ಇಲ್ಲಿ ಈ ಕ್ಷಣದಲ್ಲಿ ಪೂರ್ತಿಯಾಗಿ ಇರುವುದೇ ಅತ್ಯಂತ ಗಹನವಾದ ಧ್ಯಾನ. ನೀವು ಎಲ್ಲಿಗೂ ಹೋಗಬೇಕಾಗಿಲ್ಲ ಎಂಬಂತೆ ಬದುಕಿದರೆ ಸಾಕು ಎಂಬುದನ್ನು ಬಹಳ ಜನ ನಂಬುವುದಿಲ್ಲ. ಸ್ಪರ್ಧೆ, ಹೆಣಗಾಟ, ಹೋರಾಟ ಇವೆಲ್ಲ ನಾರ್ಮಲ್ ಎಂದೇ ತಿಳಿದಿದ್ದಾರೆ… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.5: ಅರಿವಿನ ಬೆಳಕು । ಗಳಿಸಬೇಕಾದದ್ದು—ಏನೂ ಇಲ್ಲ
ಮಾಡಬೇಕಾದದ್ದು ಏನೂ ಇಲ್ಲ, ತಿಳಿಯಬೇಕಾದದ್ದು ಏನೂ ಇಲ್ಲ, ಯಾವ ಯೋಜನೆ ಇಲ್ಲ, ಯಾವ ಗುರಿ ಇಲ್ಲ—ಇದು ಮನುಷ್ಯರ ಅಂತಿಮ ಗುರಿಯನ್ನು ಕುರಿತು ಬೌದ್ಧ ಚಿಂತನೆ.
ಗುಲಾಬಿ ಏನಾದರೂ ಮಾಡಬೇಕಾಗಿದೆಯೇ? ಇಲ್ಲ. ತಾನು ಗುಲಾಬಿಯಾಗಿ ಇರುವುದಷ್ಟೇ ಅದರ ಉದ್ದೇಶ. ನೀವು ನೀವಾಗಿರುವುದೇ ನಿಮ್ಮ ಉದ್ದೇಶ. ನೀವು ಇನ್ನು ಯಾರೋ ಆಗುವುದಕ್ಕೆ ಇನ್ನೆಲ್ಲಿಗೋ ಧಾವಿಸಿ ಹೋಗಬೇಕಾಗಿಲ್ಲ. ಈ ಬುದ್ಧ ಬೋಧನೆಯು ನಮ್ಮೊಳಗೆ ನಾವು ಸುಖವಾಗಿರುವುದಕ್ಕೆ ಅವಕಾಶ ಮಾಡಿಕೊಡುತ್ತದೆ.
ಕಣ್ಣೆದುರಿಗೆ ಏನೋ ಇರಿಸಿಕೊಂಡು ಅದರ ಹಿಂದೆ ಓಡುವುದು ಬೇಕಾಗಿಲ್ಲ. ನಾವು ಏನೇನು ಅರಸುತಿದ್ದೇವೆಯೋ, ಏನೇನು ಆಗಲು ಬಯಸುತಿದ್ದೇವೆಯೋ ಅವೆಲ್ಲ ಆಗಲೇ ನಮ್ಮೊಳಗೆ ಇವೆ. “ನಾವು ಆಗಲೇ ಬುದ್ಧರು. ಇನ್ನೊಬ್ಬ ಬುದ್ಧನ ಕೈ ಹಿಡಿದು ನಡಯುತ್ತಾ ಧ್ಯಾನಮಾಡುವುದಕ್ಕೆ ಅಡ್ಡಿಯೇನು?”—ಇದು ಅವತಂಸಕ ಸೂತ್ರದ ಬೋಧನೆ.
ಬದುಕು ಅದು ಇರುವ ಹಾಗೆಯೇ ಅಮೂಲ್ಯವಾದದ್ದು. ನಮ್ಮ ಸಂತೋಷಕ್ಕೆ ಬೇಕಾದುದೆಲ್ಲ ಇಲ್ಲಿದೆ. ನಾವು ಎಲ್ಲಿಗೂ ಓಡಬೇಕಾಗಿಲ್ಲ, ಯಾವುದಕ್ಕೂ ಹೆಣಗಬೇಕಾಗಿಲ್ಲ, ಏನನ್ನೂ ಹುಡುಕಬೇಕಾಗಿಲ್ಲ, ಹೋರಾಡಬೇಕಾಗಿಲ್ಲ. ಸುಮ್ಮನೆ ಇದ್ದರೆ ಸಾಕು.
ಇಲ್ಲಿ ಈ ಕ್ಷಣದಲ್ಲಿ ಪೂರ್ತಿಯಾಗಿ ಇರುವುದೇ ಅತ್ಯಂತ ಗಹನವಾದ ಧ್ಯಾನ. ನೀವು ಎಲ್ಲಿಗೂ ಹೋಗಬೇಕಾಗಿಲ್ಲ ಎಂಬಂತೆ ಬದುಕಿದರೆ ಸಾಕು ಎಂಬುದನ್ನು ಬಹಳ ಜನ ನಂಬುವುದಿಲ್ಲ. ಸ್ಪರ್ಧೆ, ಹೆಣಗಾಟ, ಹೋರಾಟ ಇವೆಲ್ಲ ನಾರ್ಮಲ್ ಎಂದೇ ತಿಳಿದಿದ್ದಾರೆ.
