ಅದೃಶ್ಯ ಡ್ರ್ಯಾಗನ್ ಇದೆ ಎನ್ನುವುದಕ್ಕೂ, ಡ್ರ್ಯಾಗನ್ ಇಲ್ಲ ಎನ್ನುವುದಕ್ಕೂ ಏನು ವ್ಯತ್ಯಾಸ?

ನಾನು, “ನನ್ನ ಗ್ಯಾರೇಜ್‌ನಲ್ಲಿ ಒಂದು ಡ್ರ್ಯಾಗನ್ ಇದೆ” ಎಂದು ಹೇಳಿದಾಗ, ನೀವು “ನನಗೆ ನಿನ್ನ ಮಾತಿನಲ್ಲಿ ನಂಬಿಕೆ ಇಲ್ಲ” ಎಂದರೆ, ನಾನು ತಕ್ಷಣ ನಿಮ್ಮತ್ತ ತಿರುಗಿ, “ಹಾಗಾದರೆ ನನ್ನ ಗ್ಯಾರೇಜ್‌ನಲ್ಲಿ ಡ್ರ್ಯಾಗನ್ ಇಲ್ಲ ಎಂದು ನೀವು ಸಾಬೀತುಪಡಿಸಬಹುದೇ?” ಎಂದು ಕೇಳುವಂತಿಲ್ಲ. ಏಕೆಂದರೆ ಪ್ರತಿಕ್ಷಣವೂ ಅಸಂಖ್ಯಾತ ಕಾಲ್ಪನಿಕ ಮತ್ತು ಅದೃಶ್ಯ ವಸ್ತುಗಳ ಅಸ್ತಿತ್ವವನ್ನು ನಿರಾಕರಿಸುತ್ತ ಕೂರುವುದು ನಮಗೆ ಸಾಧ್ಯವಿಲ್ಲ । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

ನನ್ನ ಗ್ಯಾರೇಜ್‌ನಲ್ಲಿ ಒಂದು ಡ್ರ್ಯಾಗನ್ ಇದೆ. ಅದನ್ನು ನೀವು ನೋಡುವುದು ಸಾಧ್ಯವಿಲ್ಲ, ಏಕೆಂದರೆ ಅದು ಕಾಣದ (ಅದೃಶ್ಯ) ಡ್ರ್ಯಾಗನ್. ಅದನ್ನು ನೀವು ಕೇಳುವುದೂ ಸಾಧ್ಯವಿಲ್ಲ, ಏಕೆಂದರೆ ಅದು ಸಂಪೂರ್ಣ ಮೌನವಾಗಿದೆ. ಅದನ್ನು ನೀವು ಮುಟ್ಟುವುದೂ ಸಾಧ್ಯವಿಲ್ಲ, ಏಕೆಂದರೆ ಅದು ನಮ್ಮ ತಲೆಯ ಮೇಲ್ಭಾಗದಲ್ಲಿ ಗಾಳಿಯಲ್ಲಿ ತೇಲುತ್ತಿರುತ್ತದೆ. ಅದರ ಉರಿಯುವ ಉಸಿರನ್ನೂ ನೀವು ಅನುಭವಿಸುವುದು ಸಾಧ್ಯವಿಲ್ಲ, ಏಕೆಂದರೆ ಅದರ ಜ್ವಾಲೆಗಳು ಬಿಸಿಯನ್ನೇ ಉಂಟುಮಾಡುವುದಿಲ್ಲ. ಹೀಗಿರುವಾಗ, ನನ್ನ ಗ್ಯಾರೇಜ್ ನಲ್ಲಿ ಡ್ರ್ಯಾಗನ್ ಇದೆ ಎಂದರೆ ನೀವು ನಂಬುವಿರಾ?

ಯಾರಾದರೂ ಇಂಥ ಒಂದು ಹೇಳಿಕೆಯನ್ನು ಮಾಡಿದಾಗ, ಅದನ್ನು ಪರೀಕ್ಷಿಸಲು ಸಾಧ್ಯವಾಗದಿದ್ದರೆ, ಸಾಬೀತುಪಡಿಸಲೂ ಸಾಧ್ಯವಾಗದಿದ್ದರೆ, ಅಥವಾ ತಪ್ಪೆಂದು ನಿರೂಪಿಸಲೂ ಸಾಧ್ಯವಾಗದಿದ್ದರೆ, ಅದೃಶ್ಯ ಡ್ರ್ಯಾಗನ್ ಇದೆ ಎನ್ನುವುದಕ್ಕೂ, ಡ್ರ್ಯಾಗನ್ ಇಲ್ಲ ಎನ್ನುವುದಕ್ಕೂ ಏನು ವ್ಯತ್ಯಾಸ? ಎನ್ನುವುದನ್ನು ತೋರಿಸಲು ಕಾರ್ಲ್ ಸೇಗನ್ ಒಂದು ಚಿಂತನಾ ಪ್ರಯೋಗವನ್ನು (thought experiment) ನಮಗೆ ಪರಿಚಯಿಸುತ್ತಾರೆ. ಇದು ಫಿಲಾಸೊಫರ್ ಗಳು “ಸಾಬೀತುಪಡಿಸುವ ಹೊಣೆ” (Burden of Proof) ಎಂದು ಕರೆಯುವ ಸಂಗತಿಗೆ ಸಂಬಂಧಿಸಿದೆ. ಅದರ ಪ್ರಕಾರ, ಯಾರಾದರೂ ಒಂದು ವಾದ ಅಥವಾ ಹೇಳಿಕೆಯನ್ನು ಮಾಡಿದರೆ, ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಅದನ್ನು ತಪ್ಪೆಂದು ತೋರಿಸುವ ಹೊಣೆಗಾರಿಕೆ ಉಳಿದ ಎಲ್ಲರ ಮೇಲಿರುವುದಿಲ್ಲ. ಹಾಗೆಂದರೆ, “ನನ್ನ ಗ್ಯಾರೇಜ್‌ನಲ್ಲಿ ಅದೃಶ್ಯ ಡ್ರ್ಯಾಗನ್ ಇದೆ” ಎಂದು ಯಾರಾದರೂ ಹೇಳಿದರೆ, ಅದರ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದದ್ದು ಆ ಹೇಳಿಕೆಯನ್ನು ಮಾಡಿದ ವ್ಯಕ್ತಿಯೇ ಹೊರತು, ಅದು ಇಲ್ಲ ಎಂದು ಉಳಿದವರು ಸಾಬೀತುಪಡಿಸಬೇಕಾಗಿಲ್ಲ.

ನಾನು, “ನನ್ನ ಗ್ಯಾರೇಜ್‌ನಲ್ಲಿ ಒಂದು ಡ್ರ್ಯಾಗನ್ ಇದೆ” ಎಂದು ಹೇಳಿದಾಗ, ನೀವು “ನನಗೆ ನಿನ್ನ ಮಾತಿನಲ್ಲಿ ನಂಬಿಕೆ ಇಲ್ಲ” ಎಂದರೆ, ನಾನು ತಕ್ಷಣ ನಿಮ್ಮತ್ತ ತಿರುಗಿ, “ಹಾಗಾದರೆ ನನ್ನ ಗ್ಯಾರೇಜ್‌ನಲ್ಲಿ ಡ್ರ್ಯಾಗನ್ ಇಲ್ಲ ಎಂದು ನೀವು ಸಾಬೀತುಪಡಿಸಬಹುದೇ?” ಎಂದು ಕೇಳುವಂತಿಲ್ಲ. ಏಕೆಂದರೆ ಪ್ರತಿಕ್ಷಣವೂ ಅಸಂಖ್ಯಾತ ಕಾಲ್ಪನಿಕ ಮತ್ತು ಅದೃಶ್ಯ ವಸ್ತುಗಳ ಅಸ್ತಿತ್ವವನ್ನು ನಿರಾಕರಿಸುತ್ತ ಕೂರುವುದು ನಮಗೆ ಸಾಧ್ಯವಿಲ್ಲ. ಇಂತಹ ಕಲ್ಪಿತ ಸಂಗತಿಗಳ ಸಂಖ್ಯೆ ಹೇರಳವಾಗಿದೆ.
ಕ್ರಿಸ್ಟೋಫರ್ ಹಿಚೆನ್ಸ್ ಹೇಳುವಂತೆ : “ಯಾವ ಸಾಕ್ಷ್ಯವಿಲ್ಲದೆ ಮಾಡಲಾದ ವಾದವನ್ನು, ಯಾವುದೇ ಸಾಕ್ಷ್ಯವಿಲ್ಲದೆಯೇ ತಳ್ಳಿಹಾಕಬಹುದು.” ಹಾಗೆಂದರೆ, ಒಂದು ಹೇಳಿಕೆಗೆ ಯಾವುದೇ ಪುರಾವೆ ಅಥವಾ ಸಾಕ್ಷ್ಯವನ್ನು ನೀಡದಿದ್ದಾಗ, ಅದನ್ನು ನಾವು ನಂಬಬೇಕಾದ ಅಗತ್ಯವಿಲ್ಲ; ಅದನ್ನು ತಿರಸ್ಕರಿಸಲು ನಾವು ಪ್ರತ್ಯೇಕ ಸಾಕ್ಷ್ಯವನ್ನು ಕೂಡಬೇಕಾದ ಅವಶ್ಯಕತೆಯೂ ಇರುವುದಿಲ್ಲ.

