ನಿರ್ಭಯ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.10

ಯಾವುದೂ ಸಾಯಲಾರದು, ಇಲ್ಲವಾಗಲಾರದು. ಇರುವುದನ್ನು ಇಲ್ಲವಾಗಿಸಲು ಆಗದು. ಬದಲಾವಣೆಯ ಕ್ರಿಯೆಯೇ ಬದುಕು. ಬದಲಾವಣೆ ಇರದೆ ಬದುಕಿಲ್ಲ. ಬದಲಾವಣೆಯನ್ನು ಸಂತೋಷದಿಂದ ಒಪ್ಪಿಕೊಂಡರೆ ಭಯವಿರುವುದಿಲ್ಲ. ನಾವು ನಿರ್ಭಯರಾಗುತ್ತೇವೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.10: ಅರಿವಿನ ಬೆಳಕು । ನಿರ್ಭಯ

ನಮ್ಮ ಭಯವನ್ನು ಗಮನಿಸಿ ನೋಡಿದರೆ ಶಾಶ್ವತತೆಯ ಆಸೆ ಕಾಣುತ್ತದೆ. ಬದಲಾವಣೆ  ಎಂದರೆ ನಮಗೆ ಭಯ. ನಮ್ಮ ಸಿಟ್ಟು, ಹತಾಶೆ ಎಲ್ಲವೂ ನಮ್ಮ ತಪ್ಪು ಗ್ರಹಿಕೆಗಳಿಂದ ಹುಟ್ಟುತ್ತವೆ, ಏಳು-ಬೀಳು, ಇರುವುದು-ಇಲ್ಲವಾಗುವುದು,ಇದ್ದದ್ದು-ಕಳಕೊಳ್ಳುವುದು ಇಂಥ ಕಲ್ಪನೆಗಳಿಂದ ರೂಪುಗೊಳ್ಳುತ್ತವೆ. ಈ ಯಾವ ಕಲ್ಪನೆ, ವಿಚಾರಗಳನ್ನು ವಾಸ್ತವಕ್ಕೆ ಅನ್ವಯಿಸುವುದಕ್ಕೆ ಆಗದು ಅನ್ನುವುದು ಮತ್ತಷ್ಟು ಗಮನಿಸಿ ನೋಡಿದಾಗ ತಿಳಿಯುತ್ತದೆ. ನಮ್ಮ ನಿಜ ಸ್ವಭಾವವನ್ನು ಮುಟ್ಟಲು ಸಾಧ್ಯವಾದರೆ ಪರಮಸತ್ಯದ ಆಯಾಮವನ್ನು ಮುಟ್ಟುತ್ತೇವೆ. ಹುಟ್ಟಿರದ ಸಾವಿರದ ಆ ದರ್ಶನದ ಬಗ್ಗೆ ನಮಗೆ ವಿಶ್ವಾಸವಿದ್ದರೆ ಬದುಕಿನ ಪ್ರತಿ ಕ್ಷಣವೂ ಆನಂದದ ಕ್ಷಣವಾಗುತ್ತದೆ.

ಬಾನಲ್ಲಿ ತೇಲುವ ಮೋಡವನ್ನು ಕಲ್ಪನೆ ಮಾಡಿಕೊಳ್ಳಿ. ಬದಲಾವಣೆ ಇಷ್ಟವಿಲ್ಲ ಆ ಮೋಡಕ್ಕೆ. ನಾನು ಇಲ್ಲವಾಗುತ್ತೇನೆ, ಸಾಯುತ್ತೇನೆ ಅನ್ನುವ ಭಯವಿದೆ ಮೋಡಕ್ಕೆ. ಆ ಕಾರಣದಿಂದ ವೇದನೆಪಡುತ್ತದೆ ಆ ಮೋಡ. ಕ್ಕೇನಾದರೂ ಎಚ್ಚರದ ಗಮನವಿದ್ದಿದ್ದರೆ ತಾನು ಸಾಯುವುಕ್ಕೆ ಸಾಧ್ಯವಿಲ್ಲ ಎಂದು ಮೋಡಕ್ಕೆ ತಿಳಿಯುತಿತ್ತು. ಮೋಡವು ಮಳೆಯಾಗಬಹುದು, ಮಂಜು ಆಗಬಹುದು, ಹಿಮಗಡ್ಡೆಯಾಗಹುದು. ಆದರೆ ಏನೂ ಅಲ್ಲ ಎಂದಾಗುವುದು ಸಾಧ್ಯವಿಲ್ಲ. ತನಗೆ ಸಾವಿಲ್ಲ ಅನ್ನುವುದು ತಿಳಿದಾಗ ಮೋಡದ ಭಯ ಇಲ್ಲವಾಗುತ್ತದೆ. ಮೋಡವಾಗಿ ಆಕಾಶದಲ್ಲಿ ತೇಲುವುದು ಎಷ್ಟು ಅಚ್ಚರಿಯೋ ಸಂತೋಷವೋ ಅಷ್ಟೇ ಅಚ್ಚರಿ, ಸಂತೋಷ ಮಳೆಯಾಗಿ, ಹಿಮವಾಗಿ ನೆಲಕ್ಕೆ ಇಳಿಯುವುದರಲ್ಲೂ ಇದೆ ಎಂದು ತಿಳಿಯುತ್ತದೆ. ಹಾಗಾಗಿ ತನ್ನ ಸಾವಿರದ ನಿಜ ಸ್ಥಿತಿಯನ್ನು ಕಂಡ  ಮೋಡ ಭಯಕ್ಕೆ ಬಲಿಯಾಗುವುದು ತಪ್ಪುತ್ತದೆ.

