ಎಲ್ಲವನ್ನೂ ಚರಿತ್ರೆಯ ಆಯಾಮದಲ್ಲೇ ನೋಡಿ ನೋಡಿ ನಮಗೆ ಅಭ್ಯಾಸವಾಗಿದ್ದರೂ ನಾವು ಅಂತಿಮ ಆಯಾಮವನ್ನೂ ಸ್ಪರ್ಶಿಸಲು ಸಾಧ್ಯವಿದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.8: ಅರಿವಿನ ಬೆಳಕು । ಎರಡು ಆಯಾಮಗಳು
ಮೊದಲನೆಯ ಆಯಾಮ ಚರಿತ್ರೆಯದು—ನಮ್ಮ ಜೀವಿತ ಕಾಲದಲ್ಲಿ ನೋಡುವ, ತಿಳಿಯುವ ಸಂಗತಿಗಳದ್ದು. ಎರಡನೆಯದು ಅಂತಿಮ, ಪರಮ ಸತ್ಯದ ಆಯಾಮ—ಕಾಲ, ದೇಶಗಳ ಆಚಿನದು.
ಸಕಲ ಸಂಗತಿಗಳಿಗೂ ಈ ಎರಡು ಆಯಾಮಗಳಿವೆ. ಕಡಲ ಅಲೆಗಳನ್ನು ನೋಡಿದರೆ ಅವು ಕಡಲ ಮೇಲ್ಮೈಯ ದೇಶಲ್ಲಿ ಚಲಿಸುವಷ್ಟು ಕಾಲ ನಮಗೆ “ಅಲೆಗಳಾಗಿ” ಕಾಣುತ್ತವೆ. ದೇಶ ಮತ್ತು ಕಾಲಗಳು ಬೇರೆ ಬೇರೆಯ ಸಂಗತಿಗಳಲ್ಲ. ದೇಶವು ಕಾಲದ ಸೃಷ್ಟಿ, ಕಾಲವು ಇರುವುದು ದೇಶದಲ್ಲೇ. ಕಡಲ ಅಲೆಯನ್ನು ಚಾರಿತ್ರಿಕ ಆಯಾಮದಲ್ಲಿ ಕಂಡರೆ ಅದಕ್ಕೆ ಆರಂಭವಿದೆ, ಅಂತ್ಯವಿದೆ, ಹುಟ್ಟು, ಸಾವುಗಳಿವೆ; ಎತ್ತರವಾದ, ಗಿಡ್ಡವಾದ, ದೀರ್ಘವಾದ, ಕಿರಿದಾದ ಅಲೆ ಎಂಬೆಲ್ಲ ಗುಣಗಳೂ ಕಾಣುತ್ತವೆ. ಬರುವ ಅಲೆ, ಹೋಗುವ ಅಲೆ, ಇರುವ ಅಲೆ, ಇಲ್ಲವಾಗುವ ಅಲೆ, ಶುರವಾಗುವ ಅಲೆ, ಮುಗಿಯುವ ಅಲೆ ಎಂದೆಲ್ಲ ಚಾರಿತ್ರಿಕ ಆಯಾಮದಲ್ಲಿ ಅಲೆಯನ್ನು ವಿವರಿಸಬಹುದು.
ಇವೆಲ್ಲ ನಮಗೂ ಅನ್ವಯವಾಗುತ್ತವೆ. ಚಾರಿತ್ರಿಕ ಆಯಾಮದಲ್ಲಿ ಇವಲ್ಲ ಗುಣಗಳು ನಮಗೂ ಹೊಂದುತ್ತವೆ. ನಾವೆಲ್ಲರೂ ಹುಟ್ಟು ಮತ್ತು ಸಾವುಗಳಿರುವ ಚಾರಿತ್ರಿಕ ಆಯಾಮಕ್ಕೆ ಸೇರಿದವರು. ಶಾಕ್ಯಮುನಿ ಬುದ್ಧನೂ ಚಾರಿತ್ರಿಕ ಆಯಾಮದವನು. ಅವನು ಕಪಿಲವಸ್ತುವಿನಲ್ಲಿ ಹುಟ್ಟಿ ಕುಶೀನಗರದಲ್ಲಿ ಸತ್ತ ಮನುಷ್ಯ ಜೀವಿ. ಅವನು ಬದುಕಿದ್ದ ಎಂಬತ್ತು ವರ್ಷಗಳಲ್ಲಿ ಧರ್ಮ ಬೋಧನೆ ಮಾಡಿದ.
ಹಾಗೆಯೇ ಸಕಲ ವಸ್ತುಗಳು ಜೀವಿಗಳೂ ಪರಮಸತ್ಯದ ಆಯಾಮಕ್ಕೂ ಸೇರಿರುತ್ತವೆ. ಸತ್ಯದ ಈ ಆಯಾಮ ಕಾಲ, ದೇಶ, ಹುಟ್ಟು, ಸಾವು, ಬರುವುದು, ಹೋಗುವುದು ಇಂಥ ಕಲ್ಪನೆಗಳಿಗೆ ಒಳಪಡುವುದಿಲ್ಲ. ಅಲೆಯೆಂಬುದು ಅಲೆ, ಹಾಗೆಯೇ ನೀರು ಕೂಡ ಹೌದು. ಅಲೆಯು ಸತ್ತು ನೀರು ಆಗಬೇಕಾಗಿಲ್ಲ. ಈ ಕ್ಷಣದಲ್ಲೇ ಅದು ನೀರು. ಕಡಲ ನೀರನ್ನು ಬರುವ, ಹೋಗುವ, ಎಣಿಸುವ ಕಲ್ಪನೆಗಳಿಗೆ ಒಳಪಡಿಸಲಾರೆವು. ನೀರು ಯಾವಾಗಲೂ ನೀರು. ಅಲೆಯ ಬಗ್ಗೆ ಮಾತನಾಡುವಾಗ ಅಲೆ ಹುಟ್ಟಿತು, ಎದ್ದಿತು, ಬಂದಿತು, ಎಲ್ಲಿಂದಲೋ ಬಂದು ಎಲ್ಲಿಗೋ ಹೋಯಿತು, ಅದಕ್ಕೆ ಶುರುವಾಗುವ ಕ್ಷಣ, ಮುಗಿಯುವ ಕ್ಷಣ ಇವೆ, ಅದು ದೊಡ್ಡ ಅಲೆ, ಚಿಕ್ಕ ಅಲೆ, ಮಿಕ್ಕ ಅಲೆಗಳಿಗಿಂತ ಇದು ಚಂದ, ಇಂಥ ಎಲ್ಲ ವಿವರಣೆ, ವರ್ಣನೆಗಳು ಬೇಕಾಗುತ್ತವೆ. ಆದರೆ ಅಲೆಯ ಅಂತಿಮ ಸ್ವರೂಪವಾದ ನೀರು ಎಂಬ ಆಯಾಮವನ್ನು ಕುರಿತು ಮಾತಾಡುವಾಗ ಈ ವ್ಯತ್ಯಾಸಗಳು ಬೇಕಾಗುವುದಿಲ್ಲ. ನಿಜಹೇಳಬೇಕೆಂದರೆ ಅಲೆಯನ್ನು ಅದರ ಅಂತಿಮ ಆಯಾಮವಾದ ನೀರಿನಿಂದ ಬೇರೆಯಾಗಿ ನೋಡಲು ಸಾಧ್ಯವೇ ಇಲ್ಲ.
ಎಲ್ಲವನ್ನೂ ಚರಿತ್ರೆಯ ಆಯಾಮದಲ್ಲೇ ನೋಡಿ ನೋಡಿ ನಮಗೆ ಅಭ್ಯಾಸವಾಗಿದ್ದರೂ ನಾವು ಅಂತಿಮ ಆಯಾಮವನ್ನೂ ಸ್ಪರ್ಶಿಸಲು ಸಾಧ್ಯವಿದೆ. ಅಲೆಯಾಗಿ ಬದುಕುವುದು, ಚಾರಿತ್ರಿಕ ಆಯಾಮದಲ್ಲಿ ಅಲೆಯಂತೆ ಬದುಕುವುದು ನಮ್ಮ ಅಭ್ಯಾಸ. ನಾವು ನೀರೂ ಹೌದು, ನೀರಿನ ಬದುಕೇ ನಮ್ಮ ಬದುಕು ಎಂಬುದು ನಮ್ಮ ಅರಿವು ಆಗಬೇಕು. ಎಲ್ಲ ಅನುಷ್ಠಾನದ ಸಾರ ಅದೇ. ನಿಮ್ಮ ನಿಜ ಸ್ವಭಾವ ಬರುವುದೂ ಅಲ್ಲ, ಹೋಗುವುದೂ ಅಲ್ಲ; ಇರುವುದೂ ಅಲ್ಲ, ಇಲ್ಲದಿರುವುದೂ ಅಲ್ಲ, ಹುಟ್ಟಿಲ್ಲ, ಸಾವಿಲ್ಲ ಅನ್ನುವುದನ್ನು ಅರಿವಿನ ಎಚ್ಚರದಲ್ಲಿ ಗಮನಿಸಿದರೆ ಈಗಲೇ, ಈ ಕ್ಷಣವೇ ಅಂತಿಮ ಆಯಾಮದಲ್ಲಿ ಅಥವಾ ನಿರ್ವಾಣದಲ್ಲಿ ಇರುವುದಕ್ಕೆ ಭಯವಿರುವುದಿಲ್ಲ. ನಿರ್ವಾಣವಾಗಲು ಸಾಯುವ ಅಗತ್ಯವಿಲ್ಲ. ನಿಮ್ಮ ಸ್ವಭಾವದ ಅರಿವಿನಲ್ಲಿ ನೀವಿರುವಾಗ ನಿರ್ವಾಣದಲ್ಲಿರುತ್ತೀರಿ.
ನಮಗೆ ಚಾರಿತ್ರಿಕ ಆಯಾಮವಿದೆ, ಹಾಗೆಯೇ ನಿರ್ವಾಣದ ಅಂತಿಮ ಆಯಾಮವೂ ಇದೆ—ಬುದ್ಧನಿಗೆ ಇರುವ ಹಾಗೆಯೇ.
*
ಹುಟ್ಟಿರದ, ಸಾವು ಕೂಡ ಇರದ ಶಿಶುವಿನ ವರ್ಣನೆ ಚಾರಿತ್ರಿಕ ಮತ್ತು ಆತ್ಯಂತಿಕ ಕಾಲಗಳ ವ್ಯವಹಾರವಾಗಿ ಈ ವಚನದಲ್ಲಿ ನಿರೂಪಣೆಗೊಂಡಿದೆ ಅನ್ನಿಸುತ್ತದೆ.
ಬಟ್ಟಬಯಲ ಮಹಾಮನೆಯೊಳಗೊಂದು
ಹುಟ್ಟದ ಹೊಂದದ ಶಿಶುವ ಕಂಡೆ
ಮುಟ್ಟಿ ಪೂಜಿಸಹೋದಡೆ
ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು
ಮುಟ್ಟಲಿಲ್ಲ ನೋಡಲಿಲ್ಲ, ಪೂಜೆಗೆ ಕಟ್ಟಳೆ ಮುನ್ನಿಲ್ಲ.
ಗುಹೇಶ್ವರ ಬಯಲು

