ಬುದ್ಧ: ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.2

 ತೋಟದ ಒಂದು ಮರಕ್ಕೆ ರೋಗ ಬಂದಿದ್ದರೆ ಅದಕ್ಕೆ ಉಚಾರ ಮಾಡಬೇಕು. ಆದರೂ ಆರೋಗ್ಯವಾಗಿರುವ ಮಿಕ್ಕ ಮರಗಳನ್ನೂ ಮರೆಯಬಾರದು. ಹೃದಯದಲ್ಲಿ ವೇದನೆ ಇರುವಾಗಲೂ ನೀವು ಸುಂದರವಾದ ಸೂರ್ಯಾಸ್ತ, ಎಳೆಯ ಮಗುವಿನ ನಗು, ಚೆಲುವಾದ ಹೂ, ಮರಗಳನ್ನು ಕಂಡು ಸಂತೋಷಪಡಬಹುದು~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.2: ಅರಿವಿನ ಬೆಳಕು । ಬುದ್ಧ

ಬುದ್ಧ ದೇವರಲ್ಲ. ನಿಮ್ಮ ಹಾಗೇ ನನ್ನ ಹಾಗೇ ಮನುಷ್ಯ. ನಮ್ಮ ಹಾಗೇ ನೋವು, ಸಂಕಟ ಅನುಭವಿಸಿದ್ದಾನೆ. ನಮ್ಮ ಮನ ತೆರೆದು ಬುದ್ಧನ ಬಳಿಗೆ ಹೋದರೆ ಬುದ್ಧ ಕರುಣೆ ತುಂಬಿದ ಕಣ್ಣಿನಿಂದ ನಮ್ಮತ್ತ ನೋಡುತ್ತಾ, “ನಿಮ್ಮ  ಹೃದಯದಲ್ಲಿ ವೇದನೆ ತುಂಬಿದೆ, ನೀವು ನನ್ನ  ಹೃದಯವನ್ನು ಹೊಗಬಹುದು,” ಎನ್ನುತ್ತಾನೆ.

“ಲೋಕಕ್ಕೆ ರೋಗ ಬಂದಿದೆ, ಅದಕ್ಕೇ ನನಗೂ ರೋಗ. ಜನ ನರುಳುತ್ತಾರೆ, ಅದಕ್ಕೇ ನಾನೂ ನರಳುತ್ತೇನೆ,ʼ ಎಂದು ವಿಮಲ ಕೀರ್ತಿ [ಮಹಾಯಾನದ ಉಪಾಸಕ, ಬೋಧಿಸತ್ವ] ಹೇಳಿದ. ಇದೇ ಮಾತನ್ನು ಬುದ್ಧನೂ ಹೇಳಿದ್ದ.  ನಿಮ್ಮ ಮನಸಿನಲ್ಲಿ ನೋವು ಇರುವುದರಿಂದ, ನರಳಾಟವಿರುವುದರಿಂದ ಬುದ್ಧನ ಬಳಿಗೆ ಹೋಗಲಾಗದು ಎಂದುಕೊಳ್ಳಬೇಡಿ. ನಿಮ್ಮ ಹೃದಯದಲ್ಲಿ ನೋವು ಇರುವುದರಿಂದೇ ಸಂವಾದ ಸಾಧ್ಯವಾಗುತ್ತದೆ. ನಮ್ಮ ಹೃದಯದಲ್ಲಿ ವೇದನೆ ಇದ್ದರೆ ಮಾತ್ರ ನಾವು ಬುದ್ಧ ಹೃದಯವನ್ನು ಹೊಗಬಲ್ಲೆವು, ಬುದ್ಧ ನಮ್ಮ ಹೃದಯಕ್ಕೆ ಬರಬಲ್ಲ.

“ನಾನು ವೇದನೆಯನ್ನು ಮಾತ್ರ ಬೋಧಿಸುತ್ತೇನೆ, ವೇದನೆಯನ್ನು ಬದಲಾಯಿಸುವುದನ್ನು ಮಾತ್ರ ಬೋಧಿಸುತ್ತೇನೆ,” ಎಂದು ಬುದ್ಧ ನಲುವತ್ತೈದು ವರ್ಷಗಳ ಕಾಲ ಮತ್ತೆ ಮತ್ತೆ ಹೇಳಿದ. ನಮ್ಮೊಳಗಿನ ವೇದನೆಯನ್ನು ಕಂಡು ಗುರುತಿಸಿಕೊಳ್ಳುವುದರಿಂದ ಮಾತ್ರವೇ ಬುದ್ಧ, ಅಂದರೆ ನಮ್ಮೊಳಗಿರುವ ಬುದ್ದ, ವೇದನೆಯನ್ನು ಕಾಣುತ್ತಾನೆ, ವೇದನೆ ಯಾಕೆ ಉಂಟಾಯಿತು ಎಂದು ಕಂಡುಕೊಳ್ಳುತ್ತಾನೆ, ಆ ವೇದನೆಯನ್ನು ಶಾಂತಿ, ಸಂತೋಷ, ಬಿಡುಗಡೆಯಾಗಿ ಬದಲಿಸುವುದು ಹೇಗೆಂದು ಬೋಧಿಸುತ್ತಾನೆ. ಬುದ್ಧ ಕೂಡ ವೇದನೆಯ ದಾರಿಯಲ್ಲೇ ಸಾಗಿ ವೇದನೆ ನೀಗಿಕೊಂಡು ಸ್ವತಂತ್ರನಾದ. ವೇದನೆಯ ಮೂಲಕವೇ ನಾವು ವೇದನೆಯಿಂದ ಬಿಡುಗಡೆ ಪಡೆಯಬಹುದು.

