇ ಅದು ತನ್ನ ಮೂಲ ಉದ್ದೇಶದಿಂದ ಹೊರಳಿಕೊಂಡಿತ್ತು. ಬಾಕಿ ಸಂಗತಿಗಳಿರಲಿ, ಅಹಿಂಸೆಯೇ ಮೂಲ ತತ್ವವಾದ ಬೌದ್ಧರು ಹಿಂಸೆಗೂ ಇಳಿದರು. ಮಾಯನ್ಮಾರಿನ ಬೌದ್ಧರು ಮತ್ತು ಶ್ರೀಲಂಕಾದ ಬೌದ್ಧರು ಈ ಮಾತಿಗೆ ಜ್ವಲಂತ ಉದಾಹರಣೆ.
ಈ ಅಧ್ಯಯನಗಳಿಂದ ಒಂದು ವಿಷಯ ಮತ್ತೆ ಮತ್ತೆ ಮನದಟ್ಟಾಗುತ್ತಿದೆ. ಸಾಂಸ್ಥಿಕ ರೂಪದಲ್ಲಿ ಧರ್ಮವೂ ಶ್ರೇಷ್ಠವಲ್ಲ ಮತ್ತು ಚಿಂತನೆಯ ರೂಪದಲ್ಲಿ ಯಾವ ಧರ್ಮವೂ ಕನಿಷ್ಠವಲ್ಲ. ಜಗತ್ತಿನ ಎಲ್ಲ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಂದಾಳುಗಳ ಸಚ್ಚಿಂತನೆಗಳನ್ನು ತೆಗೆದುಕೊಂಡು ನಮ್ಮದೇ ಆದ ಒಂದು ನಂಬಿಕೆಯನ್ನು (ನಮಗೆ ಅಂಥ ನಂಬಿಕೆಗಳ ಊರುಗೋಲು ಬೇಕಿದ್ದರೆ) ರೂಪಿಸಿಕೊಳ್ಳಬಹುದು.
ಪ್ರಾಚೀನ ಚೀನಿಯರು ‘ದಾವ್’ ಎಂದು ಕರೆದಿದ್ದು ಇದನ್ನೇ. ಮುಕ್ತ ಚಿಂತನೆಯ ಅನುಸರಣೆಯನ್ನು. ದುರದೃಷ್ಟವೆಂದರೆ, ಈ ದಾವ್ ಕೂಡ ಇಂದು ಚೀನಾದ ಪ್ರಮುಖ ಧರ್ಮಗಳಲ್ಲೊಂದು!

