ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನೀವು ಪ್ರೇಮದ ರುಚಿಯನ್ನು ಅನುಭವಿಸಿರುವಿರಾದರೆ ನಿಮಗೆ ಗೊತ್ತಿರಬಹುದು, ಸೂಫಿಸಂ ನಲ್ಲಿ ಎರಡು ರೀತಿಯ ಪ್ರೇಮಗಳಿವೆ. ಒಂದು ಇಷ್ಕ್ ಏ ಮಜಾಜಿ ಮತ್ತು ಇನ್ನೊಂದು ಇಷ್ಕ್ ಏ ಹಕೀಕಿ. ಮಜಾಜಿ ಎಂದರೆ ರೂಪಕ, ಸಂಕೇತ. ಇಷ್ಕ್ ಏ ಮಜಾಜಿ ಎಂದರೆ ನೀವು ಒಂದು ವಸ್ತುವಿನೊಂದಿಗೆ, ಒಂದು ಸಂಗತಿಯೊಂದಿಗೆ, ಒಬ್ಬ ವ್ಯಕ್ತಿಯೊಂದಿಗೆ, ಒಂದು ಸೃಷ್ಟಿಯೊಂದಿಗೆ ಪ್ರೇಮದಲ್ಲಿ ಮುಳುಗುವುದು. ಎಲ್ಲ ಸೃಷ್ಟಿಯೂ ಅಶಾಶ್ವತ ಆಗಿರುವುದರಿಂದ ಈ ಪ್ರೇಮವೂ ಅಶಾಶ್ವತ. ಇದು ಹೇಗೆಂದರೆ ಕನ್ನಡಿಯಲ್ಲಿ ನಿಜದ ಚಂದ್ರನ ಪ್ರತಿಬಿಂಬವನ್ನು ನೋಡಿದಂತೆ, ಆದರೆ ಅಲ್ಲಿ ಚಂದ್ರ ಇಲ್ಲ. ಚಂದ್ರ ಇರುವುದು ಆಕಾಶದಲ್ಲಿ, ನಿಜವಾದ ಪ್ರೇಮದಲ್ಲಿ, ಇಷ್ಕ್ ಏ ಹಕೀಕಿ ಯಲ್ಲಿ.
ರೂಮಿ ಹೇಳುತ್ತಾನೆ, ನಿನ್ನ ಹೃದಯವನ್ನು ಅದು ತೆರೆದುಕೊಳ್ಳುವವರೆಗೆ ಒಡೆದುಕೊಳ್ಳುತ್ತಲೇ ಹೋಗು. ಸಹಜವಾಗಿ ಲೌಕಿಕ ಪ್ರೇಮದ ಕನ್ನಡಿ ಒಡೆಯುತ್ತಲೇ ಇರುತ್ತದೆ. ಇಲ್ಲಿ ಒಂದು ಭರವಸೆಯಿದೆ. ಇದು ನಮಗೆ ನೆನಪು ಮಾಡಿಕೊಡುತ್ತದೆ, ನಿಜವಾದ ಪ್ರೇಮ ಇಲ್ಲಿ ಇಲ್ಲ, ಬೇರೆಲ್ಲೋ ಇದೆ ಎನ್ನುವುದನ್ನ. ಇದು ಕೇವಲ ನಿಜ ಪ್ರೇಮದ ರೂಪಕ ಮಾತ್ರ.
ಸೂಫಿ ತನ್ನ ಎಲ್ಲ ಸಂಬಂಧಗಳನ್ನು ನಾಶ ಮಾಡಿಕೊಳ್ಳುವುದಿಲ್ಲ. ಅವನು ತನ್ನೊಡನೆ ತನ್ನ ಕನ್ನಡಿಯನ್ನು ಹೊತ್ತು ತಿರುಗುತ್ತಾನೆ. ಅವನಿಗೆ ತನ್ನ ಇಡೀ ಪ್ರಯಾಣ ಇಷ್ಕ್ ಏ ಮಜಾಜಿ ಯಿಂದ ಇಷ್ಕ್ ಏ ಹಕೀಕಿಯ ಕಡೆಗೆ ಚಲಿಸುವುದು. ತನ್ನ ಪ್ರೇಮದ ಎಲ್ಲ ಅಶುದ್ಧತೆಯಿಂದ ಹೊರತಾಗುವುದು. ಅವನ ಪ್ರೇಮ ಕಂಡಿಷನಲ್ ಪ್ರೇಮ ಅಲ್ಲ. ಯಾವಾಗ ಅವನ ಹೃದಯ ಸಂಪೂರ್ಣವಾಗಿ ಪರಿಶುದ್ಧವಾಗುತ್ತದೆಯೋ ಆಗ ಅವನಿಗೆ ತನ್ನ ಪ್ರೇಮಿ ಎಲ್ಲರಲ್ಲಿಯೂ, ಎಲ್ಲ ಕಡೆಗಳಲ್ಲೂ ಇರುವುದು ಗೊತ್ತಾಗುತ್ತದೆ.
********************************