ಯಾವುದೇ ಗುರಿ ಇಟ್ಟುಕೊಳ್ಳದೆ ಐದು ನಿಮಿಷ ಬದುಕಿ ನೋಡಿ. ಅಷ್ಟು ಹೊತ್ತೂ ಎಷ್ಟು ಸಂತೋಷವಾಗಿರುತ್ತೀರಿ ಅನ್ನುವುದು ನಿಮಗೇ ತಿಳಿಯುತ್ತದೆ. “ನಾವು ಗಳಿಸಬೇಕಾದದ್ದು ಏನೂ ಇಲ್ಲ”ವೆಂದು ಪ್ರಜ್ಞಾಪಾರಮಿತ ಅಧ್ಯಾಯವು ಹೇಳುತ್ತದೆ. ತಿಳಿವಳಿಕೆಗಾಗಿ, ಜ್ಞಾನೋದಯಕ್ಕಾಗಿ ಧ್ಯಾನಮಾಡುವುದಿಲ್ಲ ನಾವು. ಯಾಕೆಂದರೆ ತಿಳಿವು ಆಗಲೇ ನಮ್ಮೊಳಗಿದೆ. ಅದನ್ನು ಎಲ್ಲೂ ಹುಡುಕಬೇಕಾಗಿಲ್ಲ.
ಯಾವುದೇ ಗುರಿ, ಅಥವಾ ಉದ್ದೇಶವೂ ನಮಗೆ ಬೇಕಾಗಿಲ್ಲ. ಉನ್ನತವಾದ ಸ್ಥಿತಿಯ ಸಂಪಾದನೆಗೆ ನಾವು ಧ್ಯಾನಮಾಡುವುದಿಲ್ಲ. ನಮಗೆ ಯಾವುದೇ ಗುರಿ ಇಲ್ಲದೆ ಇರುವಾಗ ಮಾತ್ರವೇ ನಮಗೆ ಯಾವ ಕೊರತೆಯೂ ಇಲ್ಲವೆಂಬುದು, ನಾವು ಏನಾಗಬೇಕೋ ಅದು ಆಗಲೇ ಆಗಿದ್ದೇವೆಂದು ಅರಿವಾಗುತ್ತದೆ, ನಮ್ಮ ಎಲ್ಲ ಹೆಣಗಾಟ ಕೊನೆಯಾಗುತ್ತದೆ. ಕಿಟಕಿಯಿಂದ ಕೋಣೆಯೊಳಕ್ಕೆ ಬಿದ್ದಿರುವ ಬಿಸಿಲನ್ನು ನೋಡುತ್ತಲೋ, ಸುರಿವ ಮಳೆಯ ಸದ್ದು ಆಲಿಸುತ್ತಲೋ ಈ ಕ್ಷಣದಲ್ಲಿ ಸುಖವಾಗಿರುತ್ತೇವೆ. ನಾವು ಯಾವುದರ ಬೆನ್ನು ಹತ್ತಿಯೂ ಹೋಗಬೇಕಾಗಿಲ್ಲ. ಇರುವ ಈ ಕ್ಷಣವನ್ನ ನಾವು ಇರುವಂತೆಯೇ ಆನಂದಿಸಬಹುದು.
ನಿರ್ವಾಣದ ಬಗ್ಗೆ ಜನ ಮಾತಾಡುತ್ತಾರೆ. ನಾವು ಆಗಲೇ ನಿರ್ವಾಣವನ್ನು ಪಡೆದಿದ್ದೇವೆ. ಗುರಿ ಇರದೆ ಬದುಕುವುದು ಮತ್ತು ನಿರ್ವಾಣ ಎರಡೂ ಒಂದೇ.
*
“ಇಲ್ಲ” ಎಂಬುದನ್ನು ಕುರಿತು ಅನೇಕ ವಚನಗಳಿವೆ. ಘಟ್ಟಿವಾಳಯ್ಯನವರ ಈ ವಚನ ನೋಡಿ:
“ಜೀವವೆಂಬುದಿಲ್ಲ, ಭಾವವೆಂಬುದಿಲ್ಲ, ಬಯಕೆಯೆಂಬುದಿಲ್ಲ/ ಮುಂದೆ ಪೂಜಿಸಿ ಕಂಡೆಹೆನೆಂಬುದಕ್ಕೆ ಮುನ್ನವೆ ಇಲ್ಲ./ ಪೂರ್ವ ಅಪೂರ್ವವೆಂಬುದಿಲ್ಲ/ ಇವಾವ ಬಂಧನವೂ ಇಲ್ಲದ/ ಅವಿರಳಂಗೆ ಒಂದರ ತೋರಿಕೆಯೂ ಇಲ್ಲ./ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲಾ ಇಲ್ಲ, ನಿಲ್ಲು ಮಾಣು.” ಇವು ಜಾಣಮಾತುಗಳಾಗಿ ಉಳಿದವು, ನಮ್ಮ ಅರಿವು ಆಗಿಲ್ಲ ಅನ್ನುವುದೇ ದುರಂತ ಅನಿಸುತ್ತದೆ

