ನಾವು ಜೀವನದಲ್ಲಿ ಅನೇಕ ವಿಷಯಗಳನ್ನು “ನನ್ನದು, ನನ್ನ ಯೋಚನೆ, ನನ್ನ ಸಮಸ್ಯೆ” ಎಂದು ಮನಸ್ಸಿನಲ್ಲಿ ಹೊತ್ತುಕೊಂಡಿರುತ್ತೇವೆ. ವಾಸ್ತವದಲ್ಲಿ ಅವು ಹೊರಗಿನ ವಿಷಯಗಳೇ ಆದರೂ, ನಾವು ಅವನ್ನು ನಮ್ಮೊಳಗೆ ತುಂಬಿಕೊಂಡು, ಅತಿಯಾಗಿ ಯೋಚಿಸಿ, ಅನಗತ್ಯವಾಗಿ ಭಾರವಾಗಿಸಿಕೊಳ್ಳುತ್ತೇವೆ.
ಹೋಗೇನ್ ಹೇಳಿದಂತೆ, “ಕಲ್ಲನ್ನು ಮನಸ್ಸಿನಲ್ಲಿ ಹೊತ್ತುಕೊಂಡಿರುವಂತೆ” । ಡಾ. ಸಹನಾ ಪ್ರಿಯದರ್ಶಿನಿ
ಹೊಗೇನ್ ಎಂಬ ಚೀನಾದ ಝೆನ್ ಗುರುಗಳು ಒಂದು ಪುಟ್ಟ ಹಳ್ಳಿಯ ದೇವಸ್ಥಾನದಬಳಿ ಒಬ್ಬರೇ ವಾಸಿಸುತ್ತಿದ್ದರು. ಒಂದು ದಿನ ಆ ಹಳ್ಳಿಯ ಮೂಲಕ ಪ್ರಯಾಣಿಸುತ್ತಿದ್ದ ನಾಲ್ವರು ಭಿಕ್ಕುಗಳು ಅಲ್ಲಿಗೆ ಬಂದರು.ಅತಿಯಾದ ಚಳಿಯಿಂದ ತಮ್ಮನ್ನು ಬೆಚ್ಚಗಾಗಿಸಿಕೊಳ್ಳಲು ದೇವಸ್ಥಾನದ ಆವರಣದಲ್ಲಿ ಬೆಂಕಿ ಹಚ್ಚಲು ಗುರುಗಳ ಅನುಮತಿ ಕೇಳಿದರು.
ಅವರು ಬೆಂಕಿ ಹಚ್ಚುತ್ತಿರುವಾಗ, “ವ್ಯಕ್ತಿನಿಷ್ಠತೆ (subjectivity) ಮತ್ತು ವಸ್ತುನಿಷ್ಠತೆ (objectivity)” ಬಗ್ಗೆ ವಾದ ವಿವಾದ ಶುರುವಾಯಿತು. ಅದನ್ನು ಕೇಳಿಸಿಕೊಂಡ ಹೊಗೇನ್ ಗುರು ಭಿಕ್ಕುಗಳ ಬಳಿಗೆ ಹೋಗಿ ಕೇಳಿದರು :
“ಇಲ್ಲಿ ಒಂದು ದೊಡ್ಡ ಕಲ್ಲು ಇದೆ. ಅದು ನಿಮ್ಮ ಮನಸ್ಸಿನೊಳಗಿದೆಯಾ ಅಥವಾ ಹೊರಗಿದೆಯಾ ?”
ಒಬ್ಬ ಭಿಕ್ಕು ಉತ್ತರಿಸಿದನು:
“ಬೌದ್ಧ ದೃಷ್ಟಿಯಿಂದ ಎಲ್ಲವೂ ಮನಸ್ಸಿನ ನಿರ್ಮಿತಿಯೇ. ಆದ್ದರಿಂದ, ಈ ಕಲ್ಲು ನನ್ನ ಮನಸ್ಸಿನೊಳಗಿದೆ ಎಂದು ನಾನು ಹೇಳುತ್ತೇನೆ.”
ಆಗ ಹೊಗೇನ್ ನಗುತ್ತ ಹೇಳಿದರು:
“ನಿನ್ನ ತಲೆ ತುಂಬಾ ಭಾರವಾಗಿರಬೇಕು… ನೀನು ಅಷ್ಟು ದೊಡ್ಡ ಕಲ್ಲನ್ನು ಮನಸ್ಸಿನಲ್ಲಿ ಹೊತ್ತುಕೊಂಡಿದ್ದೀಯಲ್ಲ!”
