ತೋರಿಕೆಗಷ್ಟೇ ಸುಲಭ…

Rory Sutherland ಅವರು ಈ ವಿದ್ಯಮಾನವನ್ನ doorman fallacy ಎಂದು ಕರೆಯುತ್ತಾರೆ. ಹಾಗೆಂದರೆ, ನಾವು ಒಂದು ಕೆಲಸವನ್ನು ಅದರ ಅತ್ಯಂತ ಗೋಚರವಾಗಿರುವ ಭಾಗಗಳ ಮೂಲಕ ಮಾತ್ರ ವ್ಯಾಖ್ಯಾನಿಸಿ, ಅದರ ಉಳಿದ ಎಲ್ಲ ಮಹತ್ವದ ಅಂಶಗಳನ್ನು ಕಡೆಗಣಿಸುವುದು. ಮತ್ತು ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಲಂಡನ್‌ನ ಒಂದು ಐಷಾರಾಮಿ ಹೋಟೆಲ್ ತನ್ನ ಖರ್ಚು ಕಡಿಮೆ ಮಾಡಿಕೊಳ್ಳಲು, ತಮ್ಮ ಹೋಟೇಲಿನ ದ್ವಾರಪಾಲಕನನ್ನು (doorman) ಕೆಲಸದಿಂದ ತೆಗೆದುಹಾಕಲು ನಿರ್ಧರಿಸುವ ಒಂದು ಪ್ರಸಿದ್ಧ ಕಥೆಯಿದೆ. ಅವರಿಗೆ ಅದು ಹಣ ಉಳಿಸುವ ಅತ್ಯಂತ ಸುಲಭ ಉಪಾಯ ಎಂದು ತೋಚಿರಬಹುದು. ಹೀಗಾಗಿ ವಾರಾಂತ್ಯದೊಳಗೆ ಆ ದ್ವಾರಪಾಲಕನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಆದರೆ ಕೆಲವೇ ವಾರಗಳಲ್ಲಿ ಗ್ರಾಹಕರಿಂದ ದೂರುಗಳು ಸುರಿಯತೊಡಗಿದವು. ಜನರು ಮಳೆಯಲ್ಲಿ ಹೊರಗೆ ನಿಂತುಕೊಳ್ಳಬೇಕಾಯಿತು, ಅವರಿಗೆ ಟ್ಯಾಕ್ಸಿ ಹಿಡಿಯಲು ಆಗಲಿಲ್ಲ, ಮತ್ತು ಹೋಟೆಲ್‌ನ ಸಂಪೂರ್ಣ ವಾತಾವರಣವೇ ಸ್ವಲ್ಪ ಹೆಚ್ಚು ಕೋಲ್ಡ್ ಆದಂತೆ ಅನಿಸತೊಡಗಿತು. Rory Sutherland ಅವರ ಪ್ರಕಾರ, ಇದು ಆಧುನಿಕ ವ್ಯಾಪಾರಿ ಸಂಸ್ಥೆಗಳು ಮಾಡುವ ಅತ್ಯಂತ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ.

ಏಕೆಂದರೆ ಆ ಹೋಟೆಲ್, ದ್ವಾರಪಾಲಕನ ಕೆಲಸವನ್ನು ಕೇವಲ ಅವನ ಉದ್ಯೋಗ ವಿವರಣೆಯ ಮೂಲಕ ಮಾತ್ರ ಅಳೆಯಬಹುದು ಎಂದು ಭಾವಿಸಿತ್ತು — ಅಂದರೆ “ಬಾಗಿಲು ತೆರೆಯುವುದು” ಮಾತ್ರ ಎಂದು. ಆದರೆ ಅವನ ಕೆಲಸದಲ್ಲಿ ಅದಕ್ಕಿಂತಲೂ ತುಂಬಾ ಹೆಚ್ಚಿನ ಅರ್ಥವಿತ್ತು. ಅವನು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದ. ಅತಿಥಿಗಳಿಗೆ ಟ್ಯಾಕ್ಸಿ ಹುಡುಕಿ ಕೊಡುತ್ತಿದ್ದ. ಹೊಟೇಲಿಗೆ ಬರುವ ಅತಿಥಿಗಳ ಹೆಸರನ್ನು ನೆನಪಿಟ್ಟುಕೊಂಡು ಅವರನ್ನು ಸ್ವಾಗತಿಸುತ್ತಿದ್ದ. “ದ್ವಾರಪಾಲಕ” ಎನ್ನುವುದು ಅವನ ಹುದ್ದೆಯ ಹೆಸರು ಮಾತ್ರವಾಗಿತ್ತು; ಆದರೆ ಅವನ ಕೊಡುಗೆಗಳು ಯಾವುದೇ ಸ್ಪ್ರೆಡ್‌ಶೀಟ್‌ನಲ್ಲಿ ಕಾಣಿಸುವ ಅಂಕಿ-ಅಂಶಗಳಿಗಿಂತ ಬಹಳ ಮಹತ್ವದ್ದಾಗಿದ್ದವು.

Rory Sutherland ಅವರು ಈ ವಿದ್ಯಮಾನವನ್ನ doorman fallacy ಎಂದು ಕರೆಯುತ್ತಾರೆ. ಹಾಗೆಂದರೆ, ನಾವು ಒಂದು ಕೆಲಸವನ್ನು ಅದರ ಅತ್ಯಂತ ಗೋಚರವಾಗಿರುವ ಭಾಗಗಳ ಮೂಲಕ ಮಾತ್ರ ವ್ಯಾಖ್ಯಾನಿಸಿ, ಅದರ ಉಳಿದ ಎಲ್ಲ ಮಹತ್ವದ ಅಂಶಗಳನ್ನು ಕಡೆಗಣಿಸುವುದು. ಮತ್ತು ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ. ಒಂದು ಕಂಪನಿ “ಇಮೇಲ್‌ಗಳಿಗೆ ಯಾರಾದರೂ ಉತ್ತರಿಸಬಹುದು” ಎಂದುಕೊಂಡು ರಿಸೆಪ್ಷನಿಸ್ಟ್‌ರನ್ನು ಕೆಲಸದಿಂದ ತೆಗೆದುಹಾಕಿದರೆ, ಅದು ಪ್ರತಿಯೊಬ್ಬ ಗ್ರಾಹಕರ ಮಕ್ಕಳ ಹೆಸರನ್ನೂ ನೆನಪಿಟ್ಟುಕೊಳ್ಳುವ ವ್ಯಕ್ತಿಯನ್ನೂ ಕಳೆದುಕೊಳ್ಳುತ್ತದೆ. ಒಂದು ಕಂಪನಿ ಹೊಸ App ಬಂದಿದೆ ಎಂದುಕೊಂಡು ತನ್ನ ರಸ್ತೆಬದಿಯ ಶಾಖೆಗಳನ್ನು (high street branches) ಮುಚ್ಚಿಬಿಟ್ಟರೆ, ಮುಖಾಮುಖಿಯಾಗಿ ನಡೆಯುವ ಸಣ್ಣ ಸಣ್ಣ ಮಾತುಕತೆಗಳ ಮಾನವೀಯ ಸಂಪರ್ಕಗಳ ಶಕ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಆದ್ದರಿಂದ doorman fallacy ಎನ್ನುವುದು ಕೇವಲ ವ್ಯವಹಾರ ತಂತ್ರದ ವಿಷಯ ಮಾತ್ರವಲ್ಲ, ಅದು ಆಧುನಿಕ ಸಮಾಜದ ಒಂದು ಬಲವಾದ ಪ್ರವೃತ್ತಿಯ ಬಗ್ಗೆ ; ಎಲ್ಲವನ್ನೂ ಅಳೆಯಲು, ಅತ್ಯುತ್ತಮಗೊಳಿಸಲು, ಮತ್ತು ಒಂದು ಪ್ರೆಸೆಂಟೇಶನ್ ಸ್ಲೈಡ್‌ನಲ್ಲಿ ಸಮರ್ಥಿಸಲಾಗದ ಯಾವುದನ್ನಾದರೂ ತೆಗೆದುಹಾಕಲು ಮಾಡುವ ಹಟದ ಬಗ್ಗೆ ಇರುವಂಥದು. ಅಂದರೆ, ನಾವು ಅಳೆಯಬಹುದಾದದ್ದನ್ನು ಮಾತ್ರ ಮುಖ್ಯವೆಂದು ತಪ್ಪಾಗಿ ಭಾವಿಸುವುದು. ಆದರೆ ಬಹುತೇಕ ಎಲ್ಲಾ ಕೆಲಸಗಳು ಮತ್ತು ಸಂಬಂಧಗಳು, ಹೊರಗೆ ಕಾಣುವುದಕ್ಕಿಂತ ಬಹಳ ಹೆಚ್ಚಿನ ಅರ್ಥವನ್ನು ಹೊಂದಿರುತ್ತವೆ. ಮತ್ತು ಒಬ್ಬ ವ್ಯಕ್ತಿಯನ್ನು ಕೇವಲ ಒಂದು “ಡೇಟಾ ಪಾಯಿಂಟ್” ಆಗಿ ಕುಗ್ಗಿಸಿ ನೋಡುವುದು ನಿಜಕ್ಕೂ ಮೂರ್ಖತನವಾಗಿರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.