ಯಾರಾದರೂ ತಮ್ಮ ಹೇಳಿಕೆಗೆ ಯಾವುದೇ ಪುರಾವೆಯನ್ನು ನೀಡದಿದ್ದರೆ, ಅವರ ವಾದವನ್ನು ಖಂಡಿಸಲು ನೀವು ಪ್ರತ್ಯೇಕವಾಗಿ ಶ್ರಮಿಸುವ ಅಗತ್ಯವಿಲ್ಲ. ನಾವು ಇಂಥ ಪ್ರಸಂಗಗಳಲ್ಲಿ ಪದೇಪದೇ ಸಿಕ್ಕಿಹಾಕಿಕೊಳ್ಳುತ್ತೇವೆ. ವಾದಗಳಲ್ಲಿ, ರಾಜಕೀಯದಲ್ಲಿ, ಮತ್ತು ಸಾಮಾಜಿಕ ಮಾಧ್ಯಮಗಳ ಚರ್ಚೆಗಳಲ್ಲಿ, ಕೆಲವರು ಬಹಳ ಧೈರ್ಯಶಾಲಿಯಾದ ಹಾಗೂ ವಿಚಿತ್ರವಾದ ಹೇಳಿಕೆಗಳನ್ನು ಮಾಡುತ್ತಾರೆ. ನಂತರ ಆ ಹೇಳಿಕೆಗಳು ತಪ್ಪು ಎಂದು ಸಾಬೀತುಪಡಿಸುವ ಕಠಿಣ ಕೆಲಸವನ್ನು ಇತರರು ಮಾಡಬೇಕು ಎಂದು ನಿರೀಕ್ಷಿಸುತ್ತಾರೆ.

ಅದೃಶ್ಯ ಡ್ರ್ಯಾಗನ್ ‌ಗಳು ಎಲ್ಲೆಡೆ ಇವೆ. ಇಂಥ ಯಾವುದೇ ಸಂಗತಿಗಳು ಪುರಾವೆಯಿಲ್ಲದ ಪಿತೂರಿ ಸಿದ್ಧಾಂತಗಳು (conspiracy theories), ಯಾವುದೇ ಸಾಕ್ಷ್ಯವಿಲ್ಲದ ಆರೋಪಗಳು. ಕಾರ್ಲ್ ಸೇಗನ್ ಮತ್ತು ಕ್ರಿಸ್ಟೋಫರ್ ಹಿಚೆನ್ಸ್ ಹೇಳುತ್ತಿರುವುದು ಏನೆಂದರೆ, ಗ್ಯಾರೇಜ್‌ಗಳಲ್ಲಿ ಡ್ರ್ಯಾಗನ್ ‌ಗಳಿವೆ ಎಂದು ಅನೇಕರು ಹೇಳಿಕೊಳ್ಳುವ ಈ ಜಗತ್ತಿನಲ್ಲಿ, ನಾವು ಕೇಳಬೇಕಾದ ಒಂದೇ ಒಂದು ಪ್ರಶ್ನೆ ಏನೆಂದರೆ : “ನೀವು ಅದನ್ನು ನನಗೆ ತೋರಿಸಬಹುದೇ?” ಹಾಗೆಂದರೆ, ಯಾವುದೇ ಅಸಾಮಾನ್ಯವಾದ ಹೇಳಿಕೆಯನ್ನು ನಂಬುವ ಮೊದಲು, ಅದರ ಪರವಾದ ಪುರಾವೆ ಅಥವಾ ಸಾಕ್ಷ್ಯವನ್ನು ಕೇಳುವುದು ಸಮಂಜಸವಾದ ಮತ್ತು ತಾರ್ಕಿಕವಾದ ನಿಲುವಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.