***
ಈ ಕಥೆ ನಮಗೆ ಒಂದು ಸರಳವಾದ , ಆಳವಾದ ಸತ್ಯವನ್ನು ಹೇಳುತ್ತದೆ.
ನಾವು ಜೀವನದಲ್ಲಿ ಅನೇಕ ವಿಷಯಗಳನ್ನು “ನನ್ನದು, ನನ್ನ ಯೋಚನೆ, ನನ್ನ ಸಮಸ್ಯೆ” ಎಂದು ಮನಸ್ಸಿನಲ್ಲಿ ಹೊತ್ತುಕೊಂಡಿರುತ್ತೇವೆ. ವಾಸ್ತವದಲ್ಲಿ ಅವು ಹೊರಗಿನ ವಿಷಯಗಳೇ ಆದರೂ, ನಾವು ಅವನ್ನು ನಮ್ಮೊಳಗೆ ತುಂಬಿಕೊಂಡು, ಅತಿಯಾಗಿ ಯೋಚಿಸಿ, ಅನಗತ್ಯವಾಗಿ ಭಾರವಾಗಿಸಿಕೊಳ್ಳುತ್ತೇವೆ.
ಹೋಗೇನ್ ಹೇಳಿದಂತೆ, “ಕಲ್ಲನ್ನು ಮನಸ್ಸಿನಲ್ಲಿ ಹೊತ್ತುಕೊಂಡಿರುವಂತೆ”
ನಾವು ಕೂಡ:
• ಹಳೆಯ ಘಟನೆಗಳನ್ನು
• ಇತರರ ಮಾತುಗಳನ್ನು
• ಭಯ, ಕೋಪ, ಅಹಂಕಾರಗಳನ್ನು
• ಬೇಡದ ವಿಷಯಗಳನ್ನು
ಮನಸ್ಸಿನಲ್ಲಿ ಹಿಡಿದುಕೊಂಡೇ ಇರುತ್ತೇವೆ. ಇದರಿಂದ ಮನಸ್ಸು ಭಾರವಾಗುತ್ತದೆ, ಶಾಂತಿ ಕಳೆದುಹೋಗುತ್ತದೆ.
ಬ್ಯಾಗಿನಲ್ಲಿ ತುಂಬಿದ ಅನಗತ್ಯ ವಸ್ತುಗಳು ಬ್ಯಾಗನ್ನು ಭಾರಮಾಡುವ ಹಾಗೆ , ಮೊಬೈಲ್ ಫೋನ್ನಲ್ಲಿ ಭರ್ತಿಯಾದ ಸ್ಟೋರೇಜ್, ಫೋನನ್ನು ನಿಧಾನ ಮಾಡುವ ಹಾಗೆ , ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಪೋಸ್ಟ್ ಗೆ ಬಂದ ಲೈಕ್‌ಗಳು ಕಮ್ಮಿಯಾದರೆ ಆಗುವ ಆತಂಕ ಇವೆಲ್ಲವೂ ತಲೆಯಲ್ಲಿ ಕಲ್ಲನ್ನು ಹೊತ್ತುಕೊಂಡ ಹಾಗೆ. ಒಂದು ಲೋಟ ನೀರನ್ನು ಒಂದು ನಿಮಿಷ ಕೈಯಲ್ಲಿ ಹಿಡಿದಾಗ ಎಷ್ಟು ಸುಲಭದ ಕೆಲಸ ಎನಿಸುವುದೋ ಅದೇ ಲೋಟವನ್ನು ಒಂದು ಗಂಟೆ ಹಿಡಿದರೆ ಲೋಟದ ಭಾರ ನೂರು ಪಟ್ಟು ಹೆಚ್ಚುವುದು. ಹಾಗೆಯೇ ಹೊರಗಿನ ಕಲ್ಲು ಎಂಬ ಸಮಸ್ಸೆಯನ್ನು ಹೊತ್ತುಕೊಂಡಷ್ಟು ತಲೆಯ ಭಾರ ಹೆಚ್ಚುವುದು.
ನಾವು ಎಲ್ಲವನ್ನೂ ನಮ್ಮೊಳಗೆ ತೆಗೆದುಕೊಳ್ಳಬೇಕಿಲ್ಲ. ಕೆಲವು ವಿಷಯಗಳನ್ನು ಹಾಗೆಯೇ ಬಿಡಲು ಕಲಿತರೆ, ಮನಸ್ಸು ಹಗುರವಾಗುತ್ತದೆ. ಯೋಚನೆಗಳನ್ನು ಸರಳಗೊಳಿಸಿದಾಗ, ಜೀವನವೂ ಸುಲಭವಾಗುತ್ತದೆ.
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