ವೇದನೆಯ ಕಡಲು ಅಗಾಧವಾದದ್ದು. ಆದರೂ ನೀವು ಮುಖ ಹೊರಳಿಸಿದರೆ ಆಸರೆಯಾಗುವ ಗಟ್ಟಿ ನೆಲ ಕಾಣುತ್ತದೆ. ನಿಮ್ಮೊಳಗಿರುವ ವೇದನೆಯ ಬೀಜ ಬಹಳ ಗಟ್ಟಿಯಾದದ್ದೇ ಇರಬಹುದು. ಆದರೂ ವೇದನೆ ಇಲ್ಲವಾಗುವ ಸಂತೋಷ ದೊರೆಯುವ ಕಾಲ ಬರುತ್ತದೆಂದು ಕಾಯಬೇಡಿ. ತೋಟದ ಒಂದು ಮರಕ್ಕೆ ರೋಗ ಬಂದಿದ್ದರೆ ಅದಕ್ಕೆ ಉಚಾರ ಮಾಡಬೇಕು. ಆದರೂ ಆರೋಗ್ಯವಾಗಿರುವ ಮಿಕ್ಕ ಮರಗಳನ್ನೂ ಮರೆಯಬಾರದು. ಹೃದಯದಲ್ಲಿ ವೇದನೆ ಇರುವಾಗಲೂ ನೀವು ಸುಂದರವಾದ ಸೂರ್ಯಾಸ್ತ, ಎಳೆಯ ಮಗುವಿನ ನಗು, ಚೆಲುವಾದ ಹೂ, ಮರಗಳನ್ನು ಕಂಡು ಸಂತೋಷಪಡಬಹುದು. ದಯವಿಟ್ಟು ನಿಮ್ಮ ವೇದನೆಯ ಸೆರೆಯಾಳು ಆಗಬೇಡಿ.

ಹಸಿವಿನ ಅನುಭವ ನಿಮಗಿದ್ದರೆ—ಅನ್ನ ದೊರೆಯುವುದೇ ಪವಾಡವೆಂದು ನಿಮಗೆ ಅನಿಸುತ್ತದೆ. ಚಳಿಯಲ್ಲಿ ನಡುಗುತಿದ್ದರೆ, ಬೆಚ್ಚಗಿರುವುದೇ ಪರಮ ಸುಖವೆನಿಸುತ್ತದೆ. ವೇದನೆ ಅನುಭವಿಸಿದ್ದರೆ ಮಾತ್ರವೇ ಈ ಸೃಷ್ಟಿಯಲ್ಲಿರುವ ಆನಂದದ ಸಂಗತಿಗಳನ್ನು ಮೆಚ್ಚಲು ಸಾಧ್ಯವಾಗುತ್ತದೆ. ವೇದನೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಬದುಕಿನ ಅಚ್ಚರಿಗಳನ್ನು ಅನುಭವಿಸುವುದನ್ನೂ ಮರೆಯಬೇಡಿ. ನಿಮ್ಮ ಹಿತಕ್ಕಾಗಿ, ಇನ್ನೂ ಅನೇಕರ ಹಿತಕ್ಕಾಗಿ ನಿಮ್ಮ ಆನಂದದ ಅನುಭವ ಮುಖ್ಯ.

ಯುದ್ಧದ ಸಮಯದಲ್ಲಿ ಬೆಳೆದವನು ನಾನು. ಸುತ್ತಲೂ ವಿನಾಶವಿತ್ತು. ಲೆಕ್ಕವಿರದಷ್ಟು ಮಕ್ಕಳು, ದೊಡ್ಡವರು ಸತ್ತಿದ್ದರು, ಮೌಲ್ಯಗಳೂ ಇಡೀ ದೇಶವೂ ಹಾಳಾಗಿದ್ದವು. ಯುವಕನಾಗಿದ್ದಾಗ ತುಂಬ ನೋವು, ವೇದನೆ ಅನುಭವಿಸಿದೆ. ಎಚ್ಚರದ ತಿಳಿವಿನ ಬಾಗಿಲನ್ನು  ಒಮ್ಮೆ ತೆರೆದರೆ ಮತ್ತೆ ಅದನ್ನು ಮುಚ್ಚಲಾಗದು. ನನ್ನೊಳಗಿರುವ ಯುದ್ಧದ ಗಾಯಗಳು ಇನ್ನೂ ಪೂರ್ಣವಾಗಿ ವಾಸಿಯಾಗಿಲ್ಲ. ಎಷ್ಟೋ  ರಾತ್ರಿ ನಾನು ಎಚ್ಚರವಾಗಿ ಒರಗಿಕೊಂಡೇ ನನ್ನ ಜನ, ದೇಶ, ಇಡೀ ಭೂಮಿಯನ್ನು ನನ್ನ ಎಚ್ಚರದ ಗಮನದ ಉಸಿರಿನಲ್ಲಿ ಆಲಂಗಿಸಿಕೊಳ್ಳುವೆ.

