ಅವಲಂಬನೆ ಎಂಬುದು ದೌರ್ಬಲ್ಯವೇನಲ್ಲ…

ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ಇತರರಿಂದ ಸಹಾಯ ಕೇಳುವುದು ದೌರ್ಬಲ್ಯದ ಲಕ್ಷಣವಲ್ಲ. ಬದಲಾಗಿ, ಅದು ನಮ್ಮನ್ನು ಇತರರೊಂದಿಗೆ ಒಂದಾಗಿಸುವ ಮಾರ್ಗ. ನಮ್ಮ ಜೀವನಕ್ಕೆ ಅರ್ಥವನ್ನು ನೀಡುವ ದಾರಿ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಒಂದು ಚಿಕ್ಕ ಮಗು ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದೆ ಎಂದು ಕಲ್ಪನೆ ಮಾಡಿಕೊಳ್ಳಿ. ಆಗ ಆ ಮಗು ಒಂದು ಕ್ಷಣವೂ ಯೋಚಿಸದೆ ತನ್ನ ತಂದೆ-ತಾಯಿಯ ಪ್ರೀತಿಯ ಮಡಿಲಿನ ಕಡೆಗೆ ಓಡುತ್ತದೆ. ಅಲ್ಲಿ ಯಾವುದೇ ನಾಚಿಕೆ ಇಲ್ಲ. ಯಾವುದೇ ಲೆಕ್ಕಾಚಾರ ಇಲ್ಲ. ತನಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುವವರ ಬಳಿಗೆ ಅದು ಸಹಜವಾಗಿಯೇ ಓಡುತ್ತದೆ.

ಜಪಾನಿನ ಮನೋವಿಶ್ಲೇಷಕ Takeo Doi ಇದನ್ನು ‘ಅಮಾಯೆ’ (Amae) ಎಂದು ಕರೆದರು. ಇದರ ಅರ್ಥ, ಮತ್ತೊಬ್ಬರ ಮೇಲೆ ಅವಲಂಬಿಸಬೇಕೆಂಬ ಆಸೆ, ಅವರಿಂದ ಮಮತೆಯೊಂದಿಗೆ ಕಾಳಜಿಯನ್ನೂ ಪಡೆಯಬೇಕೆಂಬ ಬಯಕೆ, ಮತ್ತು ಅವರು ಈ ಬೇಡಿಕೆಯನ್ನು ಸಂತೋಷದಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ.

ಪಾಶ್ಚಾತ್ಯ ಸಂಪ್ರದಾಯಗಳಲ್ಲಿ ಅವಲಂಬನೆಯನ್ನು ಒಂದು ರೀತಿಯ ದೌರ್ಬಲ್ಯವೆಂದು ನೋಡುವ ಪ್ರವೃತ್ತಿಯಿದೆ. ತಾರ್ಕಿಕತೆಯನ್ನು ಒತ್ತಿಹೇಳಿದ ಪ್ರಾಚೀನ ಗ್ರೀಕರಿಂದ ಹಿಡಿದು ಸ್ವಾತಂತ್ರ್ಯದ ಮಹತ್ವವನ್ನು ಎತ್ತಿಹಿಡಿದ John Locke ವರೆಗೆ ಎಲ್ಲರೂ ಸ್ವಾವಲಂಬನೆಯನ್ನೇ ಪರಮ ಸದ್ಗುಣವೆಂದು ಪರಿಗಣಿಸಿದರು.

“ನಿನ್ನ ಕಾಲಿನ ಮೇಲೆ ನೀನು ನಿಲ್ಲು; ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡ. ಬಲಿಷ್ಠನಾಗುವ ಏಕೈಕ ಮಾರ್ಗ ಇದೇ ” ಎನ್ನುವುದು ಆ ದೃಷ್ಟಿಕೋನ.

ಆದರೆ ಡೊಯಿ ಹೇಳುವುದೇನೆಂದರೆ, ಅವರ ಸಂಸ್ಕೃತಿಯಲ್ಲಿ ಈ ವಿಷಯವನ್ನು ಬೇರೆ ರೀತಿಯಲ್ಲಿ ನೋಡಲಾಗುತ್ತದೆ. ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ಇತರರಿಂದ ಸಹಾಯ ಕೇಳುವುದು ದೌರ್ಬಲ್ಯದ ಲಕ್ಷಣವಲ್ಲ. ಬದಲಾಗಿ, ಅದು ನಮ್ಮನ್ನು ಇತರರೊಂದಿಗೆ ಒಂದಾಗಿಸುವ ಮಾರ್ಗ. ನಮ್ಮ ಜೀವನಕ್ಕೆ ಅರ್ಥವನ್ನು ನೀಡುವ ದಾರಿ.

ಏಕೆಂದರೆ ಅಮಾಯೆ ಇಲ್ಲದ ಜೀವನ, ಏಕಾಂಗಿ ಜೀವನ. ನೀವು ಎಂದಿಗೂ ನಿಮ್ಮ ಎಚ್ಚರಿಕೆಯನ್ನು ಬಿಟ್ಟುಬಿಡಲು ಸಾಧ್ಯವಾಗದಿದ್ದರೆ, ಯಾರಿಗಾದರೂ ನೀವು ನಿಮ್ಮನ್ನು ಕಾಳಜಿಯಿಂದ ನೋಡಿಕೊಳ್ಳಲು ಅವಕಾಶ ನೀಡದಿದ್ದರೆ, ಪ್ರೀತಿಯ ತಂದೆ-ತಾಯಿಯ ಮಡಿಲಿಗೆ ಸೇರಿ ಮಗುವಿನಂತೆ ಇರಲು ನಿಮಗೆ ಸಾಧ್ಯವಾಗದಿದ್ದರೆ, ನಿಮಗೆ ನಿಜವಾದ ವಿಶ್ರಾಂತಿ ಎಂದಿಗೂ ಸಿಗುವುದಿಲ್ಲ.
ಆಗ ನೀವು ಇತರರನ್ನು ಕೇವಲ ವ್ಯವಹಾರಿಕ ಸಂಬಂಧಗಳಿರುವ ವ್ಯಕ್ತಿಗಳಂತೆ ಮಾತ್ರ ನೋಡುತ್ತೀರಿ.

ಯಾರನ್ನಾದರೂ ಪ್ರೀತಿಸುವುದು ಎಂದರೆ, ಒಂದು ಮಟ್ಟಿಗೆ ಅವರು ನಿಮ್ಮ ಮೇಲೆ ಅವಲಂಬಿತರಾಗಲು ಅವಕಾಶ ನೀಡುವುದು. ಹಾಗೆಯೇ, ಯಾರನ್ನಾದರೂ ಪ್ರೀತಿಸುವುದು ಎಂದರೆ, ನೀವು ಸಹ ಅವರ ಮೇಲೆ ಅವಲಂಬಿತರಾಗಲು ಸಿದ್ಧರಾಗುವುದು.

ಕೆಲವೊಮ್ಮೆ ಜೀವನದಲ್ಲಿ ಅತ್ಯಂತ ಧೈರ್ಯದ ಕೆಲಸವೆಂದರೆ ಸ್ವತಃ ನೀವು ನಿಮ್ಮ ಕಾಲಿನ ಮೇಲೆ ನಿಲ್ಲುವುದು ಅಲ್ಲ. ಕೆಲವೊಮ್ಮೆ, ಯಾರೋ ಒಬ್ಬರು ನಿಮ್ಮನ್ನು ಎತ್ತಿಕೊಳ್ಳಲು, ನಿಮ್ಮ ಆರೈಕೆ ಮಾಡಲು ಮತ್ತು ತಮ್ಮ ಪ್ರೀತಿಯ ಅಪ್ಪುಗೆಯಲ್ಲಿ ನಿಮ್ಮನ್ನು ಸೇರಿಸಿಕೊಳ್ಳಲು ಇದ್ದಾರೆ ಎಂಬ ವಿಶ್ವಾಸದಿಂದ ನೀವು ಅಪಾಯಕ್ಕೆ ತೆರೆದುಕೊಳ್ಳುವುದೇ ನಿಜವಾದ ಧೈರ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.