ಆಧ್ಯಾತ್ಮಿಕ ಜಗತ್ತಿನಲ್ಲಿ ಕನ್ನಡಿಯ ರೂಪಕಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ ಅಂತ ಹಿಂದಿನ ಸಂಚಿಕೆಯಲ್ಲಿ ಹೇಳಿದ್ನಲ್ಲ, ಅದೇನು ಅಂತ ಈಗ ನೋಡೋಣ… । ಚೇತನಾ ತೀರ್ಥಹಳ್ಳಿ
ಭಾರತೀಯ ಆಧ್ಯಾತ್ಮಿಕ ಸಾಹಿತ್ಯ ಇರಬಹುದು…. ಇದರಲ್ಲಿ ವೇದೋಪನಿಷತ್ತುಗಳು, ಗೀತೆಗಳು, ವಚನಗಳು, ದೋಹೆಗಳು, ಸಾಧುಸಂತರ ಸಾವಿರಾರು ತ್ರಿಪದಿ ಚೌಪದಿಗಳು ಎಲ್ಲವೂ ಸೇರಿವೆ. ಸೋ ನಮ್ಮ ಭಾರತೀಯ ಆಧ್ಯಾತ್ಮಿಕ ಸಾಹಿತ್ಯ ಇರಬಹುದು, ದಾವ್ ಮತ್ತು ಜೆನ್ ಚಿಂತನೆ ಇರಬಹುದು, ಪಶ್ಚಿಮದ ಆಧ್ಯಾತ್ಮಿಕ ಚಿಂತನೆಗಳಿರಬಹುದು, ಸೂಫಿ ಚಿಂತನೆ ಇರಬಹುದು… ಎಲ್ಲವೂ ಕನ್ನಡಿಯನ್ನು ನಮ್ಮ ಅರಿವನ್ನು ಪ್ರತಿಫಲಿಸುವ ಸಾಧವನ್ನಾಗಿ ನೋಡಿದೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ, ಕನ್ನಡಿ ಕೇವಲ ನಮ್ಮ ಬಾಹ್ಯರೂಪವನ್ನು ಕಾಣುವ ಸಾಧನವಲ್ಲ, ಅದು ನಮ್ಮ ಅಂತರಂಗದ ದರ್ಶನ ಮಾಡಿಸುವ ದಿವ್ಯ ಪರಿಕರ. ಆದರೆ, ಅದನ್ನು ನೋಡುವ ಬಗೆ ನಮಗೆ ತಿಳಿದಿರಬೇಕು, ಅಷ್ಟೇ, ಇಲ್ಲದಿದ್ರೆ ನಮ್ಮ ಪಾಡೂ ಆಫ್ರಿಕನ್ ಜಾನಪದ ಕತೆಯೊಂದರ ಹಾಗೆ ಆಗುತ್ತೆ.
ಇದೊಂದು ಮಜವಾದ ಕತೆ. ಕನ್ನಡಿ ಅಂದ್ರೇನು ಅಂತಲೇ ಗೊತ್ತಿಲ್ಲದ ಒಬ್ಬ ಆಫ್ರಿಕನ್ ಹಳ್ಳಿಯ ಒಬ್ಬ ಮನುಷ್ಯನಿಗೆ ಒಂದಿನ ಒಂದು ಕನ್ನಡಿ ಸಿಗುತ್ತೆ. ಅವನಿಗೆ ಅದೇನು ಅಂತ ಗೊತ್ತಿಲ್ದೇ ಆಗಾಗ ಅದನ್ನ ಮುಖದ ಮುಂದೆ ಒಡ್ಡಿಕೊಂಡು, ಅದರಲ್ಲಿತೋ ಚಿತ್ರ ಯಾರದ್ದು ಅಂತ ಕುತೂಹಲಪಡ್ತಿರ್ತಾನೆ. ಅದನ್ನ ನೋಡಿ ಒಂದಿನ ಅವನ ಹೆಂಡ್ತಿ ಆ ಕನ್ನಡಿ ಕದ್ದು ತನ್ನ ಮುಖ ನೋಡ್ಕೋತಾಳೆ, ಅದರಲ್ಲಿರೋದು ಯಾರು ಅಂತ ನೋಡ್ತಾಳೆ, ಅದರಲ್ಲಿರೋದು ತಾನೇ ಅಂತ ಗೊತ್ತಾಗದೆ – ಗಂಡ ಯಾವಾಗ್ಲೂ ಇದರಲ್ಲಿರೋ ಹುಡುಗಿನ ನೋಡ್ತಾ ಇರ್ತಾನೆ ಅಂತ ಅತ್ತೆ ಮುಂದೆ ಗೋಳಾಡ್ತಾಳೆ. ಅತ್ತೆ ಕನ್ನಡಿ ಎತ್ಕೊಂಡಾಗ ತನ್ನದೇ ಮುಖ ಕಂಡು, ‘ಇವಳ್ಯಾರೋ ಸಾಯೋ ಮುದುಕಿ, ಇವಳನ್ನ ನೋಡ್ಕೊಳ್ಲಿ ಬಿಡು, ನಿನ್ನ ಸಂಸಾರಕ್ಕೇನೂ ತೊಂದ್ರೆ ಆಗಲ್ಲ’ ಅಂತ ಸಮಾಧಾನ ಮಾಡ್ತಾಳೆ. ಹಾಗೇ ಆ ಮನೇಲಿ ಕನ್ನಡಿಗೆ ಮುಖ ಒಡ್ಡಿದವರೆಲ್ಲ ತಮಗೆ ಕಾಣ್ತಿರೋದು ತಾವೇ ಅಂತ ಗುರುತಿಸಲಾಗದೆ ಮನೆಯಲ್ಲಿ ಗದ್ದಲಕ್ಕೆ ಕಾರಣಕಾರಣವಾಗ್ತಾರೆ,
ಆದ್ರಿಂದ, ನಮಗೆ ಕನ್ನಡಿ ನೋಡೋದು ಹೇಗೆ ಅಂತ ಗೊತ್ತಿರ್ಬೇಕು, ಮತ್ತು ಅದರಲ್ಲಿ ಕಾಣೋದನ್ನು ಗ್ರಹಿಸೋದು ಹೇಗೆ ಅಂತಾನೂ ಗೊತ್ತಿರ್ಬೇಕು.
ಯೋಗ ವಾಸಿಷ್ಠದಲ್ಲಿ ಕನ್ನಡಿ ಬಗ್ಗೆ ಒಂದು ಇಂಟರೆಸ್ಟಿಂಗ್ ಆದ ಶ್ಲೋಕ ಇದೆ. ಅದೇನು ಅಂತ ನೋಡೋಣ, ಮುಂದಿನ ಸಂಚಿಕೆಯಲ್ಲಿ.