ವೇದನೆ ಅನುಭವಿಸದೆ ನಾವು ಬೆಳೆಯಲಾರೆವು. ನಿಮಗೆ ದೊರೆಯಬೇಕಾದ ಶಾಂತಿ, ನೆಮ್ಮದಿಗಳು ವೇದನೆ ಇಲ್ಲದೆ ನಿಮಗೆ ದೊರೆಯಲಾರವು. ನಿಮ್ಮ ವೇದನೆಯಿಂದ ದಯವಿಟ್ಟು ಪಲಾಯನ ಮಾಡಬೇಡಿ. ವೇದನೆಯನ್ನು ಅಪ್ಪಿಕೊಳ್ಳಿ, ಪ್ರೀತಿಸಿ. ಬುದ್ಧನ ಬಳಿಗೆ ಹೋಗಿ. ಅವನೊಂದಿಗೆ ಕುಳಿತುಕೊಳ್ಳಿ. ನಿಮ್ಮ ವೇದನೆಯನ್ನು ಅವನಿಗೆ ತೋರಿ. ಒಲುಮೆ ಕರುಣೆಗಳೊಡನೆ ಅವನು ನಿಮ್ಮ ವೇದನೆಯನ್ನು ಆಲಂಗಿಸಿ ಆಳವಾಗಿ ಗಮನಿಸಿ ನೋಡುತ್ತಾನೆ. ನಿಮ್ಮನ್ನು ಅರಿಯುತ್ತಾನೆ. ನಿಮ್ಮ ಗಾಯಗಳು ಮಾಯುತ್ತವೆ. ಲೋಕದ ಗಾಯಗಳು ಮಾಯುತ್ತವೆ.

ವೇದನೆಯನ್ನು ಉದಾತ್ತ ಸತ್ಯವೆಂದು ಬುದ್ಧ ಹೇಳಿದ. ಯಾಕೆಂದರೆ ನಮ್ಮ ಬಿಡುಗಡೆಯನ್ನು ತೋರುವ ಶಕ್ತಿ ನಮ್ಮ ವೇದನೆಗಿದೆ. ನಿಮ್ಮ  ವೇದನೆಯನ್ನು ಅಪ್ಪಿಕೊಳ್ಳಿ. ಅದು ಶಾಂತಿಯ ದಾರಿಯನ್ನು ನಿಮಗೆ ತೋರಲಿ.

*

“ಸುಖವ ಬಲ್ಲಾತ ಸುಖಿಯಲ್ಲ, ದುಃಖವ ಬಲ್ಲಾತ ದುಃಖಿಯಲ್ಲ, ಸುಖ_ದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ.
ಹುಟ್ಟದ ಮುನ್ನ ಸತ್ತವರ ಕುರುಹ ಬಲ್ಲಡೆ, ಬಲ್ಲ ಗುಹೇಶ್ವರ” ಎಂಬ ವಚನ ನೆನಪಾಯಿತು.

ಕ್ರಿಸ್ತ, ಬುದ್ಧ, ಬಸವ ಇಂಥವರೆಲ್ಲ ಪ್ರತಿಯೊಬ್ಬರಿಗೂ ಲಭ್ಯವಿರುವ ಸಾಧ್ಯತೆಗಳು, ಎಲ್ಲರೊಳಗೂ ಇರುವ ಕ್ರಿಸ್ತತ್ವ, ಬುದ್ಧತ್ವ, ಬಸವತ್ವವನ್ನು ಅನುಭವಕ್ಕೆ ತಂದುಕೊಂಡು ನಾವೂ ಅವರೇ ಆಗಬಹುದು ಎಂಬ ಸಾಧ್ಯತೆಯೇ ಪುಳಕ ಹುಟ್ಟಿಸುತ್ತದೆ. ಸುಖವನ್ನು ಅಥವಾ ದುಃಖವನ್ನು ಮಾತ್ರ ಬಲ್ಲವರು ಸುಖಿಗಳೋ ದುಃಖಿಗಳೋ ಅಲ್ಲ, ಎರಡನ್ನೂ ಬಲ್ಲವರು ಜ್ಞಾನಿಗಳೂ ಅಲ್ಲ. ಹುಟ್ಟದ ಮುನ್ನ ಸತ್ತವರ ಕುರುಹು ತಿಳಿದರೆ ಹಾಗೆ ತಿಳಿದವರೇ ಗುಹೇಶ್ವರರು ಎಂಬುದನ್ನು ವಿವರಿಸಬಾರದು, ಮನಸಿನಲ್ಲೇ ಹೊರಳಿಸಿ ತಿಳಿಯಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.