ಯಾವುದೂ ಸಾಯಲಾರದು, ಇಲ್ಲವಾಗಲಾರದು. ಇರುವುದನ್ನು ಇಲ್ಲವಾಗಿಸಲು ಆಗದು. ಬದಲಾವಣೆಯ ಕ್ರಿಯೆಯೇ ಬದುಕು. ಬದಲಾವಣೆ ಇರದೆ ಬದುಕಿಲ್ಲ. ಬದಲಾವಣೆಯನ್ನು ಸಂತೋಷದಿಂದ ಒಪ್ಪಿಕೊಂಡರೆ ಭಯವಿರುವುದಿಲ್ಲ. ನಾವು ನಿರ್ಭಯರಾಗುತ್ತೇವೆ. 

*

ಇದೇ ಭಾವವನ್ನು ವ್ಯಕ್ತಪಡಿಸುವ ಹಡಪದ ಅಪ್ಪಣ್ಣನವರ ವಚನವನ್ನು ನೋಡಿ:

ಸಂಜೆ ಮಂಜಾನೆಯೆಂದೆನಬೇಡ, ಅಂಜಿಕೆ ಬೇಡ, ಅಳುಕು ಬೇಡ.
ಸಂದುಸಂಶಯವೆಂಬ ಸಂದೇಹ ಬೇಡ.
ಮನದಲ್ಲಿ ಸಂಕಲ್ಪ ವಿಕಲ್ಪ ಆದಿವ್ಯಾಧಿ ದುರಿತ ದುಮ್ಮಾನ
ಭಯ ಮೋಹ ಚಿಂತೆ ಸಂತೋಷ ಸುಖದುಃಖ ಮೊದಲಾದವು
ಒಂದೂ ಇಲ್ಲದಿಲ್ಲದ್ದಡೆ, ಆತನೇತರಲ್ಲಿರ್ದಡೂ ಅಜಾತ ಸ್ವಯಂಭು.
ಬಂದುದನೆ ಪರಿಣಾಮಿಸಿ, ನಿಶ್ಚಿಂತ ನಿಜನಿವಾಸಿಯಾಗಿಪ್ಪ
ಪರಮ ವಿರಕ್ತಂಗೆ ನಮೋ ನಮೋ ಎಂಬೆ.
ಆತ, ಬಸವಪ್ರಿಯ ಕೂಡಲಸಂಗಯ್ಯನಲ್ಲಿ ಒಂದಾದ ಲಿಂಗೈಕ್ಯನು

ಬಸವಣ್ಣನವರ ಈ ವಚನ ಕೂಡ ಇದೇ ಭಾವವನ್ನು ಗಾಢವಾದ ನುಡಿಯಲ್ಲಿ ಹೇಳಿದೆ. ʻಶಂಕೆʼಯ ಕಾರಣಕ್ಕೆ ಭಯ, ಆತಂಕಗಳು ಹುಟ್ಟುತ್ತವೆ ಎನ್ನುತ್ತದೆ.

ಸಂಜೆಯ ಮಂಜಿನ ಕಪ್ಪು-
ಅಂಜಿದಡೆ ಶಂಕೆ ತದ್ರೂಪವಾಗಿ ನಿಂದಿತ್ತು.
ತನ್ನ ಭಾವದ ನಟನೆ ನಡೆವನ್ನಕ್ಕ ನಡೆಯಿತ್ತು,
ಅದು ನಿಂದಲ್ಲಿಯೇ ನಿಂದಿತ್ತು.
ಅದರಂತುವನರಿದಡೆ
ಹಿಂದೆ ಹುಸಿ, ಮುಂದೆ ಕೂಡಲಸಂಗಮದೇವನ ನಿಲವು ತಾನೆ !